ADVERTISEMENT

ಇರುವೆಯ ಯಕ್ಷಪ್ರಶ್ನೆ

ವೈ.ಜಯಕುಮಾರ್
Published 3 ಮಾರ್ಚ್ 2018, 10:38 IST
Last Updated 3 ಮಾರ್ಚ್ 2018, 10:38 IST
ಚಿತ್ರ: ಶಿಲ್ಪಾ ಕಬ್ಬಿಣಕಂತಿ
ಚಿತ್ರ: ಶಿಲ್ಪಾ ಕಬ್ಬಿಣಕಂತಿ   

ವೈ. ಜಯಕುಮಾರ್


ಬಹಳ ದಿನಗಳಿಂದ ಒಂದು ಗಂಡು ಇರುವೆ ತನ್ನ ಗೂಡಿನಲ್ಲಿ ತನ್ನ ಹೆಂಡತಿ ಇರುವೆಯೊಂದಿಗೆ ವಾಸಿಸುತ್ತಿತ್ತು. ಅದು ಪ್ರತಿದಿನ ಬೆಳಿಗ್ಗೆ ಹೊರಗೆ ದುಡಿಯಲು ಹೋದರೆ ಸಂಜೆ ಹೊತ್ತಿಗೆ ಆಹಾರ ಹುಡುಕಿ ತರುತ್ತಿತ್ತು. ತಂದಿದ್ದನ್ನು ಎರಡೂ ಇರುವೆಗಳು ಹಂಚಿಕೊಂಡು ತಿಂದು ತೃಪ್ತಿಯಿಂದ ಜೀವಿಸುತ್ತಿದ್ದವು.

ಒಂದು ಬೆಳಿಗ್ಗೆ ಎಂದಿನಂತೆ ಗಂಡ ಇರುವೆ ತನ್ನ ಹೆಂಡತಿ ಇರುವೆಗೆ, ‘ಈ ದಿನ ನಾನು ಬೇಗ ಮನೆಗೆ ಬಂದುಬಿಡುತ್ತೇನೆ’ ಎಂದು ಹೇಳಿ ಆಹಾರ ತರಲು ಹೊರಗೆ ನಡೆಯಿತು.

ADVERTISEMENT

ಇರುವೆ ನೆತ್ತಿಯ ಮೇಲೆ ಸೂರ್ಯ ಬರುವ ತನಕ ಆಹಾರ ಹುಡುಕುತ್ತಾ ಅಲ್ಲಿ–ಇಲ್ಲಿ ಅಲೆದಾಡಿತು. ಪ್ರಯೋಜನವಾಗಲಿಲ್ಲ. ಅದು ಬಳಲಿ ನಿತ್ರಾಣಗೊಂಡಿತು. ಮರಳಿ ಗೂಡಿಗೆ ಹೋಗುವಾಗ ಏನನ್ನಾದರೂ ಆಹಾರ ತೆಗೆದುಕೊಂಡು ಹೋಗದಿದ್ದರೆ ಹೊಟ್ಟೆಗೆ ತಣ್ಣೀರ ಬಟ್ಟೆಯೇ ಗತಿ. ಇರಲಿ, ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಪುನಃ ಆಹಾರ ಹುಡುಕಿದರಾಯಿತು ಎಂದು ತನ್ನ ಮನದಲ್ಲೇ ಅಂದುಕೊಂಡ ಇರುವೆ ಎದುರಿಗೆ ಕಾಣಿಸಿದ ಒಂದು ಕಲ್ಲಿನ ಬಳಿಗೆ ಸಾಗಿತು. ಆ ಕಲ್ಲಿನ ಸಂದಿಯ ನೆರಳಿನಲ್ಲಿ ತುಸು ಹೊತ್ತು ವಿಶ್ರಾಂತಿ ಪಡೆಯಲೆಂದು ಕಣ್ಣು ಮುಚ್ಚಿತು. ಮೊದಲೇ ಹಸಿದು ಬಳಲಿದ್ದ ಇರುವೆಗೆ ಬೇಗನೆ ನಿದ್ದೆ ಹತ್ತಿತು.

ಇರುವೆ ನಿದ್ದೆಯಿಂದ ಎಚ್ಚೆತ್ತಾಗ, ‘ಅಯ್ಯೋ, ನನ್ನ ಕಾಲು... ಕಾಲು ಮುರಿದಿದೆ... ಯಾವ ಪಾಪಿ ಮುರಿದನೋ... ಅಯ್ಯೋ, ರಕ್ತ ಬರುತ್ತಿದೆ... ಯಾರಾದರೂ ಕಾಪಾಡಿ... ಕಾಪಾಡಿ’ ಎಂದು ನೋವು ತಾಳಲಾಗದೆ ಚೀರಿತು.

ಇರುವೆಯ ಆರ್ತನಾದ ಕೇಳಿ ಸಹಾಯ ಮಾಡಲು ಸುತ್ತ-ಮುತ್ತ ಯಾವ ಪ್ರಾಣಿಯೂ ಕಾಣಲಿಲ್ಲ. ಯಾವ ಕಲ್ಲಿನ ಬುಡದಲ್ಲಿ ಇರುವೆ ವಿಶ್ರಾಂತಿ ಪಡೆದಿತ್ತೋ ಆ ಕಲ್ಲು ಅದರ ಕಾಲಿನ ಮೇಲಿಂದ ಉರುಳಿ ದೂರ ಹೋಗಿ ಬಿದ್ದಿತ್ತು! ದಾರಿಹೋಕ ಮನುಷ್ಯನೋ ಇಲ್ಲವೆ ದೊಡ್ಡ ಪ್ರಾಣಿಯೋ ಆ ದಾರಿಯಲ್ಲಿ ಹಾದು ಹೋಗುವಾಗ ಆ ಕಲ್ಲಿನ ಮೇಲೆ ಕಾಲಿಟ್ಟಿದ್ದರೋ ಅಥವಾ ಆ ಕಲ್ಲನ್ನು ಒದ್ದಿದ್ದರೋ ಅಂತೂ ಆ ಕಲ್ಲು ಉರುಳಿ ಇರುವೆಯ ಕಾಲು ಮುರಿದಿದ್ದಂತೂ ನಿಜ!

ಮೊದಲೇ ಹೊಟ್ಟೆಗೆ ಆಹಾರವಿಲ್ಲದೆ ಕಂಗಾಲಾಗಿದ್ದ ಇರುವೆ ತೆವಳುತ್ತಾ ತೆವಳುತ್ತಾ ತನ್ನ ಗೂಡಿನತ್ತ ಸಾಗಿತು. ತೆವಳುತ್ತಾ ನರಳುತ್ತಾ ಬಂದ ಗಂಡನನ್ನು ಬಾಗಿಲಲ್ಲಿ ಕಂಡ ಹೆಂಡತಿ ಇರುವೆ ಗಾಬರಿಗೊಂಡು, ‘ಅಯ್ಯೋ ಏನಾಯಿತು ರೀ? ಹೇಗಾಯಿತು ರೀ?’ ಎಂದು ಪ್ರಶ್ನಿಸಿತು.

ತೆವಳುತ್ತಾ ಗೂಡಿನೊಳಗೆ ಬಂದ ಇರುವೆ ನಡೆದ ಘಟನೆಯನ್ನು ನೋವು ನುಂಗುತ್ತಾ ಹೆಂಡತಿಯ ಮುಂದೆ ವಿವರವಾಗಿ ಹೇಳಿ, ‘ಇನ್ನು ಮುಂದೆ ನಾನು ಹೇಗೆ ದುಡಿಯಲಿ? ನನಗಿರಲಿ, ನಿನಗೆ ಅನ್ನ ಹಾಕಿ, ಸಾಕಿ-ಸಲಹಿ, ಉಪಚಾರ ಮಾಡುವವರು ಯಾರಿದ್ದಾರೆ ನಮ್ಮ ಈ ಗೂಡಿನಲ್ಲಿ?’ ಎಂದು ಪ್ರಶ್ನಿಸಿ ಹೆಂಡತಿಯನ್ನು ಅಪ್ಪಿಕೊಂಡು ಅಳತೊಡಗಿತು. ಗಂಡ ಕೇಳಿದ ಪ್ರಶ್ನೆಗೆ ಹೆಂಡತಿಯ ಬಳಿ ಉತ್ತರವಿರಲಿಲ್ಲ. ಅದು ಸಹ ದುಃಖದಿಂದ ಗೋಳಾಡತೊಡಗಿತು.

ಇರುವೆ ದಂಪತಿ ಅಳುವ ಸದ್ದು ಕೇಳಿ ಅಕ್ಕ-ಪಕ್ಕದ ಗೂಡುಗಳಲ್ಲಿದ್ದ ಇರುವೆಗಳು ಧಾವಿಸಿ ಬಂದವು. ‘ಏನು... ಏನು... ಏನಾಯಿತು... ಹೇಗಾಯಿತು?’ ಎಂದು ಪ್ರಶ್ನೆಗಳ ಮಳೆ ಸುರಿಸಿದವು. ನಂತರ ಸಮಾಧಾನದ ಮಾತುಗಳನ್ನಾಡಿ, ‘ಅಯ್ಯೋ ಪಾಪ, ಹೀಗಾಗಬಾರದಿತ್ತು’ ಎಂದವು.

ನತದೃಷ್ಟ ಇರುವೆ ಸಮಾಧಾನದ ಮಾತುಗಳನ್ನಾಡಿದ ನೆರೆಹೊರೆಯವರನ್ನು ಉದ್ದೇಶಿಸಿ ನೋವು ತುಂಬಿದ ದನಿಯಲ್ಲಿ, ‘ನಮ್ಮಂತಹ ಸಣ್ಣ ಪುಟ್ಟ ಪ್ರಾಣಿ ಪಕ್ಷಿಗಳು ರೆಕ್ಕೆ-ಪುಕ್ಕ, ಕಾಲು, ಕೊಕ್ಕು ಇಲ್ಲವೇ ಪ್ರಾಣವನ್ನೇ ಕಳೆದುಕೊಂಡಾಗ ದೈಹಿಕ, ಮಾನಸಿಕ ಸಂಕಟ ಅನುಭವಿಸುವವರನ್ನು ಕಂಡು ಮುಂದೆ ಬಂದು ಸ್ಪಂದಿಸಿ, ಸಕಾಲದಲ್ಲಿ ಸೂಕ್ತ ಪರಿಹಾರ ನೀಡಬಲ್ಲವರು ಯಾರಿದ್ದಾರೆ ಹೇಳಿ? ನೀವು ಸಹ ಹೊರಗೆ ದುಡಿಯಲು ಹೋದಾಗ ಅವಘಡ ನಡೆದರೆ ಕಾಪಾಡುವವರು ಯಾರು ಹೇಳಿ?’ ಎಂದು ಪ್ರಶ್ನಿಸಿತು.

ಅಂಗವಿಕಲ ಇರುವೆಯ ಯಕ್ಷಪ್ರಶ್ನೆಗೆ ನೆರೆಹೊರೆಯ ಇರುವೆಗಳ ಬಳಿ ಸೂಕ್ತ ಉತ್ತರವಿರಲಿಲ್ಲ. ಪರಸ್ವರ ಮುಖ ನೋಡಿಕೊಂಡು ಮೌನಕ್ಕೆ ಶರಣಾದವು. ಹೌದು ಈ ಯಕ್ಷಪ್ರಶ್ನೆಗೆ ಉತ್ತರ ಕೊಡುವವರಾರು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.