ADVERTISEMENT

ದೊರೆ ದೊರೆಯೇ...

ಡಾ.ನಾ.ಡಿಸೋಜ
Published 13 ಮೇ 2017, 19:30 IST
Last Updated 13 ಮೇ 2017, 19:30 IST
ಚಿತ್ರಗಳು: ಶ್ರೀಕಂಠಮೂರ್ತಿ
ಚಿತ್ರಗಳು: ಶ್ರೀಕಂಠಮೂರ್ತಿ   

ಪುಟ್ಟಜ್ಜಿ ಮಕ್ಕಳ ಜೊತೆಯಲ್ಲಿ ಗುಡಿಗೆ ಹೋದವಳು ಹಳ್ಳಿಗೆ ಹಿಂತಿರುಗುವಾಗ ಜೊತೆಯಲ್ಲಿ ಬರುತ್ತಿದ್ದ ಸಿದ್ದ ದಾರಿಯಲ್ಲಿ ‘ಅಜ್ಜೀ’ ಎಂದ. ಅಜ್ಜಿ ತಿರುಗಿ ನಿಂತು ಕೇಳಿದಳು.

‘ಏನು, ಏನಾರ ಕೇಳೋದಿತ್ತ?’
‘ಹೌದು ಅಜ್ಜಿ’
‘ಕೇಳು. ಏನು ಪ್ರಶ್ನೆ’ ಎಂದಳು.

‘ಅಜ್ಜಿ. ಮತ್ತೇ...’ ಎಂದು ರಾಗ ಎಳೆದ ಸಿದ್ದ. ‘ಮತ್ತೆ ಈ ಬೀದಿ ಬದಿ ಮರಗಳಿಗೆ ಕೆಂಪು ಬಿಳಿ ಬಣ್ಣ ಬಳೀತಾರಲ್ಲ ಯಾಕೆ?’ ‘ಹೌದು, ನನಗೂ ಕೇಳಬೇಕಿತ್ತು ಈ ಪ್ರಶ್ನೇನಾ’ ಎಂದ ಗುಂಡ. ‘ನನ್ನ ಮನಸ್ಸಿನಾಗು ಈ ಪ್ರಶ್ನೆ ಇದೆ’ ಎಂದು ನಾಗ ತನ್ನ ದನಿ ಸೇರಿಸಿದ. ಗುಂಪಿನಲ್ಲಿ ಮತ್ತೂ ಒಂದೆರಡು ದನಿಗಳು ಸೇರಿಕೊಂಡವು.

‘ಹೇಳತೇನೆ... ಹೇಳತೇನೆ’ ಎಂದು ದನಿ ಸೇರಿಸಿದಳು ಪುಟ್ಟಜ್ಜಿ. ‘ನಮ್ ದಾರಿ ಸಾಗಬೇಕಲ್ಲ... ಅದೇನು ವಿಷಯ ಹೇಳಿ ಬಿಡು’ ಎಂದು ಇನ್ನೂ ಒಂದಿಬ್ಬರು ಹೇಳಿದರು. ಅಜ್ಜಿ ತುಸು ತಡೆದು ಹೇಳತೊಡಗಿದಳು.

‘ಸಾಲು ಮರಗಳಿಗೆ ಬಿಳಿ–ಕೆಂಪು ಬಣ್ಣ ಬಳಿಯೋದರಿಂದ ಮರಗಳು ಚೆನ್ನಾಗಿ ಕಾಣುತ್ತವೆ. ಮರಕ್ಕೆ ಗೆದ್ದಲು ಮಣ್ಣು ಹತ್ತೋದಿಲ್ಲ. ರಸ್ತೆ ಬದಿ ಯಾವುದು ಅಂತ ತಟ್ಟನೆ ತಿಳಿಯುತ್ತೆ. ರಸ್ತೆನೂ ಸ್ಪಷ್ಟವಾಗಿ ಕಾಣುತ್ತೆ. ಅಲ್ಲೊಂದು ಮರ ಇದೆ ಹುಷಾರು ಅಂತ ಎಚ್ಚರಿಕೆ ನೀಡಿದ ಹಾಗೂ ಆಗುತ್ತೆ. ಇದು ರಾಜ್ಯದಲ್ಲಿ ಎಲ್ಲ ಕಡೆ ಇರೋ ಒಂದು ಪದ್ಧತಿ’ ಎಂದಳು ಅಜ್ಜಿ.

‘ಈ ಮರಗಳಿಗೆ ಹೀಗೆ ಬಣ್ಣ ಬಳಿಯೋರು ಯಾರು ಅಜ್ಜಿ?’
‘ಈಗ ಯಾರು ಬಣ್ಣ ಬಳೀತಾರೋ ಗೊತ್ತಿಲ್ಲ, ಹಿಂದೆ ಮಾತ್ರ ಜನರೇ ಬಳೀಬೇಕಾಗಿತ್ತು’.
‘ಹೌದಾ?’
‘ಹೌದು... ನಿಮ್ಮ ನಿಮ್ಮ ಮನೆ ಮುಂದೆ ಇರುವ ಮರಕ್ಕೆ ನೀವೇ ಬಣ್ಣ ಸುಣ್ಣ ಬಳೀರಿ ಅಂತ ಮಹಾರಾಜರ ಸರಕಾರ ಆರ್ಡರ್ ಮಾಡತಿತ್ತು, ಜನ ಬಣ್ಣ ಹಚತಿದ್ರು...’ ಎಂದಳು ಅಜ್ಜಿ.

‘ಇದಕ್ಕೆ ಸಂಬಂಧಪಟ್ಟಂತೆ ಒಂದು ಕತೆ ಇದೆ ಹೇಳಲಾ?’ – ಪುಟ್ಟಜ್ಜಿ ಎಲ್ಲರನ್ನ ಕೇಳಿದಳು. ಕತೆ ಅಂದಕೂಡಲೇ ಮಕ್ಕಳ ಕಿವಿ ನೆಟ್ಟಗಾಯಿತು. ‘ಹೇಳಜ್ಜಿ, ಹೇಳಜ್ಜಿ’ ಎಂದವು ಮಕ್ಕಳು. ಪುಟ್ಟಜ್ಜಿ ತನ್ನ ಗಂಟಲು ಸರಿಪಡಿಸಿಕೊಂಡಳು.

ADVERTISEMENT

ಮನೆಮನೆ ಮುಂದಿನ ಮರಗಳಿಗೆ
ಕೆಂಪು ಬಿಳಿ ಬಣ್ಣವ ಹಚ್ಚಿರಿ ಎಂದು
ಅರಮನೆ ಆದೇಶವು ಹೊರಡುತ್ತಿರಲು
ಜನರೋ ಗಡಿಬಿಡಿ ಮಾಡಿದರು

ದೊರೆಗಳ ಆಜ್ಞೆಯ ಮೀರಲಿಕುಂಟೆ
ಆಜ್ಞೆ ಮೀರಿಯೂ ಬದುಕಲಿಕುಂಟೆ
ದೊರೆಗಳು ಹೇಳಿದ ಕೆಲಸವನು
ಮಾಡಿ ಮುಗಿಸಲು ಹೊರಟರು ಜನ

ಹಿಡಿದರು ಎಲ್ಲ ಸೂಡಿಗಳ
ಬಿಳಿ ಕೆಂಪು ಬಣ್ಣದ ಗಡಿಗೆಗಳ
ಮನೆಮನೆ ಮುಂದಿನ ಮರದ ಬಳಿ
ಅವಸರದಿಂದಲಿ ಓಡಿದರು. 

ದೊರೆ ತಾ ಹೊರಟನು ಮಾರುವೇಷದಲಿ
ಜನರ ಕೆಲಸವನು ಗಮನಿಸಲು
ಎಲ್ಲ ಊರಲೂ ಜನರ ಗುಜುಗುಜು
ಬಣ್ಣವ ಬಳಿಯುವ ಸಂಭ್ರಮವು

ಒಂದು ಊರಲಿ ಮುದಿಯಜ್ಜಿ
ಮನೆಯ ಮರದ ಬಳಿ ಕುಳಿತಿರಲು
ದೊರೆ ಬಂದನು ಕುದುರೆಯನೇರಿ
ಅಜ್ಜಿಯ ಬಳಿಗೇ ಇಳಿದು ನಿಂತನು

‘ಅಜ್ಜಿ ಬಣ್ಣ ಸೂಡಿ ಎಲ್ಲವು ಇದೆ
ಬಣ್ಣ ಹಚ್ಚುವವರಾರು’ ಎಂದು ಕೇಳೆ
‘ನನಗದೋ ಆಗಿದೆ ನೂರು ವರ್ಷ
ಈ ಕೆಲಸವ ನಾನು ಎಂತು ಮಾಡಲಿ?’

ನರಳಿ ನುಡಿದಳು ಹಣ್ಣು ಮುದುಕಿ
‘ಗಂಡನು ಇಲ್ಲ ಮಗನೂ ಇಲ್ಲ
ಮೊಮ್ಮಗ ದೊರೆಯ ಸೇನೆಯಲಿ
ನಾನೆಂತು ಮರಗಳಿಗೆ ಬಣ್ಣ ಹಚ್ಚಲಿ’

ಅಜ್ಜಿ ಹುಸ್ ಎಂದಳು ಸೊರಗಿ
ದೊರೆ ಎಂದನು ‘ಅಜ್ಜಿ ಬೇಸರ ಬೇಡ
ನಿನ್ನಯ ಕೆಲಸವ ನಾನೇ ಮಾಡುವೆ
ನನ್ನನ್ನು ನಿನ್ನಯ ಮಗನೆಂದು ತಿಳಿ’

ಸೂಡಿ ಹಿಡಿದ ದೊರೆ ಕೆಲಸಕೆ ಇಳಿದ
ಅಜ್ಜಿಯ ಮನೆ ಮುಂದಿನ ಮರಕೆ
ಬಿಳಿ ಕೆಂಪು ಬಣ್ಣಗಳ ತಾ ಬಳಿದ.
ಮರವದು ಹೊಳೆಯಿತು ಲಕಲಕನೆ

‘ನಿನಗೊಳಿತಾಗಲಿ ಮಗು’ ಎಂದು
ಅಜ್ಜಿ ದೊರೆಯ ತಲೆ ನೇವರಿಸಿ
ಆಶೀರ್ವಾದವ ಮಾಡಿದಳು
ಹಿರಿಹಿರಿಯಾಗಿ ದೊರೆ ಹಿಗ್ಗಿದನು

ದೊರೆಯ ಕುದುರೆಯು ಅತ್ತ ಹೋಗಲು
ರಾಜಭಟರು ಧಾವಿಸಿ ಬಂದರು ಇತ್ತ
ದೊರೆಗಳ ಕೆಲಸವ ನೋಡಿದ ಅವರು
ಬೆರಗಾದರು ನಿಂತು ನಡುರಸ್ತೆಯಲಿ

ಅಜ್ಜಿಗೆ ತಿಳಿಯಿತು ದೊರೆಗಳ ಕೆಲಸ
ಎಂತಹ ಪ್ರಮಾದವಾಯಿತು ಎಂದು
ಅಜ್ಜಿ ಕೈ ಕೈ ಹಿಸುಕಿಕೊಂಡಳು
‘ದೊರೆ ದೊರೆಯೇ’ ಎಂದಳು ಆಕೆ.

ಅಜ್ಜಿ ಹೇಳಿದ ಕತೆಯ ಸಾರಾಂಶವನ್ನು ಮಕ್ಕಳೆಲ್ಲ ಅರ್ಥ ಮಾಡಿಕೊಂಡರು. ದೊರೆ ದೇಶದ ಕಾನೂನನ್ನ ಮುರಿಯಲಿಲ್ಲ. ಬದಲು ತಾನೇ ಬಣ್ಣ ಹಚ್ಚುವ ಕೆಲಸ ಮಾಡಿ ದೇಶದ ಕಾನೂನನ್ನು ಕಾಪಾಡಿದ ಹಾಗೂ ಅಜ್ಜಿಗೆ ಸಹಾಯ ಮಾಡಿದ ಎಂದು ಮೆಚ್ಚುಗೆ ಸೂಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.