ADVERTISEMENT

ಆಡಾಡ್ತಾ ವಿಜ್ಞಾನ

ನೋಡಬನ್ನಿ ಚಾಮರಾಜನಗರದ 'ದೀನಬಂಧು' ಸಂಸ್ಥೆಯ ವಿಶಿಷ್ಟ ವಿಜ್ಞಾನ ಉದ್ಯಾನ

ಅಮಿತ್ ಎಂ.ಎಸ್.
Published 11 ನವೆಂಬರ್ 2017, 19:30 IST
Last Updated 11 ನವೆಂಬರ್ 2017, 19:30 IST
ಚಾಮರಾಜನಗರದ ದೀನಬಂಧು ಶಾಲೆಯಲ್ಲಿರುವ ವಿಜ್ಞಾನ ಪಾರ್ಕ್.
ಚಾಮರಾಜನಗರದ ದೀನಬಂಧು ಶಾಲೆಯಲ್ಲಿರುವ ವಿಜ್ಞಾನ ಪಾರ್ಕ್.   

ಅದು ವಿಜ್ಞಾನದ ಹಲವು ಸೋಜಿಗಗಳನ್ನು ಒಳಗೊಂಡ ಪುಟ್ಟ ಜಗತ್ತು. ನೆಲಕ್ಕೆ ಮುತ್ತಿಕ್ಕುವಂತೆ ಬಾಗಿದ ಉದ್ದನೆಯ ಬಾಳೆಗೊನೆಗಳು ಕೃಷಿ ವಿಜ್ಞಾನದ ಪರಂಪರೆಯನ್ನು ಬಿಂಬಿಸುತ್ತಿದ್ದರೆ, ಅಲ್ಲಿಯೇ ಬೆಳೆದ ನೈಸರ್ಗಿಕ ಹುಲ್ಲು ತಿಂದು ಕೆಚ್ಚಲು ತುಂಬಿಕೊಂಡ ಹಸುಗಳು ‘ಹೈನುಗಾರಿಕೆ’ ಎಂಬ ವಿಜ್ಞಾನದ ಮತ್ತೊಂದು ಪಾಠ ಹೇಳುತ್ತಿವೆ. ಅವುಗಳನ್ನು ವಿಜ್ಞಾನ ವಿಸ್ಮಯದ ಕೌತುಕಗಳನ್ನು ಬಿಡಿಸುವ ಬೆರಗಿನ ಉದ್ಯಾನದಿಂದ ಬೇರ್ಪಡಿಸಿರುವುದು ಚಿಕ್ಕ ಬೇಲಿಯಷ್ಟೇ.

ಪುಸ್ತಕದಲ್ಲಿ ಮಾತ್ರ ಓದುತ್ತಾ ಹೋದರೆ ವಿಜ್ಞಾನ, ಗಣಿತದಷ್ಟೇ ಕಠಿಣ. ಅದೆಷ್ಟು ನಿಯಮ, ಸಿದ್ಧಾಂತ, ತಂತ್ರ–ತತ್ವಗಳು... ಅದೇ ಇಂಥದ್ದೊಂದು ಉದ್ಯಾನದೊಳಗೆ ಹೊಕ್ಕರೆ, ವಿಜ್ಞಾನ ಎಷ್ಟು ಚೆಂದ, ಸರಳ ಎನ್ನಿಸುತ್ತದೆ. ಇದು ಕೈಕಟ್ಟಿ ಕೂರಿಸಿ ಹೇಳುವ ಪಾಠವಲ್ಲ. ಆಡುತ್ತಾ ಆಲಿಸುವ, ಕೈಯಾಡಿಸುತ್ತಾ ಆನಂದಿಸುವ, ತೂಗಿ–ಕೂಗಿ ಸಂಭ್ರಮಿಸುವ ಪಾಠ.

ಚಾಮರಾಜನಗರದ ‘ದೀನಬಂಧು’ ಸಂಸ್ಥೆಯಲ್ಲಿ ಮಕ್ಕಳಿಗೆ ಆಡುತ್ತಾ ವಿಜ್ಞಾನ ಕಲಿಸುವ ಇಂಥದ್ದೊಂದು ವಿಶಿಷ್ಟ ವಿಜ್ಞಾನ ಉದ್ಯಾನವಿದೆ. ಆರ್ಕಿಮಿಡೀಸನ ಸಿದ್ಧಾಂತ, ಡಾಪ್ಲರ್‌ನ ಪರಿಣಾಮ, ನ್ಯೂಟನ್‌ನ ತೊಟ್ಟಿಲು... ಹೀಗೆ ಪಠ್ಯದಲ್ಲಿ ಎಷ್ಟು ಓದಿದರೂ ಮನಸಿನಾಳಕ್ಕೆ ಇಳಿಯದ ವಿಜ್ಞಾನದ ಅದೆಷ್ಟೋ ಸಂಗತಿಗಳಿಗೆ, ‘ಇದು ಇಷ್ಟೇನಾ’ ಎಂದು ನಿಟ್ಟುಸಿರು ಬಿಡುವಷ್ಟು ಸರಳವಾಗಿ ವಿವರಿಸುತ್ತವೆ ಈ ಉದ್ಯಾನದಲ್ಲಿರುವ ಆಟಿಕೆಯಂತಹ ‘ಪಾಠಿಕೆ’ಗಳು.

ADVERTISEMENT

ಮಕ್ಕಳ ಮೋಜು ಇದು ಮೋಜಿನ ಕಲಿಕೆಯ ಪಾಠದ ಮೈದಾನ. ವಿಜ್ಞಾನದ ಪಠ್ಯವನ್ನು ಇಲ್ಲಿ ಯಾರೂ ಬೋಧಿಸಬೇಕಿಲ್ಲ. ಇಲ್ಲಿ ಜೋಕಾಲಿ ಇದೆ. ರೊಯ್ಯನೆ ತಿರುಗುವ ತಿರುಗಣೆ ಚಕ್ರವಿದೆ, ಟಿನ್‌ ಟನ್‌ ಎಂದು ಸಪ್ತಸ್ವರ ಹೊಮ್ಮಿಸುವ ಸಂಗೀತ ಕೊಳವೆಗಳಿವೆ, ಪೀನ ಮಸೂರ ಅಳವಡಿಸಿದ ದೊಡ್ಡ ಕ್ಯಾಮೆರಾವಿದೆ, ಆಡುತ್ತಾ ಕಲಿಯಲು ಹತ್ತಾರು ಸಲಕರಣೆಗಳಿವೆ. ಇವೆಲ್ಲವೂ ವಿಜ್ಞಾನದ ಒಂದೊಂದು ಪಾಠಗಳನ್ನು ಹೇಳಿಕೊಡುತ್ತವೆ. ಇವುಗಳೊಂದಿಗೆ ಆಡಿದ ಮೇಲೆ ಪುಸ್ತಕದ ಅಧ್ಯಾಯಗಳನ್ನು ಓದಿ ಉರು ಹೊಡೆಯುವ ಕಷ್ಟವೇ ಇಲ್ಲ.

‘ದೀನಬಂಧು’ ಸಂಸ್ಥೆಯ ಮಕ್ಕಳಷ್ಟೇ ಅಲ್ಲ, ಇಲ್ಲಿಗೆ ಬೇರೆ ಬೇರೆ ಶಾಲೆಯ ಮಕ್ಕಳು, ಶಿಕ್ಷಕರು, ಗಣ್ಯರು ಭೇಟಿ ನೀಡಿ ವಿಜ್ಞಾನದ ಸರಳ ಬೋಧನೆಯ ಮಾದರಿಯನ್ನು ಕಂಡು ವಿಸ್ಮಿತರಾಗಿದ್ದಾರೆ. ದೊಡ್ಡವರೂ ಮಕ್ಕಳೊಡಗೂಡಿ ಆಡಿದ್ದಾರೆ. ಇದು ವಿಜ್ಞಾನದ ಯಾವ ಮಾದರಿ ಎಂದು ತಿಳಿಯುವುದು ಕಷ್ಟವಲ್ಲ. ಪಕ್ಕದಲ್ಲಿಯೇ ಇರುವ ಫಲಕ ಕನ್ನಡ ಮತ್ತು ಇಂಗ್ಲಿಷ್‌- ಎರಡೂ ಭಾಷೆಗಳಲ್ಲಿ ಆ ಆಟದ ಹಿಂದಿನ ವೈಜ್ಞಾನಿಕ ತಳಹದಿಯನ್ನು ಮತ್ತು ಅದನ್ನು ನಿರ್ವಹಿಸುವ ಬಗೆಯನ್ನು ವಿವರಿಸುತ್ತದೆ. ಇದು ಕಲಿಕೆಗಿಂತಲೂ ವಿಜ್ಞಾನವನ್ನು ಅನುಭವಿಸುವ ಜಾಗ.

ಗಿಳಿಯು ಪಂಜರದೊಳಿಲ್ಲ ಒಂದು ಹಲಗೆ. ಅದರ ಒಂದು ಬದಿಯಲ್ಲಿ ಗಿಳಿಯ ಚಿತ್ರ. ಇನ್ನೊಂದು ಮುಖದಲ್ಲಿ ಪಂಜರದ ಚಿತ್ರ. ಹಲಗೆಗೆ ಜೋಡಿಸಿದ ತಿರುಗಣೆಯನ್ನು ಜೋರಾಗಿ ತಿರುಗಿಸಿದರೆ ಆ ಗಿಳಿ ಪಂಜರದೊಳಗೆ ಬಂದಿಯಾದಂತೆ ಕಾಣಿಸುತ್ತದೆ. ಇದು ದೃಷ್ಟಿ ಭ್ರಮೆ ಉಂಟು ಮಾಡುವ ವಿಜ್ಞಾನದ ಮಾದರಿ.

ಯುಗ್ಮ ಜೋಕಾಲಿಯದು ಮತ್ತೊಂದು ಖುಷಿ ಕೊಡುವ ಆಟ. ಎರಡು ಜೋಕಾಲಿಗಳಲ್ಲಿ ಒಂದನ್ನು ಎಳೆದುಬಿಟ್ಟರೆ ಸಾಕು. ಇನ್ನೊಂದು ಜೋಕಾಲಿ ಕೆಲಹೊತ್ತಿನ ಬಳಿಕ ತಾನಾಗಿಯೇ ಹಿಂದೆ ಮುಂದೆ ಚಲಿಸತೊಡುತ್ತದೆ. ಆಗ ಮೊದಲ ಜೋಕಾಲಿ ನಿಧಾನಗೊಳ್ಳುತ್ತದೆ. ಕೊನೆಗೆ ಎರಡೂ ಒಂದೇ ವೇಗದಲ್ಲಿ ಚಲಿಸಿ ನಿಲ್ಲುತ್ತವೆ. ಯುಗ್ಮಜೋಕಾಲಿ ಎಂದು ಕರೆಯಲಾಗುವ ಈ ಮಾದರಿ ಕಂಪನದ ಬಗೆಯನ್ನು ವಿವರಿಸುತ್ತದೆ.

ಕನಿಷ್ಠ ಕಾಲಪಥ, ಪರಿದರ್ಶಕ, ಪ್ರಚೋದಿತ ಆಂದೋಲನ, ಸುಳಿ ಚಕ್ರ, ದ್ವಿಶಂಕು, ಕೇಂದ್ರತ್ಯಾಗಿ ಬಲ–ಭ್ರಮಣ ಜಡತ್ವ, ಕಾಂತೀಯ ಮತ್ತು ಅಕಾಂತೀಯ ವಸ್ತುಗಳು ಹೀಗೆ ಹತ್ತಾರು ವೈಜ್ಞಾನಿಕ ಒಗಟುಗಳನ್ನು ಸುಲಭವಾಗಿ ಬಿಡಿಸುವ ಸಲಕರಣೆಗಳು ಇವೆ.

‘ಮುಟ್ಟಬೇಡ’ ಎಂಬ ಎಚ್ಚರಿಕೆಯೇ ಇಲ್ಲ

‘ವಿಜ್ಞಾನದ ಯಾವುದೇ ಮಾದರಿಯನ್ನು ತೋರಿಸುವಾಗ ಅವು ಸೂಕ್ಷ್ಮವಾಗಿರುವ ಕಾರಣ 'ಮುಟ್ಟಬಾರದು' ಎಂಬ ಎಚ್ಚರಿಕೆಯನ್ನು ಮಕ್ಕಳಿಗೆ ನೀಡುತ್ತೇವೆ. ಆದರೆ, ಇಲ್ಲಿ ಆ ಪ್ರಶ್ನೆಯೇ ಇಲ್ಲ. 'ಮುಟ್ಟಿ; ಅನುಭವ ಪಡೆ' ಎಂಬ ನೀತಿಯಡಿ ಈ ಉದ್ಯಾನ ಸಿದ್ಧವಾಗಿದೆ. ಅದಕ್ಕೆಂದೇ ದೊಡ್ಡ ಗಾತ್ರದ ಆಟಿಕೆಗಳನ್ನು ಇರಿಸಲಾಗಿದೆ ಎನ್ನುತ್ತಾರೆ ಸಂಸ್ಥೆಯ ಗೌರವ ಕಾರ್ಯದರ್ಶಿ ಜಿ.ಎಸ್. ಜಯದೇವ.

‘ಸಿದ್ಧ ಉತ್ತರ ನೀಡುವುದು ವಿಜ್ಞಾನ ಅಲ್ಲ. ವಿಜ್ಞಾನ ಕುರಿತ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುವುದೂ ಇಲ್ಲ. ವಿಜ್ಞಾನ ನಮ್ಮೊಳಗೆ ಪ್ರಶ್ನೆಗಳನ್ನು ಹುಟ್ಟುಹಾಕಬೇಕು. ಆ ಮೂಲಕ ಆಲೋಚನೆಗೆ ಹಚ್ಚುವ, ಸಾಕ್ಷಾತ್ಕಾರ ಪಡೆಯುವ ಮತ್ತು ಕೌತುಕದ ಮೂಲಕ ಆಸಕ್ತಿ ಮೂಡಿಸಲು ಇದು ನೆರವಾಗುತ್ತದೆ’ ಎಂದು ಅವರು ವಿವರಿಸುತ್ತಾರೆ.

ವಿಚಾರ-ವಿನೋದ: ಈ ಉದ್ಯಾನ 2016ರಲ್ಲಿ ಆರಂಭವಾಯಿತು. ಆಟದ ಮೂಲಕ ಸಂತೋಷದಾಯಕವಾಗಿ ಮತ್ತು ವಿನೋದದಿಂದ ವಿಜ್ಞಾನದ ಅನುಭವ ಪಡೆದುಕೊಳ್ಳುವುದು ಈ ಉದ್ಯಾನದ ಪರಿಕಲ್ಪನೆ ಎಂದು ಜಯದೇವ ತಿಳಿಸುತ್ತಾರೆ. ಒರ್‍ಯಾಕಲ್ ಸಂಸ್ಥೆ ಈ ವಿಜ್ಞಾನ ಉದ್ಯಾನವನ್ನು ನಿರ್ಮಿಸಿದೆ. ನೋಡಿದ, ಕೇಳಿದ ಮತ್ತು ಅರಿತುಕೊಂಡ ಸಂಗತಿಗಳೇ ಈ ಉದ್ಯಾನಕ್ಕೆ ಸ್ಫೂರ್ತಿಯಾಗಿವೆ.

**

ಮತ್ತೊಂದು ಉದ್ಯಾನ

ಬೆಂಗಳೂರು ಸಮೀಪದ ಹೊನ್ನಲಗೆರೆ ಎಂಬಲ್ಲಿನ ಸರ್ಕಾರಿ ಶಾಲೆಯ ವಿಶಾಲ ಜಾಗದಲ್ಲಿ ₹25 ಲಕ್ಷ ವೆಚ್ಚದಲ್ಲಿ ಇನ್ನಷ್ಟು ದೊಡ್ಡದಾದ ವಿಜ್ಞಾನ ಉದ್ಯಾನ ನಿರ್ಮಿಸಲು ‘ದೀನಬಂಧು’ ಸಂಸ್ಥೆ ಮುಂದಾಗಿದೆ. ಇದಕ್ಕೆ ಏರ್‌ಬಸ್‌ ಫೌಂಡೇಶನ್‌ ನೆರವು ನೀಡುತ್ತಿದೆ. ಇಲ್ಲಿ ವಿಜ್ಞಾನದ ಇನ್ನೂ ಅನೇಕ ಪರಿಕಲ್ಪನೆಗಳು ಆಟಿಕೆ ರೂಪದಲ್ಲಿ ಮಕ್ಕಳಿಗಾಗಿ ತೆರೆದುಕೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.