ADVERTISEMENT

ಕೃಷ್ಣನ ಸ್ವಗತ

ಕತೆ

ವೀಣಾ ಬನ್ನಂಜೆ
Published 18 ಏಪ್ರಿಲ್ 2015, 19:30 IST
Last Updated 18 ಏಪ್ರಿಲ್ 2015, 19:30 IST

ಬೃಂದಾವನದ ಮೋಹನ ಮುರಲಿ, ರಾಧಾಮಾಧವ ವಿಲಾಸ, ಗೀತಾಚಾರ್ಯ– ಇಂಥ ಕಥೆಗಳಿಂದ ಹೊರತಾಗಿ, ತಾಯಿಯ ಹಾಲಿಗೆ ಹಂಬಲಿಸುವ ಅನಾಥ ಕಂದನ ರೂಪದ ಕೃಷ್ಣನ ಕಥೆ ಇಲ್ಲಿದೆ. ಮಹಾಭಾರತ ಕಥೆಯನ್ನು ಮನುಷ್ಯ ಮಾತ್ರ ಕೃಷ್ಣನ ಹೊಸ ಕಣ್ಣಿನಲ್ಲಿ ಕಾಣಿಸುವ ಪ್ರಯತ್ನ ಇದು.

ನಾನು ಹಲವರಿಗೆ ಪರಮ ಪ್ರಿಯ. ಆದರೆ ನನಗೆ ಯಾರು ಪ್ರಿಯರು? ರಾಧೆ, ರುಕ್ಮಿಣಿ ನೀವು ಹಲವು ಹೆಸರು ಹೇಳಬಹುದು ಊಂಹ್ಹೂಂ.... ಅವರ್ಯಾರೂ ಅಲ್ಲ.

‘ದೇವಕಿ’
ಅಬ್ಬಾ, ಹಾಗೆ ಯಾರಾದರೂ ಕರೆದರೆ ರೋಮಾಂಚನ ನನಗೆ. ಆ ಹೆಸರೇ ನನ್ನ ಮೂಲ ಹಿಡಿದು ಅಲ್ಲಾಡಿಸುತ್ತದೆ. ನನಗೆ ಕೊನೆಗೂ ಆ ತಾಯಿ ಸಿಗಲೇ ಇಲ್ಲ. ನನ್ನ ಹಸಿವು ಅವಳಿಂದ ಆರಂಭ ಆದದ್ದು ಎಲ್ಲಿಯವರೆಗೆ ಹೋಯಿತು? ಆದರೂ ನನ್ನ ಹಸಿವು ಎಂದಿಗೂ ಊಂ.... ಹ್ಹೂಂ.... ಆರಲೇ ಇಲ್ಲ.

***
ನನಗೆ ಬುದ್ಧಿ ತಿಳಿಯುತ್ತಾ ಬಂತು. ಆಗ ಗೊತ್ತಾಯಿತು, ಯಶೋದಾ ನನ್ನ ಹೆತ್ತವಳಲ್ಲ. ಅವಳದು ಎಂಥ ನಿಸ್ವಾರ್ಥ ಪ್ರೇಮ. ಇವನು ಜಗದೋದ್ಧಾರ ಎಂದು ಗೊತ್ತಿದ್ದು ತನ್ನ ಮಗನೆಂದು ತಿಳಿದವಳು. ಅವಳು ನೋಡಿಕೊಂಡ ರೀತಿಗೆ ನನಗೆ ಬೇರೆ ಹಸಿವಿರಬಾರದು. ಆದರೆ ಹುಟ್ಟಿದಾಕ್ಷಣದ ಆ ಹಸಿವು ಇತ್ತಲ್ಲ? ಅದು ಕತ್ತಲ ರಾತ್ರಿ ಹೊರಬಿದ್ದು ನದಿದಾಟಿ ನಂದನ ಮನೆ ತಲುಪುವವರೆಗೆ. ಹೌದು, ನಿಮಗದು ಕೆಲವು ಗಂಟೆಗಳ ಹಸಿವು. ನನಗದು ನನ್ನ ಜೀವನದ ಹಸಿವು. ಎಂದಿಗೂ ಆರದ ಹಸಿವು. ಮರೆಯಲಾಗದ ಹಸಿವು.

ಭೂಮಿಗೆ ಬಂದಾಕ್ಷಣ ಆ ಅಮ್ಮನ ಬೆಚ್ಚಗೆ ಅಪ್ಪುಗೆಯಲ್ಲಿ ಹಾಲುಣ್ಣುತ್ತಾ ಮಲಗಬೇಕಿದ್ದ ಹಸಿವು. ಆ ಒಳಗಿನ ಹಸಿವು ಅಳುವಾಗಿ ಮೂಲದಲ್ಲಿ ಕುಳಿತೇ ಬಿಟ್ಟಿತ್ತು. ಅಮ್ಮ ಒಂದಲ್ಲ ಒಂದು ದಿನ ಬಂದಾಳು ಎಂದು ಬೀಜವಾಗಿತ್ತು. ನಿತ್ಯವೂ ಕನಸಿನ ನೀರ ಗೊಬ್ಬರವೂಡಿ ಬದುಕಿದೆ. ಅದರ ಮೊಳಕೆ ನೋಡುವ ಹಸಿವಲ್ಲೇ ನಡೆದೆ. ಬದುಕಿನ ನನ್ನ ನಡೆಯಿಡೀ ಅದೊಂದೇ ಹಸಿವು...
***
ಅದರೊಳಗೆ ಆ ಹಾಲಿನ  ಹಸಿವು ಎಷ್ಟಿತ್ತು? ಅದರ ಒಳಗೆ ಎಂಥ ಅಳುಕಿತ್ತು? ಅದನ್ನು ನಾನು ವಿವರಿಸಿರುವುದು ಕಷ್ಟ. ಅಮ್ಮ ಎಂದು ಕುಸುಕುಸು ಅಳುತ್ತಲೇ ಇದ್ದೆ. ಅದೊಂದು ದಿನ ನನಗೆ ಎಚ್ಚರ ಬಂದ ಹೊತ್ತು. ಅಮ್ಮ ಬಂದಾಳು ಎಂದೇ ಕಾದ ಎಚ್ಚರಕ್ಕೆ ಕಣ್ಣು ಬಂದ ಹೊತ್ತು. ಯಾರೋ ಕೈಗೆತ್ತಿಕೊಂಡರು....

ನನ್ನನ್ನು ಮುದ್ದಾಡಿ ಅಪ್ಪಿ... ಆಹಾ....
ನಾನು ಅದೆಂಥ ಸುಖದಲ್ಲಿ ಮುಳುಗಿ ಬಿಟ್ಟಿದ್ದೆ. ಕಡೆಗೂ ನನ್ನ ಅಮ್ಮ ಬಂದಳು ಎಂದು ಒಳ ಖಷಿ. ಇದುವರೆಗೆ ಎತ್ತಿ ಆಡಿಸಿದ ಯಶೋದೆಯಲ್ಲ ಅವಳು, ತಿಳಿಯುತ್ತಿತ್ತು. ಹೆತ್ತ ತಾಯಿಯನ್ನು ನಾನು ಮೈಮುಟ್ಟಿ ಅನುಭವಿಸಿದವನಲ್ಲ. ಈಗ ಅಪ್ಪಿಕೊಂಡವಳು ಯಾರು ಗೊತ್ತಾ? ಅವಳೇ ಇವಳು. ನನ್ನ ತಾಯಿಯೇ ಬಂದು ಬಿಟ್ಟಿದ್ದಾಳೆ. ನನ್ನ ಬಿಟ್ಟಿರಲಾಗದೆ ಅಂದುಕೊಂಡೆ. ಕರಗಿದೆ, ಅಮ್ಮನೊಳಗೆ ಇಳಿವ ಆಸೆಯಲಿ ಮುಳುಗಿದೆ.

ಹಾಗೆ ಹೀಗೆ ಮುಖವೆಲ್ಲ ಎದೆಯಲ್ಲಿ ಮುಲುಕಾಡಿದೆ. ಅಮ್ಮನ ಹಸಿವು ಕಾವು ಪಡೆದಿತ್ತು. ತಾಯಿಗೇನು ಇದು ಕಡಿಮೆ ಹಸಿವೇ. ಅವಳೂ ನನ್ನನ್ನು  ಎದೆಯೊಳಗೆ ನೂಕಿಕೊಂಡಳು. ನಾನು ಎಷ್ಟೋ ದಿನಗಳಿಂದ ಹಸಿದಿದ್ದ ಅಮ್ಮನ ಅತ್ಯಂತ ಮೃದು ಭಾಗ ಅದು. ಅಲ್ಲಿ ಕರಗದೆ, ಅಲ್ಲಿ ಮೃದುವಾಗದೆ ಇನ್ನೆಲ್ಲಿ ಮೃದುವಾಗಬೇಕು? ನಾನು ಇಡೀ ಜಗದ ಹಸಿವನ್ನು ತುಂಬಿಕೊಂಡು ಬಾಯ್ತೆರೆದೆ. ಅವಳೂ ನನ್ನನ್ನು ಬೆಚ್ಚಗೆ ಎದೆಗೊತ್ತಿಕೊಂಡು ತಲೆನೇವರಿಸುತ್ತಿದ್ದಳು. ಅದೆಂಥ ಪರಮಾನಂದ... ಬದುಕಿನ ಎಲ್ಲವನ್ನೂ ಮೈಮರೆಸಿ ಬಿಡುವ ಎಚ್ಚರ. ಅಂಥದೊಂದು ದಿವ್ಯಕ್ಷಣದಲ್ಲಿ ಇನ್ನೇನು ಅವಳ  ಎದೆಹಾಲು ಕುಡಿಯಬೇಕು...

‘ಒಳಗೊಂದು ಕೂಗಿತು.... ಅಮ್ಮನ ಹಾಲು ಬೇಕಲ್ಲ?
ಹಾಗಾದರೆ ಇದನ್ನು ಕುಡಿಯಬೇಡ.

ಇದನ್ನು ಕುಡಿದರೆ ನೀನು ಅಮ್ಮನ ಹಾಲು ಕುಡಿಯಲು ಬದುಕುಳಿಯುವುದಿಲ್ಲ.

ಅಮ್ಮನ ಹಾಲಿನ ಹಸಿವು ಒಳಗಿಟ್ಟುಕೊ.
ಇದನ್ನು ಹೊರನೂಕು. ಖಾಲಿ ಮಾಡು!

ನಾನೆಂಥ ಪುಟ್ಟ ಮಗು! ನನಗೆ ಆ ಕ್ಷಣ ಇದ್ದ ಹಸಿವು ನಿಮಗೆ ಹೇಗೆ ಹೇಳಲಿ? ಆದರೆ ಒಳಗೆ ತಾಯಿ ಕೂಗಿ ಹೇಳುತ್ತಾಳೆ– ಕುಡಿಯಬೇಡ.
ನನಗೆ ಆಗ  ಪಿಸ–ಗಿಸ ಗೊತ್ತಿಲ್ಲ, ನಿಮ್ಮಾಣೆ. ಆಗ ನನಗೆ ಬಂದದ್ದು ಚಿಣ್ಣರಿಗೆ ಬರುವ ಕೋಪ. ಹಾಲು ಕೊಡು ಎಂದರೆ ಇನ್ನೇನೋ ಕೊಟ್ಟು ಹಾಲು ಕುಡಿಯದಂತೆ ಮಾಡುತ್ತಾಳಲ್ಲ? ಅಮ್ಮನ ಮಾತು ಕೇಳಿ ಇನ್ನಿಲ್ಲದ ಸಿಟ್ಟು ಬಂತು. ಆ ಕೋಪದಲ್ಲಿ ಅದೇ  ಮೂಡುತ್ತಿದ್ದ ಹಲ್ಲು ಇತ್ತಲ್ಲ. ಜೋರಾಗಿ ಕಚ್ಚಿಬಿಟ್ಟೆ. ಅದು ಒಳಗಣ ಹಸಿವಿಗೆ ಹುಟ್ಟಿದ ಸಿಟ್ಟಿನ ಮೊನೆ ನೋಡಿ. ಅವಳು ಪಾಪ ನನ್ನ ಆ ಹಾಲಿನ ಹಸಿವೆಗೆ ಮೊದಲ ಬಲಿ! ಪೂತನಿ!
***
ನಿಧಾನ ಹೊರಗಿನ ಎಚ್ಚರ ಹೆಚ್ಚಾಯಿತು. ತಾಯಿ ಹಾಲು ಕೊಡಲೇ ಇಲ್ಲ ಎಂಬ ವೇದನೆಯೂ ಹೆಚ್ಚುತ್ತಿತ್ತು. ತಾಯಿ ಕಾಣಬೇಕು, ಪಕ್ಕಕ್ಕೆ ಬೆಚ್ಚಗೆ ಮಲಗಿ ಹಾಲುಣ್ಣಬೇಕು. ಅದೊಂದೇ ಹಸಿವು. ಆ ಹಸಿವೆಗೆ ಎಷ್ಟು ಮುಖ? ಅದು ಅಮ್ಮನನ್ನು ತಲುಪಲಿ ಎಂಬ ಹಸಿವು. ಅವಳು ನನ್ನ ಬರುವಿಕೆಗೆ ಕಾಯಲಿ ಎಂಬ ಹಸಿವು. ನನ್ನಂತೆಯೇ ಅವಳ ಒಳಗನ್ನು ತಿಳಿವ ಹಂಬಲ. ಅವಳು ನನ್ನನ್ನು ನೆನೆದು ಏನು ಮಾಡುತ್ತಿರಬಹುದು ಎಂಬ ಕುತೂಹಲ. ಅವಳೆಲ್ಲೋ ನಾನೆಲ್ಲೋ.... ಅವಸರಿಸಿ ಹೋದರೆ....? ಕಂಸನನ್ನು ಮುಗಿಸದೆ ಅದು ಸಾಧ್ಯವಿಲ್ಲ ಎಂದು ಯಾರೋ ಹೇಳುತ್ತಿದ್ದರು.... ಹಾಗಾದರೆ ನನ್ನ ಹಸಿವನ್ನು ಅವಳಿಗೆ ತಿಳಿಸುವುದು ಹೇಗೆ....?

ಆ ಮನೆ, ಈ ಮನೆಗೆ ಹೋದೆ. ಅಲ್ಲಿ ಮೇಲೆ ತೂಗುಹಾಕಿದ ಗಡಿಗೆ ಒಡೆದೆ, ಹಾಲು ಕುಡಿದೆ. ತೂಗು ಹಾಕಿದ್ದ ಗಡಿಗೆಯ ಮೊಸರು ಕದ್ದೆ. ಬೆಣ್ಣೆ ತಿಂದು ಮುಖಕ್ಕೆ ಸವರಿಕೊಂಡು ಬಂದು ಸಿಕ್ಕಿ ಬಿದ್ದೆ. ಇಂಥದೊಂದು ಕಳ್ಳತನ ಬೇಕಿತ್ತಾ? ನನಗೆ ಬೇರೆ ದಾರಿಯಿರಲಿಲ್ಲ. ನನ್ನ ತಾಯಿಗೆ ಅಲ್ಲಿ ಗೊತ್ತಾಗಬೇಕು. ಈ ಮಗ ಹಾಲಿಗಾಗಿ ಎಷ್ಟು ಹಸಿದಿದ್ದಾನೆ ಎಂದು. ಅದಕ್ಕೆಂದೇ ಅಷ್ಟು ತಾಯಿಯರನ್ನು ಕೆಣಕಿ ಸುದ್ದಿ ಮಾಡಿದ್ದೆ. ಅವರೆಲ್ಲರೂ ಬಂದು ಯಶೋದೆಗೆ ದೂರು ಹೇಳಬೇಕು. ಊರಿಗೆ ಊರೇ ಬಂದು ದೂರು ಹೇಳಿದರೆ ತಾನೆ ದೂರದ ತಾಯಿಗೆ ಗೊತ್ತಾಗುವುದು? ಹಾಗೆಲ್ಲ ಹಾಲು, ಮೊಸರು, ಬೆಣ್ಣೆ ಕದಿಯುತ್ತಾ ಅಮ್ಮನ ಮನಸ್ಸು ಕದಿಯುತ್ತಿದ್ದೆ. ಅಮ್ಮ ಅಲ್ಲಿ ಕುಳಿತು ಸಂಕಟ ಪಡಬೇಕು.

‘ಛೇ! ನನ್ನ ಮಗನಿಗೆ ನಾನು ಹಾಲೂಡಲೇ ಇಲ್ಲ.
ಎಷ್ಟು ಹಸಿದಿದ್ದಾನೆ ಹುಡುಗಾ. ಬಾ’ ಅಂತ ಒಳಗೊಳಗೆ ಒದ್ದಾಡಬೇಕು.

ಆ ಹಸಿವು ಹಾಲಾಗಿ ಹರಿದು ಮತ್ತೆ ನನ್ನ ತಾಯನ್ನು ನನಗೆ ತೋರಬೇಕು.
ಹೀಗೆ ಬಾಲ್ಯವಿಡೀ ನನ್ನದು ಕಳ್ಳತನದ ಆರ್ಭಟ. ಆ ತಾಯಿಯ ಮನಸ್ಸು ಕದಿಯುವ ಕಳ್ಳತನ. ನನಗೇನು ಬೆಣ್ಣೆ, ಮೊಸರು, ಹಾಲನ್ನು ತಿಳಿಯದಂತೆ ಕದಿಯಲಾಗದೆ? ಬೇಕೆಂದೇ ಸಿಕ್ಕಿ ಬೀಳುತ್ತಿದ್ದೆ. ಅಮ್ಮನನ್ನು ಮುಟ್ಟಲು ನನಗೆ ಬೇರೆ ದಾರಿ ಗೊತ್ತಿರಲಿಲ್ಲ.
***
ಕಂಸ ಬದುಕಿಯೇ ಇದ್ದ. ಅಮ್ಮ ಕಾಣಿಸಲೇ ಇಲ್ಲ. ಹಾಗಂತ ಕದಿಯುವ ವಯಸ್ಸಿಗೆ ನಾಚಿಕೆ ಬಂದಿತ್ತು. ಆದರೆ ಹಾಲ ಹಸಿವಿಗೆ ಎಲ್ಲಿಯ ನಾಚಿಕೆ, ಎಲ್ಲಿಯ ಬಿಡುಗಡೆ? ಆಗ ನಾನು ದನಗಳ ಹಿಂದೆ ಬಿದ್ದೆ. ಅದೆಂಥ ಪ್ರೀತಿ ನನಗೆ ಆ ದನಗಳ ಬಗ್ಗೆ. ನನ್ನ ಹಾಗೆ ಒಮ್ಮೆ ಅನಾಥವಾಗಿ ನೋಡಿ. ಆಗ ನಿಮಗೆ ಆ ದನಗಳಲ್ಲಿ ತಾಯಿ ಕಾಣಿಸುತ್ತಾಳೆ. ನಾನು ಅವುಗಳನ್ನು ಹಾಗೆ ಸುಮ್ಮನೆ ‘ಗೋಮಾತೆ’ ಎನ್ನಲಿಲ್ಲ. ಯಾವ ತಾಯಿಗೆ ಎಷ್ಟು ಜ್ಞಾನ ಎರೆವ ಶಕ್ತಿ ಅವಳ ಹಾಲಿನಲ್ಲಿತ್ತೋ ಅದೆಲ್ಲವೂ ನನಗೆ ಅಲ್ಲಿ ಸಿಕ್ಕಿತು. ನಾನು ಯಶೋದೆಯನ್ನು ಕೂಡ ಅಷ್ಟು ಪ್ರೀತಿಸಿರಲಿಲ್ಲ. ಅಷ್ಟೊಂದು ಪ್ರೀತಿಸಿ ಬಿಟ್ಟೆ ಈ ತಾಯಿಯನ್ನು. ಎಂಥ ಮನಸ್ಸು ಆ ಆಕಳುಗಳ ಒಳಗೆ.
ಒಳಗಿದ್ದ ಎಂಥ ಹಸಿವನ್ನು ಆರಿಸಿಬಿಟ್ಟ ಮಾತೆ ಅವಳು.

ನಾನು ಈಗ ಕಳ್ಳತನ ಮಾಡಿ ಕದ್ದರೂ ದೂರು ಒಯ್ಯದ ತಾಯಿ ಇವಳು. ನನಗಾಗ ಒಂದಿಷ್ಟು ಪ್ರೌಢನಾದ ಅವಸ್ಥೆ. ನನ್ನ ತಾಯಿಯ ಒಳಹಸಿವನ್ನು ಹೊರಗೆ ತೋರಲಾಗದು ಎಂಬಷ್ಟು ಬೆಳೆದು ಬಿಟ್ಟಿದ್ದೆ. ಹಾಗಂತ ಹಸಿವು ಆರಿತು ಎಂದರೆ ಅದೆಷ್ಟು ಸುಳ್ಳು. ಒಳಗಿರುವ ಹಸಿವನ್ನು ಇಲ್ಲದಂತೆ ನಟಿಸುವುದು ಹೇಗೆ? ಲೋಕದವರೊಡನೆ ನಟಿಸಿದೆ. ಈ ಗೋಮಾತೆಯ ಮುಂದೆ ಅತ್ತು ಕರೆದೆ. ಅವಳು ಹರಿಯಿಸಿದ ಹಾಲು ಕುಡಿದು ಧನ್ಯನಾದೆ.

ಅವಳಿಗಾಗಿ ನನ್ನ ಜೀವ ಕೊಡಲೂ ಹಿಂದೆ ಮುಂದೆ ನೋಡಲಿಲ್ಲ. ಅದೆಂಥ ಕೃತಘ್ನತೆ ಹೆತ್ತ ತಾಯಿಯನ್ನು ಮರೆಯುವುದು ಎಂದರೆ? ಹಾಗಿತ್ತು ಈ ಅನಾಥನ ಬಾಂಧವ್ಯ ಅದರ ಜತೆ. ಊರಿಗೆ ಊರು ಮುಳುಗಿದರೂ ನಾನು ಚಿಂತಿಸಲಿಲ್ಲ. ಆದರೆ ಗೋವುಗಳು ಮುಳುಗಿ ಹೋಗುವುದನ್ನು ನೋಡುತ್ತಾ ಹೇಗೆ ಕೂರುವುದು? ನಾನು ಸತ್ತರೂ ಅವು ಉಳಿಯಬೇಕು ಎಂದಿತು ನನ್ನ ಹಸಿವು. ಗಿರಿಗೆ ಗಿರಿ ಗಿರಿಯನ್ನೇ ಎತ್ತಿದೆ. ಅವು ನಲಿಯುವುದನ್ನು ಕಂಡೆ. ನನ್ನ ತಾಯಿ ಒಳಗೆ ಬಾ ಎಂದು ಕೈ ಮಾಡಿ ಕರೆಯುತ್ತಿದ್ದಳು. ಅವಳ ಹಸಿವಿನ ಮುಂದೆ ಎಲ್ಲವೂ ತೃಣ ಸಮಾನ ಕೆಲಸ. ನರನರಗಳಲ್ಲಿ ಹರಿವ ಅವಳ ಹಸಿವು ಕಿರುಬೆರಳಿನ ಮೂಲೆಗೆ ಹರಿದು ನಿಂತಿತು. ಕಿರುಬೆರಳ ತುದಿಗೆ ಗೋವರ್ಧನ. ಈ ಲೋಕದ ಎಂತೆಂಥ ದೊಡ್ಡ ಕೆಲಸ ಅವಳಿಗಾಗಿ ನಡೆದಿದೆ. ನನ್ನನ್ನೂ ನಡೆಸಿತು. ನಾನು ಕಾಯತ್ತಲೇ ಇದ್ದೆ.

ನಾನು ತುಂಬ ಚಿಕ್ಕವನೇನೂ ಅಲ್ಲ. ಒಳಗೊಂದು ಬೇರೆ ಹಸಿವೂ ಎಚ್ಚರಾಗುವುದರಲ್ಲಿತ್ತು. ಅದು ನನ್ನ ಒಳಗೆ ಇರುವ ಮಗುವನ್ನು ಕೊಂದು ಗಂಡು ಎದ್ದು ನಿಲ್ಲುವ ಹೊತ್ತು. ಆ ಗಂಡಸಿಗೆ ಮುಂದೆ ಅಮ್ಮ ಕಾಣಲಿಕ್ಕಿಲ್ಲ, ಯಾರಿಗೆ ಗೊತ್ತು. ಒಳಗಿನ ತಾಯಿಯ ಹಸಿವು ಅಮ್ಮನಿಗೆ ನೆಚ್ಚಿಕೊಂಡೇ ಇತ್ತು. ಅದಕ್ಕೆ ಅವಳ ಹೊರತು ಬೇರೆ ಏನೂ ಕಾಣಿಸಲಿಲ್ಲ. ಯಾವ ಇತರ ದೊಡ್ಡದಕ್ಕೂ ಆ ಹಸಿವು ತಲೆ ಬಾಗಲಿಲ್ಲ. ಹಾಗಾಗಿಯೇ ಹಲವರು ಹೆದರಿ ಓಡಿದ್ದ ಕಾಳಿಂಗ ಹೆಡೆ ಎತ್ತುವ ಹೊತ್ತಿಗೆ ನಾನು ಅದರ ಹೆಡೆ ಮೆಟ್ಟಿದೆ. ಇಡಿಯ ಬಾಲವನ್ನು ಬೆರಳೊಳಗೆ ಮುಡಿಕಟ್ಟಿ ತಲೆಯ ಮೇಲೆ ಕುಣಿಯುವ ಹೊತ್ತಿಗೆ ನನ್ನ ಒಳಗಿನ ಗಂಡಸು ಮಗುವಾಗಿ ಮತ್ತೆ ನಲಿದಿದ್ದ. ತಾಯಿ ದೂರದಲ್ಲಿ ಹಿಗ್ಗಿ ನಲಿಯುವುದನ್ನು ನಾನಲ್ಲಿ ಹೆಡೆಯ ಮೇಲೆ ಕುಣಿಯುವ ಮಗುವಂತೆ ಕಂಡಿದ್ದೆ. ನನ್ನ ಒಳಗಿನ ಗಂಡಸು ಸತ್ತಿದ್ದ, ಮಗುವಾಗಿಯೇ ಉಳಿದಿದ್ದ. ಜಗಕ್ಕೆ ಅದು ಕಾಳಿಂಗ ಮರ್ದನ.
***
ಕಂಸ ಇನ್ನು ಬದುಕಿಯೇ ಇದ್ದ. ಅವನು ನನ್ನ ಸೋದರ ಮಾವ. ಅವನೇ ನನ್ನ ಈ ಹಸಿವಿನ ಮೂಲಕರ್ತೃ. ಅವನ ಭಯಕ್ಕೇ ನಾನು ಹಾಲಿನಿಂದ ವಂಚಿತ. ನನ್ನ ಒಳಗೆ ಧೀಂ ಧೀಂ ಕುಣಿತ. ಭರದಿಂದ ಹೆಜ್ಜೆ ಹಾಕಿ ದಾರಿ ನಡೆವ ಬಲ. ಅವನ ಕಡೆಗೆ ದಾಪುಗಾಲು. ಅವನನ್ನು ಮುಗಿಸಿದರೆ ತಾಯಿ ಕಾಣುತ್ತಾಳೆ. ಕಡೆಗೂ ಆ ದಿನ ಬಂತು. ನಾನಾದರೂ ಪುಟಾಣಿ ಬಾಲಕ. ಅವನಾದರೂ ಬಲಿಷ್ಠ ರಾಕ್ಷಸ. ಅನುಭವದಿಂದ, ಆಕಾರದಿಂದ, ತಪಸ್ಸಿನಿಂದ, ಬಲದಿಂದ ಅವನು ದೊಡ್ಡವ. ನಾನು ಅವನ ಮುಂದೆ ಒಂದು ದೂಳಕಣ. ಅವನ ಕಂಕುಳ ಕೆಳಗೆ ಸಿಕ್ಕಿಬಿಟ್ಟರೆ ಸಾಕು. ಪ್ರಾಣವಿಲ್ಲದ ಹುಳ. ಅವನನ್ನು ಎದುರಿಸಬೇಕು.

ನನ್ನ ಬಲ ಆಕಾರ ಯಾವುದಕ್ಕು ಯೋಗ್ಯತೆಗಳಿಲ್ಲ.
ಆದರೆ ಹತ್ತು ವರ್ಷದ ತಾಯಿಯ ಹಾಲಿನ ಹಸಿವು,
ಅದೊಂದೇ ಅವನ ಬಳಿ ಇದ್ದಿರಲಿಲ್ಲ.

ಅದೊಂದೇ ನನ್ನೊಳಗೆ ಘನವಾಗಿ ಹಿಮಾಲಯವಾಗಿ ನಿಂತಿದ್ದ ಬಲ.

ಅದು ಎಷ್ಟು ಗಟ್ಟಿಯಾಯ್ತು ಎಂದರೆ ಎದುರಿಗಿರುವವರು ಕಾಣಿಸಲಿಲ್ಲ.
ತಾಯಿ ಕೈ ಚಾಚಿ ಆ ಕಡೆ ಬಾ ಎಂದು ಕಾಯುತ್ತಿದ್ದಾಳೆ.
ಹಂಬಲಿಸಿ ಹಸಿದ ಮಗು ಓಡಿ ಹೋಗುತ್ತಿದೆ.
ಹೆಜ್ಜೆಗೆ ಅಳತೆಯಿಲ್ಲ, ವೇಗಕ್ಕೆ ಮಿತಿಯಿಲ್ಲ.

ಅಮ್ಮನ ತೋಳು ಸೇರಬೇಕು.
ಇನ್ನೇನು ಅರೆಕ್ಷಣಕ್ಕೆ ಹತ್ತು ವರ್ಷದ ಹಸಿಗು ನೀಗಬೇಕು.
ಸಾಕು ಎಂಬಷ್ಟು ಹಾಲು ಕುಡಿಯಬೇಕು.
ಲೋಕ ಮರೆತು ಅಮ್ಮನ ಪಕ್ಕ ಬೆಚ್ಚಗೆ ಮಲಗಬೇಕು.
ಮತ್ತೆಂದೂ ಇತ್ತ ಸುಳಿಯಬಾರದು.
ಅಮ್ಮನ ಸೆರಗಿನ ಸುತ್ತ ಸುಳಿದಾಡುತ್ತಾ ಉಳಿಯಬೇಕು.
ಅವಳ ಹೆಜ್ಜೆಗೆ ಗೆಜ್ಜೆಯಾಗಬೇಕು.

ಅವಳು ಅಮ್ಮ, ನನ್ನ ಹೆತ್ತ ತಾಯಿ, ದೇವಕಿ... ಅವಳೊಬ್ಬಳೇ....
ಅವಳನ್ನು ಸೇರುವ ಆ ಹಸಿವಿಗೆ ಹೊರಟದ್ದು ಮಾತ್ರ ಗೊತ್ತು. ಉಳಿದದ್ದು ಕಾಣಲಿಲ್ಲ, ಕೇಳಿಸಲಿಲ್ಲ. ಎದುರಿಗೆ ಬಂದವನ ಆಕಾರ, ಬಲ ಯಾವುದೂ ಗೊತ್ತೇ ಇಲ್ಲ. ಕ್ಷಣ ಮಾತ್ರ  ಹುಡಿಹಾರಿಸಿ ಆಚೆಗೆ ಹೋಗಿಯಾಯ್ತು. ಒಳಗಿರುವ ಬಲದ ಮುಂದೆ ಅವನು ಕಾಲಕೆಳಗಿನ ದೂಳ ಕಣ. ನಾನು ಅಮ್ಮನ ಮುಂದೆ ನಿಂತಿದ್ದೆ.

ನನಗಾಗ ಹನ್ನೊಂದು...
ಅಷ್ಟೊಂದು ವರ್ಷಗಳ ಮೇಲೆ ನನ್ನನ್ನು ನನ್ನ ಮುಂದೆ ನಿಂತಿದ್ದಾಳೆ.

ನಾನು ಎಲ್ಲ ಹಸಿವು ನೂಕಿಕೊಂಡು ತಾಯಿಯ ಕಡೆ ಕಣ್ಣು ಹರಿಸಿದೆ.
ನನ್ನ ತಾಯಿಯ ಕಣ್ಣುಗಳಲ್ಲಿ ಧಾರಾಕಾರ ನೀರು.

ಬಾಗಿದ ರೆಪ್ಪೆ. ಮಾತಿಲ್ಲದೆ ನಡುಗುವ ತುಟಿ.
ನನ್ನ ಎಷ್ಟೋ ದಿನದ ಕೂಗಿನ ಹಸಿವು ಕರೆಯಿತು– ‘ಮಾ’ ಎಂದೆ.

ಅವಳು ಬಾಚಿಕೊಂಡು, ಅಪ್ಪಿ ಮುದ್ದಾಡಿ, ಬಾ ಎಂದು ಎದೆಗೆ ಕರೆದುಕೊಳ್ಳುತ್ತಾಳೆ ಎಂದು ಕಾದೆ.

ತಾಯಿ ಹಾಗೆಯೇ ನೀರು ತುಂಬಿದ ಕಣ್ಣುಗಳಲ್ಲಿ ನನ್ನ ಕಡೆಗೆ ನೋಡಿದಳು. ನಾನಾಗಿ ಬಾಗಿದೆ. ಅವಳು ಬಾಚಿಕೊಳ್ಳಲಿಲ್ಲ. ನಾನು ನಮಿಸಿದೆ. ಅವಳು ಬಾಗಿ ಬೆನ್ನ ನೇವರಿಸಿದಳು. ನಾನು ಪಾದ ಬಿಟ್ಟೇಳಲಿಲ್ಲ. ಅವಳು ಹಾಗೆಯೇ ಬೆನ್ನು ಮುದ್ದಿಸಿದಳು. ನಾನು ಅವಳ ಮುಖವೆಂದೇ ಭಾವಿಸಿ ಪಾದ ಚುಂಬಿಸಿದೆ. ಅವಳು ಸರಿದುಕೊಂಡಳು.

ನನ್ನನ್ನು ಮೇಲೆಬ್ಬಿಸಿದಳು. ನಾನು ಅದೇ ಹಸಿವಿನಿಂದ ಅವಳ ಕಡೆ ನೋಡಿದೆ. ಅವಳು ತಲೆ ನೇವರಿಸಿ ಹಣೆಗೆ ಮುತ್ತಿಟ್ಟು ‘ಒಳಿತಾಗಲಿ ಕೃಷ್ಣ’ ಎಂದು ಹರಸಿದಳು. ಅಷ್ಟೆ. ಅವಳು ನನ್ನನ್ನು ಬರಸೆಳೆಯಲೇ ಇಲ್ಲ. ಮುದ್ದಿಸಲಿಲ್ಲ. ಎದೆಗೊತ್ತಲಿಲ್ಲ. ಅವಳಿಗೆ ನಾನು ಮಗುವಾಗಲೇ ಇಲ್ಲ. ನಾನು ಬೆಳೆದು ನಿಂತ ಹುಡುಗನಾಗಿ ಬಿಟ್ಟಿದ್ದೆ ಅವಳಿಗೆ. ಅದೇ ಅಂತರ ಕಾಯ್ದುಕೊಂಡಿದ್ದಳು.

‘ಬಾಲ್ಯದಲ್ಲಿ ಜತೆಗಿದ್ದು ನಿಮ್ಮನ್ನು ಸಲಹದ ಈ ದುರ್ದೈವಿಯನ್ನು ಕ್ಷಮಿಸಿ’ ಎಂದೆ.

ಅದು ನನ್ನ ತಾಯಿಯ ಮಾತೇ ಇತ್ತು. ಅವಳು ತಡೆಯಲಾಗದೆ ಧಾರಾಕಾರ ಅಳುತ್ತಾ ಒಳಗೆ ನಡೆದಳು. ಮನೆಗೂ ಕರೆಯದೆ, ಮನದೊಳಗೊ....

ನಾನು ಮತ್ತೆ ಭಾರ ಹೃದಯದಲ್ಲಿ ಮರಳಿ ಬಂದೆ.
ತಾಯಿಯಿಲ್ಲದ ಮಗುವಾಗಿ, ಮತ್ತದೇ ಹಸಿವು ಹೊತ್ತು.
ಹಾಗಾಗಿಯೇ ನನಗೆ ಏಕಾಂತ, ಮನೆ ಸೇರಲೇ ಇಲ್ಲ.
ಒಳಗೆ ಒಬ್ಬನೇ ಇರುವುದು ಎಂದರೆ ನನಗೆ ಅಮ್ಮ ನೆನಪಾಗಿ ಬಿಡುತ್ತಿದ್ದಳು.

ಪೂರ್ತಿ ಹೊರಗೇ ಕಳೆದೆ. ಗುಡ್ಡಗಳಲ್ಲಿ, ಬಯಲಲ್ಲಿ ಊರ ಮಂದಿಯ ಜತೆ, ದನಗಳ ಜತೆ.
ತಾಯಿಗಾಗಿ ಹಸಿದ ಅನಾಥ ಮಗುವಾಗಿ.

ಅಮ್ಮನ ಲೆಕ್ಕಾಚಾರ ಯಾರಿಗೆ ಗೊತ್ತು?
ನನ್ನ ಹಸಿವು ಆರಿದರೆ ಅವಳ ಕೆಲಸ ಯಾರು ಮಾಡಬೇಕು?
***
ಎಷ್ಟು ಗೋಪಿಕೆಯರು ನನ್ನ ಬೆನ್ನ ಹಿಂದೆ. ಅವರಿಗೆ ಎಂಥ ಭರವಸೆ ನನ್ನ ಮೇಲೆ. ಯಾರನ್ನೂ ನಾನು ಬೇಡ ಎಂದಿಲ್ಲ. ದೂರವಿಟ್ಟು ಮಡಿ ತೋರಲಿಲ್ಲ. ಅವರನ್ನು ಎಷ್ಟು ಹಿಗ್ಗಿನಿಂದ ಇಟ್ಟಿದ್ದೆ. ಅವರೊಳಗೆ ನನ್ನ ತಾಯಿಯನ್ನು ನೋಡುತ್ತಾ, ತುಂಟ ಹುಡುಗನ ಆಟವಾಡುತ್ತಾ. ಅಂಥದೊಂದು ಹುಡುಕುವ ಮಗು ನನ್ನೊಳಗೆ ಇಲ್ಲದಿದ್ದರೆ ಅವರು ಏನಾಗುತ್ತಿದ್ದರೋ! ಅವರು ಎಷ್ಟು ಚೆನ್ನಾಗಿದ್ದರು. ನಾನು ಅವರ ಒಳಗೆ ಎಷ್ಟು ಮೈಮರೆತೆ. ಒಬ್ಬ ತಾಯಿಯನ್ನು ಹುಡುಕುವ ಹಸಿವು ಒಳಗಿಟ್ಟು ಆ ತಾಯಿ ಎಷ್ಟು ತಾಯಂದಿರನ್ನು ತೋರಿದಳು.

ದ್ರೌಪದಿ ಅದೊಂದು ದಿನ ಕೂಗಿಕೊಂಡಳಲ್ಲ?
ನಾನು ಅವಳನ್ನು ಕಾದೆನಾ? ನನ್ನ ತಾಯಿಯ ಪ್ರೀತಿ ಕಾಪಾಡೀತಾ? ನನಗೆ ಯಾವ ಹೆಣ್ಣನ್ನೂ ಬಲಾತ್ಕರಿಸುವ ಮನಸ್ಸೇ ಇಷ್ಟವಾಗುವುದಿಲ್ಲ. ನನ್ನ ತಾಯಿಯ ಮೇಲೆ ನಡೆದದ್ದು ಬಲಾತ್ಕಾರವೇ ಅಲ್ಲವಾ? ಅವಳು ಪಾಪ ಎಷ್ಟು ಸಂಕಟದಿಂದ ಮಕ್ಕಳನ್ನು ಹೆತ್ತಿರಬೇಕು. ಒಂದು ಸೆರೆಮನೆಯ ಒಳಗೆ ಮಕ್ಕಳಿಗಾಗಿ ಹಾಗೆ ಬದುಕುವುದು ಎಂದರೆ? ಸ್ವಂತ ಅಣ್ಣ ಎಂಥ ಬಲಾತ್ಕಾರದ ಬದುಕು ಕೊಟ್ಟ. ಮಾನಭಂಗ ಒಂದೇ ಅಲ್ಲ, ಹೆಣ್ಣಿನ ಮೇಲಿನ ಯಾವ ಬಲಾತ್ಕಾರವನ್ನೂ ನಾನು ಎಂದೂ ಸಹಿಸಲು ಸಾಧ್ಯವಿರಲಿಲ್ಲ. ಅದೂ ಕೂಡ ನನ್ನ ತಾಯಿ ಹುಟ್ಟಿಸಿದ ಎಚ್ಚರ. ಅವಳ ಆ ನೋವೇ ನನಗೆ ದ್ರೌಪದಿಯ ಕೂಗಾಗಿ ಕೇಳಿಸಿತು.
***
ಹಾಗೆ ನೋಡಿದರೆ ಎಲ್ಲಿಯ ದ್ವಾರಕೆ, ಎಲ್ಲಿಯ ಮಥುರೆ?
ಈ ಲೋಕಕ್ಕೆ ನಾನು ಎಲ್ಲಿಯವ? ಆದರೆ ನನಗದು ಪಾಂಡವ ದುರ್ಯೋಧನರ ಕಥೆಯಲ್ಲ.

ಈ ನೆಲವು ನಾನು ಹಸಿದ ತಾಯಿಯೇ. ಆ ತಾಯಿಯ ಮೇಲೆ ಇವರ ಬಲಾತ್ಕಾರ. ನನಗೆ ಅದೂ ಸಹಿಸದಾಯಿತು. ಹಾಗಾಗಿಯೇ ನಾನು ಪಾಂಡವ ದುರ್ಯೋಧನರ ಕದನಕ್ಕೆ ಟೊಂಕ ಕಟ್ಟಿ ನಿಂತೆ. ಈ ಕದನ ಮುಗಿದು ತಾಯಿ ಆರಾಮಾಗಿ ಉಸಿರಾಡಲಿ ಎಂದೇ ಅದಕ್ಕೆ ನಿಂತೆ.

ಇಂಥ ಹೊತ್ತಿನಲ್ಲಿ ನಾನು ಕರ್ಣನನ್ನು ಹುಡುಕಿ ಹೊರಟೆ. ಅನೇಕರಿಗೆ ಅದು ನನ್ನ ಷಡ್ಯಂತ್ರ. ಕಾಣುವ ಕಣ್ಣಿಗೆ ಅದೂ ಸತ್ಯ, ಅಲ್ಲ ಯಾಕೆ? ಅಷ್ಟು ಅತಿರಥರನ್ನು ಎದುರಿಸಲು ನಿಂತವನಿಗೆ ಕರ್ಣನೇನು ಲೆಕ್ಕ? ಕರ್ಣನ ಬಳಿ ಹೋಗಲು ಬೇರೆಯೇ ಕಾರಣವಿತ್ತು. ನನಗೆ ಕರ್ಣನ ಮೇಲೆ ಅಪಾರ ಮಮತೆ. ಅವನೂ ಕೂಡ ನನ್ನ ಹಾಗೆಯೇ ಅನಾಥ.

ನನ್ನ ತಾಯಿಯೂ ನನ್ನನ್ನು ನದಿ ದಾಟಿಸಿ ಬಿಟ್ಟಿದ್ದಳು. ಕರ್ಣನ ತಾಯಿಯೂ ನದಿಯ ಮೇಲೆ ಹರಿಸಿದ್ದಳು. ಕುಂತಿಗೆ ಲೋಕದಲ್ಲಿ ಬಹಿಷ್ಕೃತೆ ಆಗುವ ಭಯ. ನನ್ನ ತಾಯಿಗೆ ನನ್ನ ಜೀವದ ಭಯ. ನಾವಿಬ್ಬರೂ ಅನಾಥರು. ಕರ್ಣನೊಳಗೆ ತಾಯಿಯ ಹಸಿವು ಹೇಗಿರಬಹುದು, ನನಗೆ ಅರಿವಿತ್ತು. ನನ್ನ ತಾಯಿ ನಾನಾಗಿ ಹೋದರೆ ಕರೆಸಿಕೊಳ್ಳಲಿಲ್ಲ. ಕುಂತಿ ಮಾತ್ರ ಕರ್ಣನಿಗಾಗಿ ಹಸಿದಿದ್ದಳು. ತಾಯಿ ಮಗುವನ್ನು ಕೂಡಿಸುವ ಸುಖ ನನಗೆ ಗೊತ್ತಿತ್ತು. ಆ ಇಬ್ಬರ ಮಿಲನ ಸೌಭಾಗ್ಯ ನನ್ನ ಎದೆಯಲ್ಲಿತ್ತು. ಹಾಗೆ ಹೋದೆ. ಕರ್ಣ ನನ್ನಂತೆ ದುರದೃಷ್ಟವಂತ. ತಾಯಿಗೆ ನನ್ನ ಹಸಿವಿರಲಿಲ್ಲ. ಕರ್ಣನಿಗೆ ತಾಯಿಯ ಹಸಿವಿರಲಿಲ್ಲ. ಎಲ್ಲಕ್ಕೂ ಯೋಗಾಯೋಗ ಬೇಕು. ಅವನೂ ಅನಾಥನಾಗಿಯೇ ಸತ್ತ.
***
ಅತ್ತ ಕಣ್ಣನ್ನೇ ಕಟ್ಟಿ ಮಕ್ಕಳನ್ನೇ ನೋಡದ ತಾಯಿ, ಗಾಂಧಾರಿ.
ಮಕ್ಕಳನ್ನು ಸರಿಯಾಗಿ ನೋಡದವರಿಗೆ ಮೋಹ ಒಂದೇ ಉಳಿಯುತ್ತದೆ. ಪಾಪ, ಗಾಂಧಾರಿಗೆ ಆದದ್ದು ಅದೇ. ತಾನಾಗಿ ಕಣ್ಣು ಕಟ್ಟಿಕೊಂಡು ಅವರನ್ನು ಬೆಳೆಸಿದರು. ನೋಡಿಕೊಳ್ಳದ ತಾಯಿಗೆ ಮಕ್ಕಳು ಮಾಡಿದ್ದು ಸರಿ.

ನೂರು ಮಕ್ಕಳನ್ನು ಒಟ್ಟಿಗೆ ಕಳಕೊಂಡ ತಾಯಿಯ ದುಃಖ ನನಗೆ ತಿಳಿಯುತ್ತದೆ. ನನ್ನನ್ನು ಆ ಕೋಪದಲ್ಲೇ ಶಪಿಸಿದಳು– ನಿನ್ನ ವಂಶ ನಿರ್ವಂಶವಾಗಲಿ. ಅದನ್ನು ನನ್ನ ತಾಯಿ ನಾನು ಹುಟ್ಟಿದ ದಿನವೇ ಮಾಡಿದ್ದಳು. ನನ್ನನ್ನು ಹುಟ್ಟಿದ ದಿನವೇ ಹೊರ ನೂಕಿದಾಗಲೇ ಯದುವಂಶದ ಕುರಿತ ನಿರ್ಮೋಹ ಬೆಳೆದಾಗಿತ್ತು. ನಾನು ಹೊಕ್ಕುಳ ಬಳ್ಳಿ ಕತ್ತರಿಸಿಯೇ ಹೊರಗೆ ಬಂದಿದ್ದೆ.

ಇಷ್ಟು ಹೊತ್ತಿಗೆ ಮರದ ಟೊಂಗೆಯ ಮೇಲೆ ನೆಲಕ್ಕೆ ಕಾಲು ಇಳಿಬಿಟ್ಟು ಕುಳಿತಿದ್ದೇನೆ. ಎಂದೂ ಹೀಗೆ ಒಬ್ಬನೇ ಕುಳಿತುಕೊಳ್ಳದೆ ವರ್ಷಗಳೇ ಆಗಿ ಹೋಗಿವೆ. ದೂರದಲ್ಲಿ ಯದುವಂಶದ ಒಂದೊಂದೇ ಮರಣದ ಕೂಗು. ನನ್ನ ತುಟಿಯ ಮೇಲೆ ಸಣ್ಣ ನಗು. ಇದ್ದಕ್ಕಿದ್ದ ಹಾಗೆ ‘ಕೃಷ್ಣಾ ಬಾ’ ಎಂದು ಕರೆದಂತಾಯ್ತು. ಕೇಳಿದೆ ಕಿವಿಗೆ ಸಮೀಪವೇ ಮತ್ತೊಮ್ಮೆ ಸರಿಯಾಗಿ ಗಮನಿಸಿದೆ. ನೆಲದಾಳದ ಕೂಗು, ಅರೆ, ಅಮ್ಮ ದೇವಕಿಯ ದನಿ. ಕೈ ಚಾಚಿ ಕರೆಯುತ್ತಿದ್ದಾಳೆ. ‘ಅಮ್ಮಾ’ ಎಂದ ಅಷ್ಟು ದಿನದ ಹಸಿವಿಗೆ ನೆಲದೊಡಲಿಂದ ಕೈ. ನನ್ನ ಹಸಿವು ಮತ್ತೆ ಭೋರ್ಗರೆದು ಬಂತು. ನಾನು ತೀವ್ರ ಮಾಡಿದೆ. ಕಾಲನ್ನು ಪ್ರಾಣಿಯ ಕಿವಿಯಂತೆ ಕಾಣಿಸಲು ನಟಿಸಿ, ಬೇಟೆಗಾರನನ್ನು ದೂರದಿಂದ ಇತ್ತ ಸೆಳೆದೆ. ಅವನು ಬಾಣ ಹೂಡಿದ. ನಾನು ‘ಧನ್ಯೋಸ್ಮಿ’ ಎಂದೆ. ಆ ತಾಯಿಯನ್ನು ಸೇರುವ ಹಸಿವಿಗೆ ಮರಣವೂ ಸೃಷ್ಟಿ.
***
ನಾನು ಧರ್ಮಗ್ಲಾಸಿಯಾದಾಗ ಮತ್ತೆ ಬರುತ್ತೇನೆ ಎಂದಿದ್ದೆ.
ಅದು ನನ್ನ ತಾಯಿಯ ಹಸಿವಿನಿಂದ ಹೇಳಿದ ಮಾತು.

ಅವಳು ನೊಂದಾಗ, ಅವಳಿಗೆ ನಾನು ಬೇಕೆನಿಸಿದಾಗ ನಾನು ಮತ್ತೆ ಮತ್ತೆ ಬರುತ್ತೇನೆ. ನಾನು ಮೂಲೋಕದೊಡೆಯ, ಜಗಕ್ಕೆ ದೇವರು. ಆದರೆ ತಾಯಿಯನ್ನೆ ಕಾಣದ ಮಗು. ಹಾಗಾಗಿ ಅವಳ ಕರೆಗೆ ಇಲ್ಲ ಎನ್ನಲಾರೆ. ಅವಳ ಹಾಲ ಹಸಿವು ಕಾದಿಟ್ಟು ಕುಳಿತ ಅನಾಥ ಮಗು. ಈಗೀಗ ಅವಳ ಕೂಗು ಹೆಚ್ಚು ಕೇಳಿಸುತ್ತಿದೆ.

ಅಮ್ಮನ ಕೂಗಿಗೆ ಬಾರದ ಮಗ ಯಾಕೆ?
ಬರಬೇಕು ಎಂಬ ಹಸಿವು ಹೊತ್ತೇ ಎದ್ದೇಳುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT