ADVERTISEMENT

ರೂಬಿಕ್ ಕ್ಯೂಬ್‌ ಸವಾಲು

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 19:30 IST
Last Updated 11 ನವೆಂಬರ್ 2017, 19:30 IST
ರೂಬಿಕ್ ಕ್ಯೂಬ್‌ ಸವಾಲು
ರೂಬಿಕ್ ಕ್ಯೂಬ್‌ ಸವಾಲು   

* ರೂಬಿಕ್ ಘನ ಅಥವಾ ‘ರೂಬಿಕ್ಸ್‌ ಕ್ಯೂಬ್’ ಎಂದರೇನು?

ಆರು ಬಣ್ಣದ, ಸಮಸ್ಯೆಯನ್ನೊಡ್ಡುವ ಆಟದ ಘನಕ್ಕೆ ರೂಬಿಕ್ಸ್‌ ಕ್ಯೂಬ್ ಎನ್ನುತ್ತಾರೆ. ಸರಿಯಾದ ರೀತಿಯಲ್ಲಿ ಇದನ್ನು ಒಂದು ಪ್ರಕಾರ ಜೋಡಿಸಲು ಮಾತ್ರ ಸಾಧ್ಯ. ತಪ್ಪು ತಪ್ಪಾಗಿ ಹಲವು ಬಗೆಗಳಲ್ಲಿ ಜೋಡಿಸಬಹುದು.

* ಇದನ್ನು ಸೃಷ್ಟಿಸಿದ್ದು ಯಾರು?

ADVERTISEMENT

ಹಂಗೇರಿಯಾದ ವಾಸ್ತುಶಿಲ್ಪಿ ಎರ್ನೊ ರೂಬಿಕ್ 1974ರಲ್ಲಿ ಇದನ್ನು ರೂಪಿಸಿದ.

* ಇದರ ಸೃಷ್ಟಿಯ ಹಿಂದಿನ ಉದ್ದೇಶವೇನು?

ಒಳಾಂಗಣ ವಿನ್ಯಾಸದ ‘ಅಕಾಡೆಮಿ ಆಫ್ ಅಪ್ಲೈಡ್‌ ಆರ್ಟ್ಸ್‌ ಅಂಡ್ ಕ್ರಾಫ್ಟ್ಸ್’ನಲ್ಲಿ ರೂಬಿಕ್ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಮೂರು ಆಯಾಮದ ವಿನ್ಯಾಸವನ್ನು ತಮ್ಮ ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಕಲಿಯಲೆಂದು ಘನವನ್ನು ಸಿದ್ಧಪಡಿಸಿದರು. ಮೊದಲು ಅವರ ವಿದ್ಯಾರ್ಥಿಗಳಲ್ಲಿ ಇದು ಜನಪ್ರಿಯವಾಯಿತು. ಆಮೇಲೆ ಹೊರಗಿನ ಜನರಿಗೂ ಇದರ ಮಜಾ ಅರ್ಥವಾಗತೊಡಗಿತು. ಆಟಿಕೆಯ ರೂಪದಲ್ಲಿ ಅದು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು 1977ರಲ್ಲಿ. ಹಂಗೇರಿಯು ಆ ಕಾಲಘಟ್ಟದಲ್ಲಿ ಕಮ್ಯುನಿಸ್ಟ್ ರಾಷ್ಟ್ರವಾಗಿತ್ತು. ಹೀಗಾಗಿ ಪಶ್ಚಿಮ ರಾಷ್ಟ್ರಗಳಿಗೆ ಮೂರು ವರ್ಷ ಈ ಘನ ತಲುಪಲಿಲ್ಲ.

* ರೂಬಿಕ್ಸ್‌ ಕ್ಯೂಬ್ ಒಡ್ಡುವ ಸವಾಲುಗಳೇನು?

ಕ್ಯೂಬ್ ಬಳಕೆದಾರರು ಘನದ ಎಲ್ಲಾ ಮೇಲ್ಮೈ ಮೇಲೂ ನಿಗದಿತ ಬಣ್ಣ ಬರುವಂತೆ ಜೋಡಿಸಬೇಕು. ಒಂದು ಮುಖದಲ್ಲಿ ಒಂದೇ ಬಣ್ಣ ಬರುವಂತೆ ಮಾಡುವುದು ದೊಡ್ಡ ಸವಾಲು.

* ಇದನ್ನು ಬಗೆಹರಿಸುವುದು ಕಷ್ಟವೇ?

ಕೆಲವರು ತಿಂಗಳುಗಟ್ಟಲೆ ಹೆಣಗಾಡುತ್ತಾರೆ. ಇದನ್ನು ಜೋಡಿಸುವ ಸವಾಲು ಬರಬರುತ್ತಾ ಗೀಳಾಗಿಬಿಡುತ್ತದೆ. ವಿಶ್ವದ ವಿವಿಧೆಡೆ ರೂಬಿಕ್ ಕ್ಯೂಬ್ ಕ್ಲಬ್‌ಗಳಿವೆ. ಅತಿ ಕಡಿಮೆ ಅವಧಿಯಲ್ಲಿ ರೂಬಿಕ್ ಕ್ಯೂಬ್ ಸವಾಲನ್ನು ಮೆಟ್ಟಿ ನಿಲ್ಲುವವರಿಗೆ ಬಹುಮಾನ ನೀಡಲು ಸ್ಪರ್ಧೆಗಳೂ ನಡೆಯುತ್ತವೆ. ಅಂಥ ಸ್ಪರ್ಧೆಯನ್ನು 1981ರಲ್ಲಿ ‘ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌’ ಅಂಥ ಮೊದಲ ಸ್ಪರ್ಧೆಯನ್ನು ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.