ADVERTISEMENT

ಆದಿಮಾನವನ ಆರ್ಟ್ ಗ್ಯಾಲರಿ!

ಡಾ.ಕೆ.ಎಸ್.ಪವಿತ್ರ
Published 28 ಜನವರಿ 2017, 19:30 IST
Last Updated 28 ಜನವರಿ 2017, 19:30 IST
ಆದಿಮಾನವನ ಆರ್ಟ್ ಗ್ಯಾಲರಿ!
ಆದಿಮಾನವನ ಆರ್ಟ್ ಗ್ಯಾಲರಿ!   

‘ಭೀಮ್ ಬೇಟ್ಕಾ ಭೋಪಾಲದಿಂದ ನಲ್ವತ್ತೈದೇ ಕಿಲೋಮೀಟರ್ ಬೆಹನ್‌ಜೀ, ಎಲ್ಲರೂ ಹೋಗ್ತಾರೆ, ಆದ್ರೆ ಅಲ್ಲಿ ಬರೀ ಗುಹೆಗಳು!’ – ನನ್ನನ್ನು ಭೋಪಾಲದಲ್ಲಿ ಸುತ್ತಾಡಿಸುತ್ತಿದ್ದ ಬಿಹಾರಿ ಚಾಲಕ ರಾಮ್ ನಾರಾಯಣ್ ಒಂದು ಬಗೆಯ ಬೆರಗಿನಲ್ಲಿ ಹೇಳಿದ. ‘ಯುನೆಸ್ಕೋ ಹೆರಿಟೇಜ್ ತಾಣ’ ಎಂದಮೇಲೆ ವಿಶೇಷವಿರದೆ ಇದ್ದೀತೆ? ಈತನಿಗೆ ತಿಳಿದಿರಲಿಕ್ಕಿಲ್ಲ’ ಎಂದುಕೊಂಡು, ‘ಬರೀ ಗುಹೆಗಳೇ ಆದರೂ ಪರವಾಗಿಲ್ಲ, ಹೋಗಿ ಬರೋಣ’ ಎಂದಿದ್ದೆ.

ಜನವರಿಯ ಚಳಿ, ಹಿತವಾದ ಬಿಸಿಲಿನ ಮಧ್ಯೆ ಭೀಮ್ ಬೇಟ್ಕಾದ ಗುಹೆಗಳ ಹತ್ತಿರ ಬಂದಿಳಿದಿದ್ದೆವು. ವಿಂಧ್ಯಾಚಲದ ಉತ್ತರ ಶ್ರೇಣಿಗಳ ಭವ್ಯತೆ, ಬಟಾಬಯಲಿನ ಮಧ್ಯೆ ಹಸಿರು. ಸುತ್ತ ಸಾಲ ಮತ್ತು ತೇಗದ ವೃಕ್ಷಗಳ ದಟ್ಟ ಕಾಡು.

ಚಾಲಕ ರಾಮ್ ನಾರಾಯಣ್ ನನ್ನನ್ನು ಮೊದಲು ಕರೆದೊಯ್ದಿದ್ದು ಅಲ್ಲಿರುವ ಮಂದಿರಕ್ಕೆ. ಇಲ್ಲಿರುವ ಪೌರಾಣಿಕ ಐತಿಹ್ಯ ಭೀಮ್ ಬೇಟ್ಕಾ ಹೆಸರಿಗೆ ಸಂಬಂಧಿಸಿದ್ದು. ಈ ಗುಡ್ಡ–ಬೆಟ್ಟಗಳ ಮೇಲೆ ಮಹಾಭಾರತದ ಭೀಮ ಕುಳಿತು ಜನರೊಂದಿಗೆ ಮಾತನಾಡು ತ್ತಿದ್ದನಂತೆ. ಅದಕ್ಕೇ ಇದು ಭೀಮ್–ಬೇಟ್ (ಬೈಟ್ = ಕುಳಿತುಕೊಳ್ಳುವುದು)– ಕಾ ಆಯಿತು. ಈ ಕಥೆಗೆ ಆಧಾರವಾಗಿ ಸುತ್ತಮುತ್ತಲಿನ ಹಳ್ಳಿಗಳಿಗೂ ಪಾಂಡವರ ಹೆಸರುಗಳಿವೆ.

ಇಲ್ಲಿಯ ಗೈಡುಗಳೂ, ಗ್ರಾಮವಾಸಿಗಳು, ವಾಹನಗಳಲ್ಲಿ ಪ್ರತಿನಿತ್ಯ ಸಾವಿರಾರು ಪ್ರವಾಸಿಗರನ್ನು ಕರೆದುಕೊಂಡು ಬರುವ ಚಾಲಕರು ನಾಮಪುರಾಣವನ್ನು ಎಷ್ಟು ನಂಬುತ್ತಾರೆಂದರೆ, ಸ್ವತಃ ತಾವೇ ಭೀಮ ಕುಳಿತಿದ್ದನ್ನು ನೋಡಿದಂತೆ ವರ್ಣಿಸುತ್ತಾರೆ! ಹೀಗೆ ಕಣ್ಣಿಗೆ ಕಂಡಂತೆ ವರ್ಣಿಸುವುದೂ ಒಂದು ಕಲೆ! ಮಂದಿರದೊಳಗೆ ಹೊಕ್ಕು ಕೈಮುಗಿದು, ಗುಹೆಗಳ ಕಡೆ ಹೊರಟರೆ ನಿಜವಾದ ನಿಸರ್ಗ ದೇವತೆಯೇ ಸೃಷ್ಟಿಸಿದ ಮಂದಿರ!

ಭೀಮ್ ಬೇಟ್ಕಾದ ಗುಹೆಗಳು ಒಂದು ಐತಿಹಾಸಿಕ ನಿಧಿ. ಈ ಗುಹೆಗಳ ಸಮುಚ್ಚಯದಲ್ಲಿ ಒಟ್ಟು 838 ಗುಹೆಗಳಿವೆ. ದಟ್ಟ ಅರಣ್ಯದ ನಡುವೆ ಹುದುಗಿರುವ ಇವುಗಳು ಒಟ್ಟು 1850 ಹೆಕ್ಟೇರ್ ಪ್ರದೇಶವನ್ನು ಆಕ್ರಮಿಸಿವೆ. ನಮಗೆ ನೋಡಲು ಸಾಧ್ಯವಿರುವಂತಹವು ಕೇವಲ 15 ಮಾತ್ರ.  ಈ ಗುಹೆಗಳ ವಿಶೇಷವೇನು? ಮಾನವನ ಇತಿಹಾಸಕ್ಕೆ ಸಾಕ್ಷಿಯಾಗಿ, ಆದಿಮಾನವನ ಯುಗದ ಚಿತ್ರಕಲೆಗಳನ್ನು ಅವುಗಳ ಸಹಜತೆಯಲ್ಲಿ ನಾವಿಲ್ಲಿ ನೋಡಬಹುದು.

ಇವುಗಳನ್ನು ಕಂಡುಹಿಡಿದ ಸಂದರ್ಭವೇ ಒಂದು ರೋಚಕ ಕಥೆ. ಇದೊಂದು ಆಕಸ್ಮಿಕ ಅಚ್ಚರಿಯ ಸಂಶೋಧನೆ. 1958ರಲ್ಲಿ ಉಜ್ಜಯಿನಿಯ ವಿಕ್ರಮ್ ವಿಶ್ವವಿದ್ಯಾಲಯದ ಡಾ. ವಿಷ್ಣು ವಾಕಂಕರ್ ಎಂಬ ಪ್ರಸಿದ್ಧ ಪುರಾತತ್ವ ತಜ್ಞ ರೈಲಿನಲ್ಲಿ ಪಯಣಿಸುತ್ತಿದ್ದರು.

ADVERTISEMENT

ಭೀಮ್ ಬೇಟ್ಕಾ ಬಳಿ ರೈಲು ಕ್ರಾಸಿಂಗ್‌ಗೆ ಕಾಯುತ್ತಾ ನಿಂತಿತ್ತು. ಆಗ ಸುತ್ತ ಕಣ್ಣಾಡಿಸುತ್ತಿದ್ದ ವಾಕಂಕರ್‌ಗೆ ದೂರದ ಅರಣ್ಯದ ಗಿಡಮರಗಳಲ್ಲಿ, ಅವುಗಳ ಭೂ ಚಹರೆಯಲ್ಲಿ ಅದೇನೋ ವ್ಯತ್ಯಾಸವಿದೆಯೆನ್ನಿಸಿತು. ಸರಿ, ಸಂಶೋಧನೆ–ಉತ್ಖನನ ಆರಂಭವಾಯಿತು. ಬರೋಬ್ಬರಿ 17 ವರ್ಷಗಳ ಕಾಲ ನಡೆದ ಉತ್ಖನನದ ಫಲ ಭೀಮ್ ಬೇಟ್ಕಾದ ಈ ಅಪೂರ್ವ ಗುಹೆಗಳು.

ಇಲ್ಲಿರುವುದು ಒಂದು ಸಹಜ ಕಲಾ ಸಂಗ್ರಹಾಲಯ. ನ್ಯಾಚುರಲ್ ಆರ್ಟ್ ಗ್ಯಾಲರಿ! ಆದಿಮಾನವ ನಡೆದು ಬಂದ ದಾರಿಯನ್ನು ನಿಸರ್ಗವೇ ಜತನದಿಂದ ಕಾದಿಟ್ಟಿರುವ ಸಂಗ್ರಹ. ಇವುಗಳು ಎಷ್ಟು ಹಳೆಯವು? ನಂಬಲು ಕಷ್ಟವೆನಿಸಿದರೂ 15 ಸಾವಿರ ವರ್ಷಗಳಷ್ಟು ಹಳೆಯವು. ಕಲ್ಲಿನ ಬೇರೆ ಬೇರೆ ಪದರಗಳಲ್ಲಿ ಇವು ಚಿತ್ರಿತವಾಗಿವೆ. ಅದಕ್ಕೆ ಅನುಸಾರವಾಗಿ ಅವುಗಳ ಕಾಲನಿರ್ಣಯ.

ಪ್ರಾಚ್ಯ ಯುಗ, ಮಧ್ಯಯುಗ, ನವಯುಗ – ಹೀಗೆ ಮೂರು ಯುಗಗಳಲ್ಲಿ ಆದಿಮಾನವ ಚಿತ್ರಿಸಿದ ಜೀವನಚಿತ್ರಗಳು. ದೈನಂದಿನ ಜೀವನ, ಬೇಟೆ, ನೃತ್ಯ, ಮೆರವಣಿಗೆ, ಪ್ರಾಣಿಗಳೊಡನೆ ಹೊಡೆದಾಟ, ಆನೆಸವಾರಿ, ಸಂಗೀತ – ಇವೆಲ್ಲಕ್ಕೂ ಸಂಬಂಧಿಸಿದ ಚಿತ್ರಗಳು ನಮ್ಮೊಡನೆ ಮಾತನಾಡಿದಂತೆ ಭಾಸವಾಗುತ್ತದೆ. ಪ್ರಾಣಿಗಳ ಚಿತ್ರಗಳಲ್ಲಿ ಕಾಡುಕೋಣ, ಹುಲಿ, ಕಾಡುಹಂದಿ, ಮೊಸಳೆ, ಹಲ್ಲಿ, ಸಿಂಹ ಎಲ್ಲವೂ ಸಿಕ್ಕುತ್ತವೆ. ಚಿತ್ರಗಳಲ್ಲಿ ಕಾಣುವಂತೆ ಈ ಗುಹೆಗಳು ಪ್ರಾಚೀನ ಯುಗದಲ್ಲಿ ಸಾಕಷ್ಟು ಜನರ ಆಶ್ರಯತಾಣವಾಗಿದ್ದಿರಬೇಕು.

ಗೋಡೆಗಳ ಮೇಲೆ ಮಾತ್ರವಲ್ಲ, ಗುಹೆಗಳ ಎತ್ತರದ ಛಾವಣಿಯ ಮೇಲೂ ಚಿತ್ರಗಳಿವೆ. ಬಣ್ಣಗಳನ್ನೂ ಈ ಚಿತ್ರಗಳಲ್ಲಿ ಉಪಯೋಗಿಸಲಾಗಿದೆ. ಈ ಬಣ್ಣಗಳನ್ನು ಮ್ಯಾಂಗನೀಸ್, ಹೆಮಟೈಟ್, ಇದ್ದಿಲು, ಪ್ರಾಣಿಗಳ ಕೊಬ್ಬು, ಮತ್ತು ಎಲೆಗಳನ್ನು ಉಪಯೋಗಿಸಿ ಆದಿಮಾನವ ತಯಾರಿಸಿರಬಹುದು ಎನ್ನುತ್ತಾರೆ.

ಇತಿಹಾಸ, ಪ್ರಾಚ್ಯ ಸಂಶೋಧಕರಿಗೆ ಈ ಚಿತ್ರಗಳ ಸಮೂಹ ನಿಜವಾಗಿ ಒಂದು ವಿಕಾಸದ ಹಂತಗಳಾಗಿ ಕಾಣಬಹುದು. ನನಗೆ ಭೀಮ್ ಬೇಟ್ಕಾದ ಭೇಟಿ ಮಾನವನ ಮನಸ್ಸಿನೊಳಗೊಂದು ಕಿಂಡಿಯಾಗಿ ಕಾಣಿಸಿತು. ಮನುಷ್ಯನ ಜೀವನ ವಿಕಾಸವೆಂದರೆ ಅದು ಮನಸ್ಸಿನ, ಕಲೆಯ ವಿಕಾಸವೂ ಹೌದಷ್ಟೆ. ಈ ಚಿತ್ರಗಳು ರೇಖೆಗಳಲ್ಲಿ, ಅವುಗಳ ಸೂಕ್ಷ್ಮತೆಯಲ್ಲಿ, ಕುಸುರಿಯಲ್ಲಿ ಕ್ರಮೇಣ ಪರಿಷ್ಕೃತಗೊಂಡಿರುವುದು ಸ್ಪಷ್ಟವಾಗುತ್ತದೆ. ಹಾಗೆಯೇ ಈ ಚಿತ್ರಗಳನ್ನು ನೋಡುವಾಗ ಜೀವನ–ಕಲೆಗಳ ನಡುವಣ ಅವಿನಾಭಾವ ಸಂಬಂಧವೂ ಮನಸ್ಸಿಗೆ ಹೊಳೆಯದಿರಲು ಸಾಧ್ಯವೇ ಇಲ್ಲ.

ಮಗುವೊಂದರ ಕೈಯ ಪಡಿಯಚ್ಚು ಬೆರಗು ಮೂಡಿಸುತ್ತದೆ. ಯಾವ ಸಂಸ್ಕೃತಿಯಲ್ಲಿಯೂ, ಯಾವತ್ತಿನ ದಿನಗಳಲ್ಲಿಯೂ ಮಗುವಿನ ಮುಗ್ಧತೆಗೆ ಮಾನವ ನೀಡುತ್ತಿದ್ದ, ನೀಡಲೇಬೇಕಾದ ಮಹತ್ವವನ್ನು ಈ ಚಿತ್ರ ಮನಸ್ಸಿಗೆ ತರುತ್ತದೆ. ಈ ಗುಹೆಗಳಲ್ಲಿ ಆದಿಮಾನವನ ಕಲ್ಲು, ಕಬ್ಬಿಣ ಮೊದಲಾದವುಗಳಲ್ಲಿ ಮಾಡಿದ ಆಯುಧಗಳು ದೊರಕಿವೆ.

‘ವಿಶ್ವ ಸಾಂಸ್ಕೃತಿಕ ಪಾರಂಪರಿಕ ತಾಣ’ವಾಗಿ ಯುನೆಸ್ಕೋ ಮನ್ನಣೆಗೊಳಗಾಗಿ, ಸಾಕಷ್ಟು ಭದ್ರತೆಯೇನೋ ಭೀಮ್ ಬೇಟ್ಕಾಗೆ ದೊರೆತಿದೆ. ಆದರೆ, ಈ ಗುಹೆಗಳಲ್ಲಿಯೂ ಆದಿಮಾನವ ಬರೆದ ಚಿತ್ರಗಳಂತೆ, ನಮ್ಮ ಆಧುನಿಕ ಮಾನವರು (ಅಥವಾ ಮಂಗಗಳು!) ಗೀಚಿರುವ ಚಿತ್ರಗಳೂ ಇವೆ!

ಭೀಮ್ ಬೇಟ್ಕಾ ನೋಡಿ ಬಂದು ಕಾರಿನಲ್ಲಿ ಕುಳಿತುಕೊಳ್ಳುವಾಗ ನಮ್ಮ ಚಾಲಕ ಹೇಳಿದ – ‘ಬೆಹನ್ ಜೀ, ಇಲ್ಲಿಗೆ ಫಾರಿನ್ ಜನ ಬಂದು ದಿನಗಟ್ಟಲೆ ಅಧ್ಯಯನ ಮಾಡುತ್ತಾರೆ. ಆದರೆ ನಮ್ಮವರು ಬಂದ್ರೆ ಬರೀ 2 ಗಂಟೆ! ಹತ್ತಿರದ ಹಳ್ಳಿ ಹುಡುಗರು ಬಂದು ಇಲ್ಲಿ ಗುಹೆಯ ಮೇಲೆಲ್ಲಾ ಬರೆಯೋಕ್ಕೆ ಶುರು ಮಾಡಿದ್ಮೇಲೆ, ಸರ್ಕಾರ ಚಿತ್ರದ ಮೇಲೆಲ್ಲಾ ಗ್ಲಾಸ್ ಹಾಕಿಬಿಟ್ಟಿತಂತೆ, ಪೋಲೀಸ್ ಕಾವಲು ಹಾಕಿದೆ’. ಇಷ್ಟೆಲ್ಲಾ ಮಾಹಿತಿ ನನಗೆ ಕೊಟ್ಟ ನಮ್ಮ ರಾಮ್ ನಾರಾಯಣ್ ಒಮ್ಮೆಯೂ ಭೀಮ್ ಬೇಟ್ಕಾ ನೋಡಿರಲೇ ಇಲ್ಲ!

ನಾಗರಿಕರಾದ ನಾವು ಕಲೆಯನ್ನೂ ಬದುಕನ್ನೂ ಒಂದಾಗಿ ನೋಡುವುದನ್ನು ಆದಿಮಾನವನಿಂದ ಕಲಿಯಬೇಕೇನೋ ಎಂಬ ಬಗ್ಗೆ ಪ್ರಶ್ನೆಗಳು ಕೊರೆಯುತ್ತಲೇ ಭೀಮ್ ಬೇಟ್ಕಾದಿಂದ ಮರಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.