ADVERTISEMENT

ಆ್ಯಡಮ ಲಿಂಡಸೀ ಮತ್ತು ಬ್ಯಾಂಗ್‌ಕಾಕಿನ ಮಸಾಜ್‌ ಪಾರ್ಲರ್‌

ಗಿರೀಶ ಕಾರ್ನಾಡ
Published 13 ಫೆಬ್ರುವರಿ 2016, 19:30 IST
Last Updated 13 ಫೆಬ್ರುವರಿ 2016, 19:30 IST
ಚಿತ್ರ–ಸಿದ್ರಪಾಲ
ಚಿತ್ರ–ಸಿದ್ರಪಾಲ   

ತಾರುಣ್ಯದ ಬಿಸುಪಿನ ದಿನಗಳಲ್ಲಿ ಎಡತಾಕುವ ಸಂಬಂಧಗಳು ಮಧುರ ಸ್ವಪ್ನಗಳಂತೆ ಜೀವನವಿಡೀ ಕಾಡುತ್ತವೆ. ಯಾರಿಗೂ ಕಾಣಿಸದಂತೆ ಅಡಗಿಕೂರುವ ಅಂಥ ನೆನಪುಗಳನ್ನು ಸಹೃದಯರೊಂದಿಗೆ ಹಂಚಿಕೊಳ್ಳುವುದು ನಿಷ್ಠುರ ಪ್ರಾಮಾಣಿಕತೆಯೂ ಹೌದು, ತಾನು ಸಾಗಿ ಬಂದ ಬದುಕನ್ನು ಗೌರವಿಸುವ ವಿಧಾನವೂ ಹೌದು. ಕನ್ನಡದ ಹಿರಿಯ ಲೇಖಕ ಗಿರೀಶ ಕಾರ್ನಾಡರು ಇಲ್ಲಿ ಮೆಲುಕು ಹಾಕಿರುವ ಪ್ರಸಂಗಗಳು ಓದುಗರಿಗೆ ಕಚಗುಳಿ ಇಡುವುದರ ಜೊತೆಗೆ, ಅವರ ಜೀವನಪ್ರೀತಿಯ ಉದಾಹರಣೆಗಳಂತೆಯೂ ಇವೆ. ‘ಪ್ರೇಮಿಗಳ ದಿನ’ದ ಚೆಲುವನ್ನು ಈ ಬರಹ ಮಾದಕಗೊಳಿಸುವಂತಿದೆ.

1960ರ ದಶಕದಲ್ಲಿ ನಾನು ಆಕ್ಸಫರ್ಡ್‌ ಯೂನಿವರ್ಸಿಟಿ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದುದರ ಪರಿಣಾಮವಾಗಿ ನನಗೆ ಮದ್ರಾಸಿನ ಇಂಗ್ಲಿಷ್‌ ಸಮಾಜದೊಡನೆ ಸಾಕಷ್ಟು ಹೊಕ್ಕು ಬಳಕೆ ಇತ್ತು. ಅಲ್ಲದೆ ‘ಮದ್ರಾಸ್‌ ಪ್ಲೇಯರ್ಸ್‌’ ಎಂಬ ನಮ್ಮ ನಾಟಕ ತಂಡ ಕೇವಲ ಇಂಗ್ಲಿಷ್‌ ನಾಟಕಗಳನ್ನೇ ಆಡುತ್ತಿದ್ದುದರಿಂದ ಅಮೆರಿಕನ್‌ ಸಮಾಜದಲ್ಲೂ ಮಿತ್ರರಿದ್ದರು. ಶೀತಯುದ್ಧದ (Cold War) ಪರಿಣಾಮವಾಗಿ ಈ ಇಂಗ್ಲಿಷ್‌ ಅಮೆರಿಕನ್‌ diplomats ಎಲ್ಲ ಭಾರತೀಯರೊಡನೆ ನಿಕಟ ಸಂಬಂಧವಿಟ್ಟುಕೊಳ್ಳುತ್ತಿದ್ದರು. ಅಲ್ಲದೆ terrorism ಇನ್ನೂ ಅಂತರ್ದೇಶೀಯ ರಾಜಕಾರಣದ ಶೃತಿಯಾಗಿರಲಿಲ್ಲವಾದ್ದರಿಂದ, ನಮ್ಮ ನಡುವೆ ಮುಚ್ಚುಮರೆಯಿಲ್ಲದ ಸ್ನೇಹವಿರುವುದು ಸಾಧ್ಯವಿತ್ತು.

ಈ ವಿದೇಶೀಯರಲ್ಲಿ ಹೆಚ್ಚು ಜನ ಇನ್ನೂ ಯೌವನದಲ್ಲೇ ಇದ್ದರು. ಏಕೆಂದರೆ ಆ ಕಾಲದಲ್ಲಿ ಭಾರತ ವ್ಯಾಪಾರೀ ದೃಷ್ಟಿಯಿಂದ ಆಕರ್ಷಕ ಮಾರುಕಟ್ಟೆಯಾಗಿರಲಿಲ್ಲ. ಇಲ್ಲಿ ಅಧಿಕಾರಿಗಳಾಗಿ ಬಂದವರಲ್ಲಿ ಹಲವರು ಇನ್ನೂ ನೌಕರಿಯ ನಿಚ್ಚಣಿಕೆಯ ಕೆಳಮೆಟ್ಟಿಲ ಮೇಲೆ ‘ಬಡತಿ’ಯ ನಿರೀಕ್ಷೆಯಲ್ಲೇ ಕಾದು ಕುಳಿತವರಾಗಿದ್ದರು. ಈ ತಾರುಣ್ಯ ನಮ್ಮ ಒಡನಾಟಕ್ಕೆ ಅನಿವಾರ್ಯವಾಗಿ ನಿಕಟ ಸ್ನೇಹದ, ದೈಹಿಕ ಆಕರ್ಷಣೆಯ ಒಪ್ಪವನ್ನು ಕೊಡುತ್ತಿತ್ತು. ನನಗಾಗ ಇಪ್ಪತ್ತೆಂಟು, ಒಬ್ಬಂಟಿ, ಅವಿವಾಹಿತ; ನನ್ನ ಆಫೀಸು ನನಗೆಂದೇ ಕೊಟ್ಟ ಸ್ವತಂತ್ರ ಕಾರು, ಫ್ಲ್ಯಾಟು.

ಮದ್ರಾಸಿನಲ್ಲಿ ನನಗೆ ಆತ್ಮೀಯರಾದವರಲ್ಲಿ ಲಿಂಡಸೀ ಎಂಬ ತರುಣ ದಂಪತಿಗಳು ಇದ್ದರು. ಆ್ಯಡಮ ಯಾವುದೋ ಇಂಗ್ಲಿಷ್‌ ಕಂಪೆನಿಯಲ್ಲಿ ದುಡಿಯುತ್ತಿದ್ದ. ಅವರಿಗೆ ಮಕ್ಕಳಿರಲಿಲ್ಲವಾದ್ದರಿಂದ ದತ್ತು ತೆಗೆದುಕೊಂಡ ರಾಬಿನ್‌ ಎಂಬ ಮೂರು–ನಾಲ್ಕು ವರ್ಷಗಳ ಮಗನಿದ್ದ. ಆ್ಯಡಮ್‌–ರೂಥ್‌ರ ಜೀವನದೃಷ್ಟಿಯ ಮೇಲೆ, ದಿನನಿತ್ಯದ ಜೀವನ ಪದ್ಧತಿಯ ಮೇಲೆ ಆ ಕಾಲದಲ್ಲಿ ಲೋಕಪ್ರಿಯವಾಗಲಾರಂಭಿಸಿದ ‘ಹಿಪ್ಪಿ’ (Hippy) ಸಂಸ್ಕೃತಿಯ ಗಾಢ ಛಾಯೆಯಿತ್ತು. ಪ್ರತಿರಾತ್ರಿ ಎಂಬಂತೆ ಪಾರ್ಟಿಗಳು, ಚಪ್ಪಲಿಗಳು, ಲಂಡಚಣ್ಣ. ಅವನಿಗೆ ಕುರುಚಲು ಗಡ್ಡ.

ಸಂಗೀತದ ಜೊತೆಗೆ ಗಾಂಜಾ ಸೇವನೆ. ಬ್ರಿಟಿಷರು ಭಾರತದ ಶಾಸಕರಾಗಿದ್ದ ಕಾಲದಲ್ಲಿ ಅವರಲ್ಲಿದ್ದ ಸೊಕ್ಕು, ಬಿಗುಮಾನ, ಆತ್ಮ ಪ್ರೌಢಿಮೆ ಈ ತಲೆಮಾರಿನಲ್ಲಿ ಇರಲಿಲ್ಲವಾದ್ದರಿಂದ ಆ್ಯಡಮ್‌ ಹಾಗೂ ರೂಥ್‌ ಭಾರತೀಯ ವರ್ತುಳಗಳಲ್ಲಿ ಸುಲಭವಾಗಿ ಬೆರೆತುಕೊಂಡರು, ಲೋಕಪ್ರಿಯರಾದರು. ಆದರೆ ಅವರ ಸಂಸಾರದಲ್ಲಿ ತೊಂದರೆಗಳಿವೆ ಎಂಬುದರ ಅರಿವಾಗಲು ಬಹಳ ಕಾಲ ಹಿಡಿಯಲಿಲ್ಲ. ಪಾರ್ಟಿಗಳಲ್ಲಿ ನರ್ತಿಸುವಾಗ ರೂಥ್‌ ಶಿಷ್ಟ ಸಂಪ್ರದಾಯದ ಮಿತಿ ದಾಟಿ ಮೈಗಂಟಿಕೊಳ್ಳಲಾರಂಭಿಸಿದಳು.

ಒಂದೆರಡು ಸಲ ಗಂಡ ಇಲ್ಲದಿದ್ದಾಗ ನಾವು ಮುಚ್ಚುಮರೆಯ ಪ್ರಯತ್ನವನ್ನೂ ಮಾಡದೆ ಪಾರ್ಟಿಯಿದ್ದ ಮನೆಯಲ್ಲಿ ಅನುಕೂಲ ಶಯ್ಯಾಗೃಹ ಹುಡುಕಿ ಪ್ರಣಯ ನಡೆಸಿದ್ದಿದೆ. ಒಂದು ಸಲ ಪಾರ್ಟಿಯಲ್ಲಿ ನಮ್ಮಿಬ್ಬರ ಮುದ್ದಾಟ ನಡೆದ ಮರುದಿನ ಬೆಳಿಗ್ಗೆ ಪರವೂರಿನಿಂದ ಮರಳಿ ಬಂದ ಆ್ಯಡಮ, ರೂಥಳ ಮುಖ ನೋಡಿ, ‘ಏನಿದು? ನಿನ್ನ ಮುಖ ಯಾರೋ ಒರಟಾಗಿ ಪರಚಿದಂತೆ ಊದಿಕೊಂಡಿದೆಯೆಲ್ಲ. ನಿನ್ನೆ ರಾತ್ರಿ ಕಾಮಕೇಳಿ ಅತಿಯಾಯಿತೇನು?’ ಎಂದು ಕೇಳಿದ್ದನಂತೆ. ಒಮ್ಮೆ ‘ನಿನ್ನೆ ಯಾರು? ಗಿರೀಶ ಏನು?’ ಎಂದು ಕೂಡ ವಿಚಾರಿಸಿದ್ದನಂತೆ. ಆದರೆ ನನ್ನ ಜೊತೆಗಿದ್ದ ಸ್ನೇಹಕ್ಕೆ ಅದು ಅಡ್ಡ ಬರಲಿಲ್ಲ.

ಆದರೆ ರೂಥಳ ಇಂಥ ಕ್ಷುಲ್ಲಕ ಸಾಹಸಗಳಿಂದ ಆ್ಯಡಮ ವಿಚಲಿತನಾಗುತ್ತಿರಲಿಲ್ಲ. ಅವನು ಮದ್ರಾಸಿನ ಅತಿ ದುಬಾರಿ ಹೋಟಲ್ಲಿಗೆ ಆಗಾಗ್ಗೆ ಹೋಗಿ ಅದರ ಆವಾರದಲ್ಲಿ ಗ್ರಾಹಕರ ಪ್ರತೀಕ್ಷೆಯಲ್ಲೇ ಕುಳಿತಿರುವ ಹೆಂಗಸರಲ್ಲಿ ಒಬ್ಬರನ್ನೋ ಇಬ್ಬರನ್ನೋ ಆರಿಸಿ, ವಿಹಾರ ಮಾಡಿ, ಮಾರನೆಯ ದಿನ ಆ ಬಗ್ಗೆ ರೂಥ್‌ಗೆ ಕೂಲಂಕಷವಾಗಿ ವಿವರಣೆ ನೀಡುತ್ತಿದ್ದನಂತೆ.

ಆ್ಯಡಮ್‌ ಚಿಕ್ಕ ರಾಬಿನ್‌ನನ್ನೂ ಆಗಾಗ್ಗೆ ‘You Bastard’ ಇತ್ಯಾದಿಯಾಗಿ ಸಂಭೋದಿಸುತ್ತಿದ್ದುದೂ ರೂಥ್‌ಳನ್ನು ಉದ್ರೇಕಗೊಳಿಸುತ್ತಿತ್ತು.
ಒಂದು ದಿನ ಆ್ಯಡಮ್‌ ಅಕಸ್ಮಾತ್ತಾಗಿ ಅಮೆರಿಕನ್‌ ರಾಯಭಾರಿ ಕೇಂದ್ರದಲ್ಲಿ ದುಡಿಯುತ್ತಿದ್ದ ನಮ್ಮೆಲ್ಲರ ಮಿತ್ರನಾದ ವಿಲಿಯಂನ ವಿರುದ್ಧ ಬೆಂಕಿ ಕಾರಿಕೊಂಡ. ‘ಆ ವಿಲಿಯಂಗೆ ಇಂಥ ದೊಡ್ಡ ಪದ ಸಿಗುವ ಹಾಗೆ ಯಾವ ಕ್ರೆಡೆಂಶಿಯಲ್ಸ್‌ಗಳಿವೆ ಹೇಳು. ಯಾವುದೋ ಮಧ್ಯಮ ದರ್ಜೆಯ ಅಮೆರಿಕನ್‌ ವಿಶ್ವವಿದ್ಯಾಲಯದಲ್ಲಿ ಕ್ರೀಡಾಪಟು.

ಅವನು ಇಲ್ಲೇನು ಮಾಡುತ್ತಿದ್ದಾನೆ? ರಾಯಭಾರದ ಕೆಲಸ ನಿರ್ವಹಿಸುವ ಬುದ್ಧಿ ಇದೆಯೇನು ಅವನಿಗೆ? ಅವನು C.I.A.ಗಾಗಿ ದುಡಿಯುವ ಗೂಢಚಾರನಾಗಿದ್ದಾನೆ ಎನ್ನುವುದು ಖಂಡಿತ. ಅಪಾಯಕಾರಿ ವ್ಯಕ್ತಿ’, ಹೀಗೆ ಕೋಪಾವಿಷ್ಟನಾಗದೆ ಕಣ್ಣು ಮಿಟುಕಿಸಿ ನಗುತ್ತಲೇ ರೇಗಿದ. ವಿಲಿಯಂನ ಹಾವಭಾವಗಳನ್ನು ಅನುಕರಿಸುತ್ತ ಗೇಲಿ ಮಾಡಿದ ಹೊರತು ಉರಿಯಲಿಲ್ಲ.

ಕೆಲವೇ ದಿನಗಳಲ್ಲಿ ಅವನ ಈ ಅಸಮಾಧಾನಕ್ಕೆ ಕಾರಣ ಗೊತ್ತಾಯಿತು. ವಿಲಿಯಂ ಮದ್ರಾಸಿನ ಆಫೀಸಿನಿಂದ ಬದಲಿಯಾಗಿ ಇನ್ನೆಲ್ಲಿಗೋ ಹೋದ. ರೂಥ್‌ ಅವನ ಬೆನ್ನು ಹತ್ತಿ ಹೊರಟುಹೋದಳು. ರಾಬಿನ್‌ನನ್ನು ತನ್ನ ಜೊತೆಗೆ ಕರೆದುಕೊಂಡು ಹೋದಳು. ಆ್ಯಡಮ್‌ ಕೆಲ ದಿನ ಸಣ್ಣ ಮುಖ ಮಾಡಿಕೊಂಡು ಎಲ್ಲರ ಕಣ್ಣು ತಪ್ಪಿಸಿ ಅಡ್ಡಾಡುತಿದ್ದವನು ಒಂದು ದಿನ ಮನೆ ಮುಚ್ಚಿ ಮಾಯವಾದ. ಯಾರಿಗೂ ವಿದಾಯ ಹೇಳಲಿಲ್ಲ. ಆಮೇಲೆ ನಾಲ್ಕು ವರ್ಷ ಕಾಣಸಿಗಲಿಲ್ಲ.

1971ರಲ್ಲಿ ಅಮೆರಿಕೆಯ ಸ್ಟೇಟ್‌ ಡಿಪಾರ್ಟ್‌ಮೆಂಟ್‌ ನನ್ನನ್ನು ಅಮೆರಿಕೆಗೆ ಆಮಂತ್ರಿಸಿತು. ಅಲ್ಲಿಂದ ಹೊರಳಿ ಬರುವಾಗ ಕ್ವಾಲಾಲಂಪೂರ್‌ದಲ್ಲಿ ವಾಸ ಮಾಡುತ್ತಿದ್ದ ನನ್ನ ಅಕ್ಕ–ಭಾವಂದಿರನ್ನು ಕಂಡು ಬರೋಣ ಎಂದು ದೇಶದ ಪಶ್ಚಿಮ ದಂಡೆಯಿಂದ ಭಾರತಕ್ಕೆ ಮರಳಿದೆ. ಜಪಾನದಿಂದ ಥಾಯ್‌ಲ್ಯಾಂಡಿಗೆ ಹೋಗಿ, ಅಲ್ಲಿ ಬ್ಯಾಂಗ್‌ಕಾಕ್‌ದಲ್ಲಿ ಒಂದು ರಾತ್ರಿ ತಂಗಿ ಮಾರನೆಯ ದಿನ ಕ್ವಾಲಾಲಂಪೂರ್‌ಗೆ ಪ್ರವಾಸ  ಮುಂದುವರಿಸಬೇಕಾಗಿತ್ತು. ಆ ಪ್ರಕಾರ ಬ್ಯಾಂಗ್‌ಕಾಕ್‌ದಲ್ಲಿ ಇಳಿದು, ವಿಮಾನ ನಿಲ್ದಾಣದಿಂದ ಹೊರ ಹೊರಡುತ್ತಿರುವಾಗ ಯಾರೋ ‘ಗಿರೀಶ್‌’ ಎಂದು ಕೂಗಿದ್ದು ಕೇಳಿಸಿತು. ಇಲ್ಲಿ ನನ್ನನ್ನು ಬಲ್ಲವರು ಯಾರು ಎಂದು ದಿಗಿಲಾಗಿ ಹೊರಳಿ ನೋಡಿದರೆ, ಆ್ಯಡಮ್‌ ನಿಲ್ದಾಣದಲ್ಲೇ ಒಂದು ಗೇಟಿನ ಕಟಕಟೆಯ ಮೇಲೆ ಮೊಣಕಾಲನ್ನೆತ್ತಿಕೊಂಡು ಕೂತಿದ್ದ.

ಯಾರನ್ನೋ ಕರೆದೊಯ್ಯಲು ಬಂದಿದ್ದೇನೆ ಎಂದ. ‘ಈ ಹೊತ್ತು ಸಂಜೆ ನಿನಗೇನಾದರೂ ಕಾರ್ಯಕ್ರಮವಿದೆಯೇ?’ ಎಂದ. ಇಲ್ಲ ಎಂದಾಗ ‘ಹೋಟಲ್ಲಿಗೆ ಬಂದು ಭೆಟ್ಟಿಯಾಗುತ್ತೇನೆ’ ಎಂದ. ಸಂಜೆ ಏಳರ ಸುಮಾರಿಗೆ ಬಂದ. ‘ಎಂದಾದರೂ ಮಸಾಜ್‌ ಪಾರ್ಲರ್‌ಗೆ ಹೋಗಿದ್ದೀಯಾ?’ ಎಂದು ಕೇಳಿದ. ನಾನು ಇಲ್ಲ ಎಂದಾಗ ‘ನಡೆ ಹೋಗೋಣ’ ಎಂದ. ‘ನನಗೆ ಮಸಾಜ್‌ ಪಾರ್ಲರ್‌ಗಳ ಬಗ್ಗೆ ಏನೂ ಗೊತ್ತಿಲ್ಲ’ ಎಂದಾಗ, ಹಿಂದಿನಂತೆ ದನಿಯೆತ್ತರಿಸಿ ಜೋರಾಗಿ ನಕ್ಕು, ‘ನಿನ್ನ ಜೇಬಿನಲ್ಲಿ ಹಣ ಇದ್ದರೆ ಸಾಕು, ಉಳಿದದ್ದೆಲ್ಲ ತನ್ನ ಪಾಡಿಗೆ ತಾನು ನಿರಂಬಳವಾಗಿ ನಡೀತದೆ’, ಎಂದ ಮಸಾಜ್‌ ಪಾರ್ಲರ್(ಮಾಲಿಶ್ ಗೃಹ)ದ ಸ್ವಾಗತ ಕಕ್ಷದಲ್ಲಿ ಡೆಸ್ಕ್‌ನ ಹಿಂದೆ ಕೂತ ಹೆಂಗಸಿಗೆ ಒಂದು ಸಂಜೆಯ ‘ಮಸಾಜಿ’ನ ಫೀ ಕೊಟ್ಟೆ.

ಅಲ್ಲೇ ನಿಂತ ಪರಿಚಾರಿಕೆ ನನ್ನನ್ನು ಒಂದು ಬಾಗಿಲಿಗೆ ಕರೆದೊಯ್ದು, ಬಾಗಿಲಿನ ಮಧ್ಯದಲ್ಲಿದ್ದ ಉದ್ದನ್ನ ಕನ್ನಡಿಯೊಳಗೆ ನೋಡು ಎಂದಳು. ಒಳಗಡೆ ಹತ್ತು–ಹದಿನೈದು ಥಾಯ್‌ ತರುಣಿಯರು. ಎಲ್ಲರದೂ ತೆಳುವಾದ ಮೈಕಟ್ಟು. ಬಳುಕಿನ ನಡೆ. ಸ್ವಿಮಿಂಗ್‌ ಕಾಸ್ಟ್ಯೂಮ್‌ ತರಹ, ಹೆಗಲು, ಬಾಹುಗಳು, ಕೈಕಾಲುಗಳನ್ನು ಬಿಟ್ಟರೆ ವಕ್ಷಸ್ಥಳದಿಂದ ತೊಡೆಗಳ ಸಂದಿಯವರೆಗೆ ದೇಹಕ್ಕೆ ಅಂಟಿಕೊಂಡಿರುವ ಪೋಷಾಕು.
ನಾನು ಒಬ್ಬಾಕೆಯನ್ನು ಆರಿಸಿದೆ. ಪರಿಚಾರಿಕೆ ನನ್ನನ್ನೊಂದು ಸಾಧಾರಣ ಎಂಟು–ಹತ್ತು ಅಡಿ ಚದುರದ ಕೋಣೆಗೆ ಕರೆದುಕೊಂಡು ಹೋದಳು. ಒಳಗೆ ನೆಲದ ಮೇಲೆ ಮಾಲಿಶ್‌ ಮಾಡುವಾಗ ಬಳಸುವ ಹಾಸಿಗೆ ಹಾಸಿತ್ತು. ‘ನಾನು ಆಯ್ದುಕೊಂಡ’ ಹುಡುಗಿ ನನಗಾಗಿ ಕಾದಿದ್ದಳು.

ನಾನು ಬಟ್ಟೆ ಬಿಚ್ಚಿ ಹಾಸಿನ ಮೇಲೆ ಕೂತಾಗ ಹುಡುಗಿ ನನ್ನ ಚಡ್ಡಿಯನ್ನು ತೆಗೆಯಲಾರಂಭಿಸಿದಳು. ಮಾಲಿಶ್‌ ಮಾಡುವಾಗ ಚಡ್ಡಿ ಬಿಚ್ಚುವ ಅವಶ್ಯಕತೆಯಿರುವುದಿಲ್ಲ ಎಂದು ನನಗೆ ಗೊತ್ತಿತ್ತು. ಆಕೆ ‘ಇಲ್ಲಿ ನಾವಿಬ್ಬರೇ. ನೀವೇನೂ ನಾಚಬೇಕಾಗಿಲ್ಲ’ ಎಂದು ಥಾಯ್ ಪಲುಕಿನ ಇಂಗ್ಲಿಷ್‌ನಲ್ಲಿ ಉಸುರಿ ಚಡ್ಡಿಯನ್ನೂ ತೆಗೆದು ಉಳಿದ ಬಟ್ಟೆಗಳೊಡನೆ ನಾಗೊಂದಿಗೆಯ ಮೇಲೆ ಇಟ್ಟು ಮಾಲೀಶ್‌ ಆರಂಭಿಸಿದಳು. ಅದು ಸ್ನಾಯುಗಳು ಬಿಗಿದಾಗ, ಅಂಗಾಂಗಗಳು ಕಟ್ಟಿ ಗಂಟಾದಾಗ ಉಪಾಯವೆಂದು ಪ್ರಯೋಗಿಸುವ ಮಾಲೀಶ್‌ಗಿಂತ ಭಿನ್ನವಾಗಿತ್ತೆಂದು ಬೇರೆ ಹೇಳಬೇಕಾಗಿಲ್ಲ.

ಅಂಗಾಂಗಗಳ ನೀವಿಕೆಯಲ್ಲಿ, ಸ್ನಾಯಗಳ  ಮರ್ದನದಲ್ಲಿ, ಅಂಗೈ ಅಂಚಿನಿಂದ ಮಾಂಸಖಂಡಗಳನ್ನು ಗುದ್ದುವುದರಲ್ಲಿ ಗ್ರಾಹಕನನ್ನು ಉತ್ತೇಜಿತಗೊಳಿಸುವುದೇ ಅದರ ಉದ್ದೇಶವಾಗಿತ್ತು. ನಾನು ಆಕೆಯನ್ನು ಆಲಿಂಗಿಸಿದೆ, ಮುದ್ದಿಟ್ಟೆ. ಅದ್ಯಾವುದಕ್ಕೂ ಪ್ರತೀಕಾರ ಬರದಿದ್ದರೂ, ಆಕೆಯ ಮೈಗೆ ಕವಚದಂತೆ ಕಟ್ಟಿಕೊಂಡಿದ್ದ ಬಟ್ಟೆಯಡಿಗೆ ಕೈ ಸೇರಿಸಿ ಆಕೆಯ ಮೈದೊಗಲನ್ನು ನೇವರಿಸುವುದು ಅಸಾಧ್ಯವೇ ಆಗಿತ್ತು. ಇನ್ನು ಸ್ತನ–ತೊಡೆ ಮೊದಲಾದ ಭಾಗಗಳನ್ನು ಎಷ್ಟು ಭದ್ರವಾಗಿ ರಕ್ಷಿಸಲಾಗಿತ್ತೆಂದು ಹೇಳಬೇಕಾಗಿಲ್ಲ.

ಆದರೂ ಈ ಮಾಲಿಶಗಾರ್ತಿ ತನ್ನ ಸಂಭೋಗ ವಿರಹಿತ ಪ್ರಚೋದನೆ ಬೇಸರ ತರದಂತೆ ಎಚ್ಚರವಹಿಸುವ ಸಣ್ಣಪುಟ್ಟ ತಂತ್ರಗಳಲ್ಲೆಲ್ಲ ನುರಿತವಳಾಗಿದ್ದಳು. ಕೊನೆಗೆ ನಾನೆಂದೆ: ‘ಈಗ ಇದನ್ನು ನಿಲ್ಲಿಸು. ನನ್ನ ಪಕ್ಕದಲ್ಲಿ ಮಲಗಿಕೋ’. ‘ಯಾಕೆ ಬೇಸರ ಬಂತೇನು? ನಾನು ನಿನಗೆ ಹಿಡಿಸಲಿಲ್ಲೇನು?’ ಎಂದು ಕೇಳಿದಳು.‘ನೀನು ಒಳ್ಳೆಯ ಮಾಲಿಶ್‌ಗಾರ್ತಿ. ಆದರೆ ಬಾ, ಇಲ್ಲಿ ನನ್ನ ಪಕ್ಕದಲ್ಲಿ ಪವಡಿಸು. ನಿನ್ನ ಜೊತೆಗೆ ಮಾತನಾಡಬೇಕಾಗಿದೆ’ ಎಂದೆ. ಆಕೆ ನನ್ನ ಮೈಯಮೇಲೆ ತನ್ನ ಮೊಣಕಾಲನ್ನು ಮಡಿಚಿ ಮಲಗಿಕೊಂಡಳು.

‘ನಿನ್ನ ಹೆಸರೇನು?’ ಏನೋ ಹೆಸರು ಹೇಳಿದಳು. ‘ನಿಜವಾದ ಹೆಸರೇ?’ ಎಂದು ಕೇಳಿದ. ‘ಇಲ್ಲ’ ಎಂದಳು.‘ನನಗೆ ಹೇಳುವುದರಲ್ಲಿ ಏನೂ ಅಪಾಯವಿಲ್ಲ. ನಾನು ನಾಳೆ ನಸುಕಿನಲ್ಲಿ ಬ್ಯಾಂಗ್‌ಕಾಕ್‌ ಬಿಟ್ಟು ಹೋಗುವವನಿದ್ದೇನೆ’. ‘ಹಾಗಾದರೆ ಹೇಳಿ ಏನು ಪ್ರಯೋಜನ’ಎಂದಳು. ನಾವಿಬ್ಬರೂ ಗೊಳ್ಳನೆ ನಕ್ಕೆವು.‘ಯಾಕೆ, ನಿಮ್ಮ  ಗುರುತು ಪರಿಚಯವಾದರೆ ಗ್ರಾಹಕರು ಬೆನ್ನುಹತ್ತುವ ಸಾಧ್ಯತೆಯಿದೆಯೇ’ ಎಂದು ಕೇಳಿದೆ. ‘ಇಲ್ಲಿ ಎಲ್ಲ ಬಗೆಯ ಜನ ಬರುತ್ತಾರೆ’ ಎಂದಳು. ಆ ಮೇಲೆ ನನ್ನ ಬಗ್ಗೆ ಕೇಳಲಾರಂಬಿಸಿದಳು.

ನಾನು ‘ಇದೇ ನನ್ನ ಮೊದಲನೆಯ ಮಸಾಜ್‌ ಪಾರ್ಲರ್‌ದ ಅನುಭವ’ ಎಂದಾಗ, ‘ಮನೆಯಲ್ಲಿ ಹೆಂಡತಿ ಮಸಾಜ್‌ ಮಾಡತಾಳೇನು?’ ಎಂದು ಕೇಳಿದಳು. ಮತ್ತೆ ನಗೆ. ‘ನನಗೆ ಹೆಂಡತಿಯಿಲ್ಲ’ ಎಂದೆ.‘ಪ್ರೇಯಸಿ?’ ‘ಇದ್ದಾಳೆ. ಆದರೆ ಆಕೆ ಇರುವುದು ನ್ಯೂಯಾರ್ಕದಲ್ಲಿ. ನಾನು ಇರುವುದು ಮುಂಬೈಯಲ್ಲಿ’.

ಹೀಗೆಯೇ ಸಂವಾದ ಮುಂದುವರಿಯಿತು. ನಾನು – ನನ್ನ ವಾಗ್ದತ್ತ ವಧು ಆರು ವರ್ಷಗಳಿಂದ ಸ್ನೇಹ ಸಂಬಂಧವನ್ನಿಟ್ಟುಕೊಂಡರೂ ಎಂದೂ ಮದುವೆ ಎಂಬ ಬಗ್ಗೆ ಯಾವ ನಿರ್ಣಯವನ್ನೂ ಕೈಕೊಂಡಿಲ್ಲ ಅಂದಾಗ ‘ಯಾಕೆ? ಯಾಕೆ?’ ಎಂದು ತವಕದಿಂದ ಕೇಳಿದಳು. ನಮ್ಮ ನಡುವಿನ ಶೃಂಗಾರ ಇಷ್ಟರಲ್ಲಿ ನಂದಿ ಹೋಗಿದ್ದರಿಂದ ಹೊಸತಾಗಿ ಪರಿಚಯವಾದ ತರುಣ–ತರುಣಿಯರಂತೆ ಮಾತುಕತೆ ಸಾಗಿತು.

ನನ್ನ ಅವಧಿ ಮುಗಿದು ನಾನು ಹೊರಟಾಗ, ಆಕೆ ನನ್ನನ್ನು ಮುತ್ತಿಟ್ಟು, ‘ನೀನು ನನಗೆ ತುಂಬಾ ಹಿಡಿಸಿದೀ’ ಎಂದಳು. ‘ನೀನು ನಾಳೆ ಮರಳಿ ಬರುವುದಿದ್ದರೆ ನನ್ನನ್ನೇ ರಿಜರ್ವ್‌ ಮಾಡಲಿಕ್ಕೆ ನನ್ನ ಉಪನಾಮ ಕೊಡುತ್ತಿದ್ದೆ’ ಎಂದಳು. ಮತ್ತೆ ಸ್ನೇಹ ಭರಿತ ನಗೆ. ಆಲಿಂಗನ. ನಾನು ಹೊರಗೆ ಬಂದೆ. ಅಲ್ಲಿಂದ ನಾನು–ಆ್ಯಡಮ ಒಂದು ರೆಸ್ಟಾರೆಂಟಿಗೆ ಹೋದೆವು. ‘ಹೇಗಿತ್ತು ಸಂಜೆ?’ ಎಂದು ಕೇಳಿದ.

‘ಒಳ್ಳೆಯ ಹುಡುಗಿ, ಚೆನ್ನಾಗಿ ಮಾಲಿಶ್‌ ಮಾಡಿದಳು. ನೀನು?’ ‘ಅಯ್ಯೋ, ನಾನು–ನನ್ನ ಹುಡುಗಿ. ಏನು ಹೇಳಲಿ? ಬೊಂಬಾಟ್‌!’
ತನ್ನ ಹುಡುಗಿಯೊಂದಿಗೆ ತಾನು ಎಂಥ ‘ಆರ್ಭಟ’ – ಬತ್ತಲೆ ಆಟ ಆಡಿದೆನೆಂದು ವರ್ಣಿಸಿದ. ನಾನೂ ತಕ್ಕ ಫೀ  ಕೊಟ್ಟಿದ್ದರೆ, ನನಗೂ ತಂತ್ರ ಗೊತ್ತಿದ್ದರೆ ‘ಬೊಂಬಾಟ್‌ ಪಡೆಯಬಹುದಾಗಿತ್ತೇನೋ. ಆದರೆ ನಾನು ಅನನುಭವಿ. ಆ್ಯಡಮನ ವಿಸ್ತೃತ ಅನುಭವಕ್ಕೆ ತಲೆಬಾಗಿದೆ.

ಆಗಲೇ ರೂಥ್‌ ತನ್ನ ಗಂಡನ ಲೈಂಗಿಕ ಪರಾಕ್ರಮಗಳ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಚಟದ ಬಗ್ಗೆ ಹೇಳಿದ್ದು ನೆನಪಾಯಿತು.
ಆದರೂ ನನ್ನನ್ನು ಹೋಟಲ್ಲಿಗೆ ತಲುಪಿಸಿ ಬೀಳ್ಕೊಳ್ಳುವಾಗ ಆ್ಯಡಮ ಕಬೂಲ ಕೊಟ್ಟ. ‘ಕೆಲ ಸಮಯ ಕಳೆದ ಮೇಲೆ ಈ ಸೀಳುಗಣ್ಣಿನ ಅಪ್ಸರೆಯರೂ (Slink-eyed Sirens) bore ಆಗತಾರೆ, ಗಿರೀಶ’.

ಇದಾದ ಹದಿನಾಲ್ಕು ವರುಷಗಳ ನಂತರ ನಾನು ಲಂಡನ್‌ನಲ್ಲಿ ನನ್ನ ‘ಉತ್ಸವ’ ಚಿತ್ರದ ಇಂಗ್ಲಿಷ್‌ ಡಬ್ಬಿಂಗ್‌ (dubbing) ದಲ್ಲಿ ತೊಡಗಿದ್ದೆ. ನಾನು ನಮ್ಮ ಸ್ಟುಡಿಯೋದ ಬಳಿಗೆ ರಸ್ತೆ ದಾಟಲಿರುವಾಗಲೇ ಯಾರೋ ‘ಗಿರೀಶ್‌! ಗಿರೀಶ್‌!’ ಎಂದು ಕರೆದದ್ದು ಕೇಳಿಸಿತು. ಅತ್ತಿತ್ತ ನೋಡುತ್ತೇನೆ. ಒಂದು ಟ್ಯಾಕ್ಸಿಯಲ್ಲಿ ಆ್ಯಡಮ್‌. ‘ತಡಿ! ಬಂದೆ’ ಎಂದು ಟ್ಯಾಕ್ಸಿಯ ಕಿಟಕಿಯೊಳಗಿಂದ ಕೈಚಾಚಿ ಹೇಳಿದ. ನನಗೆ dubbingಗೆ ವಿಳಂಬವಾಗುತ್ತಿತ್ತು.

ಅವರೆಲ್ಲ ಮಹಾ ದುಬಾರಿ ಕಲಾಕಾರರು. ಅಷ್ಟೇ ಅಲ್ಲ, ವ್ಯರ್ಥ ಕಾಲವ್ಯಯವಾದರೆ ಸೆಟೆದುಕೊಳ್ಳುವ ಜನ. ಆದರೆ ಆ್ಯಡಮನನ್ನು ಬಿಟ್ಟು ಹೋಗುವ ಹಾಗಿರಲಿಲ್ಲ. (ಆ ಯುಗದಲ್ಲಿ ಕಲಾಕಾರರಿಗೆ ತಿಳಿಸಲಿಕ್ಕೆ ಮೊಬೈಲುಗಳೂ ಇರಲಿಲ್ಲ). ಅಲ್ಲೇ ನಿಂತೆ. ಮೂರು ನಾಲ್ಕು ನಿಮಿಷಗಳಲ್ಲಿ ಆ್ಯಡಮ್‌ ಟ್ಯಾಕ್ಸಿಯನ್ನು ಬಿಟ್ಟು ಓಡಿ ಬಂದ. ಲಂಡನ್‌ ರಾಜಮಾರ್ಗದ ಮೇಲೆ ಕೂಡ್ರುವುದೆಲ್ಲಿ? ಅಲ್ಲೇ pavement ಮೇಲೆ ಅತ್ತಿಂದಿತ್ತ ನಿರಂತರ ಹರಿದಾಡುವ ಜನರ ಧಾರೆಯಲ್ಲೇ ನಿಂತು ಅಪ್ಪಿಕೊಂಡೆವು. ಮಾತನಾಡಿದೆವು.

‘ಇಲ್ಲೇನು ಮಾಡುತ್ತಿದ್ದೀ?’ ಎಂದು ಕೇಳಿದೆ. ‘ತಲೆ ತಪ್ಪಿಸಿಕೊಂಡು ಓಡಾಡುತ್ತಿದ್ದೇನೆ’ ಎಂದ. ‘ಯಾರಿಂದ?’ ನಾನು, ಆಶ್ಚರ್ಯದಿಂದ ಕೇಳಿದೆ.
ಆ್ಯಡಮ ತನ್ನ ಇತ್ತೀಚಿನ ಇತಿಹಾಸ ಹೇಳಿದ. ಅದು ನನಗೆ ಪೂರ್ಣ ಅರ್ಥವಾಗಲಿಲ್ಲ – ಇದಕ್ಕೆ ಕಾರಣ ಲಂಡನ್‌ನ ಗದ್ದಲ ಇರಬಹುದು. ಇಲ್ಲವೆ ಅವನು ವೇಗವಾಗಿ ತಿಳಿಸಿ ಹೇಳಲೆತ್ನಿಸುತ್ತಿದ್ದ ವಜ್ರ–ವೈಢೂರ್ಯಗಳ ವ್ಯಾಪಾರದ ಜಗತ್ತಿನ ವಿವರಗಳೇ ಗೋಜಲು – ಗೋಜಲಾಗಿರಬಹುದು. ಅಂತೂ ನನಗೆ ಗೊತ್ತಾದದ್ದಿಷ್ಟು.

ಜಗತ್ತಿನಲ್ಲಿ ವಜ್ರ–ವೈಢೂರ್ಯಗಳ (ವಿಶೇಷತಃ ವಜ್ರಗಳ) ವ್ಯಾಪಾರ ನಡೆಯುವುದೇ ವ್ಯಾಪಾರಿ ಹಾಗೂ ಗ್ರಾಹಕರ ನಡುವೆ ಇರುವ ನಂಬಿಕೆಯ ಮೇಲೆ. ಗ್ರಾಹಕ ಮೋಸ ಮಾಡಲಾರ ಎಂಬ ದೃಢವಾದ ವಿಶ್ವಾಸದ ಮೇಲೆ ಕೋಟ್ಯಾವಧಿ ಬೆಲೆ ಬಾಳುವ ವಜ್ರಗಳನ್ನು ಮುಂಗಡವಾಗಿ ಕಳಿಸಿ ಕೊಡಲಾಗುತ್ತದೆ. ಅವು ಗ್ರಾಹಕನಿಗೆ ಒಪ್ಪಿಗೆಯಾದರೆ ಮಾರಾಟವಾಗುತ್ತವೆ. ಇಲ್ಲವಾದರೆ ಅವನ್ನು ಹಿಂದಿರುಗಿಸಲಾಗುತ್ತದೆ. ಆದರೆ ಇಷ್ಟೊಂದು ಪ್ರಚಂಡ ಪ್ರಮಾಣದ ವಿತ್ತ ವ್ಯಾಪಾರ ಎಂದ ಮೇಲೆ ಕಣ್ಣುಮರೆಗೆ ಕಾರಸ್ಥಾನಗಳೂ ಇದ್ದೇ ಇರುತ್ತವೆ.

ತನ್ನ ‘ಬಾಸ್‌’ ಇಂಥ ಅವ್ಯವಹಾರಗಳಲ್ಲಿ ತೊಡಗಿರುವುದು ಆ್ಯಡಮ್‌ಗೆ ಗೊತ್ತಿತ್ತು. ಅಷ್ಟೇ ಅಲ್ಲ, ಅವನ ಸಹಕಾರಿ ಕೂಡ ಆಗಿದ್ದ. ‘ಬಾಸ್‌’ನ ಬಗ್ಗೆ ಏನೋ ಸಂದೇಹ ಉಂಟಾಗಿ ಗುಟ್ಟಾಗಿ ವಿಚಾರಣೆ ಆರಂಭವಾದಾಗ ತನಿಖೆ ನಡೆಸಿದವರು ಆ್ಯಡಮನ ಬಳಿಗೆ ಬಂದು, ‘ಆ ವಿವರಗಳನ್ನು ನಮಗೆ ತಿಳಿಸಿದರೆ ನಿನಗೆ ಲಾಭವಾಗುತ್ತದೆ’ ಎಂದರಂತೆ. ಆ್ಯಡಮ ತನ್ನ ‘ಬಾಸ್‌’ನ ಸೂಕ್ಷ್ಮಾತಿ ಸೂಕ್ಷ್ಮ ವ್ಯಾಪಾರಾಂಶಗಳನ್ನೆಲ್ಲ (ಅವನ ಶಬ್ದಗಳಲ್ಲೇ ಹೇಳಬೇಕಾದರೆ, ‘ಅಲ್ಪ ವಿರಾಮ, ಪೂರ್ಣ ವಿರಾಮ ಕೂಡ ಬಿಡದೆ’) ಅವರೆದುರಿಗೆ ಬಿಚ್ಚಿಟ್ಟ. ಹೇರಳವಾಗಿ ದುಡ್ಡು ಸಂಪಾದಿಸಿದ. ಆದರೆ ಈಗ ಅದರ ಪ್ರತಿಫಲ ಉಣ್ಣುತ್ತಿದ್ದ.

‘ನಾನು ಅವರ ಕೈಗೆ ಸಿಕ್ಕರೆ ಅವರು ನನ್ನನ್ನು ಕೊಂದೇ ಹಾಕುತ್ತಾರೆ. ಆ ಬಗ್ಗೆ ಸಂದೇಹವಿಲ್ಲ. ಇಲ್ಲವೆ ಚಿತ್ರಹಿಂಸೆ ಮಾಡಿ ಕೈಕಾಲು ಮುರಿದು ಹಾಕಬಹುದು. ವಿಶ್ವಾಸಘಾತ ಮಾಡಿದರೆ ಪ್ರತಿಫಲ ಏನು ಎಂಬುದರ ನಿದರ್ಶನ ಉಳಿದವರಿಗೆ ಕೊಡಬೇಕಲ್ಲ. ಅದಕ್ಕಾಗಿ ನಾನು ಅವರಿಂದ ತಪ್ಪಿಸಿಕೊಂಡು ದೇಶದಿಂದ ದೇಶಕ್ಕೆ ಓಡಾಡುತ್ತಿದ್ದೇನೆ. ಇಲ್ಲಿ ಬಂದು ಮೂರು–ನಾಲ್ಕು ದಿವಸ ಆಯಿತು. ಇನ್ನೂ ಹೆಚ್ಚು ದಿನ ಇರುವುದರಲ್ಲಿ ಅಪಾಯವಿದೆ. ಮುಂದೆ ಸಾಗಬೇಕು. ನಾನು ಎಲ್ಲಿ ನೆಲೆಸಿದರೂ ಅವರು ಪತ್ತೆ ಹಚ್ಚಿ ಬಿಡುತ್ತಾರೆ’ ಎಂದ.

ನನಗೆ ಡಬ್ಬಿಂಗ್‌ ಕಲಾಕಾರರ ಚಿಂತೆ ಹತ್ತಿತ್ತು. ‘ಸಂಜೆಗೆ ಭೆಟ್ಟಿಯಾಗುತ್ತಿಯೇನು? ಒಟ್ಟು ಸೇರಿ ಊಟ ಮಾಡೋಣ’ ಎಂದೆ. ‘ನಾನು ಎಲ್ಲಿದ್ದೇನೆ ಯಾರಿಗೂ ಹೇಳುವ ಹಾಗಿಲ್ಲ. ನಿನಗೂ’ ಎಂದ. ಮಾಯವಾದ. ಇನ್ನೊಂದು ಹದಿನೈದು ವರ್ಷ ಕಳೆದವು. ಬ್ರಿಟನ್ನಿನ ಲೆಸ್ಟರ್‌ ನಗರದಲ್ಲಿ ಹೇಮಾರ್ಕೇಟ್ ಥಿಏಟರ್‌ನಲ್ಲಿ ನನ್ನ ‘ಬಲಿ’ ನಾಟಕ ರಂಗಾರ್ಪಿತವಾಯಿತು. ಅದಕ್ಕೆ ಯಥಾ ಪ್ರಕಾರ ಇಂಟರ್‌ನೆಟ್ ಮೇಲೆ ಪ್ರಚಾರ ನೀಡಿದ್ದರು.

ಒಂದ ದಿನ ನನಗೆ ಥಿಏಟರ್‌ ಮುಖಾಂತರ ಒಂದು ಈಮೇಲ್‌ ಬಂತು. ‘ಈ ನಾಟಕದ ಲೇಖಕ ಗಿರೀಶ್‌ ಕಾರ್ನಾಡ ಅಂದರೆ ನನಗೆ ಮದ್ರಾಸಿನಲ್ಲಿ ಪರಿಚಯವಿದ್ದ ವ್ಯಕ್ತಿಯೇ ಹೌದೇನು?’ ಎಂದು ಕೇಳಿದವ ಆ್ಯಡಮ್. ಸ್ವಿತ್ಝರ್ಲೆಂಡಿನಲ್ಲಿ ಎಲ್ಲೋ ಮೂಲೆಯ ಹಳ್ಳಿಯಲ್ಲಿ ತನ್ನ ಟೆಲಿಫೋನ್‌ ನಂಬರ್‌ ಕೊಟ್ಟಿದ್ದ. ನಾನು ಕೂಡಲೆ ಫೋನ್‌ ಮಾಡಿದೆ. ‘ನಾನು ಸೋತು ಹೋಗಿದ್ದೇನೆ, ಗಿರೀಶ’ ಆ್ಯಡಮ ಉಸಿರಿದ. ‘ನಾನು ಮುಟ್ಟಿದ್ದೆಲ್ಲ ಮಣ್ಣಾಗಿದೆ. ಆರೋಗ್ಯ ಕುಸಿದಿದೆ. ನನ್ನ ಹತ್ತಿರ ಏನೂ ಉಳಿತಾಯವಿಲ್ಲ. ನನ್ನ ಕತೆ ಮುಗಿಯಿತು!’.

‘ಹೀಗೆ ಎಂದರೆ ಹೇಗೆ, ಆ್ಯಡಮ?’ ಎಂದೆ. ‘ಒಂದು ಕಾಲದಲ್ಲಿ ನನಗೆ ನಿನ್ನ ಉತ್ಸಾಹ, ನಿನ್ನ ಚೈತನ್ಯ ಕಂಡರೆ ಹೊಟ್ಟೆಕಿಚ್ಚಾಗುತ್ತಿತ್ತು. ನನ್ನಲ್ಲಿ ನಿನ್ನ ಹುರುಪು, ಸಾಹಸಪ್ರವೃತ್ತಿಗಳಿದ್ದರೆ ಏನೇನು ಸಾಧಿಸಬಹುದು ಎಂದುಕೊಳ್ಳುತ್ತಿದ್ದೆ’. ‘ಅದೆಲ್ಲ ಎಂದೋ ಮುಕ್ತಾಯವಾಯಿತು. ನನ್ನ ಹೆಂಡತಿಯೂ ನನ್ನನ್ನು ಬಿಟ್ಟು ಹೋಗಿದ್ದಾಳೆ. ಹೋಗುವಾಗ ನನ್ನ ಜೇಬಿನಲ್ಲಿದ್ದ ಕೊನೆಯ ಕವಡೆ ಕಸಿದುಕೊಂಡು ಹೋಗಿದ್ದಾಳೆ. ನಾನೀಗ ಒಬ್ಬಂಟಿ ಅಶಕ್ತ!’.

‘ನಾಲ್ಕು ದಿನ ಲಂಡನ್ನಿಗೆ ಬಾ. ನನ್ನ ಜೊತೆಗೆ ನೆಹರೂ ಸೆಂಟರ್‌ನಲ್ಲಿ ಇರು. ಇಲ್ಲಿ ಪ್ರಶಸ್ತವಾದ ವಿಶ್ರಾಂತಿ ಕೋಣೆಯಿದೆ. ಬಂದು ವಿಶ್ರಮಿಸು’ ಎಂದೆ.  ‘ನೋಡೋಣ’ ಎಂದ. ‘ಮತ್ತೆ ಫೋನ್‌ ಮಾಡತೇನೆ’. ಆದರೆ ಮತ್ತೆ ಫೋನ್‌ ಬರಲೇ ಇಲ್ಲ. ಟೆಲಿಫೋನ್‌ ಮಾಡಿದಾಗ, ಹಾಗೆಯೇ ಈ ಮೇಲ್‌ ಮಾಡಿದಾಗ, ಎರಡೂ ಚಲಾವಣೆಯಲ್ಲಿಲ್ಲ ಎಂಬ ಮಾರುತ್ತರ ಬರುತ್ತಿತ್ತು ಅಷ್ಟೆ.

ಇದಾದ ಎರಡು ವರ್ಷಗಳ ಬಳಿಕ ರೂಥ್‌–ವಿಲಿಯಂ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರು ಕ್ಲಬ್ಬಿನಲ್ಲಿ ಊಟವಾಯಿತು. ರಾಬಿನ್‌ ಕಾಲೇಜಿನಲ್ಲಿ ಓದುತ್ತಿದ್ದಾನೆಂದು ಗೊತ್ತಾಯಿತು. ‘ಆ್ಯಡಮನದೇನು ಸುದ್ದಿ?’ ಎಂದು ಕೇಳಿದೆ. ಒಂದು ಗಳಿಗೆ ಮೌನ. ಆ ಮೇಲೆ ರೂಥ್‌ ‘ಅವನ ಕೊಲೆಯಾಯಿತು. ಯಾರು–ಯಾಕೆ ಗೊತ್ತಿಲ್ಲವಂತೆ’ ಎಂದಳು. ಮತ್ತೆ ಊಟ–ಪಾನೀಯ ಮುಂದುವರಿದವು.

(ಮನೋಹರ ಗ್ರಂಥಮಾಲಾ, ಧಾರವಾಡ ಪ್ರಕಟಿಸಲಿರುವ ‘ಮೆಲುಕು’ ಲೇಖನಗಳ ಸಂಗ್ರಹದಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT