ADVERTISEMENT

ದ್ವೀಪ ದ್ವೀಪಗಳನು ದಾಟಿ...

ಪದ್ಮನಾಭ ಭಟ್ಟ‌
Published 24 ಡಿಸೆಂಬರ್ 2017, 9:00 IST
Last Updated 24 ಡಿಸೆಂಬರ್ 2017, 9:00 IST
ರಾಧಿಕಾ ಪಂಡಿತ್‌ ಮತ್ತು ಯಶ್‌
ರಾಧಿಕಾ ಪಂಡಿತ್‌ ಮತ್ತು ಯಶ್‌   

ಜನಪ್ರಿಯ ತಾರಾ ದಂಪತಿ ರಾಧಿಕಾ ಪಂಡಿತ್‌– ಯಶ್‌ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಆಯ್ಕೆ ಮಾಡಿಕೊಂಡಿದ್ದು ಇದೇ ಸ್ಥಳವನ್ನು. ನಡುಗಡ್ಡೆಗಳ ನಡುವೆ ಕಳೆದುಬಂದ ಏಳುದಿನಗಳ ಅನುಭವವನ್ನು ರಾಧಿಕಾ ಪಂಡಿತ್‌ ಇಲ್ಲಿ ಹಂಚಿಕೊಂಡಿದ್ದಾರೆ.

ನನಗೆ ಸಮುದ್ರ ಎಂದರೆ ತುಂಬ ಇಷ್ಟ. ನನ್ನ ಅಮ್ಮ ಗೋವಾದವರು. ಅಲ್ಲಿ ಸಮುದ್ರ ಇದೆ. ಅಪ್ಪ ಉತ್ತರ ಕನ್ನಡದ ಶಿರಾಲಿ ಎನ್ನುವ ಊರಿನವರು. ಅದೂ ಕರಾವಳಿ ಪ್ರದೇಶವೇ. ಈ ಕಾರಣಕ್ಕಾಗಿಯೇ ಸಮುದ್ರಪ್ರೀತಿ ಎನ್ನುವುದು ನನ್ನ ರಕ್ತದಲ್ಲಿಯೇ ಇದೆ ಅನಿಸುತ್ತದೆ. ನಮ್ಮ ಎಂಗೇಜ್‌ಮೆಂಟ್‌ ಕೂಡ ಸಮುದ್ರ ತೀರದಲ್ಲಿಯೇ ಆಗಬೇಕು ಅಂತ ಬಯಸಿದ್ದೆ. ಆದ್ದರಿಂದಲೇ ಮದುವೆ ವಾರ್ಷಿಕೋತ್ಸವದ ಆಚರಣೆಗೂ ಸಮುದ್ರದ ದ್ವೀಪವನ್ನೇ ಆಯ್ದುಕೊಂಡೆವು.

ನಮ್ಮ ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಿಕೊಳ್ಳಬೇಕು ಎಂದು ಯೋಚನೆ ಮಾಡುತ್ತಿದ್ದೆವು. ಆದರೆ ಎಲ್ಲಿ? ಮುಂದಿನ ವರ್ಷ ಫೆಬ್ರುವರಿಯಲ್ಲಿ ನಾನು ಅಮೆರಿಕ ಹೋಗುತ್ತಿದ್ದೇನೆ. ಯುರೋಪ್‌ಗೆ ಹೋಗೋಣ ಅಂದರೆ ಡಿಸೆಂಬರ್‌ನಲ್ಲಿ ಅಲ್ಲಿ ತುಂಬ ಚಳಿ ಇರುತ್ತದೆ. ಮಂಜು ಇರುತ್ತದೆ. ಅಲ್ಲಿ ಹೋದರೂ ಹೊರಗಡೆ ಅಡ್ಡಾಡುವುದು ತುಂಬ ಕಷ್ಟ. ನಾಲ್ಕೈದು ಗಂಟೆಗೆಲ್ಲ ಕತ್ತಲಾಗಿಬಿಡುತ್ತದೆ. ಅದೂ ಬೇಡ ಅಂದುಕೊಂಡೆವು. ಇನ್ನು ಏಷ್ಯಾದ ದೇಶಗಳಿಗೆಲ್ಲ ಸಿನಿಮಾ ಚಿತ್ರೀಕರಣಕ್ಕಾಗಿಯೇ ಹೋಗುತ್ತಿರುತ್ತೇವೆ.  ಇನ್ನೆಲ್ಲಿಗೆ ಹೋಗುವುದು ಎಂದು ಯೋಚಿಸಿದಾಗ ಸೇಶಲ್ಸ್‌ ದ್ವೀಪದ ಬಗ್ಗೆ ತಿಳಿದುಬಂತು. ಗೂಗಲ್‌ನಲ್ಲಿ ಹುಡುಕಿದಾಗ ಚಿತ್ರಗಳೂ ತುಂಬ ಚೆನ್ನಾಗಿದ್ದವು. ಭಿನ್ನ ಅನುಭವ ಸಿಗಬಹುದು ಎಂದುಕೊಂಡು ಅಲ್ಲಿಗೇ ಹೊರಡಲು ನಿರ್ಧರಿಸಿದೆವು.

ADVERTISEMENT

ಸೇಶಲ್ಸ್‌ (Seychelles) ಒಂದು ದ್ವೀಪ. ಯಾಕೆ ಈ ದ್ವೀಪವನ್ನೇ ಆಯ್ದುಕೊಂಡೆವು ಅನ್ನುವುದಕ್ಕೆ ಹಲವು ಕಾರಣಗಳಿವೆ. ಈ ದ್ವೀಪ ತುಂಬ ಚಿಕ್ಕದು. ಜಗತ್ತಿನ ಅತ್ಯಂತ ಸಣ್ಣ ದೇಶದ ಅತ್ಯಂತ ಸಣ್ಣ ರಾಜಧಾನಿ ವಿಕ್ಟೋರಿಯಾ ಇರುವುದು ಈ ದ್ವೀಪದಲ್ಲಿ.

ಸೇಶಲ್ಸ್‌ ದೇಶದ್ದು ತುಂಬ ವಿಶೇಷ ಏನೆಂದರೆ 115 ದ್ವೀಪಗಳು ಸೇರಿ ಈ ದೇಶವಾಗಿದೆ. ಆದರೆ ಬರೀ ಹದಿನೈದು ದ್ವೀಪಗಳಲ್ಲಿ ಮಾತ್ರ ಜನರು ವಾಸ ಮಾಡುತ್ತಿದ್ದಾರೆ. ಇನ್ನು ನೂರು ದ್ವೀಪಗಳಲ್ಲಿ ಯಾರೂ ಇರುವುದಿಲ್ಲ. ಜನರು ವಾಸವಾಗಿರುವ ಈ ಹದಿನೈದು ದ್ವೀಪಗಳಲ್ಲಿ ಮುಖ್ಯ ದ್ವೀಪ ‘ಮಾಹೆ’. ಈ ಮಾಹೆ ಎಲ್ಲಕ್ಕಿಂತ ದೊಡ್ಡ ದ್ವೀಪ. ಇಲ್ಲಿಯೇ ಹೆಚ್ಚು ಜನವಸತಿ ಇರುವುದು. ಕಂಪೆನಿಗಳು, ವಿಮಾನನಿಲ್ದಾಣ ಎಲ್ಲವೂ ಈ ದ್ವೀಪದಲ್ಲಿವೆ.

ಮಾಹೆಯಿಂದ ಯಾವ ದ್ವೀಪಕ್ಕೆ ಹೋಗುವುದಾದರೂ ಬೋಟ್‌ನಲ್ಲಿಯೇ ಹೋಗಬೇಕು. ಯಾವುದೇ ಪರ್ಯಾಯ ಸಂಚಾರ ವ್ಯವಸ್ಥೆಗಳಿಲ್ಲ. ಯಾಕೆಂದರೆ ಉಳಿದವೆಲ್ಲವೂ ತುಂಬ ಚಿಕ್ಕ ಚಿಕ್ಕ ದ್ವೀಪಗಳು.

ನನಗೆ ತುಂಬ ಇಷ್ಟವಾದ ದ್ವೀಪ ಸಿಲ್ವಿಟ್‌. ಅದರ ವಿಶೇಷತೆ ಏನೆಂದರೆ ಅಲ್ಲಿ ನಾವು ಉಳಿದುಕೊಂಡಿದ್ದ ಹೋಟೆಲ್‌ ಒಂದನ್ನು ಬಿಟ್ಟರೆ ವಸತಿಗೆ ಇನ್ನು ಏನೂ ಇಲ್ಲ! ಮನೆಗಳು, ಬೇರೆ ಹೋಟೆಲ್‌ ಏನೂ ಇಲ್ಲ. ಆ ಹೋಟೆಲೇ ನಿಮ್ಮ ಜೀವನ.

ಶೂಟಿಂಗ್‌, ಮೀಟಿಂಗ್‌, ಸಂದರ್ಶನ, ಸ್ಕ್ರಿಪ್ಟ್‌ ರೀಡಿಂಗ್‌ ಹೀಗೆ ತುಂಬ ಬ್ಯುಸಿ ಕೆಲಸಗಳಲ್ಲಿಯೇ ನಮ್ಮ ಇಡೀ ದಿನ ಕಳೆದು ಹೋಗುತ್ತದೆ. ಅದರಲ್ಲಿ ಮುಳುಗಿ ಹೋಗಿರುವಾಗ ಮನಸ್ಸು ಒಂದು ಬ್ರೇಕ್‌ ಬಯಸುತ್ತಿರುತ್ತದೆ. ಇಂಥ ಅನಾಮಿಕ ಜಾಗಗಳಿಗೆ ಹೋದರೆ ಮೊಬೈಲ್‌ ನೆಟ್‌ವರ್ಕ್‌ ಸಿಗಲ್ಲ, ಯಾರೂ ನಮ್ಮನ್ನು ಗುರುತು ಹಿಡಿಯುವುದಿಲ್ಲ. ಈ ಕಾರಣಕ್ಕಾಗಿಯೇ ನಾವು ನಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಈ ಜಾಗವನ್ನು ಆಯ್ದುಕೊಂಡಿದ್ದು.

ನನಗೆ ತುಂಬ ಇಷ್ಟವಾದ, ಸದಾಕಾಲ ನೆನಪಿಸಿಕೊಳ್ಳುವ ರಜಾಪ್ರವಾಸ ಇದು. ಇಂಥ ಅನುಭವ ನನ್ನ ಬದುಕಿನಲ್ಲಿ ಕಂಡಿರಲಿಲ್ಲ. ಸಿಲ್ವಿಟ್‌ನಲ್ಲಿ ನಾವು ಹೈಕಿಂಗ್‌ ಹೋದೆವು. ಬೀಚಿನಲ್ಲಿ ಸ್ವಿಮ್ಮಿಂಗ್‌ ಹೋದೆವು.

ಅದು ತುಂಬ ಚಿಕ್ಕ ದ್ವೀಪ. ಅಲ್ಲಿ ಓಡಾಡಲು ಎಲ್ಲರೂ ಸೈಕಲ್ ಬಳಸುತ್ತಾರೆ. ನಾನೊಂದು ಯಶ್‌ ಒಂದು ಸೈಕಲ್‌ ತೆಗೆದುಕೊಂಡು ಎಲ್ಲ ಕಡೆ ಸುತ್ತಾಡಿದೆವು. ಆಮೇಲೆ ಒಂದು ನೀರಿನ ಬಾಟಲ್‌, ಒಂದು ಟವೆಲ್‌, ಸ್ಪೋರ್ಟ್ಸ್‌ ಶೂ, ಕ್ಯಾಪ್‌ ಹಾಕಿ ಕೊಂಡು ಹೈಕಿಂಗ್‌ ಹೋದೆವು. ಇದು ಒಂದು ರೀತಿಯಲ್ಲಿ ಟ್ರೆಕ್ಕಿಂಗ್‌ ಥರವೇ. ಮತ್ತೆ ಸಮುದ್ರದಲ್ಲಿ ಸ್ನೋರ್ಕಿಂಗ್‌ ಮಾಡಿದ್ವಿ. ಸ್ನೋರ್ಕಿಂಗ್‌ ಎಂದರೆ ವಿಶೇಷ ಕನ್ನಡಕ ಧರಿಸಿ ಮೀನುಗಳನ್ನು ನೋಡುವುದು. ಅಲ್ಲಿ ತುಂಬ ಕಡಿಮೆ ಜನಸಂಖ್ಯೆ ಇರುವುದರಿಂದ ಮೀನುಗಳು ದಡದ ಸಮೀಪವೇ ಬರುತ್ತವೆ. ನೀವು ಮೊಣಕಾಲ ತನಕ ನೀರು ಇರುವ ಜಾಗಕ್ಕೆ ಹೋಗಿ ಬಗ್ಗಿ ನೋಡಿದರೂ ಬೇರೆ ಬೇರೆ ಥರದ ಮೀನುಗಳು ಕಾಣುತ್ತವೆ.

ನಮ್ಮ ಸಮುದ್ರಗಳೂ ತುಂಬ ಸುಂದರವಾಗಿರುತ್ತವೆ. ಆದರೆ ಪ್ಲಾಸ್ಟಿಕ್‌ ಬಾಟಲಿಗಳು, ಗ್ಲಾಸ್‌ಗಳು, ಪೇಪರ್‌ಗಳು ಚೆಲ್ಲಾಪಿಲ್ಲಿಯಾಗಿರುತ್ತವೆ. ಆದರೆ ಅಲ್ಲಿ ಎಷ್ಟು ಶುದ್ಧವಾಗಿದೆಯೆಂದರೆ ನೀರಿನಲ್ಲಿ ತುಂಬ ಆಳದವರೆಗೂ ನೋಡಬಹುದು. ಅದರ ಬಣ್ಣವೂ ಬೇರೆಯೇ. ದಡದ ಮರುಳೂ ತುಂಬ ನಯವಾಗಿದೆ.

ತೆಂಗಿನ ಮರಗಳು, ಮಾವಿನ ಮರಗಳು, ಪಪ್ಪಾಯ ಹಣ್ಣಿನ ಮರಗಳು ಹೆಚ್ಚಾಗಿವೆ. ಅಲ್ಲಿನ ಜನರು ಆಫ್ರಿಕನ್ನರು. ಅವರು ಬಳಸುವ ಭಾಷೆ ಕ್ರಿಯೋಲ್‌. ವಿಶೇಷ ಏನೆಂದರೆ ಅಲ್ಲಿನ ಜನರೂ ‘ಚಟ್ನಿ’ ಎಂಬ ಖಾದ್ಯ ಮಾಡುತ್ತಾರೆ! ಅದು ನಮ್ಮ ಇಡ್ಲಿಗೆ ಹಾಕಿಕೊಳ್ಳುವ ಚಟ್ನಿ ಥರ ಇರುವುದಿಲ್ಲ. ಕುಂಬಳಕಾಯಿಯ ಗೊಜ್ಜಿನ ಥರ ಮಾಡ್ತಾರೆ. ಅದಕ್ಕೆ ಚಟ್ನಿ ಅಂತ ಹೆಸರು.

ಅಲ್ಲಿನ ಮಸಾಲೆ ಪದಾರ್ಥಗಳೂ ನಮ್ಮ ಮಸಾಲೆ ಪದಾರ್ಥಗಳೆ. ನಾವೊಂದಿನ ಮಾಹೆ ದ್ವೀಪದ ಮಾರುಕಟ್ಟೆಯನ್ನು ನೋಡೋಣ ಅಂತ ಹೋದೆವು. ನನಗೆ ನಮ್ಮ ಮಾರುಕಟ್ಟೆಗಿಂತ ತುಂಬ ವ್ಯತ್ಯಾಸವೇನೂ ಕಾಣಿಸಲಿಲ್ಲ. ತರಕಾರಿಗಳು, ಮೆಣಸಿನಪುಡಿ, ಅರಿಶಿನ ಪುಡಿ ಎಲ್ಲವೂ ನಮ್ಮ ಮಾರುಕಟ್ಟೆಯಲ್ಲಿದ್ದಂತೆಯೇ ಇದ್ದವು. ಅಲ್ಲಿ ವೆನಿಲಾ ತೋಟಗಳಿವೆ.

ಅಲ್ಲಿನ ಜನರೂ ತುಂಬ ಸ್ನೇಹಪರರು. ಬಹುತೇಕ ಎಲ್ಲರೂ ಸ್ಪಷ್ಟವಾಗಿ ಬರದಿದ್ದರೂ ಅರೆಬರೆ ಇಂಗ್ಲಿಷ್‌ ಭಾಷೆಯಲ್ಲಿ ವ್ಯವಹರಿಸಬಲ್ಲರು. ಪ್ರವಾಸೋದ್ಯಮವೇ ಆ ದೇಶದ ಪ್ರಮುಖ ಆದಾಯಮೂಲ. ನೈಸರ್ಗಿಕ ಸಂಪತ್ತೂ ಅಷ್ಟಾಗಿ ಇಲ್ಲ. ಒಂದು ಬಗೆಯ ಮೀನನ್ನು ಮಾತ್ರ ಅವರು ರಪ್ತು ಮಾಡುತ್ತಾರೆ. ಉಳಿದ ಎಲ್ಲ ವಸ್ತುಗಳನ್ನೂ ಅವರು ಬೇರೆಡೆಗಳಿಂದ ಆಮದು ಮಾಡಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಅಲ್ಲಿ ಎಲ್ಲವೂ ಸ್ವಲ್ಪ ಜಾಸ್ತಿಯೇ ದುಬಾರಿಯಾಗಿವೆ. ಅವರ ಕರೆನ್ಸಿ ಹೆಸರೂ ಸೇಶಲ್ಸ್‌ ರುಪೀಸ್‌ ಎಂದು. ನಮ್ಮ ರೂಪಾಯಿಗಿಂತ ಕೊಂಚ ಜಾಸ್ತಿ ಮೌಲ್ಯ ಇದೆ ಅದಕ್ಕೆ.

ಆಮೆಗಳ ಸಂಗಡ ಎರಡು ದಿನ

ನಾವು ಹೋಗಿದ್ದ ಇನ್ನೊಂದು ದ್ವೀಪ ಪ್ರಾಲಿನ್‌. ಆ ದ್ವೀಪದಲ್ಲಿ ಎರಡು ದಿನ ಉಳಿದುಕೊಂಡಿದ್ದೆವು. ಅಲ್ಲಿನ ವಿಶೇಷತೆ ದೊಡ್ಡ ದೊಡ್ಡ ಆಮೆಗಳು. ಆ ಆಮೆಗಳು ಪ್ರಾಲಿನ್‌ನಲ್ಲಿ ಮಾತ್ರ ಇವೆಯಂತೆ. ನಾವು ನೋಡಿದ ಆಮೆಗಳೆಲ್ಲ ತೊಂಬತ್ತು–ನೂರು ವರ್ಷದ ಆಮೆಗಳು. ಅಲ್ಲಿಗೆ ಹೋದ ತಕ್ಷಣ ಅಲ್ಲಿನ ಸಿಬ್ಬಂದಿ ಸೊಪ್ಪು ಕೊಡುತ್ತಾರೆ. ನಿಮ್ಮ ಕೈಯಲ್ಲಿ ಸೊಪ್ಪು ನೋಡಿದ ತಕ್ಷಣ ಅದು ನಿಮ್ಮ ಕಡೆಗೇ ಬರುತ್ತದೆ. ಆಗ ನನಗಂತೂ ಸ್ವಲ್ಪ ಭಯವೂ ಆಯಿತು. ನಮಗೆ ಚಿಕ್ಕ ಚಿಕ್ಕ ಆಮೆಗಳನ್ನು ನೋಡಿ ಅಭ್ಯಾಸ. ಆದರೆ ಆ ಆಮೆಗಳ ಗಾತ್ರ ಎಷ್ಟು ದೊಡ್ಡದಾಗಿದೆಯೆಂದರೆ ಅವುಗಳು ಹತ್ತಿರಕ್ಕೆ ಬರುತ್ತಿದ್ದಂತೆಯೇ ಭಯ ಶುರುವಾಗುತ್ತದೆ. ಅವುಳನ್ನು ಮುಕ್ತವಾಗಿ ಬಿಟ್ಟುಬಿಟ್ಟಿದ್ದಾರೆ. ಅವುಗಳನ್ನು ನೋಡಿಕೊಳ್ಳಲು ಒಬ್ಬ ಸಿಬ್ಬಂದಿ ಇದ್ದಾರೆ. ಆ ದ್ವೀಪದಲ್ಲಿ ಯಾವ ಅಪಾಯಕಾರಿ ಪ್ರಾಣಿಗಳೂ ಇಲ್ಲ. ಯಾಕೆಂದರೆ ನಾಲ್ಕೂ ಕಡೆ ಸಮುದ್ರ ಇದ್ದಾಗ ಅವುಗಳಿಗೆ ಆಹಾರ ಸಿಗುವುದಾದರೂ ಹೇಗೆ? ಆದರೆ ಇಲಿಗಳು ಮತ್ತು ದೊಡ್ಡ ದೊಡ್ಡ ಏಡಿಗಳಿವೆ. ಅವು ಆಮೆಯ ಚಿಕ್ಕ ಮರಿಗಳನ್ನು ತಿಂದುಬಿಡುತ್ತವೆ ಅಂತ ನೋಡಿಕೊಳ್ಳಲು ಒಬ್ಬರು ಇರುತ್ತಾರೆ.

ಅಲ್ಲಿರುವುದೆಲ್ಲವೂ ದ್ವೀಪಗಳೇ ಆಗಿದ್ದರಿಂದ ಸೂರ್ಯಾಸ್ತ– ಸೂರ್ಯೋದಯ ಎರಡೂ ನೋಡುವುದಕ್ಕೆ ಆಗುತ್ತದೆ. ತಾಜಾ ಗಾಳಿ, ಶುದ್ಧ ನೀರು, ಆಹ್ಲಾದಕರ ವಾತಾವರಣ ಎಲ್ಲವೂ ಆರೋಗ್ಯಪೂರ್ಣವೇ. ಅಲ್ಲಿ ಯಾರೂ ನಮ್ಮನ್ನು ಗುರುತು ಹಿಡಿಯುವವರಿರಲಿಲ್ಲ. ನಮ್ಮ ಪಾಡಿಗೆ ನಾವು ಆರಾಮವಾಗಿ ಅಜ್ಞಾತವಾಗಿ ಉಳಿದುಕೊಂಡು ಬಂದೆವು.

ನಾವು ಸೆಲೆಬ್ರಿಟಿಗಳು ಅಂತಲ್ಲ, ಪ್ರತಿಯೊಬ್ಬ ಮನುಷ್ಯನಿಗೂ ತಾನು ಮಾಡುವ ನಿತ್ಯದ ಕೆಲಸ ಒಂದು ಹಂತದಲ್ಲಿ ಏಕತಾನ ಅನಿಸತೊಡಗುತ್ತದೆ. ಆ ಎಲ್ಲ ಜಂಜಡಗಳನ್ನು ಮರೆತು ಒಂದು ಬ್ರೇಕ್‌ ತೆಗೆದುಕೊಳ್ಳುವುದು ತೀರಾ ಅಗತ್ಯ. ತುಂಬ ದೂರದ ಸ್ಥಳಗಳಿಗೇ ಹೋಗಬೇಕು ಅಂತಿಲ್ಲ. ನಮಗಿಷ್ಟವಾದ ಯಾವುದೋ ಸ್ಥಳಕ್ಕೆ ಹೋಗಿ ಬರುವುದು ಮನಸ್ಸಿಗೆ ಮತ್ತೆ ತಾಜಾತನ ತುಂಬುತ್ತದೆ. ಹೊಸ ಉತ್ಸಾಹವನ್ನು ಕೊಡುತ್ತದೆ.

ಸೇಶಲ್ಸ್‌ ಪ್ರವಾಸದಿಂದ ನನಗಾದದ್ದೂ ಅದೇ. ನನಗೀಗ ಅವವೇ ಕೆಲಸಗಳು ತುಂಬ ಹೊಸದಾಗಿ ಕಾಣುತ್ತಿವೆ. ಖುಷಿ ನೀಡುತ್ತಿವೆ. ನಾನು  ಇನ್ನಷ್ಟು ಹೊಸಬಳಾಗಿದ್ದೇನೆ ಅನಿಸುತ್ತಿದೆ. ಅದೇ ಉತ್ಸಾಹದಲ್ಲಿ ನನ್ನ ಹೊಸ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದೇನೆ.

***

ನೀಲ ನಕ್ಷೆ ಹೀಗಿತ್ತು

ನಾವು ಯೋಜಿಸಿಕೊಂಡಿದ್ದು ಒಂದು ವಾರದ ಪ್ರವಾಸ. ಮೊದಲು ಮಾಹೆಗೆ ಹೋಗಿ ಇಳಿದುಕೊಂಡೆವು. ಅಲ್ಲಿಂದ ಬೋಟ್‌ನಲ್ಲಿ ಪ್ರಾಲಿನ್‌ ಎಂಬ ಒಂದು ದ್ವೀಪಕ್ಕೆ ಹೋದೆವು. ಅಲ್ಲಿ ಎರಡು ದಿನ ಇದ್ದು ಲದೀಕ್‌ ಎಂಬ ಇನ್ನೊಂದು ದ್ವೀಪಕ್ಕೆ ಹೋಗಿ ಬಂದೆವು. ಅಲ್ಲಿ ಉಳಿದುಕೊಂಡಿಲ್ಲ. ಮತ್ತೆ ಪ್ರಾಲಿನ್‌ನಿಂದ ಸಿಲ್ವಿಟ್‌ಗೆ ಹೋಗಿ ಅಲ್ಲಿ ಒಂದೆರಡು ದಿನ ಇದ್ದು, ಮತ್ತೆ ಮಾಹೆಗೆ ಬಂದು ಅಲ್ಲಿ ಒಂದು ದಿನ ಉಳಿದುಕೊಂಡೆವು. ಅಲ್ಲಿಂದ ಮತ್ತೆ ಬೆಂಗಳೂರಿಗೆ ಬಂದೆವು.

***

ಕಳ್ಳರೆ ಇಲ್ಲದ ಊರಿನಲಿ...

ಇನ್ನೊಂದು ವಿಶೇಷ ಏನೆಂದರೆ ಆ ದೇಶದಲ್ಲಿ ಅಪರಾಧ ಪ್ರಮಾಣ ಶೂನ್ಯ! ನಾವೊಂದು ದ್ವೀಪದಲ್ಲಿ ಸುತ್ತಾಡುತ್ತಿದ್ದೆವು. ಅಲ್ಲೊಂದು ಪೊಲೀಸ್‌ ಠಾಣೆ ಇದೆ. ಅದರಲ್ಲಿ ಇರುವುದು ಏಳೇ ಜನ ಪೊಲೀಸರು! ಅವರ ಬಳಿ ಗನ್‌ ಕೂಡ ಇಲ್ವಂತೆ. ಅಲ್ಲಿ ಜನರಿಗೆ ಮಾತ್ರವಲ್ಲ, ಪೊಲೀಸರಿಗೂ ಗನ್‌ ಇರಿಸಿಕೊಳ್ಳಲು ಅನುಮತಿ ಇಲ್ಲವಂತೆ!

ಸಿಲ್ವಿಟ್‌ ದ್ವೀಪದಲ್ಲಿ ನಾವು ತಿರುಗಾಡಲಿಕ್ಕಾಗಿ ಸೈಕಲ್‌ ತೆಗೆದುಕೊಂಡೆವು. ಅದಕ್ಕೆ ಲಾಕ್‌ ಇರಲಿಲ್ಲ. ನಾನು ಅವರನ್ನು ‘ಲಾಕ್‌ ಇಲ್ವಲ್ಲ, ಯಾರಾದ್ರೂ ಕದ್ದುಕೊಂಡು ಹೋದರೆ ಏನು ಮಾಡುವುದು?’ ಎಂದು ಅನುಮಾನದಲ್ಲಿಯೇ ಕೇಳಿದೆ. ‘ಕಳ್ಳತನ’ ಎಂಬ ಮಾತನ್ನು ಕೇಳಿ ಅವರು ಎಷ್ಟು ಶಾಕ್‌ ಆದ್ರು ಅಂದ್ರೆ ವಿಚಿತ್ರವಾಗಿ ನನ್ನನ್ನು ನೋಡಿ ‘ಕದ್ದುಕೊಂಡು ಹೋಗುವುದಾ!!? ಇಲ್ಲಿ ಯಾರೂ ಕಳ್ಳತನ ಮಾಡುವುದಿಲ್ಲ’ ಎಂದು ನಕ್ಕುಬಿಟ್ಟರು.

ನಾವು ಎಲ್ಲಿ ಬೇಕಾದರೂ ಸೈಕಲ್‌ ಅನ್ನು ನಿಲ್ಲಿಸಿ ಸುತ್ತಾಡಿಕೊಂಡು, ಬೀಚಿನಲ್ಲಿ ಆಟವಾಡಿಕೊಂಡು ಬಂದರೂ ಸೈಕಲ್‌ ಇದ್ದಲ್ಲೇ ಇರುತ್ತದೆ. ಒಂದು ಸಲ ನಾನು ಟೆಸ್ಟ್‌ ಮಾಡೋಣ ಎಂದುಕೊಂಡು ನನ್ನ ಬ್ಯಾಗ್‌ನಲ್ಲಿ ನೀರಿನ ಬಾಟಲ್‌, ಯಶ್‌ನ ಟೋಪಿ, ಟೀ ಷರ್ಟ್‌ ಎಲ್ಲವನ್ನು ತುಂಬಿ ಸೈಕಲ್ ಮೇಲೆಯೇ ಇಟ್ಟು ಬೀಚಿಗೆ ಹೋದೆವು. ಎರಡು ತಾಸು ಬಿಟ್ಟು ಅಲ್ಲಿ ಬಂದು ನೋಡಿದರೆ ಆ ಬ್ಯಾಗ್‌ ನಾವು ಇಟ್ಟ ಹಾಗೆಯೇ ಇತ್ತು. ನನಗಂತೂ ಅದು ತುಂಬ ಆಶ್ಚರ್ಯದ ವಿಷಯ. ಆದರೆ ಕಳ್ಳತನ ಮಾಡುವುದಿಲ್ಲವೇ ಎಂದು ನಾವು ಕೇಳಿದ್ದು ಕೂಡ ಅವರಿಗೆ ಅಷ್ಟೇ ಆಶ್ಚರ್ಯದ ವಿಷಯ!

***

ಮರಳಿನ ಮೇಲೆ ಮರೆಯದ ಗಳಿಗೆ...

ನಾವು ಬೇರೆ ಎಲ್ಲಾದರೂ ಹೋದಾಗ ಬರುವ ಮೊದಲ ಸಮಸ್ಯೆ ಆಹಾರದ್ದು. ನಮಗೆ ಹೊಂದಿಕೆ ಆಗದ ಆಹಾರ ಪದ್ಧತಿ ಇರುವ ಜಾಗಕ್ಕೆ ಹೋದರೆ ಅದೇ ಸಮಸ್ಯೆಯಾಗಿ ಪ್ರವಾಸದ ಆನಂದವೆಲ್ಲ ಹಾಳಾಗುತ್ತದೆ. ಆದರೆ ನಮಗೆ ಆ ರೀತಿ ಸಮಸ್ಯೆ ಎದುರಾಗಲೇ ಇಲ್ಲ. ಅಲ್ಲಿನ ಆಹಾರ ಪದ್ಧತಿಗೂ ನಮ್ಮ ಆಹಾರ ಪದ್ಧತಿಗೂ ಸಾಕಷ್ಟು ಸಾಮ್ಯತೆಗಳಿವೆ.

ವಿವಾಹ ವಾರ್ಷಿಕೋತ್ಸವದ ದಿನ ನಾವು ಸಿಲ್ವಿಟ್‌ ದ್ವೀಪದ ಏಕೈಕ ಹೋಟೆಲ್‌ನಲ್ಲಿದ್ದೆವು. ಆ ದಿನ ರಾತ್ರಿ ಅಲ್ಲಿಯೇ ಊಟ ಮಾಡಬೇಕು. ಬೇರೆ ಉಪಾಯವೇ ಇಲ್ಲ. ಊಟ ಹೇಗಿರುತ್ತದೆಯೋ ಅಂತ ಆತಂಕವೂ ಇತ್ತು. ಆ ಹೋಟೆಲ್‌ನಲ್ಲಿ ಪ್ರತಿ ವಾರ ಆಹಾರದ ಥೀಮ್‌ ಬದಲಾವಣೆ ಆಗುತ್ತಿರುತ್ತದಂತೆ. ಅರೆಬಿಕ್‌, ಚೈನೀಸ್‌ ಹೀಗೆ ಬೇರೆ ಬೇರೆ ಥೀಮ್‌ ಆಹಾರ ಮಾಡುತ್ತಾರೆ. ನಮ್ಮ ಅದೃಷ್ಟಕ್ಕೆ ಅವತ್ತು ರಾತ್ರಿ ಭಾರತೀಯ ಥೀಮ್‌ ಇತ್ತು! ನಮಗೆ ಭಾರತೀಯ ಆಹಾರವೇ ಸಿಕ್ತು. ಅಲ್ಲದೇ ನಮ್ಮ ವಿವಾಹ ವಾರ್ಷಿಕೋತ್ಸವ ಅಂತ ಗೊತ್ತಾದ ಮೇಲೆ ತುಂಬ ಸುಂದರವಾಗಿ ಊಟ ಸಿದ್ಧ ಮಾಡಿದ್ದರು. ಬೀಚ್‌ನ ಮರಳ ಮೇಲೆಯೇ ಕುರ್ಚಿ ಟೇಬಲ್‌ ಹಾಕಿ, ಮೋಂಬತ್ತಿ ಹಚ್ಚಿ ತಯಾರಿ ಮಾಡಿದ್ದರು. ಅದೊಂದು ಅಪೂರ್ವ ನೆನಪಿನ ಗಳಿಗೆಯಾಗಿ ಉಳಿದುಬಿಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.