ADVERTISEMENT

ಧಾರಾವಿ ಕನ್ನಡಿಗರ ಧಾರಾವಾಹಿ

6ರಿಂದ 8 ಅಡಿ ವಿಸ್ತೀರ್ಣದ ಪುಟಾಣಿ ಮನೆಗಳಲ್ಲಿ ಬದುಕು

ರಾಹುಲ ಬೆಳಗಲಿ
Published 16 ಸೆಪ್ಟೆಂಬರ್ 2023, 23:30 IST
Last Updated 16 ಸೆಪ್ಟೆಂಬರ್ 2023, 23:30 IST
ಮಳೆಗಾಲದಲ್ಲಿ ಧಾರಾವಿಯ ಬಣ್ಣ ಹೀಗೆ ಬದಲಾಗುತ್ತದೆ...
ಮಳೆಗಾಲದಲ್ಲಿ ಧಾರಾವಿಯ ಬಣ್ಣ ಹೀಗೆ ಬದಲಾಗುತ್ತದೆ...   

‘ಸರ್, ಮುಂಬೈ ಇನ್ನೇನಿದ್ದರೂ ಎತ್ತರೆತ್ತರ ಬೆಳೆಯಬೇಕು. ಅಡ್ಡಡ್ಡ-ಉದ್ದುದ್ದ ಬೆಳೆಯೋಕೆ ಜಾಗವೇ ಇಲ್ಲ’ ಎಂದು ಸೂಕ್ಷ್ಮವಾಗಿ ಹೇಳಿದರು ಯಾದಗಿರಿಯ ಭೀಮರಾಯ ಚಿಲ್ಕಾ. ದಾರಿಯುದ್ದಕ್ಕೂ ಒಂದು ಬದಿ ಬಹು ಅಂತಸ್ತಿನ ಬೃಹತ್ ಕಟ್ಟಡಗಳು, ಮತ್ತೊಂದು ಬದಿ ಸಮುದ್ರ ತೋರಿಸುತ್ತ ಟ್ಯಾಕ್ಸಿಯಲ್ಲಿ ಕರೆದೊಯ್ಯುತ್ತಿದ್ದ ಅವರು ತಕ್ಷಣವೇ ಎಡಕ್ಕೆ ತಿರುಗಿಸುವಂತೆ ಚಾಲಕನಿಗೆ ಸನ್ನೆ ಮಾಡಿದರು. ‘ಇಗೋ ಇಲ್ಲಿ ನೋಡಿ ಅಂಬಾನಿ ಮನೆ’ ಎಂದ ಅವರು, ನಮ್ಮನ್ನು ಕೆಳಗಿಳಿಸಲಿಲ್ಲ. ಕಿಟಕಿಯ ಗಾಜನ್ನಷ್ಟೆ ಕೆಳಗಿಳಿಸಿ, ಅಲ್ಲಿಯೇ ಎರಡು ಸುತ್ತು ಹಾಕಿಸಿದರು. ಇಬ್ಬರು ಬಂದೂಕುಧಾರಿಗಳ ಜೊತೆಗೆ ಕಪ್ಪು ಉಡುಪಿನಲ್ಲಿ ಬಿಗಿ ಬಂದೋಬಸ್ತ್‌ಗೆಂದು ನಿಯೋಜಿತರಾಗಿದ್ದ ಕಟ್ಟುಮಸ್ತಾದ ನಾಲ್ವರನ್ನು ತೋರಿಸಿದರು.

‘27 ಅಂತಸ್ತಿನ ‘ಆ್ಯಂಟಿಲಿಯಾ’ ಹೆಸರಿನ ಈ ದೊಡ್ಡ ಮನೆಯಲ್ಲಿ ಜಗತ್ತೇ ಇದೆ. ಇದರ ಬೆಲೆ ₹ 15 ಸಾವಿರ ಕೋಟಿ. ಯಾವುದಕ್ಕೂ ಕೊರತೆ ಇಲ್ಲ. ಆದರೆ, ಇದರ ಎದುರು ನಾವು ಎರಡು ಕ್ಷಣ ನಿಲ್ಲುವುದಿರಲಿ, ಒಂದು ನೊಣ ಕೂಡ ಇಲ್ಲಿ ಸುಳಿಯಲು ಸಾಧ್ಯವಿಲ್ಲ’ ಎಂದರು. ‘ಮುಂಬೈಯಲ್ಲಿ ಎಲ್ಲರಿಗೂ ಹೀಗೆ ಐಷಾರಾಮಿ ಬಂಗಲೆ ಕಟ್ಟಿಕೊಳ್ಳಲು ಆಗಲ್ಲ. ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್‌, ರಸ್ತೆ ಬದಿ ಜೋಪಡಿ ಸಿಕ್ಕರೆ ಪುಣ್ಯ’ ಎಂದು ಹೇಳಿ ಮೌನವಾದರು. ಉದ್ಯಮಿ ಟಾಟಾ ಮನೆತನದ ನಿವಾಸ, ಶಾರುಖ್ ಖಾನ್‌ ಪ್ರೀತಿಯ ‘ಮನ್ನತ್’ನತ್ತ ಮಾತು ಹೊರಳಿತು. ಅವುಗಳನ್ನು ತೋರಿಸುವ ಉಮೇದು ಅವರಿಗಿತ್ತು. ಒಂದೇ ಸಂಜೆಯಲ್ಲಿ ಇಡೀ ಮುಂಬೈ ಸುತ್ತು ಹಾಕಿಸುವ ಅದಮ್ಯ ಉತ್ಸಾಹವೂ ಇತ್ತು. ಅವರ ಬೆನ್ನನ್ನು ಮೆಲ್ಲನೆ ತಟ್ಟಿ, ‘ನಿಮ್ಮ‌ ಮನೆ ದೊಡ್ಡದಾ? ಎಷ್ಟು ರೂಮ್ ಇವೆ? ಎಷ್ಟು ಜನ ಇದ್ದೀರಿ?’ ಎಂದು ಕುತೂಹಲಕ್ಕೆ ಕೇಳಿದೆ.

‘ಅದೇನು ಕೇಳ್ತೀರಾ? ಈ ಟ್ಯಾಕ್ಸಿ ಅರ್ಧದಷ್ಟು ನಮ್ಮ ಮನೆಯಿದೆ. ಅಲ್ಲಿಂದ ಎಂಟು ಅಡಿ, ಇಲ್ಲಿಂದ ಆರು ಅಡಿ ಹೆಜ್ಜೆ ಹಾಕಿದರೆ ಮನೆ ಮುಗಿಯಿತು. ಇಷ್ಟು ಜಾಗದಲ್ಲೇ ತಂದೆ–ತಾಯಿ, ತಮ್ಮ, ಹೆಂಡತಿ, ಮೂರು ತಿಂಗಳ ಕೂಸು ಸೇರಿ ಆರು ಜನ ಇದ್ದೀವಿ’ ಎಂಬ ಉತ್ತರ ಸಿಕ್ಕಿತು. ‘ಅದ್ಹೇಗೆ ಸಾಧ್ಯ, ಅಷ್ಟು ಕಿರಿದಾದ ಜಾಗದಲ್ಲಿ ಹೇಗೆ ಇರುತ್ತೀರಿ’ ಎಂದು ಪ್ರಶ್ನಿಸಿ, ಯೋಚನೆಗೆ ಬಿದ್ದೆ. ಹಾಗಿದ್ದರೆ, ಮನೆ ನೋಡಲೇಬೇಕು ಎಂದು ಪಟ್ಟು ಹಿಡಿದೆ.

ADVERTISEMENT
ಧಾರಾವಿ ಪ್ರದೇಶದ ಒಂದು ನೋಟ

‘ಯು’ ಟರ್ನ್ ತೆಗೆದುಕೊಂಡ ಟ್ಯಾಕ್ಸಿ ಅಲ್ಲಿ, ಇಲ್ಲಿ ಸುತ್ತುಹಾಕಿ ಕೊನೆಗೆ ನಿಂತಿದ್ದು ಧಾರಾವಿ ಪ್ರದೇಶದಲ್ಲಿ. ಅಲ್ಲಿ ಇಳಿದು ಸಂದಿಗೊಂದಿಗಳಲ್ಲಿ‌ ನುಸುಳಿ, ಪುಟ್ಟ ಪುಟ್ಟ ಚರಂಡಿಗಳನ್ನು ದಾಟಿ, ಕಿರಿದಾದ ದಾರಿಯಲ್ಲಿ ಹುಶಾರಾಗಿ‌‌‌ ಒಂದೊಂದೆ ಹೆಜ್ಜೆ ಇಡತೊಡಗಿದೆ. ನೋಡುನೋಡುತ್ತಿದ್ದಂತೆ ಅಲ್ಲಿ ಮುಂಬೈಯ ಇನ್ನೊಂದು ಮುಖ‌‌‌‌‌ ಅನಾವರಣಗೊಂಡಿತು. ಆರರಿಂದ ಎಂಟು ಅಡಿ ವಿಸ್ತೀರ್ಣದ ಸಾಲು ಮನೆಗಳು. ಒಂದು ಬೈಕ್‌ ಕೂಡ ಹೋಗದಷ್ಟು ಕಿರಿದಾದ ದಾರಿಯ ಎದುರು ಬದುರು ಪುಟ್ಟ ಕೋಣೆಗಳಂತೆ ಮನೆಗಳಿದ್ದರೆ, ಅಷ್ಟು ಸಣ್ಣ ಜಾಗದಲ್ಲಿಯೇ ಪುಟ್ಟ ಪುಟ್ಟ ಕಚೇರಿಗಳೂ ಕಂಡವು. ಜೊತೆಗೆ ತರಬೇತಿ ಕೇಂದ್ರಗಳು, ಕಿರಾಣಿ ಅಂಗಡಿಗಳು, ಸ್ವಯಂ ಸೇವಾ ಸಂಸ್ಥೆಗಳ ಶಾಖೆಗಳು.

ಭೀಮರಾಯ ಅವರ ಮನೆ ಹೊಕ್ಕಾಗ, ಮನೆಯೋ, ಅಡುಗೆಕೋಣೆಯೋ, ಗಂಟುಮೂಟೆಗಳ ಕೊಠಡಿಯೋ ಅಥವಾ ಶೌಚಾಲಯವೋ ಎಂದು ಗೊಂದಲವಾಯಿತು. ‘ಇದೇನೂ ಅಲ್ಲ’ ಎಂದು ಹೇಳಿ, ಅಲ್ಲಿಯೇ ಇದ್ದ ಪುಟ್ಟ ಏಣಿ ಹತ್ತಿಸಿ ಮೇಲಿನ ಮಹಡಿಗೆ ಕರೆದೊಯ್ದಾಗ, ಪುಟಾಣಿ ಅಡುಗೆಮನೆ ಮತ್ತು ಶೌಚಾಲಯದ ದರ್ಶನವಾಯಿತು. ‘ಇನ್ನೂ ಇದೆ... ಬನ್ನಿ’ ಎಂದು ಅಲ್ಲಿ ಮತ್ತೆ ಏಣಿ ಹತ್ತಿಸಿದರು. ಅಲ್ಲಿ ಮತ್ತೊಂದು ಕೋಣೆ. ನೀವೆಲ್ಲರೂ ಇಲ್ಲಿ ಹೇಗೆ ಇರುತ್ತೀರಿ ಎಂದು ಕೇಳುವಷ್ಟರಲ್ಲಿ, ‘ನೆಲಮಹಡಿಯಲ್ಲಿ ತಮ್ಮ, ಅಡುಗೆಮನೆಯಲ್ಲಿ ತಂದೆ–ತಾಯಿ ಮತ್ತು ಈ ಕೋಣೆಯಲ್ಲಿ ನಾನು, ಪತ್ನಿ ಮತ್ತು ಕೂಸು ಇರುತ್ತೇವೆ’ ಎಂದು ತಡ ಮಾಡದೇ ಹೇಳಿದರು.

ಏಷ್ಯಾದ ದೊಡ್ಡ ಕೊಳೆಗೇರಿ ಪ್ರದೇಶಗಳಲ್ಲಿ ಒಂದಾದ ‘ಧಾರಾವಿ’ಯ ಜೀವಾಳವೇ ಇಂಥ ಮನೆಗಳು. ದೇಶದ ಪ್ರತಿಯೊಂದು ರಾಜ್ಯದವರಿಗೂ ಆಶ್ರಯ ನೀಡಿ ‘ಮಿನಿ ಇಂಡಿಯಾ’ದಂತೆ ಇರುವ ಈ ಪ್ರದೇಶದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮಂದಿ ವಾಸವಿದ್ದಾರೆ. 2 ಕಿ.ಮೀ.ನಷ್ಟು ವ್ಯಾಪ್ತಿಯುಳ್ಳ ಈ ಪ್ರದೇಶದ ಅಂದಾಜು ವಿಸ್ತೀರ್ಣ 557 ಎಕರೆ. ‘ಕೂರಲು, ಮಲಗಲು ಕಿಂಚಿತ್ ಜಾಗ ಸಿಕ್ಕರೂ ಸಾಕು’ ಎಂದು ಬಯಸುವವರಿಗೆ ಇಲ್ಲಿ ನಿರಾಸೆ ಆಗುವುದಿಲ್ಲ. ಈ ಆಶಾಭಾವದಿಂದಲೇ ಲಕ್ಷಾಂತರ ಸಂಖ್ಯೆಯಲ್ಲಿ ಕನ್ನಡಿಗರು, ತೆಲುಗರು, ತಮಿಳರು, ಮಲಯಾಳಿಗಳು ಸೇರಿದಂತೆ ದೇಶದ ಮೂಲೆಮೂಲೆಯ ಜನರಿಗೆ ಇಲ್ಲಿ ಪುಟ್ಟ ಆಶ್ರಯ ತಾಣ ಮಾಡಿಕೊಂಡು ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ.

ಯಾದಗಿರಿ ಜಿಲ್ಲೆಯ ಕೊಂಕಲ್‌ನಿಂದ 40 ವರ್ಷಗಳ ಹಿಂದೆ ಸ್ನೇಹಿತರೊಂದಿಗೆ ಕೆಲಸ ಹುಡುಕಿಕೊಂಡು ಮುಂಬೈಗೆ ಬಂದ ಭೀಮರಾಯ ಅವರ ತಂದೆ ಭೀಮಶಾ ಅವರು ಟೆಕ್ಸ್‌ಟೈಲ್‌ ಮಿಲ್‌ಗಳಲ್ಲಿ ಕೆಲಸ ಮಾಡಿದರು. ಧಾರಾವಿಯಲ್ಲಿ ಆಗಿನ ಕಾಲಕ್ಕೆ
₹40 ಸಾವಿರಕ್ಕೆ ಜಾಗ ಪಡೆದು, ಪುಟ್ಟ ಮನೆ ನಿರ್ಮಿಕೊಂಡರು. ಈಗ ಅದೇ ಮನೆ, ಜಾಗ ಸೇರಿ ಒಟ್ಟು ದರ ₹ 30 ಲಕ್ಷದ ಆಸುಪಾಸು ಇದೆ. ಒಂದು ಕೊಠಡಿಯ ಮನೆಯ ಬಾಡಿಗೆ ₹ 1 ಸಾವಿರ, ಎರಡಕ್ಕಿಂತ ಹೆಚ್ಚು ಕೊಠಡಿಗಳು ಇರುವ ಮನೆಗೆ ₹ 2 ಸಾವಿರಕ್ಕೂ ಹೆಚ್ಚು ಬಾಡಿಗೆ. ಇಲ್ಲಿನ ನಿವಾಸಿಗಳ ಪ್ರಕಾರ, ಮನೆ ದೊಡ್ಡದೋ–ಚಿಕ್ಕದೋ ಎಂಬುದಕ್ಕಿಂತ ಇರಲಿಕ್ಕೆ ಜಾಗ ಸಿಕ್ಕಿತು ಎನ್ನುವುದಷ್ಟೆ ಮುಖ್ಯ. ಈ ಪುಟ್ಟ ಮನೆಗಳು ಮನುಷ್ಯರಿಗೆ ಅಷ್ಟೇ ಸೀಮಿತವಲ್ಲ; ನಾಯಿ, ಬೆಕ್ಕು, ಪಕ್ಷಿ, ಇಲಿಮರಿಗಳು ಮುಂತಾದವೂ ಕುಟುಂಬದ ಸದಸ್ಯರಂತೆಯೇ ಇವೆ.

ಮಳೆಗಾಲದಲ್ಲಿ ಧಾರಾವಿಯ ಬಣ್ಣ ಹೀಗೆ ಬದಲಾಗುತ್ತದೆ...

ಆಸಕ್ತಿಕರ ಸಂಗತಿಯೆಂದರೆ, ಇಲ್ಲಿ ನೀರಿನ ಸಮಸ್ಯೆಯಿಲ್ಲ ಮತ್ತು ಜಾಗ ಹೊರತುಪಡಿಸಿ ಸೌಲಭ್ಯಗಳ ಕೊರತೆಗಳಿಲ್ಲ. ಕುಡಿಯಲು ಮತ್ತು ಬಳಸಲು ನೀರು ಸಿಗುತ್ತದೆ. ಆದರೆ, ಪುಟ್ಟ ಲೋಟದಿಂದ ದೊಡ್ಡ ಟ್ಯಾಂಕ್‌ವರೆಗೆ ಶೇಖರಿಸಿಡುವುದೇ ಸವಾಲು. ಮುಂಬೈನ ಪ್ರತಿಷ್ಠಿತ ಪ್ರದೇಶಗಳಲ್ಲಿ ದೊರೆಯುವ ಪ್ರತಿಯೊಂದು ವಸ್ತು ಇಲ್ಲೂ ಸಿಗುತ್ತದೆ. ‘ಅವರು ಮಾಲ್‌ಗಳಲ್ಲಿ ಖರೀದಿಸಿದರೆ, ನಾವು ಇಲ್ಲಿನ ಕಿರಾಣಿ ಅಂಗಡಿ ಮತ್ತು ಸಣ್ಣಪುಟ್ಟ ಗೃಹ ಕೈಗಾರಿಕೆಗಳಲ್ಲಿ ಕೊಳ್ಳುತ್ತೇವೆ’ ಎಂದು ಸ್ವಾಭಿಮಾನದಿಂದ ಹೇಳುತ್ತಾರೆ. ಸ್ವಯಂ ಉದ್ಯೋಗ ಕಂಡುಕೊಂಡಿರುವ ಇಲ್ಲಿನ ಬಹುತೇಕ ಮಂದಿ ಅಕ್ಷರಸ್ಥರಾಗಿದ್ದು, ಜಾತಿ–ಧರ್ಮದ ತಾರತಮ್ಯ ಮಾಡದೇ ಅಲ್ಲಿನ ಸುತ್ತಮುತ್ತಲ ನಿವಾಸಿಗಳಿಗೂ ಉದ್ಯೋಗ ನೀಡಿದ್ದಾರೆ.

ಮಲಮೂತ್ರ ವಿಸರ್ಜನೆಗೆ ಅಲ್ಲಿನ ಬೃಹನ್ ಮುಂಬೈ ಪಾಲಿಕೆಯು ಸಾರ್ವಜನಿಕ ಶೌಚಾಲಯ ನಿರ್ಮಿಸಿಕೊಟ್ಟಿದೆ. ಅದರ ಬಳಕೆಗೆ ಕೆಲ ಕಡೆ ₹ 2 ಶುಲ್ಕವಿದ್ದರೆ, ಇನ್ನೂ ಕೆಲ ಕಡೆ ಸಂಪೂರ್ಣ ಉಚಿತ. ಗಣೇಶೋತ್ಸವ, ಈದ್, ಓಣಂ, ಕ್ರಿಸ್‌ಮಸ್ ಸೇರಿ ವಿವಿಧ ಹಬ್ಬಗಳನ್ನು ಜೊತೆಗೂಡಿ ಆಚರಿಸುವ ಕಾರಣ ಇಲ್ಲಿನ ನಿವಾಸಿಗಳು ವೈವಿಧ್ಯಮಯ ಸಂಸ್ಕೃತಿ ಅರಿಯುವುದರ ಜೊತೆಗೆ ಹಲವು ಭಾಷೆಗಳನ್ನು ಕಲಿತಿದ್ದಾರೆ. ಪರಸ್ಪರರ ಜೀವನಶೈಲಿಗಳನ್ನು ಹತ್ತಿರದಿಂದ ಕಂಡುಕೊಂಡಿದ್ದಾರೆ.

‘ಕಲ್ಯಾಣ ಕರ್ನಾಟಕದ ಜಿಲ್ಲೆಯವರೇ ಹೆಚ್ಚಿನ ಸಂಖ್ಯೆಯಲ್ಲಿದ್ದೇವೆ. ಇಲ್ಲಿನ ಆಂಧ್ರ ಕರ್ನಾಟಕ ದಲಿತ ವರ್ಗಗಳ ಸಂಘವು ಕನ್ನಡ ಉಳಿಸುವ ಕಾಯಕದ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತದೆ. ಕಡಿಮೆ ಶುಲ್ಕವಿದೆ. ಬಡಮಕ್ಕಳಿಗೆ ಉಚಿತ ಶಿಕ್ಷಣದ ವ್ಯವಸ್ಥೆಯೂ ಇದೆ. ಅಲ್ಲದೇ ಇಲ್ಲಿ ನಾವು ಪೂಜಿಸುವ ದೇವರ ದೇವಸ್ಥಾನಗಳಿವೆ. ವಿವಿಧ ಸಂಘ–ಸಂಸ್ಥೆಯವರು ಧಾರ್ಮಿಕ ಕಾರ್ಯಗಳ ಜೊತೆ ಸಮಾಜಸೇವೆಯನ್ನೂ ಮಾಡುತ್ತಾರೆ’ ಎಂದು ಹೇಳುವ ಶಂಕರಪ್ಪ ಅವರಿಗೆ ಧಾರಾವಿ ಪ್ರದೇಶವು ಎಲ್ಲವನ್ನೂ ಧಾರೆಯೆರೆದಿದೆ. ಸಂಕಷ್ಟ, ಸವಾಲು ಮತ್ತು ಅಭದ್ರತೆ ಇದ್ದರೂ ಅದು ಸೋಕದಂತೆ ಕಾಪಿಟ್ಟುಕೊಂಡು ಬಂದಿರುವ ಧಾರಾವಿ ಎಂಬ ತಾಯಿಯ ಮಡಿಲಿನಿಂದ ದೂರ ಹೋಗಲು ಶಂಕರಪ್ಪ ಅವರಂತಹ ಬಹುತೇಕ ಜನ ಬಯಸುವುದಿಲ್ಲ.

‘ಧಾರಾವಿಯಲ್ಲಿನ ಎಲ್ಲಾ ಮನೆ, ಜೋಪಡಿ, ಕಟ್ಟಡಗಳನ್ನು ತೆರವುಗೊಳಿಸಿ ಚೆಂದದ ಮನೆಗಳನ್ನು ಕಟ್ಟಿಸಿಕೊಡುವ ಭರವಸೆ ಹಲವು ಸಲ ಸಿಕ್ಕಿದೆ. ಆದರೆ, ಕಾರ್ಯರೂಪಕ್ಕೆ ಬಂದಿಲ್ಲ. ಪುಟ್ಟ ಪುಟ್ಟ ಮನೆಗಳಲ್ಲಿ ಪರಸ್ಪರ ಉಸಿರು ತಾಗಿಸಿಕೊಂಡು ಕೋವಿಡ್‌ ದಿನಗಳಲ್ಲೇ ಬದುಕಿದ ನಮಗೆ ಇನ್ನು ಯಾವ ಭಯವೂ ಇಲ್ಲ. ಆದರೆ, ಜಗತ್ತು ಬದಲಾದಂತೆ ನಮ್ಮ ಜೀವನವೂ ಬದಲಾಗಬೇಕು ಎಂಬ ಪುಟ್ಟ ಆಸೆ ನಮ್ಮದು. ದೊಡ್ಡ ಮನೆ ಇರಬೇಕು, ಖಾಸಗೀತನಕ್ಕೆ ಅವಕಾಶ ಸಿಗಬೇಕು, ನಿಮ್ಮಂತೆಯೇ ನಾವು ಇದ್ದೇವೆ ಎಂಬುದನ್ನು ಜಗತ್ತಿಗೆ ಸಾರಿ ಹೇಳಬೇಕು ಎಂಬ ಬಯಕೆ ಇದೆ. ಮುಂದಿನ ಪೀಳಿಗೆಯವರು ಇದೇ ಧಾರಾವಿಯಲ್ಲೇ ಬದುಕಬಹುದು. ಆದರೆ, ವೇಗವಾಗಿ ಓಡುತ್ತಿರುವ ಜಗತ್ತಿನ ಜೊತೆ ಸೆಣಸಾಡುವರೇ ಎಂಬ ಪ್ರಶ್ನೆ ಪದೇ ಪದೇ ಕಾಡುತ್ತದೆ. ಸ್ಲಂ ನಿವಾಸಿಗಳು ಎನ್ನುವ ಬದಲು ನಮ್ಮ ನಿವಾಸಿಗಳು ಎಂದು ಮುಂಬೈನವರು ಕರೆದು ಆಪ್ತವಾಗಿ ಮಾತನಾಡುವ ದಿನಗಳು ಬರುತ್ತವೆಯೇ’ ಎಂಬ ನಿರೀಕ್ಷೆ ಧಾರಾವಿ ನಿವಾಸಿಗಳದ್ದು.

ಕಿರಿದಾದ ಮನೆಯಲ್ಲಿ ಅರಮನೆಯಂತಹ ಪ್ರೀತಿ ತೋರಿದ ಭೀಮರಾಯ ಮತ್ತು ಕುಟುಂಬ ಸದಸ್ಯರು, ‘ಜಾಗ ಚಿಕ್ಕದಿರಬಹುದು. ಆದರೆ, ನಮ್ಮ ಮನಸ್ಸು ದೊಡ್ಡದು. ಆಪ್ತರಿಗೆ ಯಾವಾಗಲೂ ಪ್ರೀತಿಯ ಸ್ವಾಗತವಿದೆ. ಸಂಕೋಚಪಡದೇ ಎಷ್ಟು ದಿನಗಳಾದರೂ ನಮ್ಮೊಂದಿಗೆ ಇರಿ. ಮುಂಬೈ ಜೊತೆ ಧಾರಾವಿಯನ್ನು ಇನ್ನಷ್ಟು ಪರಿಚಯಿಸುತ್ತೇವೆ’ ಎನ್ನುತ್ತ ಬೀಳ್ಕೊಟ್ಟರು. ಅಲ್ಲಿಂದ ನಿರ್ಗಮಿಸುವಾಗ, ಬೀಳ್ಕೊಡುವವರ ಸಂಖ್ಯೆ ಹೆಚ್ಚುತ್ತಲೇ ಇತ್ತು.

ಪತ್ನಿ ಶರಣಮ್ಮ ಜೊತೆ ಭೀಮರಾಯ ಚಿಲ್ಕಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.