ADVERTISEMENT

ತಾಂಬೂಲ ಕೊಡಲಿಲ್ಲವೆಂದು ಊಟವೇ ಸರಿಯಿಲ್ಲವೆಂದರೆ ಹೇಗೆ?

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 19:30 IST
Last Updated 16 ಸೆಪ್ಟೆಂಬರ್ 2017, 19:30 IST
ಚಿತ್ರ: ಶಶಿಧರ ಹಳೆಮನಿ
ಚಿತ್ರ: ಶಶಿಧರ ಹಳೆಮನಿ   

ಆ ಬೆಟ್ಟಗಳಿಗೆ ಹುಲಿರಾಯನೇ ಯಜಮಾನ. ಹಸಿವಾದಾಗ ಯಾವುದೇ ಪ್ರಾಣಿಯಾದರೂ ಸರಿ ಬೇಟೆಯಾಡುವುದು ಆತನ ಸ್ವಭಾವ. ಹೀಗಾಗಿ ಕಾಡಿನ ಎಲ್ಲ ಸಾಧುಪ್ರಾಣಿಗಳಿಗೆ ಎಲ್ಲಿಲ್ಲದ ಭಯ. ಹೀಗಾಗಿ ಆ ಎಲ್ಲ ಪ್ರಾಣಿಗಳು ವಿಧೇಯರಾಗಿದ್ದವು. ಎಲ್ಲಕ್ಕೂ ಜೀವಭಯದಲ್ಲಿ ಬದುಕುವ ವಾತಾವರಣ. ತಮ್ಮನ್ನು ತಾವು ರಕ್ಷಿಸಿಕೊಳ್ಳುವುದೇ ಒಂದು ಸಾಹಸ.

ಒಂದು ದಿನ ಹುಲಿ ವಿಹಾರದಲ್ಲಿರಬೇಕಾದ ಸಂದರ್ಭದಲ್ಲಿ ಎರಡು ಕೆಂದಳಿಲು ಜೋಡಿ ಮರದ ಕೊಂಬೆಯ ಮೇಲೆ ಕುಳಿತು ಹುಲಿಯ ಕ್ರೌರ್ಯದ ನಡೆಯನ್ನು ಖಂಡಿಸುತ್ತಿದ್ದವು. ಆ ಮರದ ಕೆಲಕಡೆಯೇ ಹುಲಿಯಿದ್ದ ಪರಿಜ್ಞಾನ ಅವುಗಳಿಗಿರದೇ ಮಾತಿಗಿಳಿದ್ದವು. ಇದನ್ನು ಕೇಳಿ ಹುಲಿಗೆ ತನ್ನ ಬಗ್ಗೆ ಪಶ್ಚಾತ್ತಾಪ ಉಂಟಾಯಿತು. ಒಂದು ದಿನವಾದರೂ ಇವುಗಳಿಗೆ ಔತಣಕೂಟ ಏರ್ಪಡಿಸಬೇಕು ಎಂದು ನಿರ್ಧರಿಸಿತು.

ಅದರಂತೆ ಪೂರ್ವ ತಯಾರಿ ನಡೆಸಿ ಮೊಲಕ್ಕೆ ಗರಿಕೆ, ನರಿಗೆ ಕಬ್ಬು, ಆನೆಗೆ ಬಿದಿರು, ಅಳಿಲಿಗೆ ಹಣ್ಣು, ಗಿಳಿಗೆ ಪೇರಲ, ಹೀಗೆ ಅವುಗಳು ಸೇವಿಸುವ ಆಹಾರವನ್ನು ಸಂಗ್ರಹಿಸಿ ಔತಣಕೂಟಕ್ಕೆ ಕರೆಯಲು ತೆರಳಿತು. ಕಾಡಿನ ಅರಳಿಕಟ್ಟೆಗೆ ಎಲ್ಲ ಪ್ರಾಣಿಗಳಿಗೆ ಬರಲು ನವಿಲಿಗೆ ಹೇಳಿ ಡಂಗುರ ಸಾರಿಸಿತು. ಎಲ್ಲ ಪ್ರಾಣಿಗಳಿಗೆ ಕೂತೂಹಲ ಪ್ರಾರಂಭವಾಯಿತು.

ADVERTISEMENT

‘ಹುಲಿ ಏಕೆ ಸಭೆ ಕರೆಯಿತು?’ ಎಂಬ ಕೌತುಕ ಹೆಚ್ಚಿತು. ಅದರಂತೆ ಅರಳಿಕಟ್ಟೆಯ ಬಳಿ ಬಂದು ಸಾಲಾಗಿ ಪ್ರಾಣಿಗಳು ಬಂದು ನಿಂತವು. ಅಂದಿನ ಸಭೆಯ ಅಧ್ಯಕ್ಷತೆಯನ್ನು ಆನೆಗೆ ವಹಿಸಲು ನಿರ್ಧರಿಸಲಾಯಿತು. ಸಭೆ ಗದ್ದಲದಿಂದ ಕೂಡಿದ ಕಾರಣ ಆನೆ ಎದ್ದು ನಿಂತು ‘ಎಲ್ಲರೂ ಶಾಂತರಾಗಬೇಕು. ಇನ್ನೇನು ಎಲ್ಲರೂ ಬಂದಾಯಿತು. ಈಗ ಮುಖ್ಯ ವಿಷಯಕ್ಕೆ ಬರೋಣ. ಈ ಸಭೆ ಕರೆಯಲು ಕಾರಣವನ್ನು ಹುಲಿರಾಯನ ಹತ್ತಿರವೇ ಕೇಳಿ ತಿಳಿಯೋಣ ಶಾಂತರಾಗಬೇಕು’ ಎಂದು ಹೇಳಿ ಕುಳಿತಿತು.

ಹುಲಿರಾಯ ಗಾಂಭಿರ್ಯದಿಂದ ಎದ್ದು ನಿಂತು ‘ಸ್ನೇಹಿತರೇ ಇಂದಿನ ಸಭೆಯ ಉದ್ದೇಶವೆಂದರೆ, ತಾವೂ ಎಲ್ಲರೂ ನನ್ನನ್ನು ತುಂಬಾ ತಪ್ಪು ಗ್ರಹಿಕೆ ಮಾಡಿಕೊಂಡಿರುವಿರಿ. ನಾನು ಕ್ರೂರಿ, ಹೃದಯವಿಲ್ಲದವನು ಎಂದು. ಹೀಗಾಗಿ ನಿತ್ಯವೂ ಎಲ್ಲರೂ ನನ್ನನ್ನು ಬೈಯ್ಯುವಿರಿ, ನೋಡಿ ನಾನು ತಾನೆ ಏನು ಮಾಡಲಿ? ಹಿಂದಿನಿಂದಲೂ ನಾನು ಮಾಂಸಾಹಾರಿಯಾದ ಕಾರಣ ಬೇಟೆಯಾಡುವುದು ನನ್ನ ಸಹಜಗುಣ.

ಈ ದಿನಗಳಲ್ಲಿ ನನಗೆ ಬೇಟೆ ಸರಿಯಾಗಿ ಸಿಗದೇ ನನ್ನ ಸಂತತಿ ನಾಶವಾಗುವ ಭಯದಲ್ಲಿದ್ದೇನೆ. ಕಾರಣ ಒಂದೂ ದಿನವಾದರೂ ನಿಮ್ಮನ್ನು ನಾನು ಸಂತೋಷದಿಂದ ಇರುವುದನ್ನು ನೋಡಬಯಸಿದ್ದೇನೆ. ಅದಕ್ಕೆಂದೇ ನಿಮ್ಮೆಲ್ಲರಿಗೂ ಔತಣಕೂಟ ಏರ್ಪಡಿಸಿದ್ದೇನೆ. ತಾವೆಲ್ಲರೂ ಬರಲು ಈ ಮೂಲಕ ಕೋರಿಕೊಳ್ಳುತ್ತೇನೆ’ ಎಂದಿತು.

ಎಲ್ಲರೂ ಔತಣಕೂಟವನ್ನು ಒಪ್ಪಿದವು. ಎಲ್ಲರೂ ಹುಲಿರಾಯನ ಗುಹೆಯತ್ತ ನಡೆದವು. ಅಲ್ಲಿ ಅಚ್ಚುಕಟ್ಟಾದ ವ್ಯವಸ್ಥೆಯಿದ್ದ ಕಾರಣ ತಮಗೆ ಬೇಕಾದ ಆಹಾರವನ್ನು ಎಲ್ಲವೂ ಸೇವಿಸಿದವು. ಭರ್ಜರಿ ಭೋಜನ ಸವಿದವು. ಊಟದ ನಂತರ ಹುಲಿರಾಯ ತಾಂಬೂಲ ತರವುದನ್ನು ಮರೆತಿತ್ತು. ಅದಕ್ಕಾಗಿ ಎಲ್ಲ ಪ್ರಾಣಿಗಳು ಹುಲಿಯನ್ನು ಜರಿಯತೊಡಗಿದವು. ಅಷ್ಟು ದೊಡ್ಡ ಭೋಜನ ಏರ್ಪಡಿಸಿದರೂ ತಾಂಬೂಲವಿಲ್ಲದ ಊಟವೇ ಸರಿಯಿಲ್ಲವೆಂದವು.

ಹುಲಿರಾಯನ ಬಳಿ ಕೆಂದಳಿಲು ಬಂದು ಎಲ್ಲರನ್ನುದ್ದೇಶಿಸಿ ‘ನೋಡಿ ತಾಂಬೂಲ ನೀಡಲಿಲ್ಲವೆಂದು ಊಟವೇ ಸರಿಯಿಲ್ಲವೆಂದರೆ ಹೇಗೆ?’ ಎಂದು ಇತರರ ನಡೆಯನ್ನು ಖಂಡಿಸಿ, ಹೀಗೆ ಹೇಳಿತು; ‘ಹುಲಿರಾಯ ಸಮಾಜವೆಂದ ಮೇಲೆ ಇವೆಲ್ಲ ಸಾಮಾನ್ಯ. ಅದಕ್ಕಾಗಿ ನಿನ್ನ ಮನಃಶಾಂತಿ ಹಾಳುಮಾಡಿಕೊಳ್ಳಬೇಡ’ ಎಂದು ಹೇಳಿ ತಮ್ಮ ಗೂಡಿಗೆ ಮರಳಿದವು.ಇತ್ತ ಹುಲಿರಾಯ ಕೂಡಾ ಎಂದಿನಂತೆ ತನ್ನ ಕಾರ್ಯ ಮಾಡತೊಡಗಿದ.
ವಿನೋದ ರಾ ಪಾಟೀಲ, ಚಿಕ್ಕಬಾಗೇವಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.