ADVERTISEMENT

ಐದನೆಯ ಗೋಪುರ

ಕಥೆ

ಉಮಾ ರಾವ್
Published 14 ನವೆಂಬರ್ 2015, 19:49 IST
Last Updated 14 ನವೆಂಬರ್ 2015, 19:49 IST

“ಬೆಂಗಳೂರಿಗೆ ಹೆಲೆನ್ ಆಗಮನ”.
ಶಂಕರ ಎಂದಿನಂತೆ ಇಂದು ಬೆಳಿಗ್ಗೆಯೂ ಕಾಫಿ ಕಪ್ ಕೈಯಲ್ಲಿ ಹಿಡಿದು ಪೇಪರ್ ತೆಗೆದು ಓದಲು ಕೂತಾಗ ಅಂದು ಕಂಡ ಹೆಡ್‌ಲೈನ್ ಅವನನ್ನು ಗಲಿಬಿಲಿಗೊಳಿಸಿತು. ಏಕೆಂದರೆ ಹೆಲೆನ್ ಹೆಸರು ಕೇಳುತ್ತಿದ್ದಂತೆಯೇ ಮನಸ್ಸಿನಲ್ಲಿ ಮೂಡುವ ಚಿತ್ರಗಳು ಎರಡು.

ಮಾದಕತೆ, ವೈಯಾರ, ಚೆಲುವು, ರೋಚಕತೆ ಮೈದುಂಬಿದ ನರ್ತಕಿಯ ಚಿತ್ರ. ‘ಪಿಯಾ ತೂ ಅಬ್ ತೊ ಆಜಾ’, ‘ರಾತ್ ಅಕೇಲಿ ಹೈ’,   ‘ಮೆಹಬೂಬಾ ಮೆಹಬೂಬಾ’, ಎಂದು ಛಕಛಕನೆ ಬೆಳ್ಳಿತೆರೆಯ ಮೇಲೆ ಕುಣಿಯುತ್ತಾ ಎಲ್ಲಾ ವಯಸ್ಸಿನ ಗಂಡಸರನ್ನೂ ಇಂದಿಗೂ ಪುಳಕಿತಗೊಳಿಸುವ ಚಿನ್ನದ ಗೊಂಬೆ ಹೆಲೆನ್. ಇಂದಿನ ಮಾಧುರಿ, ಬಿಪಾಶಾ, ಕತ್ರೀನಾಗಳು ಏನೂ ಅಲ್ಲವೆಂತೆನಿಸಿ, ಅವರ ಐಟಮ್ ಸಾಂಗುಗಳು ಒರಟೊರಟಾಗಿ ಕಾಣುವಂತೆ ಮಾಡುವ ಅವಳ ಮೈನವಿರೇಳಿಸುವ ಭಂಗಿಗಳು, ಲೀಲಾಜಾಲವಾಗಿ ಹರಿಯುವ ಭಾವಗಳು, ಅವಳ ಅಸಾಧಾರಣ ಕ್ಯಾಬರೆ ಕಲೆ ಯಾರೂ ಮರೆಯಲಾರರು.

ಇನ್ನೊಬ್ಬ ಹೆಲೆನ್ ಇತಿಹಾಸದ ಗರ್ಭದಲ್ಲಿ ಹುದುಗಿ ಕೂತು ಅಮರಳಾದವಳು. ತನ್ನ ಅಲೌಕಿಕ ಚೆಲುವಿಂದ ಭಯಾನಕ ಕದನ, ಅಗಾಧ ರಕ್ತಪಾತಗಳಿಗೆ ಕಾರಣಳಾದ ಪ್ರಸಿದ್ಧ ‘ಹೆಲೆನ್ ಆಫ್ ಟ್ರಾಯ್’. ಮರದ ಕುದುರೆಯಲ್ಲಿ ತುಂಬಿ ಬಂದ ಸೈನಿಕರ ಕತೆ ಮರೆತವರು ಯಾರು?

ಆದರೆ ಈ ಎರಡು ಹೆಲೆನ್‌ಗಳಲ್ಲಿ ಯಾರೂ ಇಂದಿನ ಹೆಡ್‌ಲೈನ್‌ಲ್ಲಿ ಪ್ರತ್ಯಕ್ಷಳಾಗುವುದು ಸಾಧ್ಯವೇ ಇರಲಿಲ್ಲ. ನಿಧಾನವಾಗಿ ಕಾಫಿ ಹೀರುತ್ತಾ ವಿವರಗಳನ್ನು ಓದುತ್ತಾ ಹೋದಂತೆ ಶಂಕರನಿಗೆ ಕುತೂಹಲ ಹೆಚ್ಚಾಯಿತು. ಆ ಲೇಖನದಲ್ಲೇ ಮುಳುಗಿ ಹೋಗಿದ್ದಾಗ, ಹಾಗೇ ಕೈಯಿಂದ ಪೇಪರು ಜಾರಿ ಹೋದದ್ದು ಅವನಿಗೆ ತಿಳಿಯಲೇ ಇಲ್ಲ.

ಈ ಹೆಲೆನ್ ಒಂದು ಅಗಾಧ ಶಕ್ತಿಯುಳ್ಳ ಸುರಂಗ ಕೊರೆಯುವ ಯಂತ್ರ. ಎಲ್ಲಾ ರೀತಿಯ ಎಲ್ಲೆ ಮೀರಿ ಬೆಳೆಯುತ್ತಿರುವ ಬೆಂಗಳೂರಿನ ಅವಶ್ಯಕತೆಗಳನ್ನು ತಣಿಸಲು ಹೆಲೆನ್ ಅಗತ್ಯ ಇತ್ತೆಂದು ಕೊನೆಗೂ ಸರ್ಕಾರ ಮನಗಂಡಿತ್ತು. ನೂರಾರು ಮೀಟಿಂಗುಗಳು, ಹಲವಾರು ವಿದೇಶ ಪ್ರವಾಸಗಳು, ರಾಷ್ಟ್ರೀಯ ಅಂತರರಾಷ್ಟ್ರೀಯ ತಜ್ಞರೊಂದಿಗೆ ತಿಂಗಳುಗಟ್ಟಳೆ ಚರ್ಚೆಗಳ ನಂತರ ರಾಜಕಾರಣಿಗಳು ಒಂದು ನಿರ್ಧಾರಕ್ಕೆ ಬಂದಿದ್ದರು. ಮೊದಲಿದ್ದ ಊರಿಗಿಂತ ಎಷ್ಟೋ ಪಾಲು ದೊಡ್ಡದಾಗಿ ಬೆಳೆದು, ಒಂದು ಕೋಟಿ ಜನಸಂಖ್ಯೆ ಮುಟ್ಟುತ್ತಿರುವ ಬೆಂಗಳೂರಿನ ಜನಕ್ಕೆ ದಿನಾ ಕೆಲಸಕ್ಕೆ ಹೋಗಲು ರಸ್ತೆಗಳು ಕಿರಿದಾಗಿ, ವಾಹನಗಳು ಇಕ್ಕಟ್ಟಿನಲ್ಲಿ ಸಿಕ್ಕಿ, ಅದರಲ್ಲಿದ್ದವರು ಉಸಿರಿಗಾಗಿ ಪರದಾಡಿ, ರಕ್ತದೊತ್ತಡ ಹೆಚ್ಚಾಗಿ, ಇಂಚಿಂಚು ಮುಂದೆ ಸರಿಯುತ್ತಾ ತಮ್ಮ ಕೆಲಸದ ತಾಣಗಳಿಗೆ ತಲುಪಲು ಗಂಟೆಗಳೇ ಹಿಡಿಯುತ್ತಿತ್ತು.

ಜನ ಎಷ್ಟೇ ಗೊಣಗಿದರೂ, ಅರ್ಬನ್ ಪ್ಲಾನರ್ಸ್ ಎಷ್ಟೇ ಹಾರಾಡಿದರೂ, ಎಷ್ಟೋ ರಾಸ್ತಾ ರೋಕೊಗಳು ನಡೆದು ಎಲ್ಲರ ಜೀವ ಹಿಂಡಿದರೂ, ನೂರಾರು ಜನ ಅಪಘಾತಗಳಲ್ಲಿ ಜೀವ ಕಳೆದುಕೊಂಡರೂ, ಸಾವಿರಾರು ಹಿರಿಯ ನಾಗರಿಕರು ಹೊರಗೆ ಹೆಜ್ಜೆ ಹಾಕಲಾರದೆಯೇ ಮನೆಯಲ್ಲೆ ಕೂತರೂ, ರೋಗಿಗಳು ಆಂಬ್ಯುಲೆನ್ಸ್‌ಗಳಲ್ಲೇ ಜೀವ ತೆತ್ತರೂ, ರಾಜಕಾರಣಿಗಳು, ಸಾರಿಗೆ  ತಜ್ಞರು ಈ ಸಮಸ್ಯೆಯತ್ತ  ಗಮನ ಹರಿಸಲು ವರ್ಷಗಳೇ ಹಿಡಿದವು. ಉದ್ಯಮಗಳಿಗೆ ಸರ್ಕಾರ ಕೆಂಪು ಕಾರ್ಪೆಟ್ ಹಾಸುತ್ತಾ ಸ್ವಾಗತ ಕೋರುತ್ತಲೇ ಹೋಯಿತು. ಬೆಂಗಳೂರು ಸ್ಫೋಟವಾಗುವ ಮಟ್ಟ ತಲುಪಿತು.

ಕೊನೆಗೆ ಮೇಲ್ಮಟ್ಟದಲ್ಲಿ ಹಲವಾರು ಚರ್ಚೆಗಳಾಗಿ ಕಾಂಕ್ರೀಟ್ ಕಾಡಾಗಿದ್ದ ಬೆಂಗಳೂರಿನ ಒಂದು ಕೊನೆಯಿಂದ ಇನ್ನೊಂದು ಕೊನೆಗೆ  ಬೇರೆ ಬೇರೆ ದಿಕ್ಕುಗಳಲ್ಲಿ ಸುರಂಗ ಮಾರ್ಗವಾಗಿ ಓಡುವ ರೈಲುಗಳನ್ನು ತರಲು ನಿರ್ಧಾರ ತೆಗೆದುಕೊಳ್ಳಲಾಯಿತು. ಅಂಥ ಸಾಹಸಕಾರ್ಯವನ್ನು ಸಾಧಿಸಲು ವಿದೇಶದಿಂದ ಆಗಮಿಸಿದ ಅದ್ಭುತ ಶಕ್ತಿಶಾಲಿ ಟನೆಲ್ ಬೋರಿಂಗ್ ಮಶೀನ್ ‘ಹೆಲೆನ್’.

ಇದರ ಬಗ್ಗೆ ಓದಿಯೇ ಖುಷಿಯಾದ ಬೆಂಗಳೂರಿಗರು ಹೆಲೆನ್ ಆಗಮನದ ಸುದ್ದಿ ಕೇಳಿ ರೋಮಾಂಚಿತರಾದರು.
ಮುಂದೆ ಬೆಂಗಳೂರಿನಲ್ಲೂ ಯೂರೋಪಿನಂತೆ ಓಡುವ ಐಷಾರಾಮಿ ಸುರಂಗ ಮಾರ್ಗದ ರೈಲುಗಳಲ್ಲಿ ಹಾಯಾಗಿ ಕಾಲುಚಾಚಿ ಕೂತು ನಿಮಿಷಗಳಲ್ಲೇ ಹತ್ತಾರು ಕಿಲೊಮೀಟರ್ ಕ್ರಮಿಸುವ ಕನಸು ಕಾಣತೊಡಗಿದರು.

ಹೆಲೆನ್ ಬೆಂಗಳೂರಿನ ಹೃದಯದ ಭಾಗದಲ್ಲಿ ತನ್ನ ಕೆಲಸ ಪ್ರಾರಂಭ ಮಾಡಲು ಅಣಿಯಾದಾಗ ಕಾಯಿ ಒಡೆದು ರಾಶಿರಾಶಿ  ಹಾರಹಾಕಿ ಅದ್ದೂರಿಯಾಗಿ ಪೂಜೆಮಾಡುವ ಕಾರ್ಯಕ್ರಮ ಮುಖ್ಯಮಂತ್ರಿಗಳ ಅಮೃತಹಸ್ತದಿಂದ ನೆರವೇರಿತು. ಆ ಸಂಭ್ರಮದಲ್ಲಿ ಪಾಲುಗೊಂಡವರಲ್ಲಿ ರಾಜಕಾರಣಿಗಳೂ,ತಂತ್ರಜ್ಞಾನಿಗಳೂ, ವಿಜ್ಞಾನಿಗಳೂ, ಉದ್ಯಮಿಗಳೂ, ಸೇರಿದಂತೆ ಗಣ್ಯಾತಿಗಣ್ಯರೆಲ್ಲ ಸೇರಿದ್ದರು. ಸಾವಿರಾರು ಜನರ ಜೈಕಾರ ಮುಗಿಲುಮುಟ್ಟಿದಂತೆ ಹೆಲೆನ್ ಮೊದಲಬಾರಿಗೆ ಗರ್ಜಿಸಿದಳು. ಜೊತೆಗೆ ಮೊದಲೇ ಗುರುತು ಹಾಕಿದ್ದೆಡೆ ತಲೆ ಗುದ್ದಿದಳು...

ಆ ಅಬ್ಬರಕ್ಕೆ ಭೂಮಿ ನಡುಗಿತು. ಸುತ್ತಮುತ್ತಲಿನ ಕಟ್ಟಡಗಳಿಗೆ ಬಿರುಕು ಬಂದರೆ ಎಂಬ ಭಯ ಅಲ್ಲಿದ್ದ ತಜ್ಞರ ಮತ್ತು ಸಾಮಾನ್ಯ ಜನರ ಮನಸ್ಸಿನಲ್ಲಿ ಹರಿದುಹೋಯಿತು. ನಿಧಾನವಾಗಿ ಹೆಲೆನ್ ಭೂಮಿಯೊಳಗೆ ಇಂಚಿಂಚಾಗಿ ಹೊಕ್ಕಂತೆ, ಪ್ರಾಜೆಕ್ಟ್ ಜವಾಬ್ದಾರಿ ಹೊತ್ತವರು ನಿರಾಳವಾಗಿ ನಿಟ್ಟುಸಿರು ಬಿಟ್ಟರು. ಜಾಗರೂಕತೆ ಕ್ರಮವಾಗಿ ಮೊದಲೇ ಹೆಲೆನ್ ಭೂಮಿಯಾಳದಲ್ಲಿ ಚಲಿಸುವ ದಾರಿಯುದ್ದಕ್ಕೂ ಮೇಲೆ ಬೋರ್ಡುಗಳನ್ನು ನಿಲ್ಲಿಸಿದ್ದರು.

ಟನ್ನುಗಟ್ಟಲೆ ತೂಗುತ್ತಿದ್ದ ಹೆಲೆನ್ ತನ್ನ ಹರಿತವಾದ ಬ್ಲೇಡುಗಳನ್ನು ಗಿರಗಿರನೆ ತಿರುಗಿಸುತ್ತಾ ಭೂಮಿಯೊಳಗೆ ನುಗ್ಗಿದಂತೆ, ಗಟ್ಟಿಯಾದ ಕಲ್ಲುಗಳನ್ನೂ ಕಲ್ಲುಸಕ್ಕರೆಯಂತೆ ಅಗಿದು ಹಾಕಿದಂತೆ ಪದರ ಪದರವಾಗಿ ನೂರಾರು ವರ್ಷಗಳಿಂದ ಮಣ್ಣಿನೊಂದಿಗೆ ಬೆರೆತಿದ್ದ ಅಷ್ಟೂ ಕಸ, ಕಲ್ಲು, ಲೋಹ, ಮರದ ತುಂಡುಗಳು ನುರಿತು, ಪುಡಿಪುಡಿಯಾಗಿ ಅದಕ್ಕೆ ಅಳವಡಿಸಿದ್ದ ಮತ್ತೊಂದು ಯಂತ್ರದಿಂದ ಸಾಗಿ ದೂರ ಬಹುದೂರ ಸಾಗಿಸಲ್ಪಟ್ಟು ಇಲ್ಲಿನ ಜನರಿಂದ ಕಣ್ಮರೆಯಾದುವು. ಮೇಲಿನ ಪದರಗಳಲ್ಲಿ ಹೆಲೆನ್ ಹಲ್ಲುಗಳಿಗೆ ಸಿಕ್ಕಿದ್ದು ಬರೀ ಪ್ಲಾಸ್ಟಿಕ್. ಎಲ್ಲೆಲ್ಲೂ ಪ್ಲಾಸ್ಟಿಕ್. ಹಾಲುಪ್ಯಾಕೆಟ್‌ಗಳು. ಮನೆಯ ಕಸ ಹೊತ್ತು ಹಾಗೇ ಕೊಳೆತ ಕಸದೊಂದಿಗೆ ಚಿಂದಿಚಿಂದಿಯಾಗಿ ಮಲಗಿದ ತೆಳು ಪ್ಲಾಸ್ಟಿಕ್ ಚೀಲಗಳು. ಸ್ಯಾನಿಟರಿ ಪ್ಯಾಡ್‌ಗಳ ಪ್ಲಾಸ್ಟಿಕ್ ಹೊದಿಕೆಗಳು. ಬೀದಿಯಲ್ಲಿ ಕಾಫಿ, ಟೀ ಮಾರುವವನ ಅಪ್ಪಚ್ಚಿಯಾದ ಪ್ಲಾಸ್ಟಿಕ್ ಲೋಟಗಳು.

ಯಾರದೋ ಪುಟಾಣಿಗಳ ಬರ್ತ್ ಡೇ ಸಂಭ್ರಮಕ್ಕಾಗಿ ತಂದ ಮಿಠಾಯಿ ಡಬ್ಬದ ಪ್ಲಾಸ್ಟಿಕ್ ಕವರ್‌ಗಳು. ಎಂದೋ ಯಾವುದೋ ಮದುವೆಯಲ್ಲಿ ಮೆರೆಯುತ್ತಿದ್ದ ಚಿನ್ನದ ಬಣ್ಣದ ಪ್ಲಾಸ್ಟಿಕ್ ಸೀರೆ ಬ್ಯಾಗುಗಳು. ಕೂಲಿಕೆಲಸದವರ ರೇನ್ ಕೋಟಾಗಿದ್ದು ಈಗ ಹರಿದ ನೀಲಿಶೀಟುಗಳು. ಆಸ್ಪತ್ರೆಯ ಗ್ಲೌಸುಗಳು, ಏರ್ಬೆಡ್ಡುಗಳು, ಗೌನುಗಳು, ತರಹ ತರಹ ಪ್ಲಾಸ್ಟಿಕ್ ಕೊಳವೆಗಳು, ಬೆಡ್ ಪ್ಯಾನ್‌ಗಳು, ಬಣ್ಣಬಣ್ಣದ ಕಾಂಡೊಮ್‌ಗಳು, ತರಹೇವಾರಿ ಪ್ಲಾಸ್ಟಿಕ್ ಗಿಲ್ಕಿಗಳು, ಆಟದ  ಸಾಮಾನುಗಳು, ಪುಟ್ಟ ಕೆಂಪು ನೀಲಿ ಹಳದಿ ಬಸ್ಸು ಕಾರು ಆಟೋಗಳು, ಚಪ್ಪಟೆಯಾದ ಬಾಲುಗಳು, ಹೆಂಡದ ಬಾಟಲಿಗಳನ್ನು ಹೊತ್ತು ದಣಿದಿದ್ದ ಕಪ್ಪು ಪ್ಲಾಸ್ಟಿಕ್ ಚೀಲಗಳು, ಜೊತೆಜೊತೆಗೇ ಆಟೋರಿಕ್ಷಾದ ಹಿಂಭಾಗಗಳು, ಅದರ ಮೇಲೆ ಉದುರಿದ ಪೇಂಟಿನ ನಡುವೆ ಕಂಡೂ ಕಾಣದಂತಿದ್ದ ‘ತಂದೆತಾಯಿಯ ಆಶೀರ್ವಾದ’, ಹಾಗೇ ಎಸೆದಿದ್ದ ಫ್ಲೆಕ್ಸ್‌ಗಳ ಮೇಲೆ ಮಾಸಿದ ‘ಸಂಜು ವೆಡ್ಸ್ ಗೀತಾ’, ಕೊಬ್ಬಿದ ರಾಜಕಾರಣಿಯ ದಪ್ಪ ಮೀಸೆ, ಸಿಲ್ವರ್ ಜ್ಯೂಬಿಲಿ ತಾರೆಯ ತೊಡೆಗಳು, ಬೆಂಜ್ ಕಾರಿನಲ್ಲಿ ಸಲ್ಮಾನ್ ಖಾನ್‌ನ ಸಿಕ್ಸ್ ಪ್ಯಾಕ್, ಮುರಿದ ಗೋಡೆಯ ತುಂಡಿನ ಮೇಲೆ  ಪೀಜೀಗಳು, ೧ ಬಿಎಚ್ಕೆಗಳು, ಕಾರ್ನರ್ ಸೈಟುಗಳು...

ಹೆಲೆನ್ ಆಳಕ್ಕಿಳಿದಂತೆ ಗಾಢ ವಿಷಾದದ ಮುಸುಕು ಹೊದ್ದಿದ್ದ  ಪಳೆಯುಳಿಕೆಗಳು ಎದುರಾದುವು. ಯಾವುದೋ ಆಂಗ್ಲ ಅಧಿಕಾರಿಯ ಕೆಂಪು ಕೋಟಿಗೆ ಲಗತ್ತಿಸಿದ್ದ ಹಿತ್ತಾಳೆ ಬಟನ್ ಈಗ ತುಕ್ಕು ಹಿಡಿದಿತ್ತು. ಕಲ್ಲು ಕಂಬಗಳ ತುಂಡುಗಳ ಮೇಲೆ ಕತ್ತಿ ಝಳಪಿಸುತ್ತಿದ್ದ ಯೋಧ. ಪಕ್ಕದಲ್ಲೊಂದು ಆನೆ. ಸಣ್ಣಪುಟ್ಟ ನಾಣ್ಯಗಳ ಮೇಲೆ ಪರ್ಷಿಯನ್ ಅಕ್ಷರಗಳು. ಒಂದು  ಬೆಳ್ಳಿ ಕಾಲು ಗೆಜ್ಜೆ. ಮುತ್ತಿನ ಮೂಗುತಿ. ಗೆದ್ದಲು ಹಿಡಿದಿರುವ ಮರದ ಡಬ್ಬದಲ್ಲಿ ಪುಡಿಯಾಗುತ್ತಿರುವ ತಾಳೆಗರಿ. ತಿಂದು ಹೋದ ಕಂದು ಬಣ್ಣದ ಫೋಟೋದಲ್ಲಿ ಸೂಟು ತೊಟ್ಟ ಆಂಗ್ಲ ಆಫೀಸರ್, ಅವನ ಪಕ್ಕದಲ್ಲೇ ನಗುತ್ತಾ ನಿಂತಿರುವ ಕೆಂಪು ಕೂದಲಿನ ಹೆಂಡತಿ. ಅವರಿಬ್ಬರ ಸೊಂಟದ ಕೆಳಗಿನ ಭಾಗ ನಾಪತ್ತೆ. ಯಾರೂ ಕೇಳದೆ ಬಿದ್ದಿರುವ ಮಂಕಾದ ಸೇಂಟ್ ಜಾನ್ಸ್ ಆಂಬುಲೆನ್ಸ್ ಫಲಕ. ಜಟಕಾ ಗಾಡಿಯ ಒಂಟಿ ಚಕ್ರ.

ಎಲ್ಲದರ ಜೊತೆ ಸೇರಿದ ಮಣ್ಣು. ಎಲ್ಲವೂ ಸೇರಿ ಮಣ್ಣಾದ ಮಣ್ಣು. ಮಣ್ಣಾಗದ ಪ್ಲಾಸ್ಟಿಕ್. ಮಣ್ಣಾಗುವ ಪ್ರಕ್ರಿಯೆಯಲ್ಲಿರುವ ಸಾವಿರಾರು ವಸ್ತುಗಳು. ಮಣ್ಣಾಗಲಿ, ಕಲ್ಲಾಗಲಿ ಎಲ್ಲವನ್ನೂ ಅವಡುಗಚ್ಚಿ ಅಗಿದು ಪುಡಿ ಮಾಡಿ ಎಸೆಯುತ್ತಾ ಹುರುಪಿನಿಂದ ಮುಂದೆ ಸಾಗುತ್ತಿರುವ ಹೆಲೆನ್.

ಹೆಲೆನ್ ಭೂಮಿಯೊಳಗೆ ೬೦ ಅಡಿ ಆಳದಲ್ಲಿ ತನ್ನ ಕೆಲಸ ಮಾಡುತ್ತಾ ನಿಧಾನವಾಗಿ ಸಾಗಿದಂತೆ, ಭೂಮಿಯ ಮೇಲೆ ಇದರ ಪರಿವೆಯೇ ಇಲ್ಲದಂತೆ ಜನಜೀವನ ಸಾಗಿತ್ತು. ಬೆಂಗಳೂರಿನ ಕಿರೀಟಪ್ರಾಯವಾದ ವಿಧಾನ ಸೌಧ, ಹೈ ಕೋರ್ಟು, ಜಿಪಿಓ, ಲೈಬ್ರರಿ ಕಟ್ಟಡಗಳು ಗಂಭೀರವಾಗಿ ನಿಂತಿದ್ದವು. ಕೆಂಪೇಗೌಡ ರಸ್ತೆಯ ವಾಹನ ಸಂದಣಿ, ಮೆಜೆಸ್ಟಿಕ್ ಅಂಗಡಿಗಳ ಗುಜುಗುಜು, ನೂಕಾಡುತ್ತಿರುವ ಜನರೆಲ್ಲರ ಮೇಲೆ ಪಸರಿಸಿದ ಬೆವರು ವಾಸನೆ, ಬಸ್ ಸ್ಟೇಷನ್ನಿನಲ್ಲಿ ಸಾಲುಗಟ್ಟಿದ ನೂರಾರು ಕೆಂಪು–ನೀಲಿ ಬಸ್ಸುಗಳು.

ವಿಧಾನ ಸೌಧದಲ್ಲಿ ರಾಜಕಾರಣಿಗಳ ನಾಟಕ, ಕಬ್ಬನ್ ಪಾರ್ಕಿನಲ್ಲಿ  ಪ್ರೇಮಿಗಳ ಚೆಲ್ಲಾಟ, ಕಮರ್ಷಿಯಲ್ ಸ್ಟ್ರೀಟಿನ ಬ್ಯೂಟಿ ಪಾರ್ಲರುಗಳಲ್ಲಿ ಮೈ ನುಣುಪು ಮಾಡಿಸಿಕೊಳ್ಳುತ್ತ ಬಾಲಿವುಡ್ ತಾರೆಯರ ಡಿವೋರ್ಸ್ ಪ್ರಸಂಗಗಳನ್ನು ಚರ್ಚಿಸುವ ಅರೆ ಬೆತ್ತಲೆ ಮಹಿಳೆಯರ ಗುಸುಗುಸು. ಕ್ರಿಕೆಟ್ ಸ್ಟೇಡಿಯಂನಲ್ಲಿ ಪಿಚ್ ಅಚ್ಚುಕಟ್ಟಾಗಿಡಲು ದುಡಿಯವವರ ತುಟಿಯಂಚಿನಲ್ಲಿ ಕೆಂಪಾದ ಪಾನಿನ ರಸ, ಭೂಮಿಯಾಳದಲ್ಲಿನ ಒಂದೊಂದು ಸ್ಫೋಟಕ್ಕೂ, ಒಂದೊಂದು ಸಿಡಿತಕ್ಕೂ ಬೆಚ್ಚಿ ಚಿವ್ ಚಿವ್, ಬೌ ಬೌ ಮಾಡುತ್ತಾ ಕಂಗಾಲಾಗುತ್ತಿದ್ದುದು ಪಕ್ಷಿ ಪ್ರಾಣಿಗಳು ಮಾತ್ರ.

ಹೆಲೆನ್ ಸಾಧಿಸಿದ ಮುನ್ನಡೆಯ ಬಗ್ಗೆ ಆಗಾಗ ಮೀಟರುಗಳ ಲೆಕ್ಕದಲ್ಲಿ ನ್ಯೂಸ್ ಪೇಪರುಗಳಲ್ಲಿ ಸುದ್ದಿ ಬರುತ್ತಿತ್ತು. ಜನಕ್ಕೆ ಅದನ್ನೋದಿ ಸಮಾಧಾನ ಎನ್ನಿಸುತ್ತಿತ್ತು.

ಆದರೆ ಒಂದು ದಿನ ಮಟಮಟ ಮಧ್ಯಾಹ್ನ ಉರಿಬಿಸಿಲಿನಲ್ಲಿ ಬೆಂಗಳೂರಿಗೆ ಒಂದು ಶಾಕ್ ಕಾದಿತ್ತು. ಇಷ್ಟೆಲ್ಲ ಪ್ರತಾಪ ತೋರಿಸುತ್ತಾ ತನ್ನನ್ನು ಯಾರೂ ತಡೆಯಲಾರರು ಎಂಬ ಹಮ್ಮಿನಿಂದ ಮುನ್ನುಗ್ಗುತ್ತಿದ್ದ ಹೆಲೆನ್ ಇದ್ದಕ್ಕಿದ್ದಂತೆ ತಟಸ್ಥಳಾಗಿಬಿಟ್ಟಳು. ಮೊದಲು ಎಂಜಿನಿಯರುಗಳು ಏನೋ ‘ಸ್ಮಾಲ್ ಪ್ರಾಬ್ಲಮ್’ ಎಂದುಕೊಂಡರು. ತಮಗೆ ತಿಳಿದಷ್ಟು ಪ್ರಯತ್ನ ಮಾದಿದರು. ಏನೂ ಆಗದಾಗ ಮೇಲಿನವರಿಗೆ ಫೋನಿಸಿದರು. ಅವರ ಸಲಹೆಗಳು ಪ್ರಯೋಜನವಾಗದೆ, ಅವರು  ತಮ್ಮ ಏರ್‌ ಕಂಡೀಷನ್ಡ್‌ ಆಫೀಸುಗಳ ತಂಪಿನಿಂದ ಹೊರಬಂದು ಈ ಉರಿಯುವ ಝಳದಲ್ಲಿ ದೊಡ್ಡ ದೊಡ್ಡ ಕಾರುಗಳಿಂದ ಇಳಿದು, ಟೋಪಿ ಹಾಕಿಕೊಂಡು, ಹುಬ್ಬುಗಂಟಿಕ್ಕಿ ಬೆವರು ಸುರಿಸುತ್ತಾ ಸೈಟೆಲ್ಲಾ ಪರೀಕ್ಷಿಸಿದರು. 

ಹೆಲೆನ್ ಎದುರಿಗೆ ಒಂದು ಅಗಾಧ ಅಡಚಣೆಯಿತ್ತು. ಅದು ಬಂಡೆಯೋ, ಮಣ್ಣಿನ ಮುದ್ದೆಯೋ, ಕಲ್ಲಿನ ಗೋಡೆಯೋ ಯಾರಿಗೂ ತಿಳಿಯದು. ಈ ಸಮಸ್ಯೆ ಅಂತರರಾಷ್ಟ್ರೀಯ ಮಟ್ಟದ ಕಂಪಡನಿಗೂ ಹೋಗಿ ಅವರುಗಳೂ ಭಾರತದಲ್ಲಿ ಲ್ಯಾಂಡ್ ಆದರೂ ಹೆಲೆನ್ ಒಂದಿಂಚೂ ಕದಲಲಿಲ್ಲ.

ಆಗ ಸುದ್ದಿ ಮಾಧ್ಯಮಗಳು ಎಚ್ಚರಾದುವು. ‘ಹೆಲೆನ್ ಪದಾರ್ಪಣ ಮಾಡಿದ ಸ್ಥಳವೇ ಸರಿಯಿಲ್ಲ, ಅವತ್ತು  ನಮ್ಮನ್ನು ಕೇಳಿದ್ದರಲ್ಲವೇ’ ಎಂದು ವಾಸ್ತುತಜ್ಞರು ಹೇಳತೊಡಗಿದರು. ಬೆಳಗಿನ ವಾಕ್ ಮುಗಿಸಿ ದರ್ಶಿನಿಗಳ ಮುಂದೆ ಕಾಫಿ ಕುಡಿಯುತ್ತ ಹರಟುತ್ತಿದ್ದ ಹಿರಿಯರು, ‘ಕೆಂಪೇಗೌಡನ ಗೋಪುರಗಳನ್ನು ದಾಟಿ ಯಾವಾಗ ಬೆಂಗಳೂರು ಬೆಳೆಯಿತೋ ಆಗಲೇ ಅಪಾಯ ಖಾತ್ರಿ ಅಂತ ಅವನಿಗೆ ಗೊತ್ತಿತ್ತು, ಅವನೇನು ದಡ್ಡನಾ, ಎಂಥಾ ಮೇಧಾವಿ’ ಎಂದು ತೀರ್ಪು ಕೊಟ್ಟರು. ಜ್ಯೋತಿಷಿಗಳು ‘ಈ ೨೧ನೇ ಶತಮಾನದಲ್ಲಿ ಬೆಂಗಳೂರಿಗೆ ಉಳಿಗಾಲವಿಲ್ಲ ಎಂದು ನಾವು ಮಿಲೆನಿಯಮ್ ಭವಿಷ್ಯದಲ್ಲೇ ಹೇಳಿದ್ದೆವು’ ಎಂದು ಕೊಚ್ಚಿಕೊಂಡರು.

ಚಾನೆಲ್ಲುಗಳು ಈ ಸಮಸ್ಯೆಯ ಬಗ್ಗೆ ವಿಶೇಷ ಚರ್ಚೆ ಏರ್ಪಡಿಸಿದಾಗ  ಕೆಲವು ಪುರಾತತ್ವ ಶಾಸ್ತ್ರ ತಜ್ಞರು ‘ಅಲ್ಲಿ ಯಾವುದೋ ಕಾಲದ ಬಹಳ ಗಟ್ಟಿಯಾದ ದೇವಸ್ಥಾನವೋ, ಅರಮನೆಯೋ ಇರಬಹುದು’ ಎಂಬ ಅನುಮಾನ ವ್ಯಕ್ತ ಪಡಿಸಿದರು. ದೇವಸ್ಥಾನ! ಇದನ್ನು ಕೇಳಿದ ಸುರಂಗ ತಜ್ಞರಿಗೆ ಕೈ ಕಾಲು ನಡುಗಿತು. ದೊಡ್ಡ  ಬ್ಲಾಸ್ಟ್ ಮಾಡಿ ಮುಂದುವರಿಯಬಹುದೇ ಎಂದು ಅದೇ ತಾನೇ ಅವರ ಮನಸ್ಸಿನಲ್ಲಿ ತಲೆ ಎತ್ತುತ್ತಿದ್ದ ಸಾಧ್ಯತೆಗಳೂ ಕರಗಿಹೋದುವು. ಅಣ್ಣಮ್ಮ ದೇವಿ ಪೂಜೆಗಳಾಯಿತು. ಹವನ ಹೋಮಗಳಾದುವು. ಹರಕೆಗಳಾದವು.

ರಾಜಕಾರಣಿಗಳ ಯಾತ್ರೆಗಳಾಯಿತು. ಆದರೆ ಹೆಲೆನ್ ಅಲ್ಲಾಡಲಿಲ್ಲ. ಕೊನೆಗೆ ರಾಜಕಾರಣಿಗಳು ಎಲ್ಲಾ ಕ್ಷೇತ್ರದ ತಜ್ಞರನ್ನು ಸೇರಿಸಿ ಮತ್ತಷ್ಟು ಮೀಟಿಂಗುಗಳನ್ನು ಮಾಡಿ ಸುರಂಗದ ಮತ್ತೊಂದು ಕಡೆಯಿಂದ ಜಾಗರೂಕತೆಯಿಂದ ನಿಪುಣ ಕಾರ್ಮಿಕರಿಂದ ಅಗೆಸುವುದೆಂದೂ, ಹಾಗೇನಾದರೂ ಅಲ್ಲಿ ಪ್ರಾಚೀನ ಶಿಲ್ಪವೋ, ದೇಗುಲವೋ, ಅರಮನೆಯೋ ಇದ್ದರೆ ಅದನ್ನು ಉಳಿಸಿಕೊಳ್ಳಬಹುದೆಂದೂ ನಿರ್ಧಾರ ತೆಗೆದುಕೊಂಡರು. ಆಗ ಎಲ್ಲರಿಗೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

ಉತ್ಖನನ ಪ್ರಾರಂಭವಾಯಿತು. ಕಾರ್ಮಿಕರು ಇಡೀ ದಿನ ತೋಡಿ ಹಾಕಿದ ಮಣ್ಣು–ಕಲ್ಲು ಗುಡ್ಡವಾಗಿ ಬೆಳೆಯಿತು. ಟ್ರಕ್ಕುಗಳು ಸಾಲುಸಾಲಾಗಿ ಇದನ್ನೆತ್ತಿ ಊರಾಚೆ ಕೊಂಡುಹೋದುವು. ಕೆಲಸ ದಿನಗಳಿಂದ ತಿಂಗಳುಗಳಾಯಿತು. ಜನ ಉತ್ಸುಕತೆಯಿಂದ ಕಾದರು. ಕೊನೆಗೆ ಅಲ್ಲಿ ಒಂದು ದಿನ ಮಣ್ಣು ತುಂಬಿದ ಉದ್ದನೆಯ ಆಕೃತಿ ಕಂಡುಬಂದಿತು.

ಅದರಲ್ಲಿ ತುಂಬಿದ್ದ ಮಣ್ಣು ಕಲ್ಲುಗಳನ್ನು ತೆಗೆದು ವಾರಗಟ್ಟಲೆ ಸ್ವಚ್ಛಗೊಳಿಸಿದ ಮೇಲೆ ದೊಡ್ಡದೊಡ್ಡ  ಕ್ರೇನುಗಳಿಂದ ಅದನ್ನು ಹೊರಗೆತ್ತುವ ದಿನ ನಿರ್ಧರಿಸಲಾಯಿತು. ಒಳ್ಳೆಯ ಮುಹೂರ್ತ ಗೊತ್ತು ಪಡಿಸಲಾಯಿತು. ಅಂದು ಅಲ್ಲಿ ಜನರ ಭಾರೀ ಜಾತ್ರೆ. ಸಕತ್ ಪೋಲೀಸು ಬಂದೋಬಸ್ತ್. ಎಲ್ಲೆಲ್ಲೂ ಟೀವಿ ಕ್ಯಾಮೆರಾಗಳು. ಮಂತ್ರಿಗಳು, ಸುರಂಗ ತಜ್ಞರು. ಇಂಜಿನಿಯರುಗಳು, ಇತಿಹಾಸಕಾರರು, ಪುರಾತತ್ವ ಇಲಾಖೆಯವರು, ವಿಜ್ಞಾನಿಗಳು, ಮತ್ತೆ ಮುಗ್ಧ ಸಾಮಾನ್ಯ ಜನ.

ಕೊನೆಗೆ ಹೊರಗೆ ಬಂದದ್ದು ಒಂದು ಸುಂದರ ಗೋಪುರ. ಥೇಟ್ ಕೆಂಪೇಗೌಡನ ಗೋಪುರ! ಇತಿಹಾಸ ತಜ್ಞರಿಂದ ಹಿಡಿದು  ಸಾಮಾನ್ಯ ಜನರವರೆಗೆ ಎಲ್ಲರಿಗೂ ಕಣ್ಣಿ ಗೆ ಕಟ್ಟುವಂತೆ ಎದುರಿಗೆ ನಿಂತಿದ್ದು ಅವರೆಲ್ಲರಿಗೂ ಪರಿಚಿತವಾಗಿದ್ದ ತಮ್ಮ ನೆಚ್ಚಿನ ಗೋಪುರ. ಅಲ್ಲಿ ಅಷ್ಟೂ ಹೊತ್ತು ಕಾದಿದ್ದವರ ಮೈ ಜುಂ ಎಂದು, ಎಲ್ಲರೂ ರೋಮಾಂಚಿತರಾಗಿ, ಕಣ್ಣಲ್ಲಿ ನೀರು ಹರಿಸಿ ಗದ್ಗದರಾದರು. ಹೌದು. ಇದು ಖಂಡಿತ ಕೆಂಪೇಗೌಡನ ಗೋಪುರ. ಐದನೆಯ ಗೋಪುರ! ಆದರೆ... ಇದು ಎಲ್ಲಿಂದ ಬಂತು? ಇದರ ಅರ್ಥವೇನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.