ADVERTISEMENT

ಕಣ್ಣು ತೆರೆಸಿದ ಸಾಧ್ವಿ ಮೊಲಕ್ಕ

ಪ್ರಕಾಶ್ ಆರ್.ಕಮ್ಮಾರ್
Published 13 ಜನವರಿ 2018, 19:30 IST
Last Updated 13 ಜನವರಿ 2018, 19:30 IST
ಚಿತ್ರ: ಶಶಿಧರ ಹಳೇಮನಿ
ಚಿತ್ರ: ಶಶಿಧರ ಹಳೇಮನಿ   

ವರ್ಷ ಮಳೆ ಚೆನ್ನಾಗಿ ಆಗಿತ್ತು. ಕಾಡು ಸಮೃದ್ಧವಾಗಿ ಬೆಳೆದಿತ್ತು. ಎಲ್ಲಿ ನೋಡಿದರಲ್ಲಿ ಗಿಡ, ಮರ, ಬಳ್ಳಿ, ಪೊದೆಗಳು ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದುದು ಕಾಣುತ್ತಿತ್ತು. ಹಳ್ಳ, ನದಿ, ಹೊಳೆ, ತೊರೆಗಳೆಲ್ಲ ತುಂಬಿ ಜುಳು ಜುಳು ನಾದದಿಂದ ಹರಿಯುತ್ತಿದ್ದವು. ಕಾಡಿನ ಎಲ್ಲಾ ಪ್ರಾಣಿಗಳು ಸಂತೋಷದಿಂದ ತಿರುಗಾಡಿಕೊಂಡಿದ್ದವು.

ಹೀಗಿರುವ ಕಾಡಿನಲ್ಲಿ ವಾಸವಾಗಿದ್ದ ಆನೆ, ಕರಡಿ, ಸಿಂಹ, ಹುಲಿ, ಜಿಂಕೆ, ನರಿ, ನವಿಲು, ಕೋತಿ ಮುಂತಾದ ಪ್ರಾಣಿಗಳೆಲ್ಲವೂ ಒಂದು ದಿನ ಸಭೆ ಸೇರಿದವು. ಕಾಡಿನ ರಾಜ ಸಿಂಹ ಅಧ್ಯಕ್ಷತೆ ವಹಿಸಿತ್ತು. ‘ಇಂದು ನಾವೆಲ್ಲಾ ಸಂತೋಷದಿಂದ, ಸಂಭ್ರಮದಿಂದ ಇದ್ದೇವೆ. ಇಂತಹ ಸಂದರ್ಭದಲ್ಲಿ ನಾವೆಲ್ಲಾ ಸೇರಿ ತೀರ್ಥಯಾತ್ರೆಗೆ ಹೋಗಬಾರದೇಕೆ?’ ಎಂಬ ಪ್ರಶ್ನೆಯನ್ನು ನರಿಯು ಸಭೆಯ ಮುಂದಿಟ್ಟಿತು. ಈ ಪ್ರಶ್ನೆಗೆ ಎಲ್ಲಾ ಪ್ರಾಣಿಗಳು ಸಮ್ಮತಿಸಿದವು.

‘ಹಾಗಾದರೆ ನಾವು ಯಾವ ಯಾವ ಸ್ಥಳಗಳಿಗೆ ಹೋಗಬೇಕು?’ ಎಂದು ಜಿಂಕೆ ಕೇಳಿತು.

ADVERTISEMENT

‘ನೋಡಿ ಕಾಶಿ, ರಾಮೇಶ್ವರ, ಬದರಿ, ಕೇದಾರ, ಮದುರೆ, ಮೀನಾಕ್ಷಿ ಮುಂತಾದ ಕ್ಷೇತ್ರಗಳಿವೆ. ಅಲ್ಲಿಗೆ ಹೋಗಿಬರೋಣ’ ಎಂದಿತು ಆನೆ.

ಈ ಮಾತಿಗೆ ಎಲ್ಲಾ ಪ್ರಾಣಿಗಳು ‘ಆಯ್ತು, ಆಯ್ತು’ ಎಂದು ಒಪ್ಪಿಗೆ ಸೂಚಿಸಿದವು.

‘ದಿನವನ್ನು ಗೊತ್ತು ಮಾಡಿ. ಅಂದು ಎಲ್ಲರೂ ಸೇರಿ ಹೋಗೋಣ. ತೀರ್ಥಕ್ಷೇತ್ರಗಳಿಗೆ ಹೋಗಿ ದೇವರ ದರ್ಶನ ಮಾಡುವುದರಿಂದ ಎಲ್ಲರಿಗೂ ಶಾಂತಿ ನೆಮ್ಮದಿ ದೊರೆತು ಒಳ್ಳೆಯದಾಗುತ್ತದೆ. ಅಲ್ಲದೇ ಪುಣ್ಯವೂ ಲಭಿಸುತ್ತದೆ’ ಎಂದಿತು ಅಧ್ಯಕ್ಷತೆ ವಹಿಸಿದ್ದ ಕಾಡಿನ ರಾಜ ಸಿಂಹ.

ಪ್ರಾಣಿಗಳೆಲ್ಲ ಸೇರಿ ಒಂದು ದಿನ ಗೊತ್ತು ಮಾಡಿದವು. ಅಂದು ಹೊರಡುವುದು ಎಂದು ತೀರ್ಮಾನಿಸಿದವು. ‘ಆದರೆ ತೀರ್ಥಯಾತ್ರೆಗೆ ಹೊರಡಲು ದಾರಿ ಸೂಚಕರಾಗಿ ಒಬ್ಬ ನಾಯಕ ಬೇಕು’ ಎಂದಿತು ನವಿಲಕ್ಕ ಒಯ್ಯಾರದಿಂದ.

‘ಹೌದು, ಹೌದು ನಮಗೆಲ್ಲ ಒಬ್ಬ ನಾಯಕ ಬೇಕು’ ಎಂದವು ಪ್ರಾಣಿಗಳು.

‘ಹಾಗಾದರೆ ನಾಯಕತ್ವ ವಹಿಸುವವರು ಯಾರು?’

‘ಸಾಧ್ವಿ ಮೊಲಕ್ಕ ಇದ್ದಾಳಲ್ಲ’ ಎಂದಿತು ಆನೆ.

‘ಸರಿ, ಸರಿ’ ಎಂದು ಎಲ್ಲಾ ಪ್ರಾಣಿಗಳು ಸಾಧ್ವಿ ಮೊಲಕ್ಕನ ಆಶ್ರಮದ ಕಡೆ ಹೊರಟವು. ಅಲ್ಲಿ ಕಾವಿ ಬಟ್ಟೆ ತೊಟ್ಟು, ಕೈಯಲ್ಲಿ ರುದ್ರಾಕ್ಷಿ ಸರ ಹಿಡಿದು ದೇವರ ನಾಮ ಸ್ಮರಣೆ ಮಾಡುತ್ತಾ ಕುಳಿತಿದ್ದ ಸಾಧ್ವಿ ಮೊಲಕ್ಕ ಕಂಡಳು.

ಎಲ್ಲರೂ ಸಾಧ್ವಿ ಮೊಲಕ್ಕನ ಬಳಿ ಖುಷಿಯಿಂದ ಹೋಗಿ, ‘ನಾವೆಲ್ಲ ತೀರ್ಥಯಾತ್ರೆಗೆ ಹೊರಟಿದ್ದೇವೆ. ನೀವೂ ನಮ್ಮೊಂದಿಗೆ ಬರಬೇಕು. ನಮಗೆಲ್ಲ ಮಾರ್ಗದರ್ಶನ ನೀಡಬೇಕು’ ಎಂದು ಮನವಿ ಮಾಡಿಕೊಂಡವು.

ಮೊಲಕ್ಕ ಒಂದು ಕ್ಷಣ ಯಾರು ಯಾರು ಹೊರಟಿದ್ದಾರೆಂದು ಸೂಕ್ಷ್ಮವಾಗಿ ನೋಡಿತು. ಸ್ವಲ್ಪ ಯೋಚಿಸಿ ಮನದಲ್ಲಿಯೇ ನಕ್ಕು, ನಂತರ ‘ಇಲ್ಲಿ, ಆಶ್ರಮದಲ್ಲಿ ನನಗೆ ವಿಪರೀತ ಕೆಲಸವಿದೆ. ಬೇರೆ ಬೇರೆ ಕಡೆಯಿಂದ ಬಂದ ಅನೇಕ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ವೇದ ಪಾಠ, ಸಂಸ್ಕೃತ ಶ್ಲೋಕಗಳನ್ನು ಹೇಳಿಕೊಡುವುದಿದೆ. ಹಾಗಾಗಿ ನಿಮ್ಮೊಂದಿಗೆ ಬರಲಾಗುವುದಿಲ್ಲ. ಯಾರೂ ಬೇಸರಿಸಬಾರದು. ನನ್ನ ಬದಲಿಗೆ ಒಬ್ಬ ಪ್ರತಿನಿಧಿಯನ್ನು ಕಳಿಸುತ್ತೇನೆ. ಎಲ್ಲರಿಗೂ ಹಾಗಲಕಾಯಿಗಳನ್ನು ಕೊಡುತ್ತೇನೆ. ನೀವು ಇದನ್ನು ಎಲ್ಲಾ ತಿರ್ಥಕ್ಷೇತ್ರಗಳಿಗೂ ಒಯ್ಯಿರಿ. ಅಲ್ಲಿ ಈ ಹಾಗಲಕಾಯಿಗಳಿಗೆ ಸ್ನಾನ ಮಾಡಿಸಿ, ದೇವರ ದರ್ಶನ ಮಾಡಿಸಿ’ ಎಂದಿತು ಸಾಧ್ವಿ ಮೊಲಕ್ಕ.

‘ಆಯ್ತು, ಆಯ್ತು ಕೊಡಿ ತಾಯಿ’ ಎಂದು ಒಂದೊಂದು ಹಾಗಲಕಾಯಿ ಪಡೆದು ತಮ್ಮ ತಮ್ಮ ಜೋಳಿಗೆಯಲ್ಲಿ ಹಾಕಿಕೊಂಡವು. ಸಾಧ್ವಿ ಮೊಲಕ್ಕನ ಆಶ್ರಮದಿಂದ ಹೊರಟವು.

ಹದಿನೈದು ದಿನಗಳು ಕಳೆದವು. ತೀರ್ಥಕ್ಷೇತ್ರಗಳಿಗೆ ಭೇಟಿ ಕೊಟ್ಟು ದೇವರ ದರ್ಶನ ಮಾಡಿಕೊಂಡು ಪ್ರಾಣಿಗಳು ಕಾಡಿಗೆ ಮರಳಿದವು.

ಅವು ಸಾಧ್ವಿ ಮೊಲಕ್ಕನ ಆಶ್ರಮಕ್ಕೆ ಬಂದವು. ‘ತಾಯಿ, ತಾವು ನೀಡಿದ ಹಾಗಲಕಾಯಿಗೆ ದೇವರ ದರ್ಶನ ಮಾಡಿಸಿದ್ದೇವೆ. ತೆಗೆದುಕೊಳ್ಳಿ’ ಎಂದು ಹಾಗಲಕಾಯಿಗಳನ್ನು ಎಲ್ಲಾ ಪ್ರಾಣಿಗಳೂ ವಾಪಸ್ಸು ನೀಡಿದವು.

‘ಯಾವುದೇ ಅವಘಡವಿಲ್ಲದೆ ನೀವೆಲ್ಲಾ ಸಂತೋಷದಿಂದ ತೀರ್ಥಯಾತ್ರೆ ಮುಗಿಸಿಕೊಂಡು ಬಂದಿದ್ದೀರಿ, ಅದಕ್ಕಾಗಿ ನಿಮಗೆಲ್ಲ ಚಿಕ್ಕ ಔತಣಕೂಟ ಏರ್ಪಡಿಸಿದ್ದೇನೆ. ಎಲ್ಲರೂ ಬನ್ನಿರಿ’ ಎಂದಳು ಸಾಧ್ವಿ ಮೊಲಕ್ಕ.

ಹಾಗಲಕಾಯಿಯಿಂದ ತಯಾರಿಸಿದ ಪಲ್ಯವನ್ನು ಎಲ್ಲ ಪ್ರಾಣಿಗಳಿಗೂ ಬಡಿಸಲಾಯಿತು. ಹಾಗಲಕಾಯಿ ಪಲ್ಯ ತಿಂದ ಪ್ರಾಣಿಗಳೆಲ್ಲ ಒಂದೇ ಉಸಿರಿಗೆ ‘ಅಯ್ಯೋ, ಅಯ್ಯೋ ಅಮ್ಮಾ! ತಾಯಿ! ಕಹಿ, ಕಹಿ, ಇದನ್ನು ಹೇಗೆ ತಿನ್ನವುದು? ಇಷ್ಟೊಂದು ಕಹಿ ಇರುವ ಪಲ್ಯವನ್ನು ಹೇಗೆ ತಿನ್ನುವುದು ತಾಯಿ’ ಎಂದು ಕೂಗತೊಡಗಿದವು. ಆಗ ಸಾಧ್ವಿ ಮೊಲಕ್ಕ ಹೇಳಿತು, ‘ಇದು ನಿಮ್ಮೊಂದಿಗೆ ತೀರ್ಥಯಾತ್ರೆಗೆ ಬಂದಿತ್ತಲ್ಲ? ಇದಕ್ಕೂ ಕೂಡ ಸಪ್ತಕ್ಷೇತ್ರಗಳ ನೀರಿನಲ್ಲಿ ಸ್ನಾನ ಮಾಡಿಸಿದ್ದೀರಿ! ದೇವರ ದರ್ಶನ ಮಾಡಿಸಿದ್ದೀರಿ! ಆದರೂ ಅದರ ಕಹಿಗುಣ ಮಾತ್ರ ಹೋಗಲಿಲ್ಲ ಅಲ್ಲವೇ? ಕಹಿಭಾವ ದೂರವಾಗದಿದ್ದರೆ ಏನು ಪ್ರಯೋಜನ. ಮನಸ್ಸಿನಲ್ಲಿನ ಕಹಿಯನ್ನು ಮೊದಲು ದೂರ ಮಾಡಿಕೊಳ್ಳಿ’ ಎಂದಿತು ನಯವಾಗಿ.

ತೀರ್ಥಯಾತ್ರೆ ಮಾಡಿದ ಪ್ರಾಣಿಗಳ ಅಂತರಂಗದಲ್ಲಿ ಜಾಗೃತಿ ಮೂಡಿತು. ಎಲ್ಲಾ ಪ್ರಾಣಿಗಳು ನಾಚಿ ತಲೆ ತಗ್ಗಿಸಿದವು. ಆ ಕಹಿ ಹಾಗಲಕಾಯಿ ಯಾರು ಎಂಬ ಅರಿವು ಅವುಗಳಲ್ಲಿ ಮೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.