ADVERTISEMENT

'ಬೆಂಗಳೂರು ಟು ಲಂಡನ್‌' ಕಾರ್‌ದಾರಿ!

ರೋಹಿಣಿ ಮುಂಡಾಜೆ
Published 8 ಜುಲೈ 2017, 19:30 IST
Last Updated 8 ಜುಲೈ 2017, 19:30 IST
ಚಿತ್ರಗಳು: ನಿಶಿತ್‌ ಜೋಯಿಸ್‌, ಪ್ರಿಯಾಂಕಾ
ಚಿತ್ರಗಳು: ನಿಶಿತ್‌ ಜೋಯಿಸ್‌, ಪ್ರಿಯಾಂಕಾ   

ಕಾರಿನಲ್ಲಿ ಮ್ಯಾರಥಾನ್‌ ಪ್ರಯಾಣ ಕೈಗೊಳ್ಳುವುದೆಂದರೆ ನಮಗಿಬ್ಬರಿಗೂ ಹುಚ್ಚುಪ್ರೀತಿ. ಅಪರೂಪದ ಅಥವಾ ಯಾರೂ ಮಾಡದ ಸವಾಲನ್ನು ತಗೊಂಡು ಗುರಿ ಸಾಧಿಸುವುದು ನಮಗೆ ಬಹಳ ಖುಷಿ. ವೈಯಕ್ತಿಕವಾಗಿ, ನನ್ನ ಬಗ್ಗೆ ಹೇಳುವುದಾದರೆ, ಆಟೊಮೊಬೈಲ್ ಉದ್ಯಮಿ, ರೂಪದರ್ಶಿಯೂ ಹೌದು. ಪ್ರಿಯಾಂಕಾ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಮತ್ತು ಕನ್ನಡ ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕಿ. ಯೂ ಟ್ಯೂಬ್‌ನಲ್ಲಿ ಅವಳ ಕವರ್ಟ್‌ಗಳು ಸಾಕಷ್ಟಿವೆ. ಇಬ್ಬರಿಗೂ ಮ್ಯಾರಥಾನ್‌ ಡ್ರೈವ್‌ ಅಂದರೆ ಜೀವ.

ನಮ್ಮ ದೇಶದೊಳಗೆ ಹಲವಾರು ದೀರ್ಘ ಮತ್ತು ಕ್ಲಿಷ್ಟಕರ ಮಾರ್ಗಗಳಲ್ಲಿ ಹಲವಾರು ಕಾರು ರ್‍ಯಾಲಿ ಮಾಡಿದ್ದೆವು. ಕಳೆದ ಬಾರಿ ಮಂಗಳೂರು– ಕನ್ಯಾಕುಮಾರಿ– ರಾಮೇಶ್ವರಂ– ಬೆಂಗಳೂರು (1200 ಕಿ.ಮೀ ದೂರ) ಮಾರ್ಗವನ್ನು 22 ಗಂಟೆಯಲ್ಲಿ ಕ್ರಮಿಸಿದ್ದೆವು. 2015ರ ನವೆಂಬರ್‌ನಲ್ಲಿ ಯೂರೋಪ್‌ನ ಐಸ್‌ಲ್ಯಾಂಡ್‌ಗೆ ಹೋಗಿ 1,300 ಕಿ.ಮೀ ಮಂಜಿನ ಮೇಲೆ ಕಾರು ಚಾಲನೆ ಮಾಡಿದ್ದೆವು. ಇದರಿಂದಾಗಿ, ‘ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌’ನಲ್ಲಿ ‘ಯೂರೋಪ್‌ನ ಎರಡನೇ ಅತಿ ದೊಡ್ಡ ಹಿಮಪ್ರದೇಶದಲ್ಲಿ ಕಾರು ಚಾಲನೆ ಮಾಡಿದ ಮೊದಲ ಭಾರತೀಯ’ ಎಂಬ ದಾಖಲೆ ನಿರ್ಮಿಸುವಂತಾಯಿತು.

ಲಂಡನ್‌ಗೆ ಕಾರಿನಲ್ಲಿ ಹೋಗಿಬರುವ ಯೋಚನೆ ಎರಡು ವರ್ಷಗಳಿಂದ ಇತ್ತು. ಕರ್ನಾಟಕ ನೋಂದಣಿಯಿರುವ ಕಾರಿನಲ್ಲೇ ಪ್ರಯಾಣಿಸುವ ಈ ಮಹತ್ವಾಕಾಂಕ್ಷಿ ಯೋಜನೆಗೆ ನಾವಿಟ್ಟ ಹೆಸರು ‘ಅರಮನೆಯಿಂದ ಅರಮನೆಗೆ’.

ADVERTISEMENT

ಏಪ್ರಿಲ್‌ ಒಂಬತ್ತರಿಂದ ಜೂನ್‌ 2
ಬೆಂಗಳೂರು ಅರಮನೆಯಿಂದ ನಾವು ಏಪ್ರಿಲ್‌ ಒಂಬತ್ತರಂದು ಹೊರಟೆವು. ನಮ್ಮ ಆತ್ಮೀಯರೆಲ್ಲ ಒಂದು ಸಮಾರಂಭವನ್ನೇ ಮಾಡಿ ನಮ್ಮನ್ನು ಬೀಳ್ಕೊಟ್ಟರು.
ನಾವು ಭಾರತ ಬಿಟ್ಟಿದ್ದು ಇಂಫಾಲದಿಂದ. ನಂತರ ಮ್ಯಾನ್ಮಾರ್‌– ಥಾಯ್ಲೆಂಡ್‌– ಲಾವೋಸ್‌– ಚೀನಾ– ಕಿರ್ಗಿಸ್ತಾನ–ಉಜ್ಬೇಕಿಸ್ತಾನ– ಕಜಕಿಸ್ತಾನ– ರಷ್ಯಾ– ಲ್ಯಾಟಿಯಾ– ಲಿಥುವಾನಿಯ– ಪೋಲೆಂಡ್‌– ಜೆಕ್‌ ಗಣರಾಜ್ಯ – ಜರ್ಮನಿ – ನ್ಯೂಜಿಲೆಂಡ್‌ – ಬೆಲ್ಜಿಯಂ – ಫ್ರಾನ್ಸ್‌ – ಲಂಡನ್‌ – ಬೆಂಗಳೂರು.

ಫ್ರಾನ್ಸ್‌ವರೆಗೂ ರಸ್ತೆ ಸಂಪರ್ಕವಿದೆ. ಅಲ್ಲಿವರೆಗೂ ಒಳ್ಳೆಯ ರಸ್ತೆಗಳಿವೆ. ಅಷ್ಟು ಹೊತ್ತಿಗೆ ನಾವು ರಸ್ತೆ, ಕೆಸರುಗುಂಡಿ, ಮಣ್ಣಿನ ರಸ್ತೆ, ಮಂಜಿನ ಹಾದಿ, ರಸ್ತೆಗಳೇ ಇಲ್ಲದ ಕಡೆಯೂ ಡ್ರೈವ್‌ ಮಾಡಿ ಎಲ್ಲಾ ಥರದ ಅನುಭವಗಳಾದವು. ಕೊನೆಗೆ ಲಂಡನ್‌ಗೆ ಹೋಗಬೇಕಾದರೆ ಫ್ರಾನ್ಸ್‌ನಿಂದ ಲಂಡನ್‌ಗೆ ಇಂಗ್ಲಿಷ್‌ ಚಾನೆಲ್‌ (ಬ್ರಿಟಿಷ್‌ ಕಾಲುವೆ) ಸಿಗುತ್ತದೆ. ಅದನ್ನು ದಾಟಬೇಕಾದರೆ ಕಾರನ್ನು ಫೆರಿಯಲ್ಲಿ ಅಂದರೆ ಹಡಗಿನಲ್ಲಿ ಹಾಕಬೇಕಾಯಿತು. ಹಾಕಲೇಬೇಕು ಅನ್ನಿ.

ಭಾರತ ಬಿಟ್ಟಿದ್ದು ಇಂಫಾಲದಿಂದ ಅಂದ್ನಲ್ಲಾ? ಅಲ್ಲಿ ಉಪಮುಖ್ಯಮಂತ್ರಿ ಯುಮ್ನಮ್‌ ಜಾಯ್‌ಕುಮಾರ್‌ ಸಿಂಗ್‌ ಹಸಿರು ನಿಶಾನೆ ತೋರಿ ನಮ್ಮನ್ನು ಬೀಳ್ಕೊಟ್ಟಿದ್ದರು. ಅಂದ ಹಾಗೆ ಅಲ್ಲಿ ಇನ್ನೂ 11 ಕಾರುಗಳು ನಮ್ಮ ಜತೆಗೂಡಿದ್ದವು. ಮಾರ್ಗಮಧ್ಯೆ ಅಲ್ಲಲ್ಲಿ ಸಿಗುತ್ತಿದ್ದರು. ಕೆಲವೊಮ್ಮೆ ಪ್ರತ್ಯೇಕವಾಗುತ್ತಿದ್ದರು. ಅವರೂ ಮ್ಯಾರಥಾನ್‌ ರ‍್ಯಾಲಿಯರ್ಸ್‌.

ಸಾಮಾನ್ಯವಾಗಿ ಹೀಗೆ ಮ್ಯಾರಥಾನ್‌ ಪ್ರಯಾಣ ಕೈಗೊಳ್ಳುವಾಗ ಏನಾದರೊಂದು ಉದ್ದೇಶ ಅಂತ ಇರುತ್ತದೆ. ನಾನು ಮತ್ತು ಪ್ರಿಯಾಂಕಾ ಹವ್ಯಾಸಿ ರ್‍ಯಾಲಿಯರ್ಸ್‌ ಆಗಿರುವ ಕಾರಣ ಅಂತಹ ಉದ್ದೇಶವೇನೂ ಇರಲಿಲ್ಲ. ಆದರೂ ‘ಸತ್ಯಮೇವ ಜಯತೆ’ಯ ಭಾವಾರ್ಥವಾಗಿ ‘ಟ್ರೂತ್‌ ಅಲೋನ್‌’ ಎಂಬ ಘೋಷವಾಕ್ಯವನ್ನು ರಾಷ್ಟ್ರಧ್ವಜದೊಂದಿಗೆ ಹಾಕಿಕೊಂಡೆವು.

ಚೀನಾದಲ್ಲಿ 6,000 ಕಿ.ಮೀ ದೂರ (ಒಂದೇ ದೇಶದಲ್ಲಿ ಅತಿ ಹೆಚ್ಚು ದೂರ ಕ್ರಮಿಸಿದ್ದೂ ಇಲ್ಲೇ) ಡ್ರೈವ್‌ ಮಾಡಿದೆವು. ಅಲ್ಲಿ ಊಟೋಪಚಾರಕ್ಕೆ ಭಾರಿ ಕಷ್ಟವಾದೀತು ಎಂದು ನಾವಂದುಕೊಂಡಿದ್ದೆವು. ಆದರೆ 18 ದೇಶಗಳ ಪೈಕಿ ಅತಿ ಸುಲಭವಾಗಿ ಊಟೋಪಹಾರ ಸಿಕ್ಕಿದ್ದು ಚೀನಾದಲ್ಲೇ! ಇನ್ನೊಂದು ವಿಷಯ... ಚೀನಾಕ್ಕೆ ಹೋದವರು ಸಾಮಾನ್ಯವಾಗಿ ಚೀನಾದ ಮಹಾ ಗೋಡೆಯನ್ನು ಬೀಜಿಂಗ್‌ ಕಡೆಯಿಂದ ನೋಡುತ್ತಾರೆ. ಆದರೆ ನಾವು ಕಾರಿನಲ್ಲಿ ಹೋಗಿದ್ದರಿಂದ ಪಶ್ಚಿಮದ ತುದಿಯಿಂದ ನೋಡಲು ಸಾಧ್ಯವಾಯಿತು.

ಯಾವುದೇ ಒಂದು ಪ್ರದೇಶವನ್ನು ಆಕಾಶಮಾರ್ಗದಿಂದ ನೋಡುವುದಕ್ಕೂ ಭೂಮಿ ಮೇಲಿಂದಲೇ ನೋಡುವುದಕ್ಕೂ ಅಜಗಜಾಂತರವಿದೆ. ಎದುರಾಗುವ ಪ್ರತಿ ನೋಟವೂ ಭಿನ್ನವಾಗಿರುತ್ತದೆ. ಹಸಿರು ಬಣ್ಣ ಇದೆಯಲ್ಲ ಅದೂ ಭಿನ್ನವಾಗಿ ತೋರುತ್ತದೆ. ಇಂತಹ ಅಪರೂಪದ ಅನುಭವವನ್ನು ನೆಲಮಾರ್ಗದ ಸಂಚಾರದಲ್ಲಷ್ಟೇ ಗಮನಿಸಲು ಸಾಧ್ಯ.
ಜರ್ಮನಿಯ ಹೆಸರಾಂತ ಹೆದ್ದಾರಿ ವ್ಯವಸ್ಥೆ ‘ಆಟೊಬಾನ್‌’ನಲ್ಲಿ ಡ್ರೈವ್‌ ಮಾಡಿದ್ದು ಜೀವನದಲ್ಲೇ ಮರೆಯಲಾಗದ ಅನುಭವ. ಅಲ್ಲಿ ವೇಗದ ಮಿತಿ ಇಲ್ಲ. ನಾನು ಅದನ್ನು ’ಡ್ರೈವರ್ಸ್‌ ಪ್ಯಾರಡೈಸ್‌’ ಅಂತ ಕರೀತೀನಿ. ಅಲ್ಲಿ ಡ್ರೈವ್‌ ಮಾಡೋದು ನನ್ನ ಜೀವಿತದ ಕನಸೂ ಆಗಿತ್ತು.

ಕುತೂಹಲದ ಅಂಶವೆಂದರೆ– ಒಂದು ದಿನದಲ್ಲಿ 900 ಕಿ.ಮೀ. ಕಾರು ಚಾಲನೆ ಮಾಡಿದ್ದು ಇಡೀ ಪ್ರವಾಸದ ಹೈಲೈಟ್‌. ಅದು ಜೆಕ್‌ ಗಣರಾಜ್ಯದಿಂದ ಬೆಲ್ಹಿಯಂಗೆ. ಜೆಕ್‌ನಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಜರ್ಮನಿಯಲ್ಲಿ, ರಾತ್ರಿಯ ಊಟ ಬೆಲ್ಜಿಯಂನಲ್ಲಿ! ಅಂದರೆ ಒಂದೇ ದಿನದಲ್ಲಿ ನಾಲ್ಕು ದೇಶಗಳನ್ನು ಸುತ್ತಿದೆವು.
ಹಾಂ... ಒಂದು ವಿಷಯ ಹೇಳಲೇಬೇಕು... ಕಮ್ಮಿ ಅಂದ್ರೂ 10 ದೇಶಗಳಲ್ಲಿ ನಮಗೆ ಭಾರತೀಯರು, ವಿಶೇಷವಾಗಿ ಕನ್ನಡಿಗರು ನಮ್ಮನ್ನು ತಂಡ ತಂಡವಾಗಿ ಭೇಟಿಯಾಗ್ತಿದ್ರು. ಅದಕ್ಕೆ ಕಾರಣ ರಾಷ್ಟ್ರಧ್ವಜ ಮತ್ತು ಕೆಎ ಎಂಬ ನೋಂದಣಿ ಪ್ಲೇಟ್‌.

ಲಿಥುವಾನಿಯದಲ್ಲಿ ನಡೆದ ಘಟನೆಯಂತೂ ಅವಿಸ್ಮರಣೀಯ. ಕೆಲವು ಕೆಲವು ಕಾರುಗಳು ನಮ್ಮ ಕಾರನ್ನು ಬಹಳ ದೂರವರೆಗೂ ಬೆನ್ನಟ್ಟಿ ಲಿಥುವಾನಿಯಾದಲ್ಲಿ ನಮ್ಮನ್ನು ಅಡ್ಡಹಾಕಿಬಿಟ್ಟವು. ನಮಗೆ ಒಂಥರಾ ಆತಂಕ.

ಅವರು ಭಾರತೀಯರು! ಕಾರಿನ ನಂಬರ್‌ ಪ್ಲೇಟ್‌ ನೋಡಿ ನಮ್ಮನ್ನು ಬೆನ್ನಟ್ಟಿ ಬಂದಿದ್ದರು. ಅಯ್ಯೋ.. ಅವರು ಖುಷಿಗೆ ಏನಂತ ಹೇಳಲಿ? ನಮಗೂ ಅಷ್ಟೇ ಯಾವುದೋ ದೇಶದಲ್ಲಿ ನಮ್ಮವರನ್ನು ಕಂಡು ಕುಪ್ಪಳಿಸುವಂತಾಗಿತ್ತು. ಲಿಥುವಾನಿಯಾದಲ್ಲಿ 180 ಮಂದಿ ನಮ್ಮ ವಿದ್ಯಾರ್ಥಿಗಳಿದ್ದಾರೆ.

ಅಲ್ಲಿಗೆ ನಾವು ತಲುಪಿದ ದಿನ ಲಿಥುವಾನಿಯಾ ಮತ್ತು ಭಾರತದ 25ನೇ ಸ್ನೇಹ ದಿನಾಚರಣೆಯಿತ್ತು. ಹಿಂದಿ ಮತ್ತು ಸಂಸ್ಕೃತ ಅಲ್ಲಿನ ಅಧಿಕೃತ ಭಾಷೆ.ಸ್ನೇಹ ದಿನಾಚರಣೆಗೆ ದೊಡ್ಡ ಸಮಾರಂಭವನ್ನೇ ಏರ್ಪಡಿಸಿದ್ದರು. ಅಲ್ಲಿ ಪ್ರಿಯಾಂಕಾ ಎರಡು ಹಾಡುಗಳನ್ನು ಹಾಡಿದರು. ಮರುದಿನ ಅವಳ ಹಾಡಿಗಾಗಿಯೇ ಒಂದು ಸಣ್ಣ ಕಾರ್ಯಕ್ರಮ ಏರ್ಪಡಿಸಿಬಿಟ್ಟರು.

ನಾವು ಆಯಾ ದೇಶಗಳಿಗೆ ಕಾರು ಪರವಾನಗಿ ಪಡೆದಿದ್ದುದರಿಂದ ಅಲ್ಲಿನ ಎಂಬೆಸಿ ಅಧಿಕಾರಿಗಳಿಗೆ ನಮ್ಮ ಬರುವಿಕೆಯ ಮಾಹಿತಿ ಇರುತ್ತಿತ್ತು. ಲಿಥುವಾನಿಯಾದ ದೂತಾವಾಸದ ಅಧಿಕಾರಿಗಳಿಗೂ ತಿಳಿದಿದ್ದ ಕಾರಣ ನಮಗೆ ಭವ್ಯ ಸ್ವಾಗತ ಸಿಕ್ಕಿತು! ಅನೇಕ ಕಡೆ ದೂತಾವಾಸದಲ್ಲಿ ನಮಗೆ ಆದರ ಸಿಕ್ಕಿತ್ತು. ಆದರೆ ಗಡಿ ದಾಟುವಾಗ ಮಾತ್ರ ವಾಹನ ಮತ್ತು ದಾಖಲೆ ಪರಿಶೀಲನೆಗೆ ಏಳರಿಂದ ಎಂಟು ಗಂಟೆ ಕಾದಿದ್ದೂ ಇದೆ. ಕಾಯಬೇಕು ಅಷ್ಟೇ!

‘ಕೆಎ’ ಎಂಬ ಅಯಸ್ಕಾಂತ
ನಮ್ಮ ರೆನೊ ಡಸ್ಟರ್‌ನ ಸಂಖ್ಯೆ ಕೆಎ 01 ಎಂಎಂ 727 ಆಗಿತ್ತು. ಈ ‘ಕೆಎ’ ಎಂಬ ನಂಬರ್‌ಪ್ಲೇಟ್‌ ಅದೆಂಥಾ ಮೋಡಿ ಮಾಡಿತ್ತು ಅಂದ್ರೆ... ನಂಬರ್‌ ಪ್ಲೇಟ್‌ ನೋಡಿ ನಮ್ಮವರು ದೇಶ ದೇಶಗಳಲ್ಲಿ ನಮ್ಮನ್ನಪ್ಪಿ ಕುಣಿದಾಡಿ ಸಂಭ್ರಮಿಸಿದ್ದರು. ರಸ್ತೆಯಲ್ಲಿ ಹೋಗುತ್ತಿದ್ದರೆ ‘ಕರ್ನಾಟಕ’ ‘ ಕರ್ನಾಟಕ’ ಎಂದು ಕೂಗುತ್ತಾ ಹೋಗುತ್ತಿದ್ದರು. ಇದನ್ನೆಲ್ಲಾ ನೆನಪಿಸಿಕೊಂಡಾಗ ಮಾತೃಭೂಮಿಯ ಅಭಿಮಾನಕ್ಕಿರುವ ಅಯಸ್ಕಾಂತೀಯ ಶಕ್ತಿಗೆ ರೋಮಾಂಚನವಾಗುತ್ತದೆ. ಬೆಂಗಳೂರಿನವರು ಸಿಕ್ಕಿದಾಗಲಂತೂ ಮನಸಾರೆ ಕನ್ನಡ ಮಾತಾಡಿ ಖುಷಿಪಟ್ಟೆವು. ಅಂತರರಾಷ್ಟ್ರೀಯ ಗಡಿಗಳನ್ನು ನಾನೇ ಡ್ರೈವ್‌ ಮಾಡಿಕೊಂಡು ದಾಟಬೇಕು ಎಂಬುದು ಆನೇಕ ವರ್ಷಗಳ ಕನಸು. ಅದು ನನಸಾಗಿದೆ.
*

ತಯಾರಿಗೆ 3 ತಿಂಗಳು
ಏಪ್ರಿಲ್‌ ಒಂಬತ್ತಕ್ಕೆ ಶುರು ಮಾಡಿ ಜೂನ್‌ ಎರಡರಂದು ಹಿಂತಿರುಗುವ ನಮ್ಮ ಈ ಬೃಹತ್ ಯೋಜನೆಯಲ್ಲಿ ನಾವು ದಾಟಬೇಕಿದ್ದ 18 ದೇಶಗಳ ಕಾರು ಪರವಾನಗಿ, 10 ದೇಶಗಳ ವೀಸಾ ಬೇಕಾಗಿತ್ತು. ಅಷ್ಟೇ ಮುಖ್ಯವಾಗಿ 20 ಸಾವಿರ ಕಿ.ಮೀ. ನಮ್ಮ ಸುರಕ್ಷಿತವಾಗಿ ಕರೆದೊಯ್ಯಬೇಕಾಗಿದ್ದ ನಮ್ಮ ರೆನೊ ಡಸ್ಟರ್‌ನ್ನು ಸರ್ವಸನ್ನದ್ಧಗೊಳಿಸಬೇಕಿತ್ತಲ್ಲ? ಸರ್ವಿಸಿಂಗ್‌ ಮಾಡಿಸಿ ಕಾರಿನ ಬಿಡಿಭಾಗಗಳು, ಆಯಿಲ್‌ ಇತ್ಯಾದಿ ಅಗತ್ಯ ಸಲಕರಣೆ, ಪರಿಕರಗಳನ್ನು ಒಟ್ಟುಮಾಡಿಕೊಂಡು ನಾವೂ ತಯಾರಾಗುವ ಹೊತ್ತಿಗೆ ಮೂರು ತಿಂಗಳು ಬೇಕಾಯಿತು.
ನಮ್ಮನ್ನು ನಾವು ಸಜ್ಜುಗೊಳಿಸಬೇಕಲ್ಲ... ಮ್ಯಾರಥಾನ್‌ ರ‍್ಯಾಲಿಯರ್ಸ್‌ಗೆ ಮೊದಲನೆಯದಾಗಿ ಛಲ ಇರಬೇಕು. ಗಮನ ಗಮ್ಯದ ಕಡೆಗಿರಬೇಕು. ಯಾವುದೇ ಕ್ಷಣ ಎದುರಾಗುವ ಸವಾಲು, ಸಂಕಷ್ಟಗಳನ್ನು ಎದುರಿಸಲು ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ, ಸಿಕ್ಕಾಪಟ್ಟೆ ತಾಳ್ಮೆ, ನಿಯಂತ್ರಣ ಇರಬೇಕು. ಇವಿಷ್ಟು ನಮ್ಮ ವಿಷಯವಾಯಿತು. ಫೋರ್‌ ವ್ಹೀಲ್ಸ್‌ ಡ್ರೈವ್‌ ವಾಹನವಾಗಿರಬೇಕು. ನಾವು ಎಷ್ಟೋ ಸಲ ರಸ್ತೆಗಳೇ ಇಲ್ಲದ ಕಡೆಯೂ ಡ್ರೈವ್‌ ಮಾಡಿದ್ದೆವು. ಇಂತಹ ಯಾವುದೇ ಪರಿಸ್ಥಿತಿಗಳಿಗೆ ನಾವೂ, ನಮ್ಮ ವಾಹನವೂ ಹೊಂದಿಕೊಳ್ಳಬೇಕು!
*
ಆ್ಯಪ್‌ ಮೂಲಕ ಸಂವಹನ!
ರಷ್ಯಾ ರಾಜಧಾನಿ ಮಾಸ್ಕೊದಲ್ಲಿ ಒಂದು ದಿನ ತಂಗಿದ್ದೆವು. ರಷ್ಯಾದಲ್ಲಿ ರಷ್ಯನ್‌ ಬಿಟ್ಟರೆ ಬೇರಾವ ಭಾಷೆಯಲ್ಲೂ ನಾಮಫಲಕಗಳೂ ಇರುವುದಿಲ್ಲ. ನಾವು ಉಳಿದುಕೊಂಡಿದ್ದ ಹೋಟೆಲ್‌ನ ರಿಸೆಪ್ಷನ್‌ನಲ್ಲಿ ಸ್ವಾಗತಕಾರರ ಬಳಿ ಇಡೀ ದಿನದ ನಮ್ಮ ಓಡಾಟದ ವಿವರ ಹೇಳಿ ಅವರಿಂದ ಮಾರ್ಗಗಳ ಮಾರ್ಗದರ್ಶನ ಪಡೆದು ಟ್ಯಾಕ್ಸಿ ಹಿಡಿದೆವು.

ಪ್ರವಾಸಿಗರ ಸಂವಹನಕ್ಕಾಗಿ ಇರುವ ಭಾಷಾಂತರದ ಆ್ಯಪ್‌ ಮೂಲಕ ಅವರೊಂದಿಗೆ ಮಾತನಾಡಿದೆವು. ನಾವು ಫೋನ್‌ನಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಿದ್ದನ್ನು ಆ ಆ್ಯಪ್‌ ರಷ್ಯನ್‌ಗೂ, ಅವರ ಮಾತುಗಳನ್ನು ಇಂಗ್ಲಿಷ್‌ಗೂ ಭಾಷಾಂತರಿಸಿ ಕೊಡುತ್ತಿತ್ತು. ನಾವಿಬ್ಬರೂ ಧರಿಸಿದ್ದ ಟೀ ಶರ್ಟ್‌ನಲ್ಲಿ ಬರೆದುಕೊಂಡಿದ್ದ ‘ರೋಡ್‌ ಟು ಲಂಡನ್‌– 2017’ ಎಂಬ ಬರಹವನ್ನೂ ಅವರು ಹಾಗೇ ಆರ್ಥ ಮಾಡಿಕೊಂಡಿದ್ದರು.

ತಕ್ಷಣ ಅವರು ನಮ್ಮ ಬಗ್ಗೆ ಅಪಾರ ಗೌರವ ತೋರಿಸಿದರು. ಅರ್ಧ ಗಂಟೆ ಬದಲು ಒಂದೂವರೆ ಗಂಟೆ ಮಾಸ್ಕೊದಲ್ಲಿ ಸುತ್ತಾಡಿಸಿದರು. ಕೊನೆಯಲ್ಲಿ ಟ್ಯಾಕ್ಸಿ ಬಾಡಿಗೆಯನ್ನೂ ನಿರಾಕರಿಸಿದರು! ನಾವು ಅಕ್ಷರಶಃ ಜಗಳವಾಡಿ ಬಾಡಿಗೆ ಕೊಟ್ಟು ಬರಬೇಕಾಯಿತು. ಇಲ್ಲಿ ಎರಡು ಪಾಠ ಕಲಿತೆವು. ಒಂದು– ರಷ್ಯಾದ ಎಲ್ಲಾ ಟ್ಯಾಕ್ಸಿ ಚಾಲಕರು ಮೋಸಗಾರರಲ್ಲ. ಎರಡನೆಯದು– ತಂತ್ರಜ್ಞಾನದ ಬಳಕೆಯ ಜ್ಞಾನ ಇಂತಹ ಪ್ರವಾಸದ ವೇಳೆ ತುಂಬಾ ಅತ್ಯವಶ್ಯ.

*
ಬಳಸಿದ ಡೀಸೆಲ್‌– 1266 ಲೀಟರ್‌

ಬಂಕ್‌ಗಳು– 40

ದಾಟಿದ ಟೋಲ್‌ಗಳು– 60 (ಚೀನಾ ದಾಟಿದರೆ ಮತ್ತೆ ಟೋಲ್‌ಗಳೇ ಇಲ್ಲ!)

ಬಳಸಿದ ಕರೆನ್ಸಿಗಳು– 13


ನಿರೂಪಣೆ: ರೋಹಿಣಿ ಮುಂಡಾಜೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.