ADVERTISEMENT

ತೊಗರಿ, ಕಡಲೆ ಖರೀದಿಗೆ ರಾಜ್ಯ ಸರ್ಕಾರದ ಚಿಂತನೆ

ತೊಗರಿ ಬೆಳೆ ಪ್ರದೇಶ ಶೇ 40ರಷ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2016, 19:30 IST
Last Updated 25 ಸೆಪ್ಟೆಂಬರ್ 2016, 19:30 IST
ಕೃಷ್ಣ  ಬೈರೇಗೌಡ
ಕೃಷ್ಣ ಬೈರೇಗೌಡ   

ಧಾರವಾಡ: ‘ರಾಜ್ಯದಲ್ಲಿ ಈ ಬಾರಿ ತೊಗರಿ ಬೆಳೆ ಪ್ರದೇಶ ಹೆಚ್ಚಾಗಿದ್ದು, ಬೆಲೆ ಕುಸಿತವಾಗದಂತೆ ತಡೆಯಲು  ಸರ್ಕಾರವೇ ಖರೀದಿಸಲು ಚಿಂತನೆ ನಡೆಸಿದೆ’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ ನಾಲ್ಕು ದಿನಗಳ ಕೃಷಿ ಮೇಳವನ್ನು ಭಾನುವಾರ ಅಧಿಕೃತವಾಗಿ ಉದ್ಘಾಟಿಸಿ ಅವರು ಮಾತನಾಡಿದರು.
‘ರಾಜ್ಯದಲ್ಲಿ 7.5 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬೆಳೆಯಲಾಗುತ್ತಿತ್ತು ಆದರೆ ಈ ವರ್ಷ ಅದು11.5 ಲಕ್ಷ ಹೆಕ್ಟೇರ್‌ಗೆ ಏರಿದೆ. ಈ ವರ್ಷ ಇಡೀ ದೇಶದಲ್ಲೇ ಕರ್ನಾಟಕ ಅತಿ ಹೆಚ್ಚು ತೊಗರಿ ಬೆಳೆಯುವ ಪ್ರದೇಶವಾಗಿದೆ. ಹೆಚ್ಚು ಇಳುವರಿಯಿಂದ ಬೆಲೆ ಕುಸಿತದ ಸಮಸ್ಯೆ ಎದುರಾಗಬಹುದಾದ ಅಪಾಯವೂ ಇದೆ’ ಎಂದರು.

ಜತೆಗೆ ಹಿಂಗಾರಿನ ಬೆಳೆಯಾದ ಕಡಲೆಯನ್ನೂ ಸರ್ಕಾರವೇ ಖರೀದಿಸಲು ನಿರ್ಧರಿಸಿದೆ’ ಎಂದರು. ‘ಈ ವರ್ಷ ಹೆಸರು ಬೆಳೆದ ರೈತರು ಬೆಳೆ ಕುಸಿತ  ಭೀತಿಯಲ್ಲಿದ್ದರು. ಅಕ್ಟೋಬರ್‌ನಲ್ಲಿ ಬೇಳೆಕಾಳು ಖರೀದಿ ನಡೆಯುತ್ತದೆಯಾದರೂ, ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟು ಈ ಬಾರಿ ಆಗಸ್ಟ್‌ನಲ್ಲೇ ಹೆಸರು ಖರೀದಿ ಕೇಂದ್ರಗಳನ್ನು ಸರ್ಕಾರ ಸ್ಥಾಪಿಸಿತು. ಇದರಿಂದಾಗಿ ಮಾರುಕಟ್ಟೆಯಲ್ಲೂ ಹೆಸರಿನ ಬೆಲೆ ತುಸು ಚೇತರಿಕೆ ಕಂಡಿತು’ ಎಂದರು.

‘ಆಲೂಗಡ್ಡೆ ಬೆಲೆಯೂ ಈ ಬಾರಿ ಕುಸಿತ ಕಂಡಿದೆ ಎಂದು ಹಲವು ರೈತರು ಹೇಳಿದ್ದಾರೆ. ರೈತರಿಗೆ ನೆರವಾಗುವಂತೆ  ತೋಟಗಾರಿಕಾ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.