ADVERTISEMENT

ನಗದುರಹಿತ ಸಂಕಷ್ಟದಲ್ಲಿ ಭಾರತದ ಅರ್ಥ ವ್ಯವಸ್ಥೆ

ಪಿಟಿಐ
Published 12 ಫೆಬ್ರುವರಿ 2017, 19:30 IST
Last Updated 12 ಫೆಬ್ರುವರಿ 2017, 19:30 IST

ನವದೆಹಲಿ (ಪಿಟಿಐ): ನೋಟು ರದ್ದತಿ  ನಂತರ ಭಾರತದ ಅರ್ಥ ವ್ಯವಸ್ಥೆ ‘ನಗದುರಹಿತ’ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಅಮೆರಿಕದ ಖ್ಯಾತ ಅರ್ಥ ಶಾಸ್ತ್ರಜ್ಞ ಸ್ಟೀವ್‌ ಎಚ್‌. ಹಾಂಕ್‌ ಹೇಳಿದ್ದಾರೆ.

‘ನೋಟು ರದ್ದತಿಯೊಂದೇ ಎಲ್ಲದಕ್ಕೂ ಪರಿಹಾರವಲ್ಲ.  ಬೇಕಾದರೆ ಭಾರತದ ಆರ್ಥಿಕ ಸ್ಥಿತಿ ನೋಡಿ. ಪರಿಣಾಮ ಏನು ಎಂದು ಗೊತ್ತಾಗುತ್ತದೆ ’ ಎಂದು ಅವರು   ಟ್ವೀಟ್‌ ಮಾಡಿದ್ದಾರೆ.

‘ನಗದುರಹಿತ ವ್ಯವಸ್ಥೆಗೆ ಭಾರತ ಇನ್ನೂ ಸಜ್ಜಾಗಿಲ್ಲ. ಅಗತ್ಯ ಬೇಕಾದ ಮೂಲಸೌಕರ್ಯಗಳು ಅಲ್ಲಿಲ್ಲ. ಈ ಅರಿವು ಮೋದಿ ಅವರಿಗೆ ಇರಬೇಕಿತ್ತು’ ಹಾಂಕ್‌ ಅಭಿಪ್ರಾಯಪಟ್ಟಿದ್ದಾರೆ.

‘ನೋಟು ರದ್ದತಿ ನಿರ್ಧಾರ ದೇಶವನ್ನು ಎಲ್ಲಿಗೆ ಕರೆದೊಯ್ದು ನಿಲ್ಲಿಸುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ಅಷ್ಟೇ ಏಕೆ ಸ್ವತಃ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ತಿಳಿದಿಲ್ಲ’ ಎಂದು ಅವರು ಈ ಮೊದಲು ಟೀಕಿಸಿದ್ದರು. ಮೇರಿಲ್ಯಾಂಡ್‌ ಬಾಲ್ಟಿಮೋರ್‌ ನಲ್ಲಿರುವ ಜಾನ್ಸ್‌ ಹಾಪ್‌ಕಿನ್ಸ್‌ವಿಶ್ವವಿದ್ಯಾಲಯದಲ್ಲಿ ಹಾಂಕ್‌ ಅವರು ಆನ್ವಯಿಕ ಅರ್ಥಶಾಶ್ತ್ರಜ್ಞರಾಗಿದ್ದಾರೆ.

***

ಜಿಡಿಪಿ ಶೇ 6.8ರಷ್ಟು  ಕುಸಿತ ಸಾಧ್ಯತೆ!
ನವದೆಹಲಿ (ಪಿಟಿಐ):
ನೋಟು ರದ್ದತಿ ಪರಿಣಾಮ ಮೂಲಸೌಕರ್ಯ  ಮತ್ತು ಸೇವಾ ವಲಯದಲ್ಲಿನ ಕುಂಠಿತ  ಪ್ರಗತಿಯಿಂದ  2017ರಲ್ಲಿ ಭಾರತದ ಆರ್ಥಿಕ ವೃದ್ಧಿ ದರ ಶೇ 6.8ರಷ್ಟು ಇರಲಿದೆ ಎಂದು ಭಾರತೀಯ ವಾಣಿಜ್ಯೋ­ದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ) ಇತ್ತೀಚೆಗೆ ನಡೆಸಿದ ಆರ್ಥಿಕ ಮುನ್ನೋಟ ಸಮೀಕ್ಷಾ ವರದಿ ಉಲ್ಲೇಖಿಸಿದೆ.  ಡಿಸೆಂಬರ್‌ ಅಂತ್ಯ ಮತ್ತು ಜನವರಿ ಆದಿಯಲ್ಲಿ ನಡೆಸಲಾಗಿದ್ದ ಈ ಹಿಂದಿನ ಸಮೀಕ್ಷೆಯಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಶೇ 7.3ರಷ್ಟಿರಲಿದೆ ಎಂದು ‘ಫಿಕ್ಕ’ ಅಂದಾಜಿಸಿತ್ತು. ಇದೀಗ  ಸಂಭಾವ್ಯ ಜಿಡಿಪಿಯನ್ನು ಶೇ 6.8ಕ್ಕೆ ನಿಗದಿಗೊಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.