ADVERTISEMENT

ಆರ್‌ಬಿಐ ಬಡ್ಡಿ ದರ ಯಥಾಸ್ಥಿತಿ

ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಬ್ಯಾಂಕುಗಳ ಹಿಂದೇಟು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2015, 10:27 IST
Last Updated 4 ಆಗಸ್ಟ್ 2015, 10:27 IST

ಮುಂಬೈ (ಪಿಟಿಐ): ಭಾರತೀಯ ರಿಸರ್ವ್‌ ಬ್ಯಾಂಕ್‌ ಮಂಗಳವಾರ ಮೂರನೆಯ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಪ್ರಕಟಿಸಿದ್ದು, ಬಡ್ಡಿ ದರದಲ್ಲಿ ಯಥಾಸ್ಥಿತಿಯನ್ನೇ ಕಾಯ್ದುಕೊಂಡಿದೆ.

ಶೇ 7.25 ರಷ್ಟಿದ್ದ  ರೆಪೊ ದರ  ಮತ್ತು ಶೇ 4ರಷ್ಟಿದ್ದ ನಗದು ಮೀಸಲು ಅನುಪಾತದಲ್ಲಿ (ಸಿಆರ್‌ಆರ್‌) ದರದಲ್ಲಿ ಯಾವುದೇ ವ್ಯತ್ಯಾಸ ಮಾಡಿಲ್ಲ. ಹೀಗಾಗಿ ಸಾಲದ ಸಮಾನ ಮಾಸಿಕ ಕಂತಿನಲ್ಲಿ (ಇಎಂಐ) ಯಾವುದೇ ಬದಲಾವಣೆಯಾಗಿಲ್ಲ.

ಉದ್ಯಮ ವಲಯ ಆರ್‌ಬಿಐ ನಡೆಗೆ ಅಸಮಾಧಾನ ವ್ಯಕ್ತಪಡಿಸಿದೆ. ಆದರೆ, ಆರ್ಥಿಕ ಚೇತರಿಕೆ, ಹಣದುಬ್ಬರ ಮತ್ತು ಮುಂಗಾರು ನೋಡಿಕೊಂಡು ಮುಂದಿನ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿ ದರ ಕಡಿತ ಮಾಡುವ ಸುಳಿವನ್ನು ಆರ್‌ಬಿಐ ಗವರ್ನರ್‌ ರಘುರಾಂ ರಾಜನ್‌ ನೀಡಿದ್ದಾರೆ.

ಬ್ಯಾಂಕುಗಳ ಹಿಂದೇಟು: ಕಳೆದ ಜನವರಿಯಿಂದ ಇಲ್ಲಿಯವರೆಗೆ ಆರ್‌ಬಿಐ ಒಟ್ಟಾರೆ ಶೇ 0.75ರಷ್ಟು ಬಡ್ಡಿ ದರ ಇಳಿಕೆ ಮಾಡಿದೆ. ಆದರೆ, ಬ್ಯಾಂಕುಗಳು ಇದರಲ್ಲಿ ಶೇ 0.3ರಷ್ಟನ್ನು ಮಾತ್ರ ಗ್ರಾಹಕರಿಗೆ ವರ್ಗಾಯಿಸಿವೆ. ಈ ಅಂಶವನ್ನು ಕೂಡ ಉದ್ಯಮ ವಲಯ ಮತ್ತು ಸರ್ಕಾರ ಗಮನಿಸಬೇಕು ಎಂದು ಗವರ್ನರ್‌ ಹೇಳಿದ್ದಾರೆ.

2015–16ನೇ ಸಾಲಿನಲ್ಲಿ ಶೇ 7.6ರಷ್ಟು ಜಿಡಿಪಿ ಪ್ರಗತಿಯನ್ನು ಆರ್‌ಬಿಐ ಅಂದಾಜು ಮಾಡಿದೆ.   ಮುಂದಿನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಸೆಪ್ಟೆಂಬರ್‌ 29ರಂದು ಪ್ರಕಟಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT