ADVERTISEMENT

ಕವಿಮನೆಗಳ ಸನ್ನಿಧಾನದಲ್ಲಿ...

ಪ್ರಜಾವಾಣಿ ವಿಶೇಷ
Published 18 ಅಕ್ಟೋಬರ್ 2014, 19:30 IST
Last Updated 18 ಅಕ್ಟೋಬರ್ 2014, 19:30 IST

1972ರ ಅವಧಿ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಆನರ್ಸ್‌ ವ್ಯಾಸಂಗ ಮಾಡುತ್ತಿದ್ದೆ. ಷೇಕ್ಸ್‌ಪಿಯರ್ ಮತ್ತು ವಿಲಿಯಂ ವರ್ಡ್ಸ್‌ವರ್ತ್‌ ಮಹಾಕವಿಗಳ ಪದ್ಯಗಳು ಪಠ್ಯದಲ್ಲಿ ಇದ್ದವು. ಪ್ರಕೃತಿ ಸಿರಿಯನ್ನು ಅಮೋಘವಾಗಿ ವರ್ಣಿಸುವ ಮತ್ತು ಅಂದಿನ ಜನ ಜೀವನ ಸೇರಿದಂತೆ ‘ರೊಮ್ಯಾಂಟಿಸಂ’ ಅನ್ನು ಕಣ್ಣಿಗೆ ಕಟ್ಟಿಕೊಡುತ್ತಿದ್ದ ಈ ಇಬ್ಬರು ಕವಿಗಳ ಪದ್ಯಗಳು ನನ್ನನ್ನು ಮರಳು ಮಾಡಿದ್ದವು. ಈ ಕವಿಗಳು ತಾವು ಕಂಡುಂಡ ರಮ್ಯಾನುಭವಗಳನ್ನು ಕಾವ್ಯದ ಮೂಲಕ ಅಭಿವ್ಯಕ್ತಿಸಿದ್ದರು.

ಈ ಪದ್ಯಗಳನ್ನು ನಾನು ಓದುತ್ತಾ ಹೋದಂತೆ ಬದುಕಿನಲ್ಲಿ ಒಮ್ಮೆಯಾದರೂ ಷೇಕ್ಸ್‌ಪಿಯರ್ ಹುಟ್ಟಿ ಬಾಳಿದ ಮನೆ, ಆ ಮಹಾಕವಿ ನಡೆದಾಡಿದ ತಾಣಗಳು ಮತ್ತು ನಾಟಕಗಳು ನಡೆಯುತ್ತಿದ್ದ ಆಡಿಟೋರಿಯಂ ಅನ್ನು ನೋಡುವ ಆಸೆ ಮೊಳೆತಿತ್ತು. ಈ ಹಂಬಲ ಯಾವ ಮಟ್ಟದಲ್ಲಿ ತೀವ್ರವಾಗಿತ್ತು ಎಂದರೆ ಷೇಕ್ಸ್‌ಪಿಯರ್ ಸಾಹಿತ್ಯದಲ್ಲಿ ಬರುವ ‘ಬ್ಲಾಕ್‌ ಲೇಡಿ’ಯನ್ನೂ ಕಾಣಬೇಕು ಎನ್ನುವ ಹುಚ್ಚು ಕುತೂಹಲ ಇತ್ತು.

ವಿಲಿಯಂ ವರ್ಡ್ಸ್‌ವರ್ತ್‌ ನನ್ನನ್ನು ಪರವಶಗೊಳಿಸಿದ ಮತ್ತೊಬ್ಬ ಕವಿ. ತನ್ನ ಕಾವ್ಯದ ಮೂಲಕ ಪ್ರಾಕೃತಿಕ ಸಿರಿಯನ್ನು ಅದ್ಭುತವಾಗಿ ಕಟ್ಟಿಕೊಟ್ಟವರಲ್ಲಿ ಈತನೂ ಒಬ್ಬ. ವರ್ಡ್ಸ್‌ವರ್ತ್‌ನ ‘ಟಿಂಟರ್ನ್‌ ಆಬಿ’ (Tintern Abbey) ಕಾಲೇಜಿನ ದಿನಗಳಿಂದ ಈಗಲೂ ನನ್ನ ಸ್ಮೃತಿಯಲ್ಲಿ ಆಗಾಗ್ಗೆ ಮಿನುಗುವ ಕವಿತೆ. ನಮ್ಮ ಕುವೆಂಪು ಅವರು ಕುಪ್ಪಳಿ ಸುತ್ತಲಿನ ಮತ್ತು ಮಲೆನಾಡಿನ ಪ್ರಾಕೃತಿಕ ಸಿರಿಯನ್ನು ಅನುಭವಿಸಿ ದಾಖಲಿಸಿದಂತೆ ವರ್ಡ್ಸ್‌ವರ್ತ್‌ ಸಹ ‘ಟಿಂಟರ್ನ್‌ ಆಬಿ’ಯಲ್ಲಿ ಪ್ರಕೃತಿಯನ್ನು ವರ್ಣಿಸಿದ್ದಾನೆ. ಅಂದಹಾಗೆ, ‘ಟಿಂಟರ್ನ್‌ ಆಬಿ’ ಒಂದು ಸ್ಥಳದ ಹೆಸರು ಕೂಡ ಹೌದು.

ಷೇಕ್ಸ್‌ಪಿಯರ್‌, ವರ್ಡ್ಸ್‌ವರ್ತ್‌– ನನ್ನನ್ನು ಸೆಳೆದ ಈ ಇಬ್ಬರು ಕವಿಗಳಿಗೆ ಸ್ಫೂರ್ತಿಯಾದ ತಾಣಗಳನ್ನು ನೋಡುವ ಕಾಲೇಜು ದಿನಗಳ ಬಯಕೆ ಕೈಗೂಡಿದ್ದು 2000 ಇಸವಿಯಲ್ಲಿ. ವಿಶ್ವ ಸಹಸ್ರಮಾನ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ರಾಜ್ಯ ಸರ್ಕಾರ ಕಳುಹಿಸಿದ ತಂಡದಲ್ಲಿ ನಾನು ಒಬ್ಬನಾಗಿದ್ದೆ.

ಷೇಕ್ಸ್‌ಪಿಯರ್ ಮನೆಯಲ್ಲಿ...
‘ಆವನ್’ ನದಿಯ ದಡದ ಮೇಲಿರುವ ಸ್ಟ್ರ್ಯಾಟ್‌ಫರ್ಡ್‌ಗೆ ನಾವು ಮ್ಯಾಂಚೆಸ್ಟರ್‌ನಿಂದ ಬಸ್ಸಿನಿಂದ ಹೊರಟಾಗ ಇನ್ನೂ ಚುಮುಚುಮು ಚಳಿ. ಮುಕ್ಕಾಲು ದಿನದ ಪಯಣದ ಹಾದಿಯದು. ಷೇಕ್ಸ್‌ಪಿಯರ್ ಹುಟ್ಟಿದ ಊರು ಸಣ್ಣ ಹಳ್ಳಿಯಂತೆ ಕಾಣಿಸುತ್ತದೆ. ಶನಿವಾರ ಮತ್ತು ಭಾನುವಾರ ಈ ಪುಟ್ಟ ಗ್ರಾಮದಲ್ಲಿ ಅಪಾರ ಪ್ರವಾಸಿಗರು ನೆರೆಯುತ್ತಾರೆ. ಆ ಹಳ್ಳಿಯ ಹಾದಿಯಲ್ಲಿ ಢಾಬಾ ರೀತಿಯ ಅಂಗಡಿಗಳಿವೆ. ಒಂದು ಕಡೆ ಜನ ಸಿಗರೇಟು ಸೇದುತ್ತಿದ್ದರೆ ಮತ್ತೊಂದೆಡೆ ಮಾಂಸದ ಅಂಗಡಿಗಳಿವೆ. ಅಲ್ಲಿ ಜನರು ಸಾಲು ಸಾಲಾಗಿ ನಿಂತು ಮಾಂಸದ ಖಾದ್ಯಗಳನ್ನು ಮೆಲ್ಲುತ್ತಿರುತ್ತಾರೆ.

ನಾನು ಕಾಣಬೇಕೆಂದು ಹಲವು ವರ್ಷಗಳಿಂದ ಹಂಬಲಿಸಿದ ಮಹಾಕವಿಯ ಊರಿನ ದರ್ಶನ ನನ್ನಲ್ಲಿ ಉಂಟು ಮಾಡಿದ ಅನುಭವವನ್ನು ಬಣ್ಣಿಸಲು ಸಾಧ್ಯವಿಲ್ಲ. ಅದೊಂದು ಸ್ವಪ್ನದಂತೆ ಈಗಲೂ ಭಾಸವಾಗುತ್ತದೆ.

ಹೊರ ನೋಟಕ್ಕೆ ಷೇಕ್ಸ್‌ಪಿಯರ್ ಕವಿಯ ಮನೆ ಸಾಮಾನ್ಯ ಕಟ್ಟಡದಂತೆ ಕಾಣಿಸುತ್ತದೆ. ಒಳ ಹೊಕ್ಕರೆ ಅದೊಂದು ಅದ್ಭುತ ಲೋಕ. ಕವಿಗೆ ಸಂಬಂಧಿಸಿದ ಪುಸ್ತಕಗಳು–ವಸ್ತುಗಳು ಅಲ್ಲಿವೆ. ಷೇಕ್ಸ್‌ಪಿಯರ್ ನಡೆದಾಡಿದ; ಪಟ್ಟಾಗಿ ಕುಳಿತು ಬರೆದ ಸ್ಥಳಗಳಲ್ಲಿ ಓಡಾಡುವ ಅನುಭವ ಹಿತವಾಗುತ್ತದೆ. ಆ ಸ್ಥಳಗಳನ್ನು ಕಾಣುವ ಆಸೆಯಿಂದ ನಾನು ಅಲ್ಲಿಗೆ ಹೋಗುವಾಗಲೇ ಆತನ ಸಾಹಿತ್ಯದಲ್ಲಿ ಬರುವ ಸ್ಥಳಗಳನ್ನು ಪಟ್ಟಿಮಾಡಿಕೊಂಡಿದ್ದೆ. ನಮ್ಮಲ್ಲಿ ನಾಟಕಕಾರರು ಇಲ್ಲವೇ ಸಾಹಿತಿಗಳ ಮನೆಯ ಸ್ಥಿತಿ ಶಿಥಿಲವಾಗಿರುತ್ತದೆ.

ಆದರೆ ಆ ಮನೆ ಇದಕ್ಕೆ ಅಪವಾದ. ಸರ್ಕಾರ ಕವಿಮನೆಯನ್ನು ಉತ್ತಮವಾಗಿ ನವೀಕರಿಸಿದೆ. ಸ್ವಲ್ಪ ದೂರದಲ್ಲಿ ನಾಟಕಗಳ ಪ್ರಯೋಗ ನಡೆಯುತ್ತಿದ್ದ ಆಡಿಟೋರಿಯಂ ಇದೆ. ಷೇಕ್ಸ್‌ಪಿಯರ್ ಮನೆ ಮತ್ತು ನಾಟಕ ಪ್ರಯೋಗಗಳಿಗೆ ವೇದಿಕೆಯಾದ ಆಡಿಟೋರಿಯಂ ಕಾಣುವ ನನ್ನ ಬಹುದಿನಗಳ ಆಸೆ ಫಲಿಸಿತು. ಆ ಪ್ರವಾಸ ಆಹ್ಲಾದ ನೀಡಿತು.

ಲೇಕ್ ಡಿಸ್ಟ್ರಿಕ್ಟ್‌ನ ಕುಳಿರ್ಗಾಳಿ
ವರ್ಡ್ಸ್‌ವರ್ತ್‌ ಪ್ರಕೃತಿಯನ್ನು ಆರಾಧಿಸಿ ಕವಿತೆಗಳನ್ನು ಕಟ್ಟಿದ್ದು ಲೇಕ್ ಡಿಸ್ಟ್ರಿಕ್ಟ್‌ನ ಪಾಕೃತಿಕ ಸಿರಿಯ ನಡುವೆ. ‘ಟಿಂಟರ್ನ್‌ ಆಬಿ’ಯಲ್ಲಿ ವರ್ಣಿತವಾಗಿರುವಂತೆ ಈ ಸ್ಥಳ ಮನೋಜ್ಞವಾಗಿದೆ. ಆ ಪದ್ಯವನ್ನು ಓದಿ ನಾನು ಪ್ರಕೃತಿಯ ಬಗ್ಗೆ ಪ್ರಭಾವಿತನಾಗಿದ್ದೆ. ಲೇಕ್ ಡಿಸ್ಟ್ರಿಕ್ಟ್‌ನಲ್ಲಿನ ಒಂದು ಗುಡ್ಡದ ಮೇಲೆ ಒಳ್ಳೆಯ ರಸ್ತೆಗಳಿವೆ. ಬೃಹತ್ ಮರಗಳು ಹಸಿರು ಸೂಸುತ್ತಿವೆ. ಮತ್ತೊಂದೆಡೆ ಜಲಪಾತದ ರೀತಿ ಹರಿಯುವ ನೀರಿನ ಸೆಲೆ. ಬೃಹತ್ ಹಸಿರು ಗುಡ್ಡದ ನಡುವೆ ನೀರು ಹರಿಯುತ್ತದೆ. ಕವಿತೆಯ ಈ ರಮ್ಯ ಅನುಭವಗಳನ್ನು, ಸುಂದರ ಕನಸುಗಳನ್ನು ಲೇಕ್ ಡಿಸ್ಟ್ರಿಕ್ಟ್‌ ಸಹೃದಯರೆದುದು ಜೀವಂತಗೊಳಿಸುತ್ತದೆ.

ಲೇಕ್ ಡಿಸ್ಟ್ರಿಕ್ಟ್‌್‌ನಲ್ಲಿ ಕೂಡ ಪ್ರವಾಸಿಗರ ಕಲರವ ಹೆಚ್ಚು. ಇಲ್ಲಿಗೆ ಸಮೀಪದಲ್ಲಿಯೇ ಉದ್ದ ವರ್ಡ್ಸ್‌ವರ್ತ್‌ ಮಹಾಕವಿಯ ಸಮಾಧಿಯನ್ನು ನೋಡಲು ಕಾಲಾವಕಾಶದ ಕೊರತೆಯಿಂದ ನನಗೆ ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.