ADVERTISEMENT

ಕೋಮು ಸೌಹಾರ್ದತೆ ಮತ್ತು ಸಮಕಾಲೀನತೆ

ಚ.ಹ.ರಘುನಾಥ
Published 28 ಫೆಬ್ರುವರಿ 2015, 19:30 IST
Last Updated 28 ಫೆಬ್ರುವರಿ 2015, 19:30 IST

ಕೋಮು ಸೌಹಾರ್ದತೆ ಮತ್ತು ಸಮಕಾಲೀನತೆ
ಸಂ: ಡಾ. ಕಾ.ವೆಂ. ಶ್ರೀನಿವಾಸಮೂರ್ತಿ
ಪು: 204; ಬೆ: ರೂ. 150
ಪ್ರ: ಸಿವಿಜಿ ಇಂಡಿಯಾ, ಕಸ್ತೂರ್‌ಬಾ ಭವನ, ಗಾಂಧಿಭವನ ಆವರಣ, ಕುಮಾರಪಾರ್ಕ್‌ ಪೂರ್ವ, ಬೆಂಗಳೂರು– 560001.


ಕನ್ನಡ ಸಾಹಿತ್ಯ ಕೋಮುವಾದದ ಎತ್ತಿರುವ ದನಿ ಹಾಗೂ ಜಾತ್ಯತೀಯ ಸಮಾಜದ ಬಗ್ಗೆ ಕಂಡಿರುವ ಕನಸಿನ ಒಂದು ತುಣುಕು ‘ಕೋಮು ಸೌಹಾರ್ದತೆ ಮತ್ತು ಸಮಕಾಲೀನತೆ’ ಸಂಕಲನದ ಕವಿತೆಗಳಲ್ಲಿ ಸಂಕಲನಗೊಂಡಿದೆ. ಇಲ್ಲಿನ ಹಲವು ಕವಿತೆಗಳು ಕವಿಗಳ ರಾಜಕೀಯ ಮನೋಧರ್ಮ, ಸಾಮಾಜಿಕ ಕಾಳಜಿ ಹಾಗೂ ಆರೋಗ್ಯಕರ ಸಮಾಜದ ಕನವರಿಕೆಯ ಅಭಿವ್ಯಕ್ತಿಯಂತಿವೆ. ಆದರೆ, ಸಂಕಲನದ ಶೀರ್ಷಿಕೆಯಲ್ಲಿ ಇರುವ ಸಮಕಾಲೀನತೆಗೆ ಕೃತಿಯಲ್ಲಿ ಹೆಚ್ಚಿನ ಒತ್ತು ಸಿಕ್ಕಿದೆ, ಕೋಮು ಸೌಹಾರ್ದತೆ ಇಲ್ಲಿ ವಾಚ್ಯವಾಗಿದೆ. ಕನ್ನಡದ ಪೂರ್ವಸೂರಿ ಕವಿಯಾದ ಪಂಪನ ವಿಶ್ವಮಾನವ ಸಂದೇಶ ಇಲ್ಲಿ ಸೇರ್ಪಡೆಯಾಗಿಲ್ಲ. ಕವಿರಾಜ ಮಾರ್ಗಕಾರ ಚಿತ್ರಿಸಿರುವ ಕನ್ನಡಿಗರ ಉದಾರತೆಗೂ ಅವಕಾಶ ಸಿಕ್ಕಿಲ್ಲ. ಹೀಗಿರುವಾಗ ಕುವೆಂಪು, ಬೇಂದ್ರೆ ಅವರ ಮಾನವೀಯ ಹಾಡುಗಳನ್ನು ಈ ಸಂಕಲನದಲ್ಲಿ ನಿರೀಕ್ಷಿಸುವುದು ಕಷ್ಟ.

ಚೆನ್ನವೀರ ಕಣವಿ, ಅರವಿಂದ ಮಾಲಗತ್ತಿ, ರೂಪ ಹಾಸನ, ಜಿ.ವಿ. ಆನಂದಮೂರ್ತಿ, ಟಿ. ಯಲ್ಲಪ್ಪ, ಸತೀಶ ಕುಲಕರ್ಣಿ, ಎಚ್.ಎಸ್‌. ವೆಂಕಟೇಶಮೂರ್ತಿ, ಸಿದ್ದಲಿಂಗಯ್ಯ, ಮುಂತಾದವರ ಪದ್ಯಗಳು ಈ ಸಂಕಲನದಲ್ಲಿವೆ. ಪದ್ಯರೂಪದ ಹೇಳಿಕೆಗಳೂ ಸಾಕಷ್ಟಿವೆ.
ಆಶಾವಾದದ ಜೊತೆಗೆ ನಿರಾಶೆಯೂ ಸಂಕಲನದ ಕವಿತೆಗಳಲ್ಲಿ ಇದೆ. ಸಂಕಲನದ ಆರಂಭಗೀತೆಯೇ ‘ಭಯಗೀತೆ’. ಜಿ.ಎಸ್‌. ಶಿವರುದ್ರಪ್ಪನವರ ಈ ಕವಿತೆ ಕೊನೆಗೊಳ್ಳುವುದು– ’ವ್ಯರ್ಥವಾಗುತಿದೆ ಹಿರಿಯರು ಕಲಿಸಿದ / ಸತ್ಯ ಅಹಿಂಸೆಯ ಮಂತ್ರಗಳು / ಉಸಿರು ಕಟ್ಟಿಸುವ ದಟ್ಟ ಹೊಗೆಯೊಳಗೆ / ತಡವರಿಸುತ್ತಿವೆ ಹೆಜ್ಜೆಗಳು’ ಎನ್ನುವ ಆತಂಕದಲ್ಲಿ. ಇದೇ ಕವಿ– ‘ಪಾಚಿಗಟ್ಟುತ್ತಿರುವ ಈ ನೀರುಗಳನ್ನು ಶುದ್ಧೀಕರಿಸುವುದು ಹೇಗೆ?’ ಎನ್ನುವ ಪ್ರಶ್ನೆ ಕೇಳುತ್ತ (ಕವಿತೆ: ಅಗ್ನಿಪರ್ವ), ವೇದ–ಖುರಾನು–ಬೈ–/ಬಲ್ಲಿನಿಂದಾಚೆ ಬಯಲ ಬೆಳಕಿನ ಕೆಳಗೆ / ಬದುಕುವುದನ್ನು ಇನ್ನಾದರೂ ಕಲಿಯು / ವುದು ಹೇಗೆ?’ ಎಂದು ಪ್ರಶ್ನೆಗಳನ್ನು ಸಹೃದಯರ ಎದೆಗೆ ದಾಟಿಸುತ್ತಾರೆ.
ಈ ಸಂಕಲನದ ಆಶಯ ಒಳ್ಳೆಯದು. ಆದರೆ, ಇದು ಸೀಮಿತ ಕಣ್ಣಳತೆಯ ಕಾವ್ಯ. ಇಲ್ಲಿ ಸೇರಿರುವುದಕ್ಕಿಂತಲೂ ಸೇರದೇ ಹೋಗಿರುವುದೇ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT