ADVERTISEMENT

ಜಿಎಸ್‌ಟಿ: ಮರುಪಾವತಿ ಹೇಗೆ?

ಹಜರತ ಅಲಿ ಇ.ದೇಗಿನಾಳ, ವಿಜಯಪುರ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST
ಜಿಎಸ್‌ಟಿ: ಮರುಪಾವತಿ ಹೇಗೆ?
ಜಿಎಸ್‌ಟಿ: ಮರುಪಾವತಿ ಹೇಗೆ?   

ವರ್ತಕರು ವಿಭಿನ್ನ ಕಾರಣಗಳಿಗಾಗಿ ಇಲಾಖೆಗೆ ಈಗಾಗಲೇ ಪಾವತಿಸಿರುವ ತೆರಿಗೆ, ದಂಡ, ಬಡ್ಡಿ ವಿಳಂಬ ಶುಲ್ಕ ಇತ್ಯಾದಿ ಮೊತ್ತವನ್ನು ಕಾನೂನುಬದ್ದ ರೀತಿಯಲ್ಲಿ ಇಲಾಖೆಯಿಂದ ಮರಳಿ ಪಡೆಯುವ ಪ್ರಕ್ರಿಯೆಗೆ ಮರುಪಾವತಿ ಎನ್ನುವರು. ತೆರಿಗೆಯು ಸಕಾಲದಲ್ಲಿ ಸರಕಾರಕ್ಕೆ ಸಲ್ಲಬೇಕಾದ ರಕಮ್ಮು. ಮರುಪಾವತಿಯು ವರ್ತಕರಿಗೆ ಸೇರಬೇಕಾದ ರಕಮ್ಮು. ಜಿಎಸ್‌ಟಿ ಕಾಯ್ದೆ ಜಾರಿಯಾದ ದಿನದಿಂದ ಹಿಡಿದು ಇಲ್ಲಿಯವರೆಗೆ ಆದ ಬದಲಾವಣೆ ಮತ್ತು ಮರುಪಾವತಿ ವ್ಯವಸ್ಥೆಯ ಮಾಹಿತಿ ಇಲ್ಲಿದೆ.

ಸರಕು ಮತ್ತು ಸೇವಾ ತೆರಿಗೆ ಕಾಯ್ದೆ (ಜಿಎಸ್‌ಟಿ) ಯನ್ನು ಜಾರಿಗೆ ತರುವ ಮುಖ್ಯ ಕಾರಣಗಳಲ್ಲಿ ಮರುಪಾವತಿ ನೀಡಿಕೆಯನ್ನು ತ್ವರಿತಗೊಳಿಸುವುದು ಮತ್ತು ಸರಳಗೊಳಿಸುವುದೂ ಸೇರಿದೆ. ಮುಖ್ಯವಾಗಿ ರಫ್ತುದಾರರು ಈ ವಿಳಂಬ ಮರುಪಾವತಿಯಿಂದಾಗಿ ಎದುರಿಸುತ್ತಿದ್ದ ಹಣಕಾಸು ಸಮಸ್ಯೆಯನ್ನು ನಿವಾರಿಸಿ ರಫ್ತು ವಹಿವಾಟಿಗೆ ಉತ್ತೇಜನ ನೀಡುವುದು ಉದ್ದೇಶವಾಗಿತ್ತು. ಈ ದಿಸೆಯಲ್ಲಿ ಜಿಎಸ್‌ಟಿಯಲ್ಲಿ ಮರುಪಾವತಿ ಪ್ರಕ್ರಿಯೆಯನ್ನು ಯೋಜಿಸಿ ಶಿಸ್ತುಬದ್ಧಗೊಳಿಸಲಾಗಿದೆ. ಕಾಯ್ದೆಯ ಕಲಂ. 54 ರಿಂದ 56 ರವರೆಗೆ ಮತ್ತು ನಿಯಮ 89 ರಿಂದ 97 ರವರೆಗೆ ಮರುಪಾವತಿ ಪಡೆಯುವ ಕುರಿತ ವಿವರಗಳಿವೆ.

ನಾಲ್ಕು ಸಂದರ್ಭಗಳಲ್ಲಿ ಮರುಪಾವತಿ
1. ಶೂನ್ಯದರದ ರಫ್ತು ವಹಿವಾಟು ನಡೆಸಿದಾಗ
2. ತಪ್ಪಾಗಿ ತೆರಿಗೆ, ದಂಡ, ಬಡ್ಡಿ ಪಾವತಿಸಿ ನಗದು ಖಾತೆಯಲ್ಲಿ ಹೆಚ್ಚುವರಿ ಮೊತ್ತ ಉಳಿದಾಗ
3. ಹೂಡುವಳಿಗಳ ಮೇಲಿನ ತೆರಿಗೆ ದರ ಹೆಚ್ಚಿದ್ದು ಹುಟ್ಟುವಳಿಗಳ ಮೇಲಿನ ದರಗಳು ಕಡಿಮೆ ಇದ್ದು ಜಮಾ ಖಾತೆಯಲ್ಲಿ ಜಮೆ ಹೆಚ್ಚುವರಿಯಾಗಿ ಸಂಗ್ರಹವಾದಾಗ
4. ವಿಶೇಷ ಆರ್ಥಿಕ ವಲಯ ಘಟಕಗಳಿಗೆ ಪೂರೈಕೆ ಮಾಡಿದಾಗ

ADVERTISEMENT

ನೋಂದಾಯಿತ ವರ್ತಕರಿಗೆ ಮಾತ್ರ ಮರುಪಾವತಿ.
ಜಿಎಸ್‌ಟಿ ಕಾಯ್ದೆಯಡಿಯಲ್ಲಿ ನೋಂದಾಯಿತ ವರ್ತಕರಿಗೆ ಮಾತ್ರ ಮರುಪಾವತಿ ಪಡೆಯುವ ಸೌಲಭ್ಯ ಕಲ್ಪಿಸಲಾಗಿದೆ. ನೋಂದಾವಣೆಗೊಳ್ಳದ ವರ್ತಕರು ಮರುಪಾವತಿಗೆ ಅರ್ಹರಲ್ಲ.

ಮರುಪಾವತಿ ಅರ್ಜಿಸಲ್ಲಿಸಲು ಕಾಲಮಿತಿ

ಕಾಯ್ದೆಯ ಕಲಂ.54(1) ರಂತೆ ವರ್ತಕರು ಮರುಪಾವತಿಗೆ ಅರ್ಜಿಸಲ್ಲಿಸಲು ಕಾಲಮಿತಿ ನಿಗದಿಪಡಿಸಲಾಗಿದೆ. ಮರುಪಾವತಿ ಉದ್ಭವಿಸಿದ 2 ವರ್ಷದೊಳಗಾಗಿ ಮರುಪಾವತಿಗಾಗಿ ಅರ್ಜಿ ಸಲ್ಲಿಸಬೇಕು. ನಂತರ ಸಲ್ಲಿಸಿದ ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ. ಉದಾಹರಣೆಗಾಗಿ 2018ರ ಏಪ್ರಿಲ್‌ ತಿಂಗಳ ಶೂನ್ಯ ದರದ ರಫ್ತು ವಹಿವಾಟಿನ ಕಾರಣ ಉದ್ಭವಿಸುವ ಮರುಪಾವತಿಯನ್ನು 2020 ರ ಏಪ್ರಿಲ್‌ ತಿಂಗಳ ಒಳಗೆ ಪಡೆಯಲು ಅರ್ಜಿ ಸಲ್ಲಿಸುವುದು.

ಮರುಪಾವತಿ ಅರ್ಜಿ

ನಮೂನೆ ಆರ್‌ಎಫ್‌ಡಿ-01 ರಲ್ಲಿ ಮರುಪಾವತಿಗಾಗಿ ಅರ್ಜಿ ಸಲ್ಲಿಸಬೇಕು. ಕಾಯ್ದೆ ಜಾರಿಗೆ ಬಂದಾಗ ಸಂಪೂರ್ಣ ವಿದ್ಯುನ್ಮಾನ ರೂಪದಲ್ಲಿದ್ದ ಮರುಪಾವತಿ ನೀಡಿಕೆಯನ್ನು ಈಗ ಕೈಯಾರೆ (Manually) ನೀಡಲಾಗುತ್ತಿದೆ. ನಮೂನೆ ಆರ್‌ಎಫ್‌ಡಿ-01ಎ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ ಕ್ಷೇತ್ರವ್ಯಾಪ್ತಿಯ ಸ್ಥಳೀಯ ಜಿಎಸ್‌ಟಿ ಕಚೇರಿಯಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮುಂಚೆ ತಾವು ಹಂಚಿಕೆಯಾಗಿರುವುದು ರಾಜ್ಯ ಸರಕಾರಕ್ಕೊ ಇಲ್ಲ ಕೇಂದ್ರ ಸರಕಾರಕ್ಕೊ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಹಂಚಿಕೆಯಾದ ಕಚೇರಿಗೆ ಮಾತ್ರ ಅರ್ಜಿ ಸಲ್ಲಿಸಬೇಕು. ಕರ್ನಾಟಕದಲ್ಲಿ ನೋಂದಾಯಿತರಾದ ವರ್ತಕರ ಪೈಕಿ ವಾರ್ಷಿಕ ರೂ 1.5 ಕೋಟಿಗಿಂತ ಹೆಚ್ಚಿನ ವಹಿವಾಟು ಹೊಂದಿರುವ ವರ್ತಕರನ್ನು 50:50 ಅನುಪಾತದಲ್ಲಿ ಮತ್ತು ರೂ 1.5 ಕೋಟಿಗಿಂತ ಕಡಿಮೆ ವಹಿವಾಟಿರುವ ವರ್ತಕರನ್ನು 90:10 ರ ಅನುಪಾತದಲ್ಲಿ ಆಡಳಿತದ ಅನುಕೂಲಕ್ಕಾಗಿ ಕ್ರಮವಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳ ನಡುವೆ ಹಂಚಿಕೆ ಮಾಡಲಾಗಿದೆ. ಹಂಚಿಕೆಯಾದ ವರ್ತಕರ ಎಲ್ಲ ಆಡಳಿತಾತ್ಮಕ ಜವಾಬ್ದಾರಿಗಳು ಸಂಬಂಧಿಸಿದ ಸರಕಾರದ ಸ್ಥಳೀಯ ಕಚೇರಿಗೆ ಅನ್ವಯವಾಗುತ್ತವೆ.

ಸ್ವೀಕೃತಿ ನೀಡಿಕೆ

ನಮೂನೆ ಆರ್‌ಎಫ್‌ಡಿ-01ಎ ಮರುಪಾವತಿ ಅರ್ಜಿಸಲ್ಲಿಸಿದ ನಂತರ 15 ದಿನಗಳಲ್ಲಿ ಸ್ಥಳೀಯ ಜಿಎಸ್‌ಟಿ ಕಚೇರಿಯ ಅಧಿಕಾರಿಗಳಿಂದ ಅದರ ಸಿಂಧುತ್ವ ಪರಿಶೀಲಿಸಲಾಗುತ್ತದೆ. ಅರ್ಜಿಯಲ್ಲಿ ಏನಾದರೂ ದೋಷಗಳಿದ್ದರೆ ನಮೂನೆ ಆರ್‌ಎಫ್‌ಡಿ-03 ರಲ್ಲಿ ಸಂಬಂಧಿಸಿದ ವರ್ತಕರಿಗೆ ಸೂಚನಾಪತ್ರ ನೀಡಲಾಗುತ್ತದೆ. ವರ್ತಕರು ಅಂಥ ಸಂದರ್ಭದಲ್ಲಿ ಈಗಾಗಲೇ ಜನರೇಟ್‌ ಆಗಿರುವ ARN ಸಂಖ್ಯೆಗೆ ಸಂಬಂಧಿಸಿಯೇ ಮತ್ತೊಂದು ಹೊಸ ಮರುಪಾವತಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಒಂದುವೇಳೆ ಮರುಪಾವತಿ ಅರ್ಜಿ ಸರಿಯಾಗಿದ್ದರೆ ವರ್ತಕರಿಗೆ ನಮೂನೆ ಆರ್ಎಫ್‌ಡಿ-02 ರಲ್ಲಿ ಸ್ವೀಕೃತಿ ನೀಡಲಾಗುತ್ತದೆ.

ಮರುಪಾವತಿ ನೀಡಿಕೆಗೆ ಕಾಲಮಿತಿ

ಅರ್ಜಿ ಸಲ್ಲಿಕೆಗೆ ಕಾಲಮಿತಿ ಇರುವಂತೆ ಮರುಪಾವತಿ ನೀಡಿಕೆಗೂ ಕಾಲಮಿತಿ ನಿಗದಿಪಡಿಸಲಾಗಿದೆ. ಮರುಪಾವತಿ ಅರ್ಜಿಗೆ ಸ್ವೀಕೃತಿ ನೀಡಿದ 7 ಕೆಲಸದ ದಿನಗಳಲ್ಲಿ ಮರುಪಾವತಿ ಕೇಳಿದ ಮೊತ್ತದ ಶೇ 90 ರಷ್ಟು ಮೊತ್ತವನ್ನು ತಾತ್ಕಾಲಿಕವಾಗಿ ನೀಡಬೇಕು. ಬಾಕಿ ಉಳಿದ ಶೇ 10 ರಷ್ಟು ಮೊತ್ತವನ್ನು ಆಮೂಲಾಗ್ರವಾಗಿ ಅರ್ಜಿ ಪರಿಶೀಲಿಸಿ ಸ್ವೀಕೃತಿ ನೀಡಿದ 60 ದಿನಗಳಲ್ಲಿ ಮರುಪಾವತಿ ನೀಡಬೇಕು.

ಸಲ್ಲಿಸಬೇಕಾದ ದಾಖಲೆಗಳು
ಈಗ ಕೈಯಾರೆ ಮರುಪಾವತಿ ನೀಡಿಕೆ ವಿಧಾನ ಚಾಲ್ತಿಯಲ್ಲಿ ಇರುವುದರಿಂದ ಮರುಪಾವತಿ ಅರ್ಜಿಯೊಂದಿಗೆ ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು

1. ನಮೂನೆ ಆರ್.ಎಫ್‌.ಡಿ- 01ಎ
2. ಮರುಪಾವತಿ ಎ.ಆರ್.ಎನ್. ಸ್ವೀಕೃತಿ ಪ್ರತಿ
3. ಬ್ಯಾಂಕ್‌ ವಿವರ ಆರ್-1 ರಿಟರ್ನದ 6ಎ

ರಫ್ತು ವಹಿವಾಟಿನಲ್ಲಿ ತೊಡಗಿರುವ ವರ್ತಕರು ಮರುಪಾವತಿ ಪಡೆಯಬೇಕೆಂದರೆ ರಫ್ತು ವಹಿವಾಟು ನಡೆಸಿದ ಕುರಿತು ಶಿಪ್ಪಿಂಗ್‌ ಬಿಲ್‌ಗಳನ್ನು ಆರ್-1 ರಿಟರ್ನದ 6ಎ ದಲ್ಲಿ ದಾಖಲಿಸಬೇಕಾಗುತ್ತದೆ. ಪ್ರತಿ ತಿಂಗಳ ಆರ್-1 ಸಲ್ಲಿಸಲು ಸಾಧ್ಯವಾಗದಿದ್ದರೂ 6ಎ ದಲ್ಲಿ ಶಿಪ್ಪಿಂಗ್‌ ಬಿಲ್‌ಗಳನ್ನು ದಾಖಲಿಸಲು ಅನುಕೂಲ ಮಾಡಿಕೊಡಲಾಗಿದೆ. 6ಎ ದಲ್ಲಿ ಶಿಪ್ಪಿಂಗ್‌ ಬಿಲ್ಲುಗಳನ್ನು ದಾಖಲಿಸದಿದ್ದರೆ ಪೂರ್ಣ ಪ್ರಮಾಣದ ಮರುಪಾವತಿ ದೊರೆಯುವುದಿಲ್ಲ.

ಮರುಪಾವತಿ ಅರ್ಜಿ

ವರ್ತಕರು ಜಿ.ಎಸ್.ಟಿ. ಅಂತರ್ಜಾಲ ತಾಣದಲ್ಲಿ ಲಾಗಿನ್‌ ಆಗಿ ಮರುಪಾವತಿ ಸ್ವರೂಪಾನುಸಾರ ಮಾಹಿತಿ ದಾಖಲಿಸಿ ಅನುಮೋದನೆ ನೀಡಿದರೆ ಅರ್ಜಿ ಪರಾಮರ್ಶನ ಸಂಖ್ಯೆ (Application Reference Number -ARN) ದೊರೆಯತ್ತದೆ. ಅಲ್ಲಿಯೇ ಕಾಣುವ ಆರ್.ಎಫ್‌.ಡಿ-01ಎ ದಲ್ಲಿ ಭರ್ತಿಮಾಡಿದ ಅರ್ಜಿ ನಮೂನೆಯನ್ನು ಮುದ್ರಿತ ಪ್ರತಿ ತೆಗೆದುಕೊಂಡು ಸಹಿ ಮಾಡಿ ಸ್ಥಳೀಯ ಕಚೇರಿಗೆ ಸಲ್ಲಿಸಬೇಕು ARN ಜನರೇಟ್‌ ಅಗುತ್ತಲೇ ವರ್ತಕರ ವಿದ್ಯುನ್ಮಾನ ನಗದು ಖಾತೆ ಅಥವಾ ವಿದ್ಯುನ್ಮಾನ ಜಮಾಖಾತೆಗಳಿಂದ ಕ್ಲೇಮ್‌ ಮಾಡಿದ ಮರುಪಾವತಿ ಮೊತ್ತಕ್ಕೆ ಖರ್ಚುಬೀಳುತ್ತದೆ.ಒಂದು ವೇಳೆ ಯಾವ ಕಾರಣಕ್ಕಾದರೂ ಮರುಪಾವತಿ ಅರ್ಜಿ ತಿರಸ್ಕೃತಗೊಂಡರೆ ಸ್ಥಳೀಯ ಜಿ.ಎಸ್.ಟಿ. ಕಚೇರಿಯ ಅಧಿಕಾರಿಗಳು ನಮೂನೆ ಪಿ.ಎಮ್.ಟಿ.03 ರಲ್ಲಿ ಆದೇಶ ಮಾಡುವ ಮೂಲಕ ಮರಳಿ ವರ್ತಕರ ವಿದ್ಯುನ್ಮಾನ ಖಾತೆಗೆ ಜಮಾ ಮಾಡುತ್ತಾರೆ.

ಮರುಪಾವತಿ ನೀಡಿಕೆ

ನಮೂನೆ ಆರ್‌ಎಫ್‌ಡಿ-01ಎ ರಲ್ಲಿ ಸಲ್ಲಿಸಿದ ಮರುಪಾವತಿ ಅರ್ಜಿಯನ್ನು ಸ್ಥಳೀಯ ಜಿ.ಎಸ್.ಟಿ. ಕಚೇರಿಯ ಜಾಲತಾಣದಲ್ಲಿ ಅಧಿಕಾರಿಯ ಲಾಗಿನ್‌ನಲ್ಲಿ ದಾಖಲಿಸಲಾಗುತ್ತದೆ. ಸ್ವೀಕೃತಿ ನೀಡಿದ 7 ದಿನಗಳಲ್ಲಿ ನಮೂನೆ ಆರ್.ಎಫ್‌.ಡಿ-04 ರಲ್ಲಿ ತಾತ್ಕಾಲಿಕ ಮರುಪಾವತಿ ಆದೇಶ ಹೊರಡಿಸುವ ಮೂಲಕ ಶೇ 90 ರಷ್ಟು ಮರುಪಾವತಿ ಮೊತ್ತವನ್ನು ಮರುಪಾವತಿಸಲಾಗುತ್ತದೆ. ನಮೂನೆ ಆರ್.ಎಫ್‌.ಡಿ-05 ರಲ್ಲಿ ಬ್ಯಾಂಕ್‌ ಮಾಹಿತಿಯನ್ನು ವರ್ತಕರಿಗೆ ಕೈಯಾರೆ ನೀಡಲಾಗುತ್ತದೆ. ಇದನ್ನು ವರ್ತಕರು ತಮ್ಮ ಬ್ಯಾಂಕ್‌ಗೆ ನೀಡಿದರೆ ಜಿ.ಎಸ್.ಟಿ. ನೋಂದಣಿಯಲ್ಲಿ ದಾಖಲಿಸಿದ ಬ್ಯಾಂಕ್‌ ಖಾತೆಗೆ ಇಲಾಖೆಯಿಂದ ಮರುಪಾವತಿ ಮೊತ್ತ ಜಮಾ ಆಗುತ್ತದೆ.
ಎಸ್‌ಜಿಎಸ್‌ಟಿ ಮರುಪಾವತಿ ಮೊತ್ತದ ನಮೂನೆ ಆರ್.ಎಫ್‌.ಡಿ-05 ಯನ್ನು ರಾಜ್ಯದ ಸ್ಥಳೀಯ ಜಿಎಸ್‌ಟಿ ಕಚೇರಿಯಲ್ಲಿಯೂ ಸಿಜಿಎಸ್‌ಟಿ ಮತ್ತು ಐಜಿಎಸ್‌ಟಿ ಮರುಪಾವತಿ ಮೊತ್ತದ ನಮೂನೆ ಆರ್.ಎಫ್‌.ಡಿ-05 ಯನ್ನು ಕೇಂದ್ರ ಜಿಎಸ್‌ಟಿ ಕಚೇರಿ (ಕೇಂದ್ರ ಅಬಕಾರಿ ಇಲಾಖಾ ಕಚೇರಿ) ಯಲ್ಲಿ ನೀಡಲಾಗುತ್ತದೆ.

ಮರುಪಾವತಿಗೆ ತಡೆ

ಜಿಎಸ್‌ಟಿ ಕಾಯ್ದೆ ಅಡಿಯಲ್ಲಿ ಯಾವುದಾದರೂ ರಿಟರ್ನ ಸಲ್ಲಿಕೆ ಬಾಕಿ ಇದ್ದರೆ ಅಥವಾ ತೆರಿಗೆ, ದಂಡ, ಬಡ್ಡಿ ವಿಳಂಬ ಶುಲ್ಕ ಇತ್ಯಾದಿ ಇಲಾಖೆಗೆ ಬರಬೇಕಾದ ಯಾವುದೇ ಮೊತ್ತವನ್ನು ವರ್ತಕರು ಬಾಕಿ ಉಳಿಸಿಕೊಂಡಿದ್ದರೆ ಅಧಿಕಾರಿಯು ಕಲಂ.54(10) ರಲ್ಲಿ ಪ್ರದತ್ತವಾದ ಅಧಿಕಾರದ ಅನ್ವಯ ಮರುಪಾವತಿಯನ್ನು ತಡೆಹಿಡಿಯಬಹುದು. ಕಲಂ.54(11) ರ ಪ್ರಕಾರ ಮರುಪಾವತಿ ನೀಡಿಕೆಯಿಂದ ವರಮಾನದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದೆಂದು ಮನಗಂಡರೆ ಆಯುಕ್ತರು ವರ್ತಕರಿಗೆ ಈ ಬಗ್ಗೆ ಅಹವಾಲನ್ನು ಹೇಳಿಕೊಳ್ಳಲು ಅವಕಾಶ ನೀಡಿದ ನಂತರ ಮರುಪಾವತಿಯನ್ನು ತಡೆಹಿಡಿಯಬಹುದು.

ವಿಳಂಬ ಮರುಪಾವತಿಗೆ ಬಡ್ಡಿ

ಕಾಯ್ದೆಯಲ್ಲಿ ಉಲ್ಲೇಖಿಸಿದ ಕಾಲಮಿತಿಯಲ್ಲಿ (ಸ್ವೀಕೃತಿ ನೀಡಿದ ನಂತರದ 7 ದಿನ ಹಾಗೂ 60 ದಿನ) ಮರುಪಾವತಿ ನೀಡುವಲ್ಲಿ ಸ್ಥಳೀಯ ಜಿ.ಎಸ್.ಟಿ. ಕಚೇರಿಯ ಅಧಿಕಾರಿಯು ವಿಫಲನಾದರೆ ವರ್ತಕರು ತಡವಾದ ದಿನಗಳಿಗೆ ಜಿ.ಎಸ್.ಟಿ. ಮಂಡಳಿಯ ಶಿಫಾರಸ್‌ನಂತೆ ಅಧಿಸೂಚಿತಗೊಳ್ಳಬಹುದಾದ ಶೇ 9 ನ್ನು ಮೀರದ ಅಂತಹ ಒಂದು ದರದಲ್ಲಿ ಬಡ್ಡಿಯನ್ನು ಕ್ಲೇಮ್‌ ಮಾಡಬಹುದು.

ಮರುಪಾವತಿ ಇಲ್ಲ: ಜಿಎಸ್‌ಟಿ ಕಾಯ್ದೆಯ ಕಲಂ.54(14) ಪ್ರಕಾರ, ಮರುಪಾವತಿ ಪಡೆಯ ಬಯಸಿದ ಮೊತ್ತ 1 ಸಾವಿರ ರೂಪಾಯಿಗಳಿಗಿಂತ ಕಡಿಮೆಯಿದ್ದರೆ ಮರುಪಾವತಿ ಸಿಗುವುದಿಲ್ಲ. ಮರುಪಾವತಿ ಪಡೆಯುವ ಕನಿಷ್ಠ ಮೊತ್ತ 1 ಸಾವಿರ ಅಥವಾ ಅದಕ್ಕಿಂತ ಹೆಚ್ಚಿಗೆ ಇರಬೇಕು.
**
ತಪ್ಪಾಗಿ ಮರುಪಾವತಿ ಪಡೆದರೆ ದಂಡ
ವರ್ತಕರು ದೋಷಪೂರ್ಣ ದಾಖಲೆಗಳನ್ನು ಸಲ್ಲಿಸಿ ತಪ್ಪಾಗಿ ಮರುಪಾವತಿ ಪಡೆದಕೊಳ್ಳುವುದು ಕಾಯ್ದೆಯಡಿಯಲ್ಲಿ ದಂಡನೀಯ ಅಪರಾಧವಾಗುತ್ತದೆ. ಇದಕ್ಕೆ ಕಲಂ.122 ರನ್ವಯ ₹ 20 ಸಾವಿರ ದಂಡ ಅಥವಾ ಹಾಗೆ ಮೋಸದಿಂದ ಕ್ಲೇಮ್‌ ಮಾಡಲಾದ ಮರುಪಾವತಿ ಮೊತ್ತ ಇದರಲ್ಲಿ ಯಾವುದು ಹೆಚ್ಚೊ ಆ ಮೊತ್ತವನ್ನು ವರ್ತಕರು ದಂಡವಾಗಿ ಸಂದಾಯ ಮಾಡಬೇಕಾಗುತ್ತದೆ. ಮೋಸದಿಂದ ಪಡೆದ ಮರುಪಾವತಿ ಮೊತ್ತವನ್ನೂ ವಸೂಲಿ ಮಾಡಲಾಗುತ್ತದೆ. ಕಾರಣ ವರ್ತಕರು ಮರುಪಾವತಿ ಅರ್ಜಿ ಸಲ್ಲಿಸುವಾಗ ಎಲ್ಲ ವಿವರಗಳನ್ನು ಸರಿಯಾಗಿ ಪರಿಶೀಲಿಸಿಕೊಂಡು ಮರುಪಾವತಿಯ ರುಜುತ್ವವನ್ನು ದೃಢಪಡಿಸಿಕೊಳ್ಳಬೇಕು.

(ಲೇಖಕರು ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.