ADVERTISEMENT

ನೇಂದ್ರ ಹಣ್ಣಿನ ರುಚಿ; ಪಳಂಬೂರಿ ಸವಿ

ವಿಕ್ರಂ ಕಾಂತಿಕೆರೆ
Published 17 ಮಾರ್ಚ್ 2018, 19:30 IST
Last Updated 17 ಮಾರ್ಚ್ 2018, 19:30 IST
ಸವಿಯಲು ಸಿದ್ಧವಾಗಿರುವ ಪಳಂಬೂರಿ
ಸವಿಯಲು ಸಿದ್ಧವಾಗಿರುವ ಪಳಂಬೂರಿ   

ಒಂಬತ್ತು ವರ್ಷ ಕಲಿತ ಕಾಸರಗೋಡು ಸರ್ಕಾರಿ ಕಾಲೇಜು ನೆನಪಾದಾಗಲೆಲ್ಲ ದೊಡ್ಡ ತೂಗುದೀಪ, ಉದ್ದನೆಯ ಹಾದಿ, ಮೆಟ್ಟಿಲುಗಳ ನಡುವಿನ ನೆರಳು–ಬೆಳಕಿನಾಟ, ವಿಶಾಲ ಮೈದಾನ, ‘ಜೋಡಿ ಹಕ್ಕಿ’ಗಳ ಕಲರವ ಇತ್ಯಾದಿ ಮನಪಟಲದಲ್ಲಿ ಮೂಡುತ್ತವೆ.

ಇವುಗಳ ಜೊತೆ ನನ್ನ ಮುಂದೆ ಬಂದು ನಿಲ್ಲುತ್ತದೆ, ಕುಂಞಿರಾಮಣ್ಣನ (ಕುಂಞಿರಾಮೇಟನ್‌) ಕ್ಯಾಂಟೀನ್‌.

ಕುಂಞಿರಾಮಣ್ಣ ನಮ್ಮ ನಡುವೆ ‘ವರ್ಲ್ಡ್‌ ಫೇಮಸ್‌’ ಆದದ್ದು ಬಿಸಿ ಬಿಸಿ ದೋಸೆ, ಇಡ್ಲಿ, ಅಪ್ಪಂ, ಪುಟ್ಟ್‌ ಮುಂತಾದವುಗಳಿಗಾಗಿ ಮಾತ್ರ ಅಲ್ಲ; ಗಾಜಿನ ಲೋಟದಲ್ಲಿ ತಂದಿಡುತ್ತಿದ್ದ ಚಹಾ ಮತ್ತು ತಟ್ಟೆಯಲ್ಲಿ ಘಮಘಮಿಸುವ ಪಳಂಬೂರಿಗೂ ಅವರು ಹೆಸರು ಮಾಡಿದ್ದರು.

ADVERTISEMENT

ಕಾಸರಗೋಡು ಕಾಲೇಜಿಗೆ ಹೋದವರು ಯಾರೂ ಕುಂಞಿರಾಮಣ್ಣನ ಕ್ಯಾಂಟೀನ್‌ನ ಪಳಂಬೂರಿಯನ್ನು ಸವಿಯದೆ ಇರಲು ಸಾಧ್ಯವಿಲ್ಲ. ಕಾಲೇಜು ಕ್ಯಾಂಟೀನ್ ಮತ್ತು ಪಳಂಬೂರಿಯನ್ನು ಮತ್ತೆ ನೆನಪಿಸಿದ್ದು ಇತ್ತೀಚೆಗೆ ಬೆಂಗಳೂರಿನ ಸ್ಟಾರ್ ಹೋಟೆಲ್‌ವೊಂದರಲ್ಲಿ ನಡೆದ ಕಾರ್ಯಕ್ರಮ. ಅಲ್ಲಿ ಸಂಜೆಯ ಚಹಾದೊಂದಿಗೆ ಇದ್ದೆ ‘ಸುಧಾರಿತ ಪಳಂಬೂರಿ’ ಕುಂಞಿರಾಮಣ್ಣನ ಕ್ಯಾಂಟೀನ್‌ನ ಪಳಂಬೂರಿಯನ್ನೇ ಹೋಲುತ್ತಿತ್ತು.

ಬನಾನ ಬಜ್ಜಿ ಎಂಬ ಹೆಸರು ಬರೆದಿಟ್ಟಿದ್ದ, ಜೆಲೇಬಿಯಂತೆ ರಸ ಒಸರುತ್ತಿದ್ದ ಈ ತಿಂಡಿಯನ್ನು ಬಾಯಿಗಿಟ್ಟರೆ ಅದೇ ಪಳಂಬೂರಿಯ ರುಚಿ; ಸುತ್ತಲೂ ಅದೇ ಸುವಾಸನೆ.

ಪಳಂಬೂರಿಯನ್ನು ಬಾಳೆ ಹಣ್ಣಿನ ಬಜ್ಜಿ ಎಂದು ಹೇಳಬಹುದು. ಮಲಯಾಳಂನಲ್ಲಿ ಪಳಂ ಎಂದರೆ ಹಣ್ಣು; ಅರ್ಥಾತ್ ಬಾಳೆಹಣ್ಣು. ಅದನ್ನು ಕಡ್ಲೆಹಿಟ್ಟು ಮತ್ತು ಅಕ್ಕಿ ಹಿಟ್ಟಿನ ಪಾಕ ಮೆತ್ತಿ ಎಣ್ಣೆಯಲ್ಲಿ ಕಾಯಿಸುವುದರಿಂದ ಪಳಂ ಪೂರಿ (ಪಳಂಬೂರಿ) ಎಂಬ ಹೆಸರು ಬಂದಿದೆ.

ಪಳಂಬೂರಿಗೆ ಮುಖ್ಯವಾಗಿ ಬೇಕಾದದ್ದು ನೇಂದ್ರ ಬಾಳೆಹಣ್ಣು. ಮಂಗಳೂರು, ಮೈಸೂರು ಮತ್ತು ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಧಾರಾಳ ಸಿಗುವ ಈ ಹಣ್ಣು ಉತ್ತರ ಕರ್ನಾಟಕ ಭಾಗದಲ್ಲಿ ಅತಿ ವಿರಳ; ಸಿಗುವುದೇ ಇಲ್ಲ ಎಂದರೂ ತಪ್ಪಾಗಲಾರದು. ಹೆಚ್ಚು ಹಣ್ಣಾಗಿರದ, ಕಾಯಿಯೂ ಅಲ್ಲದ ನೇಂದ್ರ ಬಾಳೆಹಣ್ಣಿನ ಸಿಪ್ಪೆ ಮೊದಲು ಸುಲಿಯಬೇಕು. ನಂತರ ತೆಳ್ಳಗೆ ಕತ್ತರಿಸಬೇಕು. ಅದಕ್ಕೆ ಹಿಟ್ಟಿನ ಪಾಕವನ್ನು ಲೇಪಿಸಿ ಕಾಯುವ ಎಣ್ಣೆಯಲ್ಲಿ ಬಿಡಬೇಕು.ಕಾದ ನಂತರ ರುಚಿಯಾದ ಪಳಂಬೂರಿ ಸಿದ್ಧವಾಗುತ್ತದೆ.

ನೇಂದ್ರ ಬಾಳೆಹಣ್ಣು ಸಿಹಿಯಾಗಿರುತ್ತದೆ. ಆದ್ದರಿಂದ ಇದನ್ನು ಬಳಸಿ ತಯಾರಿಸಿದ ತಿಂಡಿಯೂ ಸಿಹಿಯಾಗಿರುತ್ತದೆ. ಇದು ಇತರ ಬಾಳೆಹಣ್ಣಿಗಿಂತ ಎರಡು ಅಥವಾ ಮೂರು ಪಟ್ಟು ಉದ್ದವಿರುತ್ತದೆ. ಆದ್ದರಿಂದ ಹಣ್ಣಿನ ಪೂರ್ತಿ ಭಾಗ ಹಿಡಿಸಲು ದೊಡ್ಡ ಬಾಣಲೆ ಬೇಕು. ಸಣ್ಣ ಪಾತ್ರೆಯಲ್ಲೇ ತಯಾರಿಸಬೇಕಾದರೆ ಹಣ್ಣನ್ನು ಅರ್ಧ ಕತ್ತರಿಸಿ ನಂತರ ಕಾಯಿಸಲು ಸಿದ್ಧಗೊಳಿಸಬಹುದು.

ಉತ್ತರದ ವಿಧಾನ ಬಹು ಸುಲಭ

ಪಳಂಬೂರಿ ಎಂಬ ತಿನಿಸು ಉತ್ತರ ಕೇರಳದಲ್ಲಿ, ವಿಶೇಷವಾಗಿ ಕಾಸರಗೋಡು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರಸಿದ್ಧಿ ಪಡೆದಿದೆ. ಹೀಗಾಗಿ ಈ ಭಾಗದಲ್ಲಿ ಇದನ್ನು ತಯಾರಿಸುವ ವಿಧಾನವೂ ಸುಲಭ. ಏತ್ತಕ್ಕ ಅಪ್ಪಂ (ಏತ್ತಕ್ಕ=ನೇಂದ್ರ ಬಾಳೆ ಹಣ್ಣು; ಅಪ್ಪಂ= ತಿಂಡಿ) ಎಂದು ಕೂಡ ಕರೆಯಲಾಗುವ ಈ ಖಾದ್ಯಕ್ಕೆ ದಕ್ಷಿಣ ಭಾಗದಲ್ಲಿ ಮೈದ, ಅಕ್ಕಿ ಹಿಟ್ಟು, ಸಕ್ಕರೆ, ಅರಿಸಿನ ಪುಡಿ ಇತ್ಯಾದಿಗಳನ್ನು ಕೂಡ ಬಳಸುತ್ತಾರೆ. ಕೆಲವು ಸಂದರ್ಭಗಳಲ್ಲಿ ರವ ಕೂಡ ಬಳಕೆಯಾಗುತ್ತದೆ. ಇದೆಲ್ಲ ಸೇರಿದರೆ ಇದರ ರುಚಿಯೂ ಭಿನ್ನ.

ಉತ್ತರ ಕೇರಳಕ್ಕೂ ಈಗ ದಕ್ಷಿಣದ ಆಹಾರ ಸಂಸ್ಕೃತಿ ಕಾಲಿಟ್ಟಿರುವ ಕಾರಣ ಆಹಾರ ಪದ್ಧತಿಯಲ್ಲೂ ಅಚ್ಛ ಮಲಬಾರ್ ಶೈಲಿ ದೂರವಾಗುತ್ತಿದೆ. ಪಳಂಬೂರಿಗೂ ಇದು ಅನ್ವಯವಾಗುತ್ತದೆ. ವಿಧಾನ, ಬಳಸುವ ಪದಾರ್ಥ ಯಾವುದೇ ಇರಲಿ, ಬಾಳೆಹಣ್ಣುಯುಕ್ತ ಈ ಸಿಹಿಯಾದ, ಆರೋಗ್ಯಕರ ಖಾದ್ಯವನ್ನು ನೆನೆದುಕೊಂಡರೇ ಬಾಯಲ್ಲಿ ನೀರೂರುತ್ತದೆ. ಸವಿದವರಿಗಷ್ಟೇ ಗೊತ್ತು ಅದರ ರುಚಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.