ADVERTISEMENT

ಮಿಥಾಲಿ, ಕ್ರಿಕೆಟ್ ಮಿಠಾಯಿ

ಮಿನುಗು ಮಿಂಚು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2017, 19:30 IST
Last Updated 11 ಫೆಬ್ರುವರಿ 2017, 19:30 IST
ಮಿಥಾಲಿ, ಕ್ರಿಕೆಟ್ ಮಿಠಾಯಿ
ಮಿಥಾಲಿ, ಕ್ರಿಕೆಟ್ ಮಿಠಾಯಿ   
2001ರಲ್ಲಿ ಟಾಟನ್‌ನಲ್ಲಿ ಇಂಗ್ಲೆಂಡ್ ಎದುರು ನಡೆದ ಮಹಿಳೆಯರ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಭಾರತದ ಮಿಥಾಲಿ ರಾಜ್ 214 ರನ್ ಗಳಿಸಿದರು. ಆಗಿನ್ನೂ ಅವರಿಗೆ 18 ವರ್ಷ ವಯಸ್ಸು. ಆ ಕಾಲಘಟ್ಟದಲ್ಲಿ ಅದು ಮಹಿಳಾ ಕ್ರಿಕೆಟ್‌ನಲ್ಲಿ ದಾಖಲಾದ ಅತ್ಯಧಿಕ ವೈಯಕ್ತಿಕ ಮೊತ್ತ.
 
ಸಿಕಂದರಾಬಾದ್‌ನಲ್ಲಿ ಬೆಳ್ಳಂಬೆಳಿಗ್ಗೆ ಕ್ರಿಕೆಟ್ ತರಬೇತಿಗೆಂದು ಮಿಥಾಲ್ ರಾಜ್ ಅವರ ಅಪ್ಪ ಕರೆದುಕೊಂಡು ಹೋಗುತ್ತಿದ್ದರು. ಆಗ ಮಿಥಾಲಿಗಿನ್ನೂ ಹತ್ತರ ಬಾಲ್ಯ. ಮೊದ ಮೊದಲು ಆಟದಲ್ಲಿ ಒಲವಿರದಿದ್ದ ಹುಡುಗಿಯಲ್ಲಿ ಹುದುಗಿದ್ದ ಬ್ಯಾಟ್ಸ್‌ವುಮನ್ ಅನ್ನು ಹೊರಗೆ ತಂದವರು ಕೋಚ್. ಅತಿ ಹೆಚ್ಚು ಇಷ್ಟಪಡುತ್ತಿದ್ದ ಭರತನಾಟ್ಯವನ್ನು ಬದಿಗೊತ್ತಿ ಮಿಥಾಲಿ ಕ್ರಿಕೆಟ್ ಬ್ಯಾಟ್ ಹಿಡಿದಳು. 
 
ಇದುವರೆಗೆ 167 ಏಕದಿನದ ಪಂದ್ಯಗಳು, 10 ಟೆಸ್ಟ್‌ಗಳು ಹಾಗೂ 63 ಟ್ವೆಂಟಿ–20 ಪಂದ್ಯಗಳಲ್ಲಿ ಆಡಿರುವ ಮಿಥಾಲಿ 2003ರಲ್ಲಿ ಅರ್ಜುನ ಪ್ರಶಸ್ತಿಗೂ ಭಾಜನರಾದರು. 1999ರಲ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು. 2015ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅವರು ಆ ವರ್ಷದ ‘ವಿಸ್ಡನ್ ಇಂಡಿಯಾ’ದ ಐವರು ಶ್ರೇಷ್ಠ ಕ್ರಿಕೆಟಿಗರ ಪಟ್ಟಿಯಲ್ಲಿ ಒಬ್ಬರೆನಿಸಿಕೊಂಡರು. ಈ ಗೌರವ ಸಂದ ಮೊದಲ ಮಹಿಳೆ ಕೂಡ ಅವರೇ.
 
2014ರ ಆಗಸ್ಟ್‌ನಲ್ಲಿ ವರ್ಮ್‌ಸ್ಲಿಯಲ್ಲಿ ಇಂಗ್ಲೆಂಡ್ ಎದುರಿನ ಟೆಸ್ಟ್ ಪಂದ್ಯವನ್ನು ಭಾರತ ನಾಲ್ಕು ವಿಕೆಟ್‌ಗಳಿಂದ ಗೆದ್ದಾಗ ತಂಡವನ್ನು ಮುನ್ನಡೆಸಿದ್ದವರು ಮಿಥಾಲಿ. 181 ರನ್‌ಗಳ ಗುರಿ ಎದುರಲ್ಲಿ ಇತ್ತು. ಆಗ ಔಟಾಗದೆ 50 ರನ್ ಗಳಿಸಿದ ಅವರು ಗೆಲುವಿಗೆ ಕಾರಣರಾಗಿದ್ದರು. ಏಕದಿನ ಕ್ರಿಕೆಟ್ ಪಂದ್ಯದ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೆಯವರಾಗಿರುವ ಮಿಥಾಲಿ, ಭಾರತದಲ್ಲಿ ಎಲ್ಲ ಪ್ರಕಾರದ ಮಹಿಳಾ ಕ್ರಿಕೆಟ್‌ನಲ್ಲೂ ಅಗ್ರಮಾನ್ಯರು. ಇಂಗ್ಲೆಂಡ್‌ನ ಚಾರ್ಲೊಟ್ ಎಡ್ವರ್ಡ್ಸ್ ಮಾತ್ರ ಟೆಸ್ಟ್ ಕ್ರಿಕೆಟ್‌ನ್ನಲ್ಲಿ ಇವರಿಗಿಂತ ಹೆಚ್ಚು ರನ್ ದಾಖಲಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.