ADVERTISEMENT

ಎಟಿಎಂ ಖಾಲಿ, ಖಾಲಿ

ಪಿಟಿಐ
Published 21 ಏಪ್ರಿಲ್ 2017, 19:30 IST
Last Updated 21 ಏಪ್ರಿಲ್ 2017, 19:30 IST
ಎಟಿಎಂ ಖಾಲಿ, ಖಾಲಿ
ಎಟಿಎಂ ಖಾಲಿ, ಖಾಲಿ   

ನವದೆಹಲಿ:ದೇಶದಾದ್ಯಂತ ಹೆಚ್ಚಿನ ಎಟಿಎಂಗಳಲ್ಲಿ ಹಣ ಸಿಗದೆ ಗ್ರಾಹಕರು ಪಡಿಪಾಟಲು ಪಡುತ್ತಿರುವುದು  ಸಮೀಕ್ಷೆಯೊಂದರಲ್ಲಿ ಬಹಿರಂಗವಾಗಿದೆ.
ನೋಟು ರದ್ದತಿಯ ಬಳಿಕ ಬಿಗಡಾಯಿಸಿದ್ದ ಪರಿಸ್ಥಿತಿ ಜನವರಿ ಮತ್ತು ಫೆಬ್ರುವರಿಯಲ್ಲಿ ಸಹಜ ಸ್ಥಿತಿಗೆ ಮರಳಿತ್ತು. ಆದರೆ, ಏಪ್ರಿಲ್‌ನಲ್ಲಿ ಮತ್ತೆ ಎಟಿಎಂಗಳಲ್ಲಿ ಹಣದ ಕೊರತೆ ಸಮಸ್ಯೆ ಉಲ್ಬಣಿಸಿರುವುದು ಖಾಸಗಿ ಸಂಸ್ಥೆ  ‘ಲೋಕಲ್‌ ಸರ್ಕಲ್ಸ್‌’  ನಡೆಸಿದ ಸಮೀಕ್ಷೆಯಲ್ಲಿ ಕಂಡು ಬಂದಿದೆ.

ಈ ಸಮೀಕ್ಷೆಯಲ್ಲಿ 11 ನಗರಗಳಲ್ಲಿನ 8,000  ಜನರು ಭಾಗವಹಿಸಿದ್ದರು ಎಂದು ಸಂಸ್ಥೆ ತಿಳಿಸಿದೆ. ಏಪ್ರಿಲ್‌ 5ರಿಂದ 16ರ ಅವಧಿಯಲ್ಲಿ ಎಟಿಎಂಗಳಲ್ಲಿ ಹಣದ ಲಭ್ಯತೆಯನ್ನು ಸಮೀಕ್ಷೆಯಲ್ಲಿ   ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ.  

ನಗದು ಪಡೆಯಲು ವಿಧಿಸಲಾಗಿದ್ದ ಮಿತಿಯನ್ನು ಆರ್‌ಬಿಐ ಮಾರ್ಚ್‌ 13ರ ನಂತರ ತೆಗೆದು ಹಾಕಿದ ನಂತರ ಗ್ರಾಹಕರು  ಮನಬಂದಂತೆ ಹಣ ತೆಗೆಯುತ್ತಿರುವುದು ಸಮಸ್ಯೆಗೆ ಪ್ರಮುಖ ಕಾರಣ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಗ್ರಾಹಕರು ಅಭಿಪ್ರಾಯಪಟ್ಟಿದ್ದಾರೆ.
‘ನೋಟು ಮುದ್ರಣ ಘಟಕಗಳಿಂದ ಬ್ಯಾಂಕ್‌ಗಳಿಗೆ ನಗದು ಪೂರೈಕೆಯಲ್ಲಿ ಆಗತ್ತಿರುವ ವಿಳಂಬ ಮತ್ತು ಪ್ರಮಾಣದಲ್ಲಿ ಇಳಿಮುಖವಾಗಿರುವುದು ಸಮಸ್ಯೆಗೆ ಮತ್ತೊಂದು ಕಾರಣ’ ಎಂದು ಬ್ಯಾಂಕ್‌ ಸಿಬ್ಬಂದಿ ಹೇಳುತ್ತಾರೆ.

ADVERTISEMENT

‘ಬ್ಯಾಂಕ್‌ ಶಾಖೆಗಳಲ್ಲಿ ಮೂರಕ್ಕಿಂತ ಹೆಚ್ಚು ಬಾರಿ ವಹಿವಾಟು ನಡೆಸಿದರೆ (ಹಣ ತೆಗೆದರೆ) ಹೆಚ್ಚುವರಿ ಶುಲ್ಕ ವಿಧಿಸುವುದಾಗಿ ಕೆಲವು ಬ್ಯಾಂಕ್‌ ಸುತ್ತೋಲೆ ಹೊರಡಿಸಿದ ನಂತರ ಗ್ರಾಹಕರು ಏಕಕಾಲಕ್ಕೆ ದೊಡ್ಡ ಮೊತ್ತದ ಹಣ ತೆಗೆಯುತ್ತಿರುವುದರಿಂದ ಹಣದ ಕೊರತೆ ಎದುರಾಗಿದೆ’ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದವರು  ಹೇಳಿದ್ದಾರೆ.
ಎಟಿಎಂಗಳಲ್ಲಿ ಹಣ ಕೊರತೆ ಸಮಸ್ಯೆ ಎದುರಿಸುತ್ತಿರುವ ನಗರಗಳ ಪೈಕಿ ಹೈದರಾಬಾದ್ ಮೊದಲ ಸ್ಥಾನದಲ್ಲಿದ್ದು, ಪೂನಾ ನಂತರದ ಸ್ಥಾನದಲ್ಲಿದೆ. ದೆಹಲಿಯ ಗ್ರಾಹಕರಿಗೆ ಇದರ ಬಿಸಿ ತಟ್ಟಿಲ್ಲ ಎಂದು ಸಮೀಕ್ಷೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.