ADVERTISEMENT

ಮಗು ಉಳಿಸಲಾಗಲಿಲ್ಲ...

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 19:30 IST
Last Updated 15 ಏಪ್ರಿಲ್ 2017, 19:30 IST
ಚಿತ್ರ: ಮದನ್ ಸಿ.ಪಿ.
ಚಿತ್ರ: ಮದನ್ ಸಿ.ಪಿ.   

ತೊಂಬತ್ತರ ದಶಕದ ಬೇಸಿಗೆಯ ದಿನಗಳವು. ನಾನಾಗ ಹುಬ್ಬಳ್ಳಿಯ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಗೃಹವೈದ್ಯೆ. ಅಂದು ಮಕ್ಕಳ ವಿಭಾಗದ ಹೊರರೋಗಿಗಳ ವಿಭಾಗದಲ್ಲಿ ಕುಳಿತು ರೋಗಿಗಳನ್ನು ನೋಡುತ್ತಿದ್ದೆ. ಮಹಿಳೆಯೊಬ್ಬರು ರಾಜು ಎಂಬ ಎರಡು ವರ್ಷದ ಮಗುವನ್ನು ಅತಿಸಾರದ ಸಮಸ್ಯೆಗಾಗಿ ಕರೆತಂದಿದ್ದರು.

ಚಟುವಟಿಕೆಯಿಂದಲೇ ಇದ್ದ ಮಗುವನ್ನು ಪರೀಕ್ಷಿಸಿದ ನಾನು ಮತ್ತು ಹಿರಿಯ ಸ್ನಾತಕೋತ್ತರ ವಿದ್ಯಾರ್ಥಿ, ಇದು ಅತಿ ಸೌಮ್ಯ ಸ್ವರೂಪದ ನಿರ್ಜಲೀಕರಣವಾದ್ದರಿಂದ ಒಳರೋಗಿಯಾಗಿ ಚಿಕಿತ್ಸೆ ನೀಡುವ ಅಗತ್ಯವಿಲ್ಲ ಎಂದು ನಿರ್ಧರಿಸಿದೆವು. ಮಗುವಿನ ತಾಯಿಯನ್ನು ಕರೆದು ಮಗುವಿಗೆ ಒ.ಆರ್.ಎಸ್. ದ್ರಾವಣದ ಚಿಕಿತ್ಸೆ ಸಾಕು ಎಂದು ವಿವರಿಸಿದೆವು. ಒ.ಆರ್.ಎಸ್. ದ್ರಾವಣವನ್ನು ತಯಾರಿಸುವ ವಿಧಾನವನ್ನೂ ಮತ್ತು ಪ್ರತಿ ಅರ್ಧ ತಾಸಿಗೊಮ್ಮೆ ಮಗುವಿಗೆ ಅದನ್ನು ಕುಡಿಸುವ ಅವಶ್ಯಕತೆಯನ್ನೂ ಆಕೆಗೆ ತಿಳಿಸಿ, ಕಳುಹಿಸಿದೆವು.

ಅಂದು ರಾತ್ರಿಯ ಕೆಲಸದ ಪಾಳಿಯೂ ನನಗೇ ಇತ್ತು. ಸುಮಾರು ಹನ್ನೆರಡು ಗಂಟೆಯ ಹೊತ್ತಿಗೆ ತುರ್ತುಚಿಕಿತ್ಸಾ ವಿಭಾಗದಲ್ಲಿ ತೀವ್ರ ಸ್ವರೂಪದ ನಿರ್ಜಲೀಕರಣಕ್ಕೆ ತುತ್ತಾದ ಬಹಳ ಗಂಭೀರ ಸ್ಥಿತಿಯಲ್ಲಿರುವ ಮಗುವೊಂದು ದಾಖಲಾಗಿದೆ ಎಂಬ ಕರೆ ಬಂದದ್ದರಿಂದ, ಅಲ್ಲಿಗೆ ಅವಸರದಿಂದ ಧಾವಿಸಿದೆವು. ಆ ಮಗುವು ಬೇರೆ ಯಾರೂ ಆಗಿರದೆ ಬೆಳಗ್ಗೆ ಹೊರ ರೋಗಿಗಳ ವಿಭಾಗಕ್ಕೆ ಬಂದು ಚಿಕಿತ್ಸೆ ಪಡೆದು ಹೋಗಿದ್ದ ರಾಜುವೇ ಆಗಿತ್ತು. ಮಗು ಬೆಳಿಗ್ಗೆ ಇದ್ದಂತೆ ಇರಲಿಲ್ಲ. ಪ್ರಜ್ಞಾಹೀನ ಸ್ಥಿತಿಯಲ್ಲಿತ್ತು. ಮಗುವಿನ ನಾಡಿಮಿಡಿತ ಹಾಗೂ ರಕ್ತದೊತ್ತಡ ಕ್ಷೀಣಿಸತೊಡಗಿತ್ತು. ಸತತ ಪ್ರಯತ್ನದ ಬಳಿಕವೂ ನಾವು ಮಗುವನ್ನು ಉಳಿಸಲಾಗಲಿಲ್ಲ.

ADVERTISEMENT

ದುಃಖಿತಳಾಗಿದ್ದ ಮಗುವಿನ ತಾಯಿಯನ್ನು ನಮ್ಮ ಮುಖ್ಯ ವೈದ್ಯರು ತಮ್ಮ ಕೊಠಡಿಗೆ ಕರೆದು, ‘ಯಾಕಮ್ಮ, ಒ.ಆರ್.ಎಸ್. ಕುಡಿಸಲಿಲ್ವ ಮಗುವಿಗೆ?’ ಎಂದು ಕೇಳಿದರು. ಅದಕ್ಕೆ ಆಕೆ – ‘ಎಲ್ಲಿ ಕುಡಿಸೋದು ಸ್ವಾಮಿ, ಇಲ್ಲಿಂದ ಮೂರು ಬಸ್ ಹಿಡಿದು ನಮ್ಮೂರು ತಲುಪುವ ಹೊತ್ತಿಗೆ ಸಂಜೆ ನಾಲ್ಕಾಗಿತ್ತು. ಅಕ್ಕಪಕ್ಕದವರು ನೋಡಿ, ಮಗು ಬಾಳ ಸುಸ್ತಾಗಿದೆ, ಮೊದ್ಲು ದವಾಖಾನೆಗೆ ಕರೆದುಕೊಂಡು ಹೋಗು ಅಂದ್ರು. ಅಲ್ಲಿಂದ ಯಾವುದೋ ಲಾರಿ ಹತ್ತಿ ಇಲ್ಲಿ ಬರೋ ಹೊತ್ತಿಗೆ ರಾತ್ರಿ ಆಗೇ ಹೊಯ್ತು ಸ್ವಾಮಿ’ ಎಂದಳು.

ಆಕೆ ಹೋದ ನಂತರ ಮುಖ್ಯವೈದ್ಯರು ನಮ್ಮನ್ನು ಕುರಿತು – ‘ನಾವು ಚಿಕಿತ್ಸೆ ನೀಡುವಾಗ, ಎಲ್ಲ ಪ್ರಾಯೋಗಿಕ ಅಂಶಗಳನ್ನೂ ಗಮನದಲ್ಲಿಡಬೇಕು. ಗ್ರಾಮೀಣ ಪ್ರದೇಶದ, ಬಡ ರೋಗಿಗಳಿಗೆ ಚಿಕಿತ್ಸೆಯನ್ನು ಸೂಚಿಸುವಾಗ ಹೆಚ್ಚು ಎಚ್ಚರಿಕೆಯಿಂದಿರಬೇಕು. ನೀವು ಬೆಳಿಗ್ಗೆಯೇ ಆಕೆಯನ್ನು ಆಕೆಯ ಊರು, ಅಲ್ಲಿಗೆ ತಲುಪಲು ತಗಲುವ ಸಮಯ ವಿಚಾರಿಸಿದ್ದರೆ, ಮಗುವನ್ನು ಒಂದು ದಿನ ಗಮನಿಸುವ ಕೊಠಡಿಯಲ್ಲಾದರೂ ಇರಿಸಬಹುದಿತ್ತು ಎಂದಿದ್ದರು. ಅವರ ಮಾತುಗಳನ್ನು ಕೇಳಿದ ನನಗೆ ನಾನೇ ಪರೋಕ್ಷವಾಗಿ ಆ ಮಗುವಿನ ಸಾವಿಗೆ ಕಾರಣ ಎಂಬ ಪಶ್ಚಾತಾಪದ ಭಾವನೆ ಬಂದು ಕರುಳು ಹಿಂಡಿದಂತಾಯಿತು. ಇಂದಿಗೂ ಆ ಘಟನೆ ನೆನಪಾದರೆ ಬೇಸರವಾಗುತ್ತದೆ.

-ಡಾ. ವಿನಯ ಶ್ರೀನಿವಾಸ್, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.