ADVERTISEMENT

ಐ.ಟಿ ಕಾಯ್ದೆ ಪರಾಮರ್ಶೆಗೆ ಕಾರ್ಯಪಡೆ

ಪಿಟಿಐ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST

ನವದೆಹಲಿ: ಐವತ್ತಾರು ವರ್ಷಗಳಷ್ಟು ಹಳೆಯದಾದ ಆದಾಯ ತೆರಿಗೆ ಕಾಯ್ದೆಗೆ ಹೊಸ ರೂಪ ನೀಡಲು ಕೇಂದ್ರ ಸರ್ಕಾರವು ಕಾರ್ಯಪಡೆ ರಚಿಸಿದೆ.

ಪರೋಕ್ಷ ತೆರಿಗೆಗೆ ಹೊಸ ಸ್ವರೂಪ ನೀಡಿದ ನಂತರ ಸರ್ಕಾರ ಈಗ ನೇರ ತೆರಿಗೆ ವ್ಯವಸ್ಥೆ ಸುಧಾರಣೆಯತ್ತ ಗಮನ ಹರಿಸಿದೆ. ಆದಾಯ ‘ತೆರಿಗೆ ಕಾಯ್ದೆ–1961’ ಪರಾಮರ್ಶೆ ನಡೆಸಿ ಹೊಸ ನೇರ ತೆರಿಗೆ ಕರಡು ರೂಪಿಸುವ ಹೊಣೆಯನ್ನು ಕಾರ್ಯಪಡೆಗೆ ಒಪ್ಪಿಸಲಾಗಿದೆ.

ದೇಶದ ಸದ್ಯದ ಆರ್ಥಿಕ ಅಗತ್ಯಗಳಿಗೆ ಪೂರಕವಾದ ಆದಾಯ ತೆರಿಗೆ ರೂಪಿಸಲು ಕೈಗೊಳ್ಳಬೇಕಾದ ಕ್ರಮಗಳ ಶಿಫಾರಸು ನೀಡುವುದು ಏಳು ಮಂದಿ ಸದಸ್ಯರನ್ನು ಒಳಗೊಂಡ ಈ ಕಾರ್ಯಪಡೆಯ ಕೆಲಸವಾಗಿರಲಿದೆ.

ADVERTISEMENT

ಸದಸ್ಯರು: ನೇರ ತೆರಿಗೆ ಕೇಂದ್ರೀಯ ಮಂಡಳಿಯ (ಸಿಬಿಡಿಟಿ) ಸದಸ್ಯ ಅರ್ಬಿಂದ್‌ ಮೋದಿ ಅವರು ಇದರ ಸಂಚಾಲಕರಾಗಿರಲಿದ್ದಾರೆ. ಚಾರ್ಟರ್ಡ್‌ ಅಕೌಂಟಂಟ್‌ ಗಿರೀಶ್‌ ಅಹುಜಾ, ‘ಇವೈ’ನ ಅಧ್ಯಕ್ಷ ರಾಜೀವ್‌ ಮೆಮನಿ, ‘ಐಸಿಆರ್‌ಐಇಆರ್‌’ನ ಸಲಹೆಗಾರ ಮನ್ಸಿ ಕೆಡಿಯಾ ಅವರು ಸದಸ್ಯರಾಗಿದ್ದಾರೆ. ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್‌ ಸುಬ್ರಮಣಿಯನ್‌ ಅವರು ಕಾಯಂ ವಿಶೇಷ ಆಹ್ವಾನಿತರಾಗಿದ್ದಾರೆ.

ವಿವಿಧ ದೇಶಗಳಲ್ಲಿನ ತೆರಿಗೆ ಸ್ವರೂಪ, ಅಂತರರಾಷ್ಟ್ರೀಯವಾಗಿ ಬಳಕೆಯಲ್ಲಿ ಇರುವ ಅತ್ಯುತ್ತಮ ವ್ಯವಸ್ಥೆ, ದೇಶದ ಅಗತ್ಯ ಪೂರೈಸುವ ನೇರ ತೆರಿಗೆಯ ಕರಡು ನಿಯಮಗಳನ್ನು ರೂಪಿಸುವುದು ಕಾರ್ಯಪಡೆಯ ಹೊಣೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.