ADVERTISEMENT

ಚೇತರಿಕೆ ಹಾದಿಯಲ್ಲಿ ಷೇರುಪೇಟೆ

ಪಿಟಿಐ
Published 24 ಫೆಬ್ರುವರಿ 2018, 19:30 IST
Last Updated 24 ಫೆಬ್ರುವರಿ 2018, 19:30 IST

ಮುಂಬೈ : ಮುಂಬೈ ಷೇರುಪೇಟೆಯಲ್ಲಿ ಈ ವಾರ ಖರೀದಿ  ಚಟುವಟಿಕೆಗಳು ಹೆಚ್ಚಾದ ಪರಿಣಾಮ ವಾರದ ವಹಿವಾಟು ಲಾಭದ ಹಾದಿಯಲ್ಲಿ ಅಂತ್ಯಗೊಂಡಿದೆ.

ಸಂವೇದಿ ಸೂಚ್ಯಂಕವು  ಈ ವಾರದಲ್ಲಿ ಒಟ್ಟು  131 ಅಂಶಗಳಷ್ಟು ಏರಿಕೆ ಕಂಡು ವಾರಾಂತ್ಯದ ವಹಿವಾಟನ್ನು  34,142 ಅಂಶಗಳೊಂದಿಗೆ  ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ ಕೂಡ 38.75 ಅಂಶಗಳಷ್ಟು ಹೆಚ್ಚಳವಾಗಿ 10,491ರಲ್ಲಿ ವಾರದ ವಹಿವಾಟು ಅಂತ್ಯಗೊಳಿಸಿತು.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ₹11,400 ಕೋಟಿ ವಂಚನೆ ಪ್ರಕರಣವು ಈ ವಾರ ಪೂರ್ತಿ ಮಾರುಕಟ್ಟೆಯ ವೇಗಕ್ಕೆ ಕಡಿವಾಟ ಹಾಕಿತ್ತು. ಇದರಿಂದ  ಲೋಹ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಷೇರುಗಳ ಮಾರಾಟದಲ್ಲಿ ಹೆಚ್ಚಿನ ಒತ್ತಡ ಉಂಟಾಗಿತ್ತು.

ADVERTISEMENT

ವಿತ್ತೀಯ ಕೊರತೆ ತಗ್ಗಿಸಲು ರಿಸರ್ವ್‌ ಬ್ಯಾಂಕ್‌ ಬಡ್ಡಿ ದರ ಏರಿಕೆ ಮಾಡಲು ಕ್ರಮಕೈಗೊಳ್ಳುವ ಸಾಧ್ಯತೆ ಮತ್ತು ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ರೂಪಾಯಿ ಮೌಲ್ಯ ಕುಸಿದಿದ್ದರಿಂದ ವಹಿವಾಟು ಇಳಿಮುಖವಾಗಿತ್ತು.

ಸಾಫ್ಟ್‌ವೇರ್‌ ರಫ್ತು ಹೆಚ್ಚಳಗೊಳ್ಳುವ ಬಗ್ಗೆ ಸಾಫ್ಟ್‌ವೇರ್‌ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟದ (ನಾಸ್ಕಾಂ) ಹೇಳಿಕೆಯು ಐ.ಟಿ ಷೇರುಗಳ ಖರೀದಿ ಭರಾಟೆಗೆ ಕಾರಣವಾಯಿತು. ಇದರಿಂದ ಪೇಟೆಯಲ್ಲಿ ಚೇತರಿಕೆ ಕಂಡುಬಂದಿತು. ಮಾರ್ಚ್‌ ತಿಂಗಳ ವಾಯಿದಾ ವಹಿವಾಟು ಉತ್ತಮ ಆರಂಭ ಕಂಡಿರು
ವುದೂ ಪೇಟೆಯಲ್ಲಿ ಖರೀದಿ ಉತ್ಸಾಹ ಹೆಚ್ಚಿಸಿತು.  ವಾರದ ಆರಂಭದಲ್ಲಿ 34,053 ಅಂಶಗಳೊಂದಿಗೆ ವಹಿವಾಟು ಆರಂಭಿಸಿದ್ದ ಸೂಚ್ಯಂಕವು 34,167 ರಿಂದ 33,554 ಅಂಶಗಳ ಮಧ್ಯೆ ಚಲಿಸಿತು. ಕೊನೆಯಲ್ಲಿ 131 ಅಂಶಗಳ ಗಳಿಕೆಯೊಂದಿಗೆ ವಾರದ ವಹಿವಾಟು ಕೊನೆಗೊಳಿಸಿತು. ಹಿಂದಿನ ವಾರ  ಸೂಚ್ಯಂಕವು  ಕೇವಲ 5 ಅಂಶಗಳಷ್ಟು ಮಾತ್ರ ಹೆಚ್ಚಳ ಕಂಡಿತ್ತು. 10,488 ಅಂಶಗಳಲ್ಲಿ ಆರಂಭವಾದ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ಒಂದು ಹಂತದಲ್ಲಿ ಗರಿಷ್ಠ ಮಟ್ಟವಾದ 10,499 ಮತ್ತು 10,302 ಅಂಶಗಳ  ಕನಿಷ್ಠ ಮಟ್ಟದಲ್ಲಿ ಚಲಿಸಿತ್ತು. 

ಮಾಹಿತಿ ತಂತ್ರಜ್ಞಾನ, ಲೋಹ, ಬ್ಯಾಂಕ್, ಎಫ್‌ಎಂಸಿಜಿ ಕ್ಷೇತ್ರಗಳ ಷೇರುಗಳು ಲಾಭದ ಹಾದಿಗೆ ಮರಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.