ADVERTISEMENT

ನೀರಿನ ರಹಸ್ಯ

ಮಕ್ಕಳ ಕತೆ

ಪ್ರಕಾಶ್ ಆರ್.ಕಮ್ಮಾರ್
Published 14 ಮಾರ್ಚ್ 2015, 19:30 IST
Last Updated 14 ಮಾರ್ಚ್ 2015, 19:30 IST
ನೀರಿನ ರಹಸ್ಯ
ನೀರಿನ ರಹಸ್ಯ   

ಎಂಟನೇ ತರಗತಿಯಲ್ಲಿ ರಸಾಯನಶಾಸ್ತ್ರ ಪಾಠ ಮಾಡುತ್ತಿದ್ದೆ. ಆವತ್ತು ಅಂದಿನ ಪಾಠ ಬೇಗನೆ ಮುಗಿದಿತ್ತು. ಏನು  ಮಾಡುವುದು?

‘ಹಾಂ! ಇವತ್ತು ಅವಧಿಗಿಂತ ಮುಂಚೆನೇ ಪಾಠ ಮುಗಿದಿದೆ ಅಲ್ವೆ?’
‘ಹೌದು ಸಾರ್‌, ಇನ್ನೂ ಹದಿನೈದು ನಿಮಿಷ ಇದೆ ಸಾರ್‌’
‘ಕೊನೇ ಅವಧಿ ಅಲ್ವೆ, ಹಾಗಾದರೆ ತರಗತಿ ಬಿಟ್ಟು ಬಿಡ್ತೇನೆ. ನೀವೆಲ್ಲಾ ಮನೆಗೆ ಬೇಗ ಹೋಗಬಹುದು’.
‘ಬೇಡಾ ಸಾರ್‌, ಬೇಡಾ ಸಾರ್‌, ಬೆಲ್‌ ಹೊಡೆದ ಮೇಲೆ ಬಿಡ್ರಿ ಸಾರ್‌. ಅಲ್ಲಿವರೆಗೆ ಏನಾದರೂ ಒಂದು ಕಥೆ ಹೇಳ್ರಿ ಸಾರ್, ಒಂದು ಕಥೆ ಹೇಳ್ರಿ ಸಾರ್‌’ ಎಂದು ನಿಧಾನವಾಗಿ ಕೂಗಲಾರಭಿಸಿದರು.
‘ಆಯ್ತು, ಆಯ್ತು’ ಎಂದು ಒಂದು ಕ್ಷಣ ಯೋಚಿಸಿ ‘ಒಂದು ಚಿಕ್ಕದಾದ ಕಥೆ ಹೇಳ್ತೀನಿ’ ಎಂದಾಗ ಅವರ ಕಣ್ಣುಗಳರಳಿದವು. ಎಲ್ಲರೂ ಗಪ್‌ ಚುಪ್‌.

‘ನೋಡಿ ವಿದ್ಯಾರ್ಥಿಗಳೇ ಹೇಳಿ ಕೇಳಿ ಇದು ರಸಾಯನಶಾಸ್ತ್ರದ  ಅವಧಿ. ನೀರಿನ ಕಥೆ ಹೇಳ್ತೀನಿ’
ಒಂದು ಸಾರಿ ಏನಾಯ್ತು ಅಂದ್ರೆ, ಆಮ್ಲಜನಕ (ಆಕ್ಸಿಜನ್‌) ಮತ್ತು ಜಲಜನಕ (ಹೈಡ್ರೋಜನ್‌)ಗಳ ನಡುವೆ ಜಗಳ ಶುರುವಾಯಿತು.
‘ನಾನು ಆಮ್ಲಜನಕ ಅಂತ ಎಲ್ಲರೂ ಉಸಿರಾಡುವುದು ನನ್ನಿಂದಲೇ. ನಾನು ಈ ಸಮಸ್ತ ಗಾಳಿಯಲ್ಲಿ ಸೇರಿಕೊಂಡಿದ್ದೇನೆ. ಎಲ್ಲಂದರಲ್ಲಿ ನಾನು ಸುಳಿದಾಡುತ್ತಿದ್ದೇನೆ. ಒಂದು ವೇಳೆ ನಾನು ಇಲ್ಲಾಂದ್ರೆ ಇಡೀ ಜಗತ್ತೇ ಸ್ತಬ್ಧವಾಗುತ್ತದೆ. ಅದಕ್ಕೆ ನನ್ನನ್ನು ಪ್ರಾಣವಾಯು ಅಂತಾ ಕರೀತಾರೆ. ನನಗೆ ಸಾಯಿಸುವುದೂ ಗೊತ್ತು. ಬದುಕಿಸುವುದೂ ಗೊತ್ತು. ನೀನೇನು ಮಹಾ’ ಎಂದು ಜಲಜನಕದ ಮೂತಿ ತಿವಿತಿವಿದು ಹಿಯಾಳಿಸುತ್ತಿತ್ತು.

ಇದನ್ನೆಲ್ಲಾ ಕೇಳಿದ ಜನಜನಕಕ್ಕೆ ಬಾಯಿ ಒಣಗಿದಂತಾಯಿತು. ಬಹಳ ಬೇಜಾರು ಪಟ್ಟುಕೊಂಡಿತು. ಇದಕ್ಕೆ ಏನು ಹೇಳುವುದೆಂದು ಪೇಚಾಡುತ್ತಿತ್ತು. ತಕ್ಷಣ ಅದರ ತಲೆಗೊಂದು ಆಲೋಚನೆ ಹೊಳೆಯಿತು. ಅಂತು ಇಂತೂ ಧೈರ್ಯ ಮಾಡಿ ತನ್ನ ಗಂಟಲು ಸರಿಮಾಡಿಕೊಂಡು

‘ಏಯ್‌? ಆಮ್ಲಜನಕ! ನಿನಗಷ್ಟೊಂದು ದುರಂಹಕಾರ ಬರಬಾರದು. ನೀನೇನು ಘನಂದಾರಿ ಕೆಲಸ ಮಾಡ್ತಿದಿನಿ ಎಂದು ಅಂದು ಕೊಚ್ಚಿಕೊಳ್ತೀಯ. ನೀನೇನು ಕಡಿಮೆ ಉರಿಯುತ್ತಿರುವ ವಸ್ತುಗಳು ಚೆನ್ನಾಗಿ ಹತ್ಕೊಂಡು ಉರಿದು ಬೇಗನೆ ಸುಟ್ಟು ಹೋಗಲಿ ಅಂತಾ ಸಹಾಯ ಮಾಡ್ತೀಯ. ಜೀವ ಉಳಿಸ್ತೀನಿ ಅಂದುಕೊಂಡು ಕೊನೆಗೆ ಹೊಗೆ ಹಾಕಿಸಿಕೊಳ್ಳುವಂತೆ ಮಾಡ್ತೀಯ. ಅಷ್ಟೋಂದು ಹೊಟ್ಟೆ ಕಿಚ್ಚು ತುಂಬಿಕೊಂಡಿದ್ದೀಯ ನಿನ್ನ ಹೊಟ್ಟೆಯಲ್ಲಿ’.

ಅದನ್ನು ಕೇಳಿ ತಡಕೊಳ್ಳಲಿಕ್ಕೆ ಆಗದೇ ಮೈಯೆಲ್ಲಾ ಪರಚಿಕೊಳ್ಳುವಂತಾದರೂ ಮದ್ಯೆ ಬಾಯಿ ಹಾಕಿ ಆಮ್ಲಜನಕ ಏನನ್ನೋ ಹೇಳಲಿಕ್ಕೆ ಹೊರಟಿತು. ತಕ್ಷಣ ‘ಮುಚ್ಚಯ್ಯ ಬಾಯ್ನ, ನಿಂದೇನು ಹೇಳಬೇಡ ಮೊನ್ನೆ ಗ್ಯಾಸ್‌ ಸಿಲಿಂಡರ್‌ ಸಿಡೀತಲ್ಲ ಆವಾಗ ಏನು ಮಾಡಿದೆ? ಅಡುಗೆ ಮನೆಯಲ್ಲಿದ್ದ ಗೃಹಿಣಿಗೆ ಬೆಂಕಿ ತಾಗಿ ಆಕೆ ಉಟ್ಟ ಸೀರೆಗೆ ಉರಿ ಹತ್ಕೊಂಡಿತ್ತು.

ಮೈಯೆಲ್ಲಾ ಸುಡುತ್ತಿತ್ತು. ಆಕೆ ಸಾಯಲಿ ಎಂದು ಆ ಉರಿಗೆ ಸಹಾಯ ಮಾಡಿದೆಯಲ್ಲ, ಏನು ಹೇಳಬೇಕು ನಿನಗೆ’ ಅಂತಿದ್ದ ಹಾಗೆ ಆಕೆ ಚೀರುವ ದನಿ ಕೇಳಿದ ಪಕ್ಕದ ಮನೆಯವರೆಲ್ಲಾ ಬಂದು ನೋಡ್ತಾರೆ. ‘ಇನ್ನೇನು ಆಕೆ ಸುಟ್ಟು ಬೆಂದು ಹೋಗ್ತಾಳೆ ಕಂಬಳಿ ತನ್ನಿ. ಬೆಡ್‌ಶೀಟ್‌ ತನ್ನಿ’ ಎಂದು ಕೂಗಿದರು. ತಕ್ಷಣ ಯಾರೋ ಪುಣ್ಯಾತ್‌ಗಿತ್ತಿ ಕಂಬಳಿ ತಂದುಕೊಟ್ಟಳು. ಆ ಗೃಹಿಣಿಗೆ ಕಂಬಳಿ ಸುತ್ತಿದರು. ಗೊತ್ತಾಯಿತೇ ಯಾಕೆ ಅಂತ? ಕೇಳಿಲ್ಲಿ, ನೀನು ಉರಿಯಲು ಸಹಾಯ ಮಾಡ್ತಿಯಲ್ಲ, ಉರಿಗೆ ನೀನಂದ್ರೆ  ಮಹದಾನಂದ. ನೀನು ದಹನಾನುಕೂಲಿ. ಅದಕ್ಕೆ ಆ ಉರಿಗೆ ನೀನು ಸಿಗಬಾರದೆಂದು ಕಂಬಳಿ ಸುತ್ತಿದ್ದು ತಿಳಿಯಿತೆ. ಆಗ ಉರಿ ನಂದಿತು. ಆಕೆಯನ್ನು  ಆಸ್ಪತ್ರೆಗೆ ಸೇರ್‍್ಸಿದ್ರು. ಆಯಮ್ಮ ಬದುಕುಳಿದ್ಲು ಗೊತ್ತಾ! ಎಂದು ಆಮ್ಲಜನಕವನ್ನು ಛೇಡಿಸಿತು ಜಲಜನಕ.

‘ನನಗೆ ನೋಡು, ಹೇಗಿದ್ದೀನಿ. ನನ್ನ ಹೆಸರೇ ಜಲಜನಕ. ಜಲ ಅಂದ್ರೆ ನೀರು. ಜನಕ ಅಂದ್ರೆ ಹುಟ್ಟಿಸುವುದು ಎಂದು ಅದಕ್ಕೆ ನನ್ನನ್ನು ಜಲಜನಕ ಅಂತ ಕರೆಯುತ್ತಾರೆ. ನಾನು ನಿನ್ನ ಹಾಗೆ ಉರಿಯಲು ಸಹಾಯ ಮಾಡುವುದಿಲ್ಲ. ನಾನು ದಹ್ಯವಸ್ತು. ಅದಕ್ಕೆ ನಾನೇ ಹತ್ಕೊಂಡು ಉರಿಯುತ್ತೇನೆ. ಆಗ ನನ್ನಿಂದ ಯಥೇಚ್ಛವಾಗಿ ಶಕ್ತಿ ಬಿಡುಗಡೆ ಆಗುತ್ತದೆ. ನಿನ್ನಿಂದ ಇದೆಲ್ಲಾ ಸಾಧ್ಯಾನಾ? ನೀನು ಬರಿ ಸಾಯಿಸ್ತೀಯ. ನಾನು ಹಾಗಲ್ಲ. ಗೊತ್ತಾಯ್ತ. ಕಡಿಮೆ ಖರ್ಚಿನಲ್ಲಿ ನನ್ನಿಂದ ಶಕ್ತಿ ಉತ್ಪತ್ತಿ ಮಾಡುವುದನ್ನು  ಕಂಡು ಹಿಡಿದ್ರೆ ಆಗ ನೀನು ಲೆಕ್ಕಕ್ಕೆ ಇಲ್ಲ. ಮೂಲೆಗುಂಪಾಗ್ತೀಯ ಅಷ್ಟೇ’ ಎಂದು ಜಲಜನಕವು ಆಮ್ಲಜನಕವನ್ನು ಮತ್ತೊಮ್ಮೆ  ಮೂದಲಿಸತೊಡಗಿತು.
ಹೀಗೆ ಎರಡೂ ತಮ್ಮ ತಮ್ಮ ಸಾಮರ್ಥ್ಯ ಹೇಳಿಕೊಂಡು ನಾನು ಹೆಚ್ಚು, ನಾನು ಹೆಚ್ಚು ಎಂದು ಜಗಳ ಮಾಡುತ್ತಿದ್ದವು. ಜಗಳಕ್ಕೆ ಕೊನೆಯೇ ಇರಲಿಲ್ಲ.

ಅದೇ ಹೊತ್ತಿಗೆ ಎಲ್ಲಿತ್ತೋ ಏನೋ ದೇವಕಣ ಬಂದಿತು. ಇವು ಜಗಳವಾಡುವುದನ್ನು ಕಂಡು ‘ಅಯ್ಯೊ ಹುಚ್ಚಪ್ಪಗಳಿರಾ ಯಾಕೆ ಹೀಗೆ ಜಗಳವಾಡುತ್ತಾ ಇದ್ದೀರಿ ಏನು ನಿಮ್ಮ ಗಲಾಟೆ’ ಎಂದು ಕೇಳಿತು.

ಎರಡೂ ಒಟ್ಟೊಟ್ಟಿಗೆ ಒಬ್ಬರ ಮೇಲೆ ಒಬ್ಬರು ಚಾಡಿ ಹೇಳತೊಡಗಿದರು. ‘ನೋಡಿ ನೀವು ಹೀಗೆ ಚಾಡಿ ಹೇಳುವುದು ಒಳ್ಳೆಯದಲ್ಲ. ನಿಮ್ಮ ನಿಮ್ಮ ಕೆಲಸದ ಬಗ್ಗೆ ಹೇಳಿರಿ’ ಎಂದಾಗ ತಮ್ಮ ತಮ್ಮ ಕಾರ್ಯದ ಬಗ್ಗೆ ಹೇಳಿಕೊಂಡವು.

‘ಅಯ್ಯೋ ಮಂಕೆಗಳೇ ಇನ್ನೂ ಇದೆ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ಗೊತ್ತಿಲ್ಲ. ಅದನ್ನು ಮೊದಲು ತಿಳಿದುಕೊಳ್ಳಿರಿ,
ಭೂಮಿ ಮೇಲೆ ಇರುವ ಗಿಡ ಮರ ಬಳ್ಳಿಗಳೆಲ್ಲಾ ಉಸಿರಾಡುತ್ತವೆ. ಹಾಗೆನೇ ಪ್ರತಿಯೊಬ್ಬ ಮನುಷ್ಯನಿಗೆ ಅಲ್ಲದೇ ಪಶು ಪಕ್ಷಿ ಪ್ರಾಣಿಗಳಿಗೆ ಅಂದರೆ ಈ ಜಗತ್ತಿನ ಜೀವ ರಾಶಿಗಳಿಗೆಲ್ಲಾ ಆಮ್ಲಜನಕ ಬೇಕೇ ಬೇಕು. ಅದಿಲ್ಲದಿದ್ದಾಗ ಅವುಗಳ ಪ್ರಾಣಕ್ಕೆ ಕುತ್ತು ಬರುತ್ತದೆ. ಹಾಗೇನೆ, ಇಂಗಾಲವು ಜಲಜನಕದೊಂದಿಗೆ ಸೇರಿಕೊಂಡು ಅನೇಕ ಬಗೆಯ ಹೊಸ ಹೊಸ ಸಂಯುಕ್ತಗಳನ್ನುಂಟು ಮಾಡುತ್ತದೆ. ಇವುಗಳಿಂದ ದೈನಂದಿನ ಜೀವನಕ್ಕೆ ಬೇಕಾದ ಸಾವಿರಾರು ವಸ್ತುಗಳನ್ನು ತಯಾರಿಸಬಹುದು. ಇದರಿಂದ ಜೀವ ಸಂಕುಲಕ್ಕೆ ಒಳ್ಳೆಯದಾಗುತ್ತದೆ. ಇಷ್ಟೇ ಅಲ್ಲ ಮೂಢರೇ, ನೀವಿಬ್ರೂ ಬೇರೆ ಬೇರೆಯಾಗಿದ್ರೂ ಸಹ ಜಗತ್ತನ್ನೇ  ಅಲ್ಲಾಡಿಸುತ್ತೀರಿ. ನೀವಿಬ್ರೂ ಒಂದಾದರಂತೂ ಮುಗಿದೇ ಹೋಯಿತು. ಆಗಲೂ ಕೂಡ ಇಡೀ ಜಗತ್ತನ್ನೇ ಆಳಬಹುದು. ಜಗತ್ತಿಗೆ ನೀವು ಬೇಕಾದವರಾಗುತ್ತೀರಿ ಅಷ್ಟೊಂದು ಸಾಮರ್ಥ್ಯ, ನಿಮ್ಮಲ್ಲಿದೆ ನೀವು ಬಲಾಢ್ಯರಾಗುತ್ತೀರಿ’ ಎಂದಾಗ
‘ಅದು ಹೇಗೆ ಸಾಧ್ಯ? ಅದನ್ನೆ ಹೇಳಿ ಹೇಳಿ’ ಎಂದವು.

‘ನೀನು ಜಲಜನಕ, ನೀನು ಮನಸ್ಸು ಮಾಡಿದ್ರೆ ಇಡೀ ಜಗತ್ತನ್ನೇ ನಾಶ ಮಾಡಬಹುದು. ಅಷ್ಟೊಂದು ಅದ್ಭುತ ಶಕ್ತಿ ನಿನ್ನಲ್ಲಿದೆ. ನಿನ್ನ ಶಕ್ತಿ ಅಪಾರ. ಆ ಶಕ್ತಿಯನ್ನು ಶಾಂತವಾಗಿ  ಬಳಸಿಕೊ ನಿನ್ನ ಕೀರ್ತಿ ಜಗತ್ತಿನಾದ್ಯಂತ ಹಬ್ಬುತ್ತದೆ’ ಎಂದಾಗ ಜಲಜನಕ ಸಂತೋಷದಿಂದ ಕುಣಿದಾಡಿತು.

‘ಇನ್ನು ಆಮ್ಲಜನಕ. ನಿನ್ನ ಶಕ್ತಿಯೂ ಕೂಡ ಅದ್ಭುತ. ಇಡೀ ಜೀವ ಸಂಕುಲಕ್ಕೇ ನೀನು ಇಲ್ಲದಿದ್ದರೆ ಕ್ಷಣ ಮಾತ್ರದಲ್ಲಿ ಜೀವ ರಹಿತವಾಗುತ್ತದೆ. ನಿನ್ನ ಶಕ್ತಿಯ ಹೆಗ್ಗಳಿಕೆಯನ್ನು ವರ್ಣಿಸಲಸಾಧ್ಯ’ ಎಂದಾಗ ದೇವಕಣದ ಮಾತಿಗೆ ಆಮ್ಲಜನಕ ತಲೆದೂಗಿತು.
‘ನಿಮ್ಮಿಬ್ಬರ ಸಮ್ಮಿಲನದಿಂದ ನೀರು ಎಂಬ ಹೊಸ ಸಂಯುಕ್ತ ಉತ್ಪತ್ತಿಯಾಗುತ್ತದೆ. ಈ ನೀರಿಗೆ ನಿಮ್ಮಿಬ್ಬರ ಗುಣ ಬರದೆ ಬೇರೆ ಗುಣ ಬಂದಿರುತ್ತದೆ. ಬೆಂಕಿ ಆರಿಸಲು ಉಪಯೋಗಿಸುತ್ತಾರೆ. ನೀರಿಗೆ ತಣ್ಣಗೆ ಮಾಡುವ ಶಕ್ತಿ ಇದೆ. ಅದಕ್ಕಾಗಿ ನೀವಿಬ್ಬರೂ ಶ್ರೇಷ್ಠರು. ಅಗಾಧ ಸಾಮರ್ಥ್ಯವುಳ್ಳವರು. ಯಾರೂ ಕಡಿಮೆಯೇನಲ್ಲ’.

‘ಈ ವಸ್ತುವಿಲ್ಲದಿದ್ದರೆ ಜೀವಜಗತ್ತೇ ಬದುಕಿರಲಾರದು. ಈ ನೀರಿಗಾಗಿ ಎಲ್ಲರೂ ಹಪಹಪಿಸುತ್ತಾರೆ. ಹೊಡೆದಾಡುತ್ತಾರೆ. ಅದಕ್ಕಾಗಿ ಒಬ್ಬರಿಂದ ಏನೂ ಮಾಡಲು ಸಾಧ್ಯವಿಲ್ಲ. ನೀವಿಬ್ಬರೂ ಒಟ್ಟಿಗೆ ಸೇರಿದರೆ ಏನನ್ನಾದರೂ ಸಾಧಿಸಬಹುದು. ಒಗ್ಗಟ್ಟಿನಲ್ಲಿ ಬಲವಿದೆ ಎಂದು ತೋರಿಸಬಹುದು’ ಎಂದಾಗ ತಮ್ಮ ತಮ್ಮ ಸಾಮರ್ಥ್ಯದ ಅರಿವು ಉಂಟಾಗಿ ಅವುಗಳ ಕಣ್ಣುಗಳು ಪ್ರಜ್ವಲಿಸತೊಡಗಿದವು. ನಂತರ ಶಾಂತವಾದವು.

‘ನೋಡಿ ನೀವಿಬ್ಬರೂ ಚಿರಾಯುಗಳು. ನಿಮ್ಮಬ್ಬರಿಂದ ಉಂಟಾದ ಹೊಸ ವಸ್ತು ಕೂಡಾ ಚಿರಾಯು’ ಎಂದಾಕ್ಷಣ ಜಗಳವಾಡುತ್ತಿದ್ದ ಅವೆರಡೂ ಒಂದಾದವು.

‘ಹೇಗಿದೆ ಮಕ್ಕಳೇ ಈ ಕಥೆ ಮಜವಾಗಿದೆಯಲ್ಲ’ ಅಂದಾಗ ‘ಹೌದು ಸಾರ್‌, ಸಮಯ ಸರಿದಿದ್ದೆ ಗೊತ್ತಾಗಲಿಲ್ಲ’ ಎಂದು ಸಂತೋಷದಿಂದ ಹೇಳುವಷ್ಟರಲ್ಲಿಯೇ ಗಂಟೆ ಬಾರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT