ADVERTISEMENT

ಸೆಲೆಬ್ರಿಟಿ ಪಿಕ್‌ನಿಕ್‌

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2017, 6:15 IST
Last Updated 12 ನವೆಂಬರ್ 2017, 6:15 IST
ಸೆಲೆಬ್ರಿಟಿ ಪಿಕ್‌ನಿಕ್‌
ಸೆಲೆಬ್ರಿಟಿ ಪಿಕ್‌ನಿಕ್‌   

ತೋಟದ ಮನೆಗೆ ಪಿಕ್‌ನಿಕ್ –ಪ್ರಿಯಾಂಕಾ ಉಪೇಂದ್ರ, ನಟಿ

ಬೆಂಗಳೂರಿನಲ್ಲಿ ಮಕ್ಕಳನ್ನು ಹೆಚ್ಚು ಎಲ್ಲಿಗೂ ಕರೆದುಕೊಂಡು ಹೋಗಲು ಆಗುವುದಿಲ್ಲ. ಆಗಾಗ ವಿದೇಶಗಳಿಗೆ ಹೋಗುತ್ತೇವೆ. ಆಗೆಲ್ಲಾ ಅಲ್ಲಿನ ಬೀಚ್‌, ಪಾರ್ಕ್‌ಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತೇವೆ. ಅರ್ಧ ದಿನ ಬೀಚ್ ಬಳಿಯೇ ಸಮಯ ಕಳೆಯುತ್ತೇವೆ.

ನಮ್ಮ ಪ್ರವಾಸ ಏಕತಾನತೆಯಿಂದ ಕೂಡಿರಬಾರದೆಂದು ಇತ್ತೀಚೆಗೆ ನಮ್ಮ ತೋಟಕ್ಕೆ ಪುಟ್ಟ ಪಿಕ್‌ನಿಕ್ ಆಯೋಜಿಸಿದ್ದೆವು. ಅದೂ ವಿಶೇಷ ಪರಿಕಲ್ಪನೆಯೊಂದಿಗೆ.

ADVERTISEMENT

ಹಿಂದಿನ ಕಾಲದಲ್ಲಿ ಹೇಗೆ ಅಡುಗೆ ಮಾಡುತ್ತಿದ್ದರು ಎಂಬುದನ್ನು ಮಕ್ಕಳಿಗೆ ತೋರಿಸಲು ‘ಔಟ್‌ಡೋರ್ ಕುಕ್ಕಿಂಗ್’ ಆಯೋಜಿಸಿದ್ದೆವು. ಸೌದೆಗಳನ್ನು ಆರಿಸಿ ತಂದು ಒಲೆ ಉರಿಸಿ, ಅಲ್ಲಿನ ಸೊಪ್ಪುಸದೆ ತರಕಾರಿಗಳನ್ನೇ ಬಳಸಿ ಅಡುಗೆ ಮಾಡಿದೆವು. ಮರದ ಕೆಳಗೆ ಕುಳಿತು ಒಟ್ಟಾಗಿ ಊಟ ಮಾಡಿದೆವು. ಆಯುಷ್, ಐಶ್ವರ್ಯಾಗೆ ಅದು ಭಾರೀ ಮಜಾ ಕೊಟ್ಟಿತ್ತು. ಅವರಲ್ಲಿ ಆಸಕ್ತಿಯೂ ಹೆಚ್ಚಿತು. ಅನುಭವ ಹೊಸತಾಗಿತ್ತು.

ಹಿಂದಿನ ಕಾಲದಲ್ಲಿ ಅಡುಗೆ ಮಾಡಬೇಕಾದರೆ ಎಷ್ಟೆಲ್ಲಾ ಕಷ್ಟಪಡುತ್ತಿದ್ದರು ಎಂಬುದನ್ನು ಮಕ್ಕಳಿಗೆ ಪ್ರಾಯೋಗಿಕವಾಗಿ ತೋರಿಸಿದಂತೆ ಆಯಿತು. ಶಾಪಿಂಗ್ ಮಾಲ್‌ಗಳಿಗೆ ಕರೆದುಕೊಂಡು ಹೋಗುವ ಬದಲು ಬೇರೆ ಬೇರೆ ಸ್ಥಳಗಳಿಗೆ, ಬೇರೆ ಬೇರೆ ಅನುಭವಗಳಿಗೆ ಅವರನ್ನು ತೆರೆದುಕೊಳ್ಳುವಂತೆ ಮಾಡುವುದು ಈಗ ತುಂಬಾ ಮುಖ್ಯ ಎಂದು ನನಗನ್ನಿಸುತ್ತದೆ.

ಹಳೇ ಪದ್ಧತಿಗಳನ್ನು ಮಕ್ಕಳಿಗೆ ತಿಳಿಸುವ, ಪ್ರಕೃತಿಯೊಂದಿಗೆ ಬೆರೆಯುವಂತೆ ಮಾಡುವ ಯಾವ ಸ್ಥಳವಾದರೂ ಸರಿ, ಅಲ್ಲಿಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತೇನೆ.

ಸಿಂಗಪುರ, ಅಮೆರಿಕ, ಕೋಲ್ಕತ್ತಾಗಳಿಗೂ ಆಗಾಗ್ಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುತ್ತೇವೆ. ಹೆಚ್ಚು ಸ್ಥಳಗಳನ್ನು ನೋಡಿದಷ್ಟೂ ಅದರಿಂದ ಕಲಿಯುವುದು ಹೆಚ್ಚು. ಓದುವುದಕ್ಕಿಂತ ಹೆಚ್ಚು ಕಲಿಯುವುದು ಸುತ್ತಾಟದಲ್ಲಿ.

***

ಕಡಲಾಚೆಯ ಲೋಕ - ಬಿ.ಎಂ. ಗಿರಿರಾಜ್, ನಿರ್ದೇಶಕ

ನಾನು ಕರಾವಳಿಯವನಾದ್ದರಿಂದ ಸಮುದ್ರದೊಂದಿಗೆ ಬಿಡದ ನಂಟು. ನನ್ನ ಮಗನಿಗೂ ಅದೇ ನಂಟನ್ನು ಮುಂದುವರಿಸುವ ಆಸೆ ನನ್ನದು. ಭಟ್ಕಳದ ಬಳಿಯ ನೇತ್ರಾಣಿ ದ್ವೀಪಕ್ಕೆ ನನ್ನ ಮಗನನ್ನು ಬೋಟ್‌ನಲ್ಲಿ ಕರೆದುಕೊಂಡು ಹೋಗಬೇಕು ಎಂದು ಬಹಳ ಆಸೆ ಇದೆ. ನನ್ನ ಅಪ್ಪ ಅಮ್ಮನೂ ನನ್ನನ್ನು ಕರೆದುಕೊಂಡು ಹೋಗಿದ್ದರಿಂದ ನನ್ನ ಮಗನನ್ನೂ ಅಲ್ಲಿಗೆ ಕರೆದುಕೊಂಡು ಹೋಗಬೇಕು ಎಂದು ಅನ್ನಿಸಿದೆ.

ನನ್ನ ಮಗ ಕಬೀರ್‌ಗೆ ನೀರೆಂದರೆ ತುಂಬಾ ಇಷ್ಟ. ನೀರು, ಅಲೆಗಳ ಏರಿಳಿತ, ವಿಶಾಲ ಸಮುದ್ರದ ಮಧ್ಯದಲ್ಲಿ ಬೋಟ್‌ನಲ್ಲಿ ತೇಲುವುದು ಮಕ್ಕಳಿಗೆ ಖುಷಿ. ಸಂತೋಷ, ಭಯ, ಎಕ್ಸೈಟ್‌ಮೆಂಟ್ ಎಲ್ಲವೂ ಇರುತ್ತದೆ.

ಆದರೆ ಇನ್ನೂ ದ್ವೀಪಕ್ಕೆ ಕರೆದುಕೊಂಡು ಹೋಗಿಲ್ಲ. ಕಡಲ ತಡಿಯಲ್ಲೇ ಮಗನನ್ನು ಆಟ ಆಡಿಸುತ್ತೇವೆ. ದ್ವೀಪಕ್ಕೆ ಹೋಗಿ ಬರಲು ಕೆಲವೊಂದಿಷ್ಟು ನಿಯಮಗಳಿವೆ. ಎಲ್ಲವನ್ನೂ ಪರಿಶೀಲಿಸಿ ಹೋಗಬೇಕು. ಆದ್ದರಿಂದ ಇನ್ನೂ ಆ ಪ್ರವಾಸ ಸಾಧ್ಯವಾಗಿಲ್ಲ.

ಆ ಒಂದು ಪ್ರಯಾಣವೇ ಸುಂದರ ಕಥನ. ಅಲ್ಲಿ ನೂರಾರು ಜೀವವೈವಿಧ್ಯವನ್ನೂ ಕಾಣಬಹುದು. ನೂರಾರು ಚಿಟ್ಟೆಗಳ ವೈವಿಧ್ಯವಿದೆ. ಸುಮಾರು ಬಣ್ಣಗಳ ಹಲ್ಲಿಗಳಿವೆ. ಕಡಲ ಉಡಗಳಿವೆ. ಅವೆಲ್ಲವೂ ನಶಿಸಿ ಹೋಗುವ ಮುನ್ನ ನನ್ನ ಮಗನಿಗೆ ತೋರಿಸಬೇಕು ಎಂದು ಅನ್ನಿಸುತ್ತದೆ. ಮಕ್ಕಳಿಗೆ ಪ್ರಾಣಿ, ಹೂಗಳ ಜೊತೆ ಸಂಪರ್ಕ ಇದ್ದರೆ ಒಳ್ಳೆಯದು. ಆದ್ದರಿಂದ ಅಂಥ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತೇನೆ. ಹಾಗೇ ಅಲ್ಲೇ ಊರಿನ ಕಡೆ ಹೋಗಿ ಭೂತಾರಾಧನೆ ಮಾಡುವುದನ್ನು ನೋಡಿ ಬರಬೇಕು ಎಂಬ ಆಸೆ ಇದೆ.

ಈ ಬಾರಿ ಕ್ರಿಸ್‌ಮಸ್‌ ಅಥವಾ ಬೇಸಿಗೆ ರಜೆಗೆ ಮಗನೊಂದಿಗೆ ಊರು ಸುತ್ತುವ ಯೋಜನೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.