ADVERTISEMENT

ರಸವತ್ತಾದ ಲೇಖನ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 19:30 IST
Last Updated 22 ಏಪ್ರಿಲ್ 2017, 19:30 IST
ರಸವತ್ತಾದ ಲೇಖನ
ರಸವತ್ತಾದ ಲೇಖನ   

‘ಮಾವು ಬಂತು ಮಾವು – ಬಹುಪರಾಕ್’ ರಹಮತ್ ತರೀಕೆರೆ ಅವರ ಬರಹ (ಏ. 16) ತುಂಬಾ ರಸವತ್ತಾಗಿತ್ತು. ಹಣ್ಣುಗಳ ರಾಜ ಮಾವಿನ ಕುರಿತು ಅವರು ಸವಿಸ್ತಾರವಾಗಿ ಬಣ್ಣಿಸಿದ್ದಾರೆ. ಮಾವು ಎಷ್ಟು ಸವಿದರೂ ಅದರ ರಸಸ್ವಾದ ಮರೆಯಲು ಸಾಧ್ಯವಾಗದು.
-ಚಿದಾನಂದ ಶ. ಕಳಸಮ್ಮ, ಕಲಬುರ್ಗಿ

*
ನಮ್ಮ ಮುದ್ದು ಕನ್ನಡ
‘ಏ ನಿಮ್ಮ ಸಾರುಗೀರು ಬ್ಯಾಡ. ಸ್ವಲ್ಪ ಎಳ್ಳೆಣ್ಣೆ ಕೊಡ್ರಿಲ್ಲಿ’ ಎಂದವರೇ ಚಟ್ನಿಗೆ ಹಸಿ ಎಣ್ಣೆ ಕಲೆಸಿಕೊಂಡು ಬಿಸಿ ಅನ್ನದ ಜತೆ ಸಂಲಗ್ನಗೊಳಿಸಿ ಬಡತಾ ಬಡಿದರು’ – ಆಹಾ! ಇದು ನನ್ನ ನಿಜವಾದ ತಾಯ್ನುಡಿ ಕನ್ನಡ. ರಹಮತ್‌ ತರೀಕೆರೆ ಮಾತ್ರ ಬರೆಯಬಲ್ಲ ನನ್ನ ಮುದ್ದು ಕನ್ನಡ. ಈ ವಾರದ ‘ಮಾವು ಬಂತು ಮಾವು, ಬಹುಪರಾಕ್‌!’ ಲೇಖನ ನಾವು ನಿಜಕ್ಕೂ ಓದಲಿಲ್ಲ – ಬಡತಾ ಬಡದ್ವಿ.
-ಜೆ.ಎಸ್‌. ದೇವರಮನಿ, ನೆಲವತ್ತಿ

*
ರುಚಿಕರ ಅಕ್ಷರಫಲ!
ಮಾವಿನ ಗರಿಮೆ–ಹಿರಿಮೆಗಳ ಲೇಖನ ಪ್ರತಿಯೊಬ್ಬರೂ ಓದಲೇಬೇಕಾದ, ಓದಿ ಸವಿಯಲೇಬೇಕಾದ ಅಕ್ಷರಫಲ. ಹಣ್ಣಿನಷ್ಟೇ ಸೊಗಸಾಗಿದೆ, ಎಲ್ಲರಿಗೂ ತಿಳಿಯುವ ಹಾಗೆ ಬರೆದಿರುವ ಲೇಖಕರ ಭಾಷೆ.

ಪ್ರವೀಣ ಆರ್. ಶಿಂದೆ, ಬೀಡಿ, ಬೆಳಗಾವಿ ಜಿಲ್ಲೆ ಪಾಂಜಾಲಿ: ಒಂದು ಜಿಜ್ಞಾಸೆ ಮನೆ–ಹೊಲದಂಥ ನಿರ್ಜೀವ ವಸ್ತುಗಳೇ ಕೌಟುಂಬಿಕ ಕಲಹಗಳಿಗೆ ಕಾರಣವಾಗುವಾಗ, ಅಣ್ಣ–ತಮ್ಮಂದಿರು ಒಂದು ಹೆಣ್ಣನ್ನು ಎಲ್ಲರ ಹೆಂಡತಿ ಮಾಡಿಕೊಂಡರೆ ಒಂದಾಗಿ ಇರುತ್ತಾರೆ ಎಂಬುದು ಆಭಾಸ ಅಲ್ಲವೇ? ಕುಂತಿ ಈ ರೀತಿ ಯೋಚಿಸಿದಳು ಎಂದರೆ ನಂಬಲು ಸಾಧ್ಯವೇ?

ADVERTISEMENT

ಇಂತಹ ಯೋಚನೆ ತಾರ್ಕಿಕ; ಕುಟುಂಬ ಸೌಹಾರ್ದತೆಗೆ ಸಹಕಾರಿ ಎನ್ನುವುದಾದರೆ (ಎಲ್ಲರೂ ಅನುಸರಿಸಬಹುದಾದ ತಂತ್ರ  ಎನ್ನುವುದಾದರೆ) ಎಂಟು ಹತ್ತು ಗಂಡು ಮಕ್ಕಳಿರುವ ಕೋಟಿ ಕೋಟಿ ಕುಟುಂಬಗಳು ಇದುವರೆಗೂ ಬದುಕಿ ಹೋಗಿರುವಾಗ, ಕುಂತಿಯಂತೆ ಯಾರೂ ಏಕೆ ಯೋಚಿಸಲಿಲ್ಲ?

ಅನೈತಿಕ ಸಂಬಂಧಗಳಲ್ಲೇ ಹೆಣ್ಣು ಇನ್ನೊಬ್ಬನ ಜೊತೆ ವ್ಯವಹಾರ ನಡೆಸುತ್ತಿದ್ದಾಳೆ ಎಂದು ತಿಳಿದಾಗಲೇ ಕೊಲೆಗಳು ನಡೆದಿರುವಾಗ, ಕಟ್ಟಿಕೊಂಡವಳನ್ನು ಹಂಚಿಕೊಳ್ಳುವ ವೈಶಾಲ್ಯ ಗಂಡಲ್ಲಿ ಇರಲು ಸಾಧ್ಯವೇ? ಇಂತಹ ಯೋಚನೆ ಸ್ವೀಕಾರಾರ್ಹವಾದರೆ, ಹೆಣ್ಣಿನ ಅನುಪಾತ ಏರುಪೇರಾಗಿರುವ ಇಂದಿನ ಸಂದರ್ಭದಲ್ಲಿ ಈ ಸೂತ್ರ ಉಪಯುಕ್ತ ಆಗಬಹುದು.

ವ್ಯಾಸರ ‘ಪಂಚದೇವತ್ವ’ ಒಪ್ಪದವರು ಹೆಣ್ಣೆಂದರೆ ‘ಬಹುವಲ್ಲಭ ಪ್ರಿಯೆ’ ಎಂದು ತೀರ್ಮಾನಿಸಿಬಿಡುತ್ತಾರೆ. ಇರಾವತಿ ಕರ್ವೆ ಕೂಡ ಕೃಷ್ಣ–ದ್ರೌಪದಿಯಲ್ಲಿ ಗುಪ್ತ ಪ್ರಣಯ ಕಾಣುತ್ತಾರೆ. ಎಸ್‌.ಎಲ್. ಭೈರಪ್ಪನವರ ‘ಪರ್ವ’ದ ಕುಂತಿ – ಬಹುಗಂಡಂದಿರನ್ನು ಹೊಂದಿದ ದೌಪದಿಯನ್ನು ತುಂಬ ತೃಪ್ತ ಹೆಣ್ಣು ಎಂಬಂತೆ, ತನಗೆ ಸಿಗದ ಸುಖ ಸೊಸೆಗಾದರೂ ಸಿಕ್ಕಿದೆಯಲ್ಲ ಎಂದು ಸಂಭ್ರಮಿಸುತ್ತಾಳೆ.

ಪುರಾಣಗಳನ್ನು ವಿಶ್ಲೇಷಿಸುವಾಗ, ಹಿಂದಿನ ಕಾವ್ಯಗಳು ಶೃತಿಗಳೂ ಸ್ಮೃತಿಗಳೂ ಆಗಿದ್ದವು ಎನ್ನುವುದನ್ನು ಗಮನಿಸಬೇಕು. ಲಕ್ಷೀಶ ತೋಳ್ಪಾಡಿಯವರು ಈ ವಿಷಯದಲ್ಲಿ ಹೆಚ್ಚಿನ ಬೆಳಕು ಚೆಲ್ಲಬಹುದೇ?
-ಸತ್ಯಬೋಧ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.