ADVERTISEMENT

ಬೇಸಿಗೆಯ ಮೂರು ಚಿತ್ರಗಳು

ವಿಜಯಕಾಂತ ಪಾಟೀಲ
Published 1 ಏಪ್ರಿಲ್ 2017, 19:30 IST
Last Updated 1 ಏಪ್ರಿಲ್ 2017, 19:30 IST
ಚಿತ್ರ: ಡಿ.ಜಿ. ಮಲ್ಲಿಕಾರ್ಜುನ
ಚಿತ್ರ: ಡಿ.ಜಿ. ಮಲ್ಲಿಕಾರ್ಜುನ   

ಬಂತು ಬೇಸಗೆ
ಸುಡು ಸುಡು ಬಿಸಿಲು;
ನೆತ್ತಿ ಚುರು ಚುರು
ನೀರಿಗೆ ಗೋಳು..!

1
ಬಾಯಾರಿದ ಜಿಂಕೆಮರಿ
ಊರ ಹೊಕ್ಕಿತು
ಹಳ್ಳ ಕೊಳ್ಳ ಸುತ್ತು ಹಾಕಿ
ಸಾಕುಗೊಂಡಿತು

ಬಾವಿಯೊಂದರಲ್ಲಿಯೆಲ್ಲೋ
ರಾಡಿನೀರ ಕಂಡಿತು
ಆಸೆಗೊಂಡು ಆಳಕಿಳಿದು
ಮೂತಿಯಿಕ್ಕಿತು

ADVERTISEMENT

ಬೀದಿನಾಯಿ–ಗುಂಪುಜನ
ದಾಳಿಯಿಟ್ಟರು
ಪಾಲು ಮಾಡಿ ತಿಂದು ತೇಗಿ
ಡರ್... ಎಂದರು!

2
ಮರದಲಿದ್ದ ಕೋತಿಯೊಂದು
ಮನೆಗೆ ನುಸುಳಿತು
ಹಂಡೆಯೊಳಗೆ ಕತ್ತು ತೂರಿ
ನೀರ ಹುಡುಕಿತು

ಕೊರಳು ಸಿಕ್ಕು ವಿಲವಿಲೆಂದು
ಕಿರುಚಹತ್ತಿತು
ನಿಷ್ಕರುಣಿಯ ಬಂದೂಕು
ಢಂ...ಎಂದಿತು

ನೀರು... ನೀರು... ಶೋಕರಾಗ
ಮುಗಿಲು ಮುಟ್ಟಿತು!

3
ಹಾರಾಡುವ ಹಕ್ಕಿಕುಲಕೂ
ನೀರದಾಹವು
ಹಾರಿ ಹಾರಿ ಏರಿ ಏರಿ
ಬಸವಳಿದವು

ರೆಕ್ಕೆ ಸೋತು ನೆಲಕೆ ಇಳಿದು
ಕುಸಿದು ಬಿದ್ದವು
ನೀರದಾರಿ ಕಾಣದಾಗಿ
ಉಸಿರಬಿಟ್ಟವು..!
***

ಕರುಣೆರಹಿತ ಬದುಕಪಥವು
ನಮ್ಮದಾಗಿದೆ;
ಇದನು ತೊರೆವ ನಡೆನುಡಿ
ತೋರಬೇಕಿದೆ!

ಸಕಲ ಜೀವ – ಸಸ್ಯಕುಲವು
ನಮ್ಮಂತೆಯೇ;
ಅವಕೂ ಬದುಕ ಹಕ್ಕಿದೆ 
ನಿಮ್ಮಂತೆಯೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.