ADVERTISEMENT

ಖಾಸಗಿ ವಲಯದಲ್ಲಿ ಮೀಸಲು ಬೇಡ: ನೀತಿ ಆಯೋಗ ಉಪಾಧ್ಯಕ್ಷ ರಾಜೀವ್‌ ಕುಮಾರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 17:20 IST
Last Updated 17 ಅಕ್ಟೋಬರ್ 2017, 17:20 IST
ಖಾಸಗಿ ವಲಯದಲ್ಲಿ ಮೀಸಲು ಬೇಡ: ನೀತಿ ಆಯೋಗ ಉಪಾಧ್ಯಕ್ಷ ರಾಜೀವ್‌ ಕುಮಾರ್ ಅಭಿಮತ
ಖಾಸಗಿ ವಲಯದಲ್ಲಿ ಮೀಸಲು ಬೇಡ: ನೀತಿ ಆಯೋಗ ಉಪಾಧ್ಯಕ್ಷ ರಾಜೀವ್‌ ಕುಮಾರ್ ಅಭಿಮತ   

ನವದೆಹಲಿ (ಪಿಟಿಐ): ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿ ಸೌಲಭ್ಯ ವಿಸ್ತರಿಸುವುದಕ್ಕೆ ತಮ್ಮ ವಿರೋಧ ಇದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಹಲವಾರು ರಾಜಕೀಯ ಪಕ್ಷಗಳ ಮುಖಂಡರು ಪ್ರತಿಪಾದಿಸುತ್ತಿದ್ದಾರೆ. ಈ ವಿವಾದಾತ್ಮಕ ವಿಷಯದ ಬಗ್ಗೆ ಪ್ರತಿಕ್ರಿಯಿಸಿರುವ ರಾಜೀವ್‌ ಕುಮಾರ್‌, ಖಾಸತಿ ವಲಯದಲ್ಲಿ ಉದ್ಯೋಗ ಮೀಸಲಾತಿ ಇರಬಾರದು ಎನ್ನುವುದು ತಮ್ಮ ನಿಲುವಾಗಿದೆ ಎಂದು ಹೇಳಿದ್ದಾರೆ.

‘ಉದ್ಯೋಗ ಮಾರುಕಟ್ಟೆಗೆ ಪ್ರತಿ ವರ್ಷ 60 ಲಕ್ಷ ಯುವಕರು ಸೇರ್ಪಡೆಯಾಗುತ್ತಿದ್ದಾರೆ. 10 ರಿಂದ 12 ಲಕ್ಷ ಯುವಕರಿಗೆ ಉದ್ಯೋಗ ಒದಗಿಸಲು ಸರ್ಕಾರದಿಂದ ಸಾಧ್ಯವಾಗುತ್ತಿದೆ. ಇಂತಹ ಅವಕಾಶಗಳ ಸಂಖ್ಯೆ ಇನ್ನಷ್ಟು ಹೆಚ್ಚಬೇಕು. ಅನೇಕರು ಸ್ವಂತ ಬಲದ ಮೇಲೆ ಅಸಂಘಟಿತ ವಲಯದಲ್ಲಿ ಉದ್ಯೋಗ ಹುಡುಕಿಕೊಳ್ಳುತ್ತಾರೆ. ನಿರ್ದಿಷ್ಟ ಹಂತದ ನಂತರ ಅಲ್ಲಿ ಇಂತಹ ಅವಕಾಶಗಳು ಸ್ಥಗಿತಗೊಳ್ಳುತ್ತವೆ. ಇದರಿಂದ ನಿರುದ್ಯೋಗ ಹೆಚ್ಚುತ್ತಿದೆ ಎಂದು ಜನರು ಆರೋಪ ಮಾಡಲು ತೊಡಗುತ್ತಾರೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಕೇಂದ್ರ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಅವರ ಲೋಕ ಜನಶಕ್ತಿ ಪಕ್ಷವು ಇತ್ತೀಚಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲು ಸೌಲಭ್ಯ ಕಲ್ಪಿಸಬೇಕು ಎನ್ನುವ ಹಕ್ಕೊತ್ತಾಯ ಮುಂದಿಟ್ಟಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರೂ ಈ ಆಲೋಚನೆ ಪರವಾಗಿ ಮಾತನಾಡಿದ್ದಾರೆ.

‘ಸದ್ಯದ ಆರ್ಥಿಕ ಉದಾರೀಕರಣ ಸಂದರ್ಭದಲ್ಲಿ ಖಾಸಗಿ ವಲಯದಲ್ಲಿ ಮೀಸಲು ಸೌಲಭ್ಯ ಕಲ್ಪಿಸದಿದ್ದರೆ, ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನೇ ಅಪಹಾಸ್ಯ ಮಾಡಿದಂತಾಗಲಿದೆ’ ಎಂದು ನಿತೀಶ್‌ ಕುಮಾರ್ ಹೇಳಿದ್ದರು.

ವಾಣಿಜ್ಯೋದ್ಯಮ ಸಂಘ ಸಂಸ್ಥೆಗಳು ಇಂತಹ ಮೀಸಲು ಚಿಂತನೆಯನ್ನು ವಿರೋಧಿಸುತ್ತಿವೆ. ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿ ಕಲ್ಪಿಸುವುದರಿಂದ ಕುಶಲ ಕಾರ್ಮಿಕರ ಅಲಭ್ಯತೆಯಿಂದಾಗಿ ಆರ್ಥಿಕ ಬೆಳವಣಿಗೆಯ ಹಾದಿಯಲ್ಲಿ ಅಡಚಣೆಗಳು ಕಂಡು ಬರುತ್ತವೆ. ಇದು ಬಂಡವಾಳ ಹೂಡಿಕೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದು ವಾಣಿಜ್ಯ ಸಂಘಟನೆಗಳ ನಿಲುವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.