ADVERTISEMENT

ಡೆಬಿಟ್‌ ಕಾರ್ಡ್‌ ಎಷ್ಟು ಸುರಕ್ಷಿತ?

ವಿಶ್ವನಾಥ ಎಸ್.
Published 25 ಅಕ್ಟೋಬರ್ 2016, 19:30 IST
Last Updated 25 ಅಕ್ಟೋಬರ್ 2016, 19:30 IST
ಚಿತ್ರ: ವಿಜಯ
ಚಿತ್ರ: ವಿಜಯ   
‘ನಿಮ್ಮ ಬಳಿ ಈಗಿರುವ ಡೆಬಿಟ್‌ ಕಾರ್ಡ್‌ಗೆ ಬದಲಾಗಿ ಹೊಸ ಕಾರ್ಡ್‌ ಕೊಡುತ್ತೇವೆ. ಆದರೆ, ಕಾರ್ಡ್‌ ಸಂಖ್ಯೆ ಮತ್ತು ಪಾಸ್‌ವರ್ಡ್‌ ಹಳೆಯದೇ ನೀಡುತ್ತೇವೆ. ಇದಕ್ಕಾಗಿ ನೀವು  ಸದ್ಯ ಬಳಸುತ್ತಿರುವ ಕಾರ್ಡ್‌ನ ಸಂಖ್ಯೆ, ಮುಕ್ತಾಯದ ದಿನಾಂಕ (Expiry date) ಮತ್ತು ಸಿವಿವಿ ಸಂಖ್ಯೆ (Card Verification Va*ue) ತಿಳಿಸಿ ಎಂದು ಬ್ಯಾಂಕ್‌ನ ಮುಂಬೈ ಕೇಂದ್ರ ಕಚೇರಿಯ ಡೆಬಿಟ್‌ ಕಾರ್ಡ್‌ ವಿಭಾಗದಿಂದ ಎಂದು ಹೇಳಲಾಗುವ ಕರೆಯೊಂದು ಬರುತ್ತದೆ.
 
ಕಚೇರಿಗೆ ಹೋಗುವ ಆತುರದಲ್ಲಿಯೋ, ನಿದ್ದೆಯಿಂದೆದ್ದ ಮಂಪರಿನಲ್ಲಿಯೋ ನಾವು ಎಲ್ಲಾ ಮಾಹಿತಿಯನ್ನೂ ನೀಡುತ್ತೇವೆ. ನಾವು ಮೋಸ ಹೋಗಿದ್ದೇವೆ ಎಂದು ಗೊತ್ತಾಗುವುದು ಖಾತೆಯಲ್ಲಿರುವ ಹಣ ಮಾಯವಾದಾಗಲೆ. ಸುಶಿಕ್ಷಿತರೇ ಎನಿಸಿಕೊಂಡವರೇ ಹೆಚ್ಚು ಮೋಸ ಹೋಗಿದ್ದಾರೆ ಎನ್ನುವುದು ವಿಶೇಷ.   ಬ್ಯಾಂಕ್‌ ಅಧಿಕಾರಿ ಎಂದು ಹೇಳಿಕೊಳ್ಳುವ ಆ ವ್ಯಕ್ತಿಯ ಮಾತು  ಮೇಲ್ನೋಟಕ್ಕೆ ನಂಬುವಂತೆಯೇ ಇರುತ್ತದೆ.
 
ಈ ತರಹದ ವಂಚನೆ ಎಲ್ಲೆಡೆಯೂ ನಡೆಯುತ್ತಿದೆ. ಈಗ ಸದ್ಯ ನಡೆದಿರುವ ವಂಚನೆಗೆ ಡೆಬಿಟ್‌ ಕಾರ್ಡ್‌ಗಳ ಮಾಹಿತಿ ಕದಿಯಲು ಎಟಿಎಂ ಬಳಸಿಕೊಳ್ಳಲಾಗಿದೆ. ಗ್ರಾಹಕರಿಗೆ ಕರೆ ಮಾಡದೆ, ಎಸ್‌ಎಂಎಸ್‌, ಇ–ಮೇಲ್‌ ಕಳುಹಿಸದೆ ನಡೆದಿರುವ ಹೊಸ ಬಗೆಯ ಸೈಬರ್‌ ವಂಚನೆ ಇದಾಗಿದೆ.
 
ವಿದೇಶದ ಯಾವುದೋ ಮೂಲೆಯಲ್ಲಿ ಕುಳಿತು ವಂಚಕರು ಈ ವಂಚನೆ ಎಸಗಿದ್ದಾರೆ ಎನ್ನಲಾಗಿದೆ. ನೈಜೀರಿಯಾದಿಂದಲೂ ವಂಚಕರ ತಂಡ ಕೆಲಸ ಮಾಡಿದೆ ಎನ್ನುವ ಮಾತೂ ಕೇಳಿಬಂದಿವೆ. ಪೂರ್ಣ ತನಿಖೆ ನಡೆದ ಬಳಿಕವಷ್ಟೇ ಇದು ಸ್ಪಷ್ಟವಾಗಲಿದೆ.
 
ಕಳೆದ ವಾರ (ಅ.19) ದೇಶದ ಅತಿ ದೊಡ್ಡ ಬ್ಯಾಂಕ್‌, ಭಾರತೀಯ ಸ್ಟೇಟ್‌ ಬ್ಯಾಂಕ್‌ ತನ್ನ 6 ಲಕ್ಷ ಡೆಬಿಟ್‌ ಕಾರ್ಡ್‌ಗಳನ್ನು ಬ್ಲಾಕ್‌ ಮಾಡಿತು. ಬೇರೆ ಬ್ಯಾಂಕ್‌ಗಳ ಎಟಿಎಂನಲ್ಲಿ ಕುತಂತ್ರಾಂಶ (ಮಾಲ್‌ವೇರ್‌) ಬಳಸಿ  ಈ ಕಾರ್ಡ್‌ಗಳ ಮಾಹಿತಿ ಕದಿಯಲಾಗಿದೆ.
 
ಕದ್ದ ಮಾಹಿತಿಯಿಂದ ಬ್ಯಾಂಕ್‌ ಖಾತೆಗಳಿಂದ ಇನ್ನಷ್ಟು ಹಣ ವಂಚಕರ ಪಾಲಾಗಬಾರದು ಎನ್ನುವ ಕಾರಣಕ್ಕೆ ಈ  ಕ್ರಮ ಕೈಗೊಳ್ಳಲಾಗಿದೆ ಎಂದು ಬ್ಯಾಂಕ್‌ ಸ್ಪಷ್ಟನೆ ನೀಡಿತ್ತು. ಇದೇ ತೆರನಾದ ದಾಳಿಗೆ ತುತ್ತಾಗಿರುವುದಾಗಿ ಆ್ಯಕ್ಸಿಸ್‌, ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್‌ಗಳೂ ಒಪ್ಪಿಕೊಂಡಿವೆ. ಇದರಿಂದ ಬ್ಯಾಂಕ್‌ಗಳು 32 ಲಕ್ಷ ಡೆಬಿಟ್‌ ಕಾರ್ಡ್‌ಗಳನ್ನು ಬದಲಿಸಬೇಕಾದ ಪರಿಸ್ಥಿತಿ ಎದುರಾಗಿದೆ.
 
ಸಮಸ್ಯೆ ಆರಂಭವಾಗಿದ್ದು ಹೇಗೆ?
ಗ್ರಾಹಕ ಭಾರತದಲ್ಲಿಯೇ ಇದ್ದರೂ ಸಹ ಸೆಪ್ಟೆಂಬರ್‌ 5 ರಂದು ಆತನ ಡೆಬಿಟ್‌ ಕಾರ್ಡ್‌ ಅನ್ನು ಚೀನಾ ಮತ್ತು ಅಮೆರಿಕದಲ್ಲಿ ಹಣ ವರ್ಗಾವಣೆಗೆ ಬಳಸಲಾಯಿತು. ಇದು ಬ್ಯಾಂಕ್‌ಗಳ ಅನುಮಾನಕ್ಕೆ ಕಾರಣವಾಯಿತು. ದೇಶದಲ್ಲಿ ಹಣ ಪಾವತಿ ವ್ಯವಸ್ಥೆಯ ಮೇಲೆ ನಿಗಾ ವಹಿಸುವ ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾಕ್ಕೆ (ಎನ್‌ಪಿಸಿಐ) ದೂರು ನೀಡಲಾಯಿತು.
 
ಎಟಿಎಂನಲ್ಲಿ ಕುತಂತ್ರಾಂಶ ಸೇರಿಸಿ ಮಾಹಿತಿ ಕದಿಯಲಾಗಿದೆ ಎಂದು ‘ಎನ್‌ಪಿಸಿಐ’ ತನಿಖಾ ವರದಿ ನೀಡಿತು. ಎಟಿಎಂ ಸೇವೆಗಳನ್ನು ಒದಗಿಸುವ ಹಿಟಾಚಿ ಪೇಮೆಂಟ್‌ ಸರ್ವೀಸಸ್‌ನ ಭದ್ರತಾ ವ್ಯವಸ್ಥೆಗೆ ಕುತಂತ್ರಾಂಶದ ಮೂಲಕ ಕನ್ನ ಹಾಕಲಾಗಿದೆ ಎಂದು ವರದಿ ಖಚಿತಪಡಿಸಿದೆ. 
 
6 ವಾರಗಳೇ ಬೇಕಾಯ್ತು: ಡೆಬಿಟ್‌ ಕಾರ್ಡ್‌ ಮಾಹಿತಿ ಸೋರಿಕೆ ಆಗಿದೆ ಎನ್ನುವುದು ಆರು ವಾರಗಳ ನಂತರ ಬ್ಯಾಂಕ್‌ಗಳ ಗಮನಕ್ಕೆ ಬಂದಿದೆ.
 
ವಂಚನೆಯ ವೈಖರಿ
ಕೀಪ್ಯಾಡ್‌ ಜಾಮ್: Enter ಮತ್ತು Cance* ಗುಂಡಿ (Button) ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವಂತೆ ಮಾಡಲು ಅವುಗಳ ಕೆಳಗೆ ಪಿನ್‌ ಅಥವಾ ಬ್ಲೇಡ್‌ ಇಟ್ಟಿರುತ್ತಾರೆ. ಗ್ರಾಹಕರ ಹಣ ಪಡೆಯಲು ಪಿನ್‌ ಟೈಪ್‌ ಮಾಡಿದ ಬಳಿಕ Enter/ok ಬಟನ್‌ ಒತ್ತಿದರೆ ಅದು ಕೆಲಸ ಮಾಡುವುದಿಲ್ಲ. ಸಹಜವಾಗಿಯೇ ಎಟಿಎಂ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದುಕೊಂಡು Cance* ಬಟನ್‌ ಒತ್ತುತ್ತೇವೆ. ಅದೂ ಸಹ ಯಶಸ್ವಿಯಾಗುವುದಿಲ್ಲ.
 
ಇಂತಹ ಸಂದರ್ಭದಲ್ಲಿ ಬಹಳಷ್ಟು ಗ್ರಾಹಕರು ಎಟಿಎಂನಿಂದ ಹೊರಬರುತ್ತಾರೆ. ಆದರೆ ಎಟಿಎಂನಲ್ಲಿ ಹಣ ಪಡೆಯಲು ಕನಿಷ್ಠ 20 ರಿಂದ 30 ಸೆಕೆಂಡ್‌ಗಳ ಅವಕಾಶ ಇರುತ್ತದೆ. ಇದರ ಲಾಭಪಡೆಯುವ ವಂಚಕರು ಬಟನ್‌ಗಳ ಕೆಳಗೆ ಇಟ್ಟಿರುವ ಪಿನ್‌/ಬ್ಲೇಡ್‌ ತೆಗೆದು ಹಣ ಪಡೆಯುತ್ತಾರೆ. 
 
ಒಂದು ಬಾರಿಗೆ ಗರಿಷ್ಠ ₹10 ಸಾವಿರ ಪಡೆಯಬಹುದು. ಆ ಬಳಿಕ ಮತ್ತೆ ಕಾರ್ಡ್‌ ಸ್ವೈಪ್‌ ಮಾಡಿ ಪಿನ್‌ ಟೈಪ್‌ ಮಾಡಬೇಕು.  ಹೀಗಾಗಿ ಭಾರಿ ಪ್ರಮಾಣದಲ್ಲಿ ಹಣ ನಷ್ಟವಾಗುವುದಿಲ್ಲ. ಆದರೆ, ನಷ್ಟ ನಷ್ಟವೇ ಆಗಿರುವುದರಿಂದ ಅದನ್ನು ತಪ್ಪಿಸಲು Transaction cance**ed ಎಂದು ಬರುವವರೆಗೂ ಎಟಿಎಂನಿಂದ ಹೊರ ಬರದಿರುವುದೇ ಒಳಿತು.
 
ನಕಲಿ ಕಾರ್ಡ್‌: ಪೆಟ್ರೋಲ್‌ ಪಂಪ್‌ಗಳಲ್ಲಿ, ಮಾಲ್‌ಗಳಲ್ಲಿ ಕಾರ್ಡ್‌ ಮೂಲಕ ಹಣ ಪಾವತಿಸುವಾಗ ನಾವು ಪಿನ್‌ ಟೈಪ್‌ ಮಾಡುವುದನ್ನು ವರ್ತಕರು ನೋಡಿಕೊಳ್ಳುತ್ತಾರೆ. ಅಂಗಡಿಯವರು ನಕಲಿ ಕಾರ್ಡ್‌ (ಡಮ್ಮಿ)  ನೀಡಿ ವಂಚನೆ ಎಸಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಇಲ್ಲಿಯೂ ಗ್ರಾಹಕರು ಎಚ್ಚರ ವಹಿಸಬೇಕು.
 
ವಂಚನೆಗೆ ಸ್ಕಿಮ್ಮಿಂಗ್‌ ಸಾಧನ: ಇದು ವಂಚನೆಯ ಅತ್ಯಂತ ಸುಧಾರಿತ ವಿಧಾನ. ಎಟಿಎಂನ ಡೆಬಿಟ್‌ ಕಾರ್ಡ್‌ ಸ್ಲಾಟ್‌ನಲ್ಲಿ ಈ ಸಣ್ಣ ಸಾಧನವನ್ನು ಅಡಗಿಸಿ ಇಡಲಾಗುತ್ತದೆ. ಇದು ಕಾರ್ಡ್‌ನ ಮ್ಯಾಗ್ನೆಟಿಕ್‌ ಟೇಪ್‌ನಲ್ಲಿರುವ ಮಾಹಿತಿಯನ್ನು ಪಡೆಯುತ್ತದೆ.
 
ಹೀಗೆ ಒಮ್ಮೆ ಪಡೆದ ಮಾಹಿತಿಯನ್ನು ಯಾವುದೇ ಬೇರೆ ಕಾರ್ಡ್‌ಮೇಲೆ ಮೂಡಿಸಿ, ಸುಲಭವಾಗಿ ಹಣ ಪಡೆಯಬಹುದು. ಸಾಮಾನ್ಯವಾಗಿ ಈ ವಂಚನೆಗೆ ಬ್ಯಾಂಕ್‌ ಹೊಣೆಗಾರಿಕೆ ಹೊತ್ತು ಗ್ರಾಹಕರಿಗೆ ನಷ್ಟ ತುಂಬಿಕೊಡಲು ನೆರವಾಗುತ್ತದೆ. ಆದರೆ ಕಾರ್ಡ್‌ ಮೊದಲ ಬಾರಿಗೆ ದುರ್ಬಳಕೆ ಆದ ತಕ್ಷಣ ಅದನ್ನು ಬ್ಲಾಕ್‌ ಮಾಡುವುದು ಅಗತ್ಯ.
 
ಸೈಬರ್‌ ಕೆಫೆ, ಇಂಟರ್‌ನೆಟ್‌ ಪಾರ್ಲರ್‌ಗಳ ಕೀಬೋರ್ಡ್‌ಗಳಲ್ಲಿ ಸ್ಕಿಮ್ಮಿಂಗ್‌ ಸಾಧನ ಇಡಲಾಗುತ್ತದೆ. ಇದರ ಅರಿವಿಲ್ಲದೆ ಗ್ರಾಹಕರು ನಡೆಸುವ ನೆಟ್‌ ಬ್ಯಾಂಕಿಂಗ್‌, ಆನ್‌ಲೈನ್‌ ವಹಿವಾಟು ಮಾಹಿತಿ ಮತ್ತೊಂದು ಪರದೆಯಲ್ಲಿ ಸಂಗ್ರಹವಾಗುತ್ತದೆ. ಪಾಸ್‌ವರ್ಡ್‌ ಕದಿಯುವ ವಂಚಕರು ಸುಲಭವಾಗಿ ಗ್ರಾಹಕರನ್ನು ಯಾಮಾರಿಸುತ್ತಾರೆ. 
 
ಮ್ಯಾಗ್ನೆಟಿಕ್‌ v/s ಚಿಪ್‌ ಕಾರ್ಡ್‌
ಸದ್ಯ ದೇಶದಲ್ಲಿ ಮ್ಯಾಗ್ನೆಟಿಕ್‌ ಸ್ಟ್ರಿಪ್‌  (ಮ್ಯಾಗ್‌ಸ್ಟ್ರಿಪ್‌ ಎಂದೂ ಕರೆಯಲಾಗುತ್ತದೆ) ಇರುವ ಡೆಬಿಟ್‌ ಕಾರ್ಡ್‌ಗಳ ಸಂಖ್ಯೆಯೇ ಹೆಚ್ಚಿದೆ. ನಮ್ಮ ಖಾತೆಯ ಮಾಹಿತಿಯು ಮ್ಯಾಗ್ನೆಟಿಕ್‌ ಸ್ಟ್ರಿಪ್‌ನಲ್ಲಿ ಇರುತ್ತದೆ. ಕಾರ್ಡ್‌ ಸ್ವೈಪ್‌ ಮಾಡಿದಾಗ ಮ್ಯಾಗ್ನೆಟಿಕ್‌ ಸ್ಟ್ರಿಪ್‌ನಲ್ಲಿರುವ ಮಾಹಿತಿಯು ಬ್ಯಾಂಕ್‌ನಲ್ಲಿರುವ ಸರ್ವರ್‌  ಜತೆ ಸಂಪರ್ಕ ಹೊಂದಿ, ಹಣ ವರ್ಗಾವಣೆ ನಡೆಯುತ್ತದೆ.  ವಂಚಕರು ಮ್ಯಾಗ್ನೆಟಿಕ್‌ ಸ್ಟ್ರಿಪ್‌ನಲ್ಲಿರುವ ಮಾಹಿತಿ ಕದಿಯಲು ಸ್ಕಿಮ್ಮಿಂಗ್‌ ಸಾಧನೆ ಬಳಸುತ್ತಾರೆ.
 
ಚಿಪ್‌ ಆಧಾರಿತ ಕಾರ್ಡ್‌: ಬಳಕೆದಾರನ ಖಾತೆಯ ಮಾಹಿತಿಯನ್ನು ಚಿಪ್‌ನಲ್ಲಿ ಸಂಗ್ರಹಿಸಿಡಲಾಗುತ್ತದೆ. ಮಾಹಿತಿಯು ಗೂಢಲಿಪಿಯಲ್ಲಿ (ಎನ್‌ಕ್ರಿಪ್ಟ್‌) ಇರುತ್ತದೆ. ‘ಪಿನ್‌’ ನೀಡಿದರೆ ಮಾತ್ರವೇ ಹಣ ವರ್ಗಾವಣೆ ಸಾಧ್ಯ. ಹೀಗಾಗಿ ಕಾರ್ಡ್‌ ನಕಲು ಮಾಡಲು ಆಗುವುದಿಲ್ಲ. 
 
ಮ್ಯಾಗ್ನೆಟಿಕ್‌ ಕಾರ್ಡ್‌ನಲ್ಲಿ ಅದನ್ನು ಸ್ವೈಪ್‌ ಮಾಡಿದ ತಕ್ಷಣವೇ ಸುಲಭವಾಗಿ ಮಾಹಿತಿ ಪಡೆಯಬಹುದು. ಮಾಹಿತಿ ಕದಿಯಲು ಸ್ಕಿಮ್ಮಿಂಗ್‌ ಸಾಧನೆ ಬಳಸಲಾಗುತ್ತದೆ. ಅ್ಯಕ್ಸಿಸ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌ ಮತ್ತು ಕೋಟಕ್‌ ಮಹೀಂದ್ರ ಬ್ಯಾಂಕ್‌ಗಳು ಮಾತ್ರವೇ ಚಿಪ್‌ ಆಧಾರಿತ ಕಾರ್ಡ್‌ಗಳನ್ನು ಪರಿಚಯಿಸಿವೆ. ಕೆಲವು ಬ್ಯಾಂಕ್‌ಗಳು ‘ಪಿನ್‌’ ಇಲ್ಲದ ಚಿಪ್ ಆಧಾರಿತ ಕಾರ್ಡ್‌ಗಳನ್ನು ನೀಡುತ್ತವೆ. ಆದರೆ ಇಲ್ಲಿ ಬಳಕೆದಾರ ತನ್ನ ಸಹಿ ಮಾಡುವುದು ಕಡ್ಡಾಯ.
 
ಬಯೊ ಮೆಟ್ರಿಕ್‌ ಎಟಿಎಂ: ಡೆಬಿಟ್‌ ಕಾರ್ಡ್‌/ ಪಿನ್‌ ವಂಚನೆ ತಡೆಯಲು ಬ್ಯಾಂಕ್‌ಗಳು ಬಯೊ ಮೆಟ್ರಿಕ್‌ ಆಧಾರಿತ ಎಟಿಎಂಗಳನ್ನು ಪರಿಚಯಿಸಿವೆ. ಇದರಿಂದ ಗ್ರಾಮೀಣ ಭಾಗದ ಅನಕ್ಷರಸ್ಥ  ಗ್ರಾಹಕರನ್ನು ತಲುಪಲೂ ಬ್ಯಾಂಕ್‌ಗಳಿಗೆ ಅನುಕೂಲವಾಗಿದೆ. ಪಿನ್‌ ಬಳಸುವ ಬದಲಿಗೆ ಹೆಬ್ಬೆಟ್ಟಿನ ಗುರುತು ನೀಡಿ ಹಣ ವರ್ಗಾವಣೆ ನಡೆಸಬೇಕು. ಇದರಿಂದ ಪಿನ್‌ ಮರೆಯುವ ಅಥವಾ ಬೇರೆಯವರು ದುರ್ಬಳಕೆ ಮಾಡುವ ಆತಂಕ ಇರುವುದಿಲ್ಲ.
 
ಮೊದಲ ಬಾರಿಗೆ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ತಮಿಳುನಾಡಿನ ಶಿವಗಂಗಯ್‌ ಶಾಖೆಯಲ್ಲಿ ‘ಕಿಸಾನ್‌ ಎಟಿಎಂ’ ಅಳವಡಿಸಿತು. ನಂತರ ದೇನಾ ಬ್ಯಾಂಕ್‌ ಗುಜರಾತ್‌ನಲ್ಲಿ, ಆಂಧ್ರಬ್ಯಾಂಕ್‌ ಹೈದರಾಬಾದ್‌ ಮತ್ತು ಸಿಕಂದರಾಬಾದ್‌ನಲ್ಲಿ ಬಯೊಮೆಟ್ರಿಕ್‌ ಎಟಿಎಂ ಆರಂಭಿಸಿದವು. ಕಾರ್ಪೊರೇಷನ್‌ ಬ್ಯಾಂಕ್‌ ಮಾತನಾಡುವ ಬಯೊ ಮೆಟ್ರಿಕ್‌ ಎಟಿಎಂ ಪರಿಚಯಿಸಿತು. ಈ ರೀತಿಯ ಎಟಿಎಂಗಳ ಬಳಕೆ ಬಹಳ ಕಡಿಮೆ.
 
ಯಾರು ಹೊಣೆ?
ಗ್ರಾಹಕರ ಹಿತರಕ್ಷಣೆಗೆ ಸಂಬಂಧಿಸಿದಂತೆ ಆರ್‌ಬಿಐನ ಕರಡು ಅಧಿಸೂಚನೆ ಹೊರಡಿಸಿದೆ. ಅದರಂತೆ ಮೂರನೇ ವ್ಯಕ್ತಿಯಿಂದ ಮಾಹಿತಿ ಸೋರಿಕೆ ಅಥವಾ ವಂಚನೆ ನಡೆದರೆ ಅದಕ್ಕೆ ಗ್ರಾಹಕರು ಹೊಣೆಗಾರರಲ್ಲ.  ಆದರೆ ಗ್ರಾಹಕರು ವಂಚನೆ ನಡೆದ ಅಥವಾ ನಡೆದಿರುವ ಬಗ್ಗೆ ಅನುಮಾನವಿದೆ ಎನ್ನುವುದನ್ನು 3 ದಿನಗಳ ಒಳಗೆ ಬ್ಯಾಂಕ್‌ಗೆ ಮಾಹಿತಿ ನೀಡುವುದು ಕಡ್ಡಾಯ.
 
**
ತನ್ನಷ್ಟಕ್ಕೇ ನಾಶವಾಗಬಲ್ಲದು!
ಮಾಹಿತಿ ಪಡೆಯಲು ಬಳಸಿರುವ ಮಾಲ್‌ವೇರ್‌ ತನ್ನಷ್ಟಕ್ಕೆ ತಾನೇ ನಾಶವಾಗುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಸುಲಭವಾಗಿ ಪತ್ತೆ ಮಾಡಲು ಸಾಧ್ಯವಾಗದ ಮತ್ತು ಅದು ಇತ್ತು ಎನ್ನುವುದಕ್ಕೆ ಯಾವುದೇ ಸುಳಿವನ್ನು ಬಿಟ್ಟುಕೊಡದಷ್ಟು ಆಧುನಿಕವಾಗಿದೆ.
 
ಹೀಗಾಗಿ ಬ್ಯಾಂಕ್‌ಗಳಿಗೆ ಮಾಲ್‌ವೇರ್‌ ಬಳಸಲಾಗಿದೆ ಎನ್ನುವುದನ್ನು ಪತ್ತೆ ಮಾಡಲು ಆರು ವಾರಗಳೇ ಬೇಕಾಯಿತು.  ಕಂಪ್ಯೂಟರ್‌ಗಳಿಗೆ  ಹಾನಿ ಮಾಡುವ ತಂತ್ರಾಂಶದಲ್ಲಿ ಇರುವ ವರ್ಮ್‌, ಟ್ರೋಜನ್‌, ರ್‍ಯಾನ್‌ಸಮ್‌ವೇರ್‌, ಸ್ಪೈವೇರ್‌ಗಳು ಬ್ಯಾಂಕ್‌ ಸರ್ವರ್‌ ಅಥವಾ ಎಟಿಎಂನಲ್ಲಿರುವ ಕಂಪ್ಯೂಟರ್‌ ವ್ಯವಸ್ಥೆಗೆ ಕನ್ನ ಹಾಕಿ, ವಂಚಕರಿಗೆ ಡೆಬಿಟ್‌ ಕಾರ್ಡ್‌ ಮಾಹಿತಿ ಪಡೆಯಲು ಅನುವು ಮಾಡಿಕೊಡುತ್ತದೆ.
 
**
ಗ್ರಾಹಕರು ಏನು ಮಾಡಬಹುದು?
*ಬ್ಯಾಂಕ್‌ ಖಾತೆ ತೆರೆಯುವಾಗ ಅಥವಾ ಬಳಿಕ ಮೊಬೈಲ್‌ ಮತ್ತು ಇ–ಮೇಲ್‌ ಕಡ್ಡಾಯವಾಗಿ ಬ್ಯಾಂಕ್‌ನಲ್ಲಿ ನೋಂದಾಯಿಸಬೇಕು. ಆರ್‌ಬಿಐ ನಿಯಮದಂತೆ, ಗ್ರಾಹಕರು ಪ್ರತಿ ಬಾರಿ ಹಣ ವರ್ಗಾವಣೆ ನಡೆಸಿದಾಗಲೂ ಬ್ಯಾಂಕ್‌ ಆ ಮಾಹಿತಿಯನ್ನು ಎಸ್‌ಎಂಎಸ್‌  ಮತ್ತು ಮೇಲ್‌ ಕಳುಹಿಸಬೇಕು. 
 
*ಬ್ಯಾಂಕ್‌ನಿಂದ ಬರುವ ಯಾವುದೇ ಸಂದೇಶವನ್ನೂ ನಿರ್ಲಕ್ಷಿಸಬಾರದು.
 
*ಕನಿಷ್ಠ 6 ತಿಂಗಳಿಗೊಮ್ಮೆ ಪಿನ್‌/ ಪಾಸ್‌ವರ್ಡ್‌ ಬದಲಿಸುವುದು ಸೂಕ್ತ ಎನ್ನುವುದು ತಜ್ಞರ ಸಲಹೆ.
 
*ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು (ಎಟಿಎಂ ಪಿನ್‌/ಡೆಬಿಟ್‌ ಕಾರ್ಡ್‌ ಸಂಖ್ಯೆ/ ಆನ್‌ಲೈನ್‌ ಬ್ಯಾಂಕಿಂಗ್‌/) ಯಾರೊಂದಿಗೂ ಹಂಚಿಕೊಳ್ಳಬಾರದು. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಂತೂ ಇಂತಹ ಮಾಹಿತಿ ಹಂಚಿಕೊಳ್ಳಲೇ ಬಾರದು.
 
*ಹಣ ಪಡೆದ ಬಗ್ಗೆ ಮೊಬೈಲ್‌ಗೆ ಎಸ್‌ಎಂಎಸ್‌  ಸಂದೇಶಗಳು ಬರುವುದರಿಂದ ಮುದ್ರಿತ  ರಸೀದಿ ಬೇಕಾಗುತ್ತದೆ. ಆದರೆ, ಅದನ್ನು ಎಲ್ಲೆಂದರಲ್ಲಿ ಬೀಸಾಡಬಾರದಷ್ಟೆ. ಖಾತೆಯಲ್ಲಿ  ವಂಚನೆ ನಡೆದಾಗ ಮುದ್ರಿತ ಪ್ರತಿ ನೆರವಿಗೆ ಬರುತ್ತದೆ.
 
*ಆದಷ್ಟೂ ಬೇರೆಯವರ ಗಮನಕ್ಕೆ ಬರದಂತೆ ಕೈಯನ್ನು ಮುಚ್ಚಿಕೊಂಡು ಪಿನ್‌ ಟೈಪ್‌ ಮಾಡಿ. 
 
*ರೆಸ್ಟೋರೆಂಟ್‌, ಪೆಟ್ರೋಲ್‌ ಬಂಕ್‌ ಅಥವಾ ಇನ್ಯಾವುದೇ ಕಡೆಗಳಲ್ಲಿ ನಿಮ್ಮ ಡೆಬಿಟ್‌ ಕಾರ್ಡ್‌ಗಳನ್ನು  ಬೇರೆಯವರ ಕೈಗೆ ನೀಡಬೇಡಿ. ಒಂದೊಮ್ಮೆ ನೀಡಿದರೂ ಮರಳಿ ಪಡೆಯುವಾಗ ಅದು ನಿಮ್ಮದೇ ಹೌದಾ ಅಂತ ಪರೀಕ್ಷಿಸಿಕೊಳ್ಳಿ.
 
*
ಕಾರ್ಡ್‌ ವೆಚ್ಚ
₹5 ರಿಂದ ₹10: ಒಂದು ಮ್ಯಾಗ್ನೆಟಿಕ್‌ ಕಾರ್ಡ್‌ಗೆ ತಗಲುವ ವೆಚ್ಚ
₹40 ರಿಂದ ₹50: ಚಿಪ್‌ ಆಧಾರಿತ ಒಂದು ಕಾರ್ಡ್‌ಗೆ ತಗಲುವ ವೆಚ್ಚ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.