ADVERTISEMENT

ಚಿನ್ನ: ಸದ್ಯಕ್ಕೆ ಹೂಡಿಕೆಯ ಉತ್ತಮ ಆಯ್ಕೆಯಲ್ಲ

ವಿಶ್ವನಾಥ ಎಸ್.
Published 17 ಏಪ್ರಿಲ್ 2018, 20:05 IST
Last Updated 17 ಏಪ್ರಿಲ್ 2018, 20:05 IST
ಚಿನ್ನ: ಸದ್ಯಕ್ಕೆ ಹೂಡಿಕೆಯ ಉತ್ತಮ ಆಯ್ಕೆಯಲ್ಲ
ಚಿನ್ನ: ಸದ್ಯಕ್ಕೆ ಹೂಡಿಕೆಯ ಉತ್ತಮ ಆಯ್ಕೆಯಲ್ಲ   

‘ಹೂಡಿಕೆಯ ಸುರಕ್ಷಿತ ಸ್ವರ್ಗ’ ಎಂದೇ ಖ್ಯಾತಿ ಪಡೆದಿರುವ ಚಿನ್ನ ಇತ್ತೀಚಿನ ಕೆಲವು ವರ್ಷಗಳಿಂದ ತನ್ನ ಹೊಳಪನ್ನು ಕಳೆದುಕೊಳ್ಳುತ್ತಿದೆ. ಗಳಿಕೆ ಕಡಿಮೆ ಎನ್ನುವ ಕಾರಣಕ್ಕಾಗಿ ಹೂಡಿಕೆದಾರರು ಚಿನ್ನದ ವಿವಿಧ ರೂಪಗಳಲ್ಲಿ ಬಂಡವಾಳ ತೊಡಗಿಸುವುದರಿಂದ ಹಿಂದೆ ಸರಿಯುತ್ತಿದ್ದಾರೆ. ನೋಟು ರದ್ದತಿ ನಿರ್ಧಾರ, ಜಿಎಸ್‌ಟಿ ವ್ಯವಸ್ಥೆ ಜಾರಿಗೊಳಿಸಿರುವುದು ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಹಳದಿ ಲೋಹದ ಮೇಲಿನ ಆಕರ್ಷಣೆಯನ್ನು ತುಸು ತಗ್ಗಿಸಿದೆ.

ಹೂಡಿಕೆ ಪ್ರವೃತ್ತಿಯಲ್ಲಿ ಆಗುತ್ತಿರುವ ಗಮನಾರ್ಹ ಬದಲಾವಣೆಯಿಂದಾಗಿ ಚಿನ್ನಕ್ಕೆ ಬೇಡಿಕೆ ಕಡಿಮೆ ಆಗುತ್ತಿದೆ. ಹೂಡಿಕೆದಾರರು ಭೌತಿಕ ಸ್ವರೂಪದಲ್ಲಿ (ಚಿನ್ನದ ಗಟ್ಟಿ, ನಾಣ್ಯ) ಸಂಪತ್ತು ಸೃಷ್ಟಿಗಿಂತಲೂ ಇತರ ಆರ್ಥಿಕ ಸಂಪತ್ತು ಸೃಷ್ಟಿಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಚಿನ್ನದ ಬಾಂಡ್‌ ಯೋಜನೆ ಜಾರಿಗೆ ಬಂದ ನಂತರ ಕೌಟುಂಬಿಕ ಉಳಿತಾಯದಲ್ಲಿಯೂ ಚಿನ್ನಾಭರಣ ಖರೀದಿ ಪ್ರಮಾಣ ಕಡಿಮೆ ಆಗುತ್ತಿದೆ.

ಹೂಡಿಕೆದಾರರ ದೃಷ್ಟಿಯಿಂದಲೇ ಯೋಚಿಸುವುದಾದರೆ ಚಿನ್ನವು ಸದ್ಯಕ್ಕೆ ಹೂಡಿಕೆಗೆ ಉತ್ತಮ ಮಾರ್ಗವಾಗಿ ಉಳಿದಿಲ್ಲ. ಹೂಡಿಕೆಗೆ ಬರುತ್ತಿರುವ ಗಳಿಕೆಯು ಬ್ಯಾಂಕ್‌ನ ಉಳಿತಾಯ ಖಾತೆಗೆ ಸಿಗುವ ಬಡ್ಡಿಗಿಂತಲೂ ಕಡಿಮೆ ಇದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆ ಆಗುತ್ತಿದೆ. ಷೇರುಪೇಟೆ ವಹಿವಾಟು ಸಕಾರಾತ್ಮಕ ನೆಲೆಯಲ್ಲಿ ಸಾಗುತ್ತಿರುವುದೂ ಇದಕ್ಕೆ ಕಾರಣ.

ADVERTISEMENT

‘ಈಗಿರುವ ಮಾರುಕಟ್ಟೆಯ ಪರಿಸ್ಥಿತಿ ಗಮನಿಸುವುದಾದರೆ ಚಿನ್ನದ ಬಾಂಡ್‌ನಲ್ಲಿ ಹೂಡಿಕೆ ಮಾಡುವುದು ಉತ್ತಮ ಆಯ್ಕೆಯಾಗಿದೆ. ಇಲ್ಲಿ ಶೇ 2.75 ರಷ್ಟು ಬಡ್ಡಿದರ ಸಿಗುತ್ತದೆ. ಅದೇ ಭೌತಿಕ ರೂಪದಲ್ಲಿ (ಗಟ್ಟಿ, ನಾಣ್ಯ) ಅಥವಾ ಇಟಿಎಫ್‌ನಲ್ಲಿ ಹೂಡಿಕೆ ಮಾಡಿದರೆ ಹೂಡಿಕೆ ಮಾಡಿದ ಪೂರ್ತಿ ಹಣ ಸಿಗುವ ಖಾತರಿ ಇರುವುದಿಲ್ಲ. ಇಟಿಎಫ್‌ಗಳಿಗೆ ಬಂಡವಾಳ ಗಳಿಕೆ ತೆರಿಗೆಯೂ (ಸಿಟಿಜಿ) ಇದೆ’ ಎನ್ನುತ್ತಾರೆ ಫಂಡ್ಸ್‌ ಇಂಡಿಯಾ ಡಾಟ್‌ ಕಾಂನ ಮ್ಯೂಚುವಲ್‌ ಫಂಡ್‌ ಸಂಶೋಧನಾ ವಿಭಾಗದ ಮುಖ್ಯಸ್ಥೆ ವಿದ್ಯಾ ಬಾಲಾ.

‘ಸದ್ಯದ ಮಟ್ಟಿಗೆ ಹೂಡಿಕೆಗೆ ಚಿನ್ನವು ಉತ್ತಮ ಆಯ್ಕೆಯಲ್ಲ. ಹಣ ತೊಡಗಿಸಲೇ ಬೇಕು ಎನ್ನುವುದಾದರೆ ಷೇರು ಮತ್ತು ಸಾಲಪತ್ರಗಳ‌ (ಡೆಟ್‌ ಮ್ಯೂಚುವಲ್ ಫಂಡ್‌) ಮಿಶ್ರಣ ಸೂಕ್ತ. ಆದರೆ ಒಂದೊಮ್ಮೆ ಚಿನ್ನದಲ್ಲಿಯೇ ಹೂಡಿಕೆ ಮಾಡಬೇಕು ಎನ್ನುವುದಾದರೆ, ಅಂದರೆ, ಐದುವರ್ಷಗಳ ಬಳಿಕ ಮಗಳ ಮದುವೆಗಾಗಿ ಚಿನ್ನದ ರೂಪದಲ್ಲಿಯೇ ಉಳಿಸಬೇಕು ಎನ್ನುವುದಾದರೆ ಭೌತಿಕ ರೂಪದಲ್ಲಿ ಚಿನ್ನ ಖರೀದಿಸುವ ಅಥವಾ ಚಿನ್ನದ ಇಟಿಎಫ್‌ನಲ್ಲಿ (ವಿನಿಮಯ ವಹಿವಾಟು ನಿಧಿ) ಹೂಡಿಕೆ ಮಾಡುವುದಕ್ಕಿಂತಲೂ ಚಿನ್ನದ ಬಾಂಡ್ ಖರೀದಿಸುವುದು ಜಾಣ ನಡೆ’ ಎನ್ನುತ್ತಾರೆ ಅವರು.

ಭೌತಿಕ ರೂಪದ ಚಿನ್ನದ ಬೇಡಿಕೆ ತಗ್ಗಿಸುವ ಉದ್ದೇಶದಿಂದ 2015ರ ನವೆಂಬರ್‌ನಲ್ಲಿ ಚಿನ್ನದ ಬಾಂಡ್‌ ಯೋಜನೆಗೆ ಚಾಲನೆ ನೀಡಲಾಗಿದೆ. ಎಂಟು ವರ್ಷಗಳ ಅವಧಿಗೆ ಬಾಂಡ್ ಖರೀದಿಸಬಹುದು. ಕನಿಷ್ಠ ಖರೀದಿ ಮಿತಿ 1 ಗ್ರಾಂ. ನೀಡಿಕೆ ಬೆಲೆ ಪ್ರತಿ ಗ್ರಾಂಗೆ ₹ 2,961. ಬಾಂಡ್‌ ಮೌಲ್ಯ ಪಾವತಿ ₹20 ಸಾವಿರದವರೆಗೆ ನಗದು. ₹20 ಸಾವಿರಕ್ಕಿಂತ ಹೆಚ್ಚಿದ್ದರೆ ಡಿ.ಡಿ., ಚೆಕ್‌, ಆನ್‌ಲೈನ್‌ ಪಾವತಿಯಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

ಮತ್ತೆ ಬೇಡಿಕೆ ಕಂಡುಕೊಳ್ಳಲಿದೆ

ಚಿನ್ನ ಹೂಡಿಕೆಗೆ ಸೂಕ್ತ ಅಲ್ಲ ಎಂದು ಹೇಳಲು ಆಗುವುದಿಲ್ಲ. 10 ರಿಂದ 15 ವರ್ಷಗಳಲ್ಲಿ ಚಿನ್ನದ ಹೂಡಿಕೆಯಿಂದ ಬಂದಿರುವಷ್ಟು ಗಳಿಕೆ ಈಗ ಬರದೇ ಇರಬಹುದು. ಆದರೆ ಹಾಕುವ ದುಡ್ಡಿಗೆ ಮೋಸವಂತೂ ಆಗುವುದಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯ ಸ್ಥಿತಿಯನ್ನು ಗಮನಿಸಿದರೆ ಈ ವರ್ಷ ಚಿನ್ನದ ಬೆಲೆ ಏರಿಕೆ ಕಾಣಲಿದ್ದು, ಉತ್ತಮ ಗಳಿಕೆ ಬರುವ ಸಾಧ್ಯತೆ ಗೋಚರಿಸುತ್ತಿದೆ. ನೋಟು ರದ್ದತಿ, ಜಿಎಸ್‌ಟಿಯಿಂದ ಚಿನ್ನಾಭರಣವಷ್ಟೇ ಅಲ್ಲ, ಇತರ ಉದ್ದಿಮೆಗಳ ವಹಿವಾಟಿನ ಮೇಲೂ ಪರಿಣಾಮ ಆಗಿದೆ. ಇದೀಗ ಚೇತರಿಕೆ ಹಾದಿಗೆ ಮರಳುತ್ತಿವೆ. ಭಾರತದಲ್ಲಿ ಚಿನ್ನದ ವ್ಯಾಮೋಹ ಕಡಿಮೆ ಆಗುವ ಸಾಧ್ಯತೆ ಇಲ್ಲವೇ ಇಲ್ಲ. ಹೀಗಾಗಿ ಚಿನ್ನ ಮತ್ತೆ ಬೇಡಿಕೆ ಕಂಡುಕೊಳ್ಳುವ ಸಾಧ್ಯತೆ ತಳ್ಳಿ ಹಾಕಲು ಆಗದು.

– ವೆಂಕಟೇಶ್‌ ಬಾಬು, ಅಧ್ಯಕ್ಷ, ಬೆಂಗಳೂರು ಚಿನ್ನಾಭರಣ ವರ್ಕಕರ ಸಂಘ

ಚಿನ್ನದ ಇಟಿಎಫ್‌ ಹೊರಹರಿವು

ಚಿನ್ನದ ಇಟಿಎಫ್‌ ಬೇಡಿಕೆ ಕಳೆದುಕೊಳ್ಳುತ್ತಿದೆ. 2017–18ನೇ ಆರ್ಥಿಕ ವರ್ಷದಲ್ಲಿ ಇಟಿಎಫ್‌ಗಳಿಂದ ಒಟ್ಟು ₹ 835 ಕೋಟಿಗಳಷ್ಟು ಬಂಡವಾಳದ ಹೊರ ಹರಿವು ನಡೆದಿದೆ

ಹೊರಹರಿವಿನ ಪ್ರಮಾಣ (ಕೋಟಿಗಳಲ್ಲಿ)

₹ 2,293

2013–14

₹ 1,475

2014–15

₹ 903 ಕೋಟಿ

2015–16

₹ 775 ಕೋಟಿ

2016–17

***

ಚಿನ್ನದ ನಿಧಿ

₹ 5,480 ಕೋಟಿ

2016–17ರಲ್ಲಿ ಚಿನ್ನದ ನಿಧಿಗಳ ಸಂಪತ್ತು ಮೌಲ್ಯ

₹ 4,806 ಕೋಟಿ

2017–18ರಲ್ಲಿ ಚಿನ್ನದ ನಿಧಿಗಳ ಸಂಪತ್ತು ಮೌಲ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.