ADVERTISEMENT

ಆರ್‌ಕಾಮ್‌–ಏರ್‌ಸೆಲ್‌ ವಿಲೀನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST
ಆರ್‌ಕಾಮ್‌–ಏರ್‌ಸೆಲ್‌ ವಿಲೀನ
ಆರ್‌ಕಾಮ್‌–ಏರ್‌ಸೆಲ್‌ ವಿಲೀನ   

ಮುಂಬೈ: ಟೆಲಿಕಾಂ ಸಂಸ್ಥೆ ಏರ್‌ಸೆಲ್‌ ಜತೆ, ಉದ್ಯಮಿ ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಕಮ್ಯೂನಿಕೇಷನ್ಸ್‌(ಆರ್‌ಕಾಮ್‌) ವಿಲೀನವಾಗಲಿದೆ.

ಸೋಮವಾರ ನಡೆದ ಸಭೆಯಲ್ಲಿ ರಿಲಯನ್ಸ್‌ ಕಮ್ಯೂನಿಕೇಷ್‌ನ ವೈರ್‌ಲೆಸ್‌ ವಹಿವಾಟನ್ನು ಏರ್‌ಸೆಲ್‌ನಲ್ಲಿ ವಿಲೀನಕ್ಕೆ ಶೇ 99.99 ಷೇರುದಾರರು ಒಪ್ಪಿಗೆ ನೀಡಿದ್ದಾರೆ ಎಂದು ಕಂಪೆನಿ ಪ್ರಕಟಣೆ ಹೇಳಿದೆ.

ವಿಲೀನದ ನಂತರ ಆರ್‌ಕಾಮ್‌ ಮತ್ತು ಏರ್‌ಸೆಲ್‌ ಕಂಪೆನಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದ ದೇಶದ ನಾಲ್ಕನೇ ದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಹೊರಹೊಮ್ಮಲಿದೆ. ಆದಾಯವಾರು ಮೂರನೇ ದೊಡ್ಡ ಕಂಪೆನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ADVERTISEMENT

ಹೆಚ್ಚು ಸಾಮರ್ಥ್ಯದ ತರಂಗಾಂತರ ಹೊಂದಿದ ದೇಶದ ಎರಡನೇ ದೊಡ್ಡ ಕಂಪೆನಿಯೂ ಇದಾಗಲಿದೆ. ಏ.22ರಂದು ನಡೆದ ಸಭೆಯಲ್ಲಿ ಏರ್‌ಸೆಲ್‌ ಷೇರುದಾರರು ವಿಲೀನಕ್ಕೆ ಒಪ್ಪಿಗೆ ನೀಡಿದ್ದರು. ವಿಲೀನದ ನಂತರ ಕಂಪೆನಿಯ  ಒಟ್ಟು ಸಂಪತ್ತಿನ ಮೌಲ್ಯ ₹65,000 ಕೋಟಿಗೂ ಮತ್ತು ನಿವ್ವಳ ಸಂಪತ್ತು ₹35,000 ಕೋಟಿಗೂ ಹೆಚ್ಚಲಿದೆ.  ಹೊಸ ವಹಿವಾಟಿನಲ್ಲಿ ಎರಡೂ ಕಂಪೆನಿಗಳು ಸಮ ಪಾಲು ಹೊಂದಿರುತ್ತವೆ.

ಕಂಪೆನಿಯ ನಿರ್ದೇಶಕ ಮಂಡಳಿ ಮತ್ತು ಸಮಿತಿಗಳಲ್ಲಿ ಎರಡೂ ಕಂಪೆನಿಗಳಿಗೆ ಸಮನಾದ ಪ್ರಾತಿನಿಧ್ಯವಿರುತ್ತದೆ.

ರಿಲಯನ್ಸ್‌ ಕಮ್ಯೂನಿಕೇಷನ್ಸ್‌ ಒಟ್ಟು ಸಾಲದಲ್ಲಿ ₹20,000 ಕೋಟಿಯಷ್ಟು (ಶೇ 40) ಮತ್ತು ಏರ್‌ಸೆಲ್‌ ಸಾಲ ₹4,000 ಕೋಟಿಯಷ್ಟು ಕಡಿಮೆಯಾಗಲಿದೆ. 2017ರ ಅಂತ್ಯದ ವೇಳೆಗೆ ವಹಿವಾಟು ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಕಂಪೆನಿಗಳ ವಿಲೀನಕ್ಕೂ ಮುನ್ನ ಷೇರುದಾರರ ಒಪ್ಪಿಗೆ ಪಡೆಯುವಂತೆ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ (ಎನ್‌ಎಲ್‌ಸಿಟಿ) ಎರಡೂ ಕಂಪೆನಿಗಳಿಗೂ ಸೂಚಿಸಿತ್ತು. ಮುಂಬೈ ಷೇರುಪೇಟೆ(ಬಿಎಸ್‌ಇ), ರಾಷ್ಟ್ರೀಯ ಷೇರುಪೇಟೆ, ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಈಗಾಗಲೇ ವಿಲೀನಕ್ಕೆ ಹಸಿರು ನಿಶಾನೆ ತೋರಿವೆ.

ಉಚಿತ ಕೊಡುಗೆ: ಜಿಯೊ ನಷ್ಟ ಹೆಚ್ಚಳ
ನವದೆಹಲಿ (ಪಿಟಿಐ):
ಆರು ತಿಂಗಳಲ್ಲಿ (ಅಕ್ಟೋಬರ್‌–ಮಾರ್ಚ್ ಅವಧಿ) ಉದ್ಯಮಿ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೊ ₹22.50 ಕೋಟಿಗಳಷ್ಟು ನಿವ್ವಳ ನಷ್ಟ ಅನುಭವಿಸಿದೆ.ಒಂದರ ಹಿಂದೆ ಒಂದರಂತೆ ಗ್ರಾಹಕರಿಗೆ ಮೂರು ತಿಂಗಳಿಗೆ ಒಂದರಂತೆ ಎರಡು ಬಾರಿ ಉಚಿತ ಕೊಡುಗೆ ಘೋಷಿಸಿದ ಜಿಯೊ ಈ ಅವಧಿಯಲ್ಲಿ ಶೂನ್ಯ ಆದಾಯ ಹೊಂದಿತ್ತು.

ಕಳೆದ ವರ್ಷ ಇದೇ ಅವಧಿಯಲ್ಲಿ  ₹7.46 ಕೋಟಿ ನಿವ್ವಳ ನಷ್ಟ ಅನುಭವಿಸಿತ್ತು ಎಂದು ಕಂಪೆನಿ ಮುಂಬೈ ಷೇರುಪೇಟೆಗೆ (ಬಿಎಸ್‌ಇ) ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ಸೆಪ್ಟೆಂಬರ್ 2016ರಲ್ಲಿ ಅಧಿಕೃತವಾಗಿ ಮಾರುಕಟ್ಟೆಗೆ ಬಂದಿದ್ದ ಜಿಯೊ ಅಕ್ಟೋಬರ್‌ನಿಂದ ಮಾರ್ಚ್ ಅವಧಿಯಲ್ಲಿ ಆದಾಯ ಗಳಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.