ADVERTISEMENT

ಚಿನ್ನ ಆಮದು 5 ಪಟ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2014, 19:30 IST
Last Updated 24 ಅಕ್ಟೋಬರ್ 2014, 19:30 IST

ನವದೆಹಲಿ(ಪಿಟಿಐ): ಜಾಗತಿಕ ಮಟ್ಟ­ದಲ್ಲಿ ಚಿನ್ನ ಧಾರಣೆ ಇಳಿಕೆ ಆಗುತ್ತಿ­ರುವುದು ಮತ್ತು ಹಬ್ಬದ ಸಂದರ್ಭದ­ಲ್ಲಿನ ಬೇಡಿಕೆಯಿಂದಾಗಿ ದೇಶದ ಚಿನ್ನ ಆಮದು ಐದು ಪಟ್ಟು ಹೆಚ್ಚಿದೆ. ಸೆಪ್ಟೆಂಬ­ರ್‌­ನಲ್ಲಿ ಚಿನ್ನದ ಆಮದು ಪ್ರಮಾಣ 95 ಟನ್‌ಗಳಿಗೆ ಏರಿಕೆ ಆಗಿದೆ ಎಂದು ಅಖಿಲ ಭಾರತ ಚಿನ್ನಾಭರಣ ವರ್ತಕರ ಒಕ್ಕೂಟದ ನಿರ್ದೇಶಕ ಬಚ್ಚರಾಜ್‌ ಬಮಲ್‌ವಾಲಾ ಹೇಳಿದ್ದಾರೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಚಿನ್ನ ಆಮದು 20 ಟನ್‌ಗಳಷ್ಟಿತ್ತು. ಸರ್ಕಾರ ಚಾಲ್ತಿ ಖಾತೆ ಕೊರತೆ ನಿಯಂತ್ರಿಸುವ ಸಲುವಾಗಿ ಕೆಲವು ನಿರ್ಬಂಧ ವಿಧಿಸಿದ್ದ ರಿಂದ ಚಿನ್ನದ ಆಮದು ತಗ್ಗಿತ್ತು. ಇದರಿಂದ ಹಬ್ಬದ ಸಂದರ್ಭದಲ್ಲಿ ಕೊರತೆ ಎದುರಿಸು ವಂತಾಯಿತು ಎಂದು ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಸೆಪ್ಟೆಂಬರ್‌ನಲ್ಲಿ 2.28 ಕೋಟಿ ಮೌಲ್ಯದ ಚಿನ್ನ ಆಮದು ಮಾಡಿಕೊಳ್ಳ ಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಸೆಪ್ಟೆಂಬರ್‌ನಲ್ಲಿ ಸಾಕಷ್ಟು ಪ್ರಮಾ­ಣದ ಚಿನ್ನ ಸಂಗ್ರಹ ಇದ್ದಿದ್ದರಿಂದ ಕಳವು ಪ್ರಮಾಣವೂ ತಗ್ಗಿದೆ ಎಂದು ಬಮಲ್‌ವಾಲಾ  ಹೇಳಿದ್ದಾರೆ.

ಹಬ್ಬದಲ್ಲಿ ಮಾರಾಟ ಮಾಡಲು ಆಮದಾಗಿರುವ ಚಿನ್ನದಿಂದ ವರ್ತಕರು ಈಗಾಗಲೇ ಚಿನ್ನಾಭರಣ ತಯಾ­­ರಿ­ಸಿದ್ದಾರೆ. ಅಕ್ಟೋಬರ್‌ ಮತ್ತು ನವೆಂಬ­ರ್‌­ನಲ್ಲಿ ಹೆಚ್ಚಿನ ಚಿನ್ನಾಭರಣ ಖರೀದಿ ನಡೆಯಲಿದೆ. ಈ ಅವಧಿಯಲ್ಲಿ ವರ್ತ­ಕರು ಮಾರಾಟ ವಹಿವಾಟಿನ ಗಳಿಕೆ­ಯಿಂದಲೇ ಹೆಚ್ಚಿನ ಚಿನ್ನ ಖರೀದಿ­ ಸು­ತ್ತಾರೆ. ಹೀಗಾಗಿ ಅಕ್ಟೋಬರ್‌– ನವೆಂಬರ್‌ ಅವಧಿಯಲ್ಲಿ 150 ಟನ್‌ ಚಿನ್ನ ಆಮದು ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.