ADVERTISEMENT

ನಮ್ಮೂರಿಗೂ ಬಂತು ‘ಬೀದಿ ನೃತ್ಯ’

ಸಿ ಮಂಜುನಾಥ
Published 19 ಮೇ 2017, 19:30 IST
Last Updated 19 ಮೇ 2017, 19:30 IST
ನಮ್ಮೂರಿಗೂ ಬಂತು ‘ಬೀದಿ ನೃತ್ಯ’
ನಮ್ಮೂರಿಗೂ ಬಂತು ‘ಬೀದಿ ನೃತ್ಯ’   

ನೃತ್ಯದಲ್ಲಿ ಹಲವು ಶೈಲಿಗಳು, ಸಾಂಪ್ರದಾಯಿಕ ಶೈಲಿಗಳಾದ ಭರತನಾಟ್ಯ, ಕೂಚಿಪುಡಿ, ಒಡಿಸ್ಸಿ ಮುಂತಾದವುಗಳು ಒಂದೆಡೆಯಾದರೆ. ಬ್ರೇಕ್ ಡಾನ್ಸ್‌, ಡಿಸ್ಕೊ, ಫ್ರೆಂಚ್ ಶೈಲಿಯ ನೃತ್ಯಗಳು ಆಧುನಿಕ ಮಾದರಿಯವು. ಇವುಗಳ ಮಧ್ಯೆ ಇತ್ತೀಚೆಗೆ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿರುವ ನೃತ್ಯ ಶೈಲಿ ‘ಬಿ–ಬಾಯಿಂಗ್’.

ಈ ಶೈಲಿಯ ಮತ್ತೊಂದು ಹೆಸರು ಸ್ಟ್ರೀಟ್ ಡಾನ್ಸಿಂಗ್. ನೃತ್ಯದ ಜೊತೆಗೆ ಸ್ಟಂಟ್‌ಗಳೂ ಸೇರಿಕೊಂಡಿರುವುದು ಈ ಶೈಲಿಯ ವಿಶೇಷ. ಕೆಲವು ದೇಶಗಳಲ್ಲಷ್ಟೆ ಪ್ರಸಿದ್ಧವಾಗಿದ್ದ ಈ ನೃತ್ಯ ಶೈಲಿ ಈಗ ಪ್ರಪಂಚದಾದ್ಯಂತ ನೃತ್ಯಾಭಿಮಾನಿಗಳನ್ನು ಸೆಳೆದಿದೆ. ಭಾರತವೂ ಇದಕ್ಕೆ ಹೊರತಲ್ಲ.
ಇದೀಗ ‘ಬಿ–ಬಾಯಿಂಗ್’ ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆ ನಗರದಲ್ಲಿ ಇಂದು (ಶನಿವಾರ) ನಡೆಯಲಿದೆ. ಕಳೆದ ವರ್ಷ ಮುಂಬೈನಲ್ಲಿ ನಡೆದಿದ್ದ ಈ ಸ್ಪರ್ಧೆಯನ್ನು ಈ ಬಾರಿ ಪ್ರಾಯೋಜಕ ಕಂಪೆನಿ ರೆಡ್‌ಬುಲ್‌ ಬೆಂಗಳೂರಿಗೆ ಸ್ಥಳಾಂತರಿಸಿದೆ.

ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತಗಳಲ್ಲಿ ನಡೆದ ವಿವಿಧ ಹಂತದ ಸ್ಪರ್ಧೆಯಲ್ಲಿ ವಿಜೇತರಾದ 16 ಮಂದಿ ನೃತ್ಯಪಟುಗಳ ಮಧ್ಯೆ ಫೈನಲ್ ನೃತ್ಯ ಸ್ಪರ್ಧೆ ಏರ್ಪಾಡಾಗಿದೆ. ಎಸ್.ಭುವನೇಶ್, ಶಾನ್ ಮೆಂಡೀಸ್, ಅಂಜಿಲ್ ಮುತ್ರೇಜಾ, ರಾಹುಲ್ ಸಿಂಗ್ ಫೈನಲ್‌ನಲ್ಲಿ ಪ್ರದರ್ಶನ ತೋರಲಿರುವ ಬೆಂಗಳೂರಿಗರು.  ಸಾಮಾನ್ಯ ನೃತ್ಯ ಸ್ಪರ್ಧೆಗಳಿಗಿಂತ ಈ ಸ್ಪರ್ಧೆ ಭಿನ್ನ. ವೇದಿಕೆ ಏರುವವರೆಗೂ ತಾವು ಯಾವ ಸಂಗೀತಕ್ಕೆ ನೃತ್ಯ ಮಾಡಬೇಕೆಂಬುದು ಸ್ಪರ್ಧಾಳುಗಳಿಗೆ ತಿಳಿದಿರುವುದಿಲ್ಲ. ತೀರ್ಪುಗಾರರು ಹಾಕಿದ ಸಂಗೀತಕ್ಕೆ ಸ್ಪರ್ಧಾಳುಗಳು ನರ್ತಿಸಿ  ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕು.

ಪ್ರತಿ ಬಾರಿಯೂ ಇಬ್ಬರು ನೃತ್ಯಗಾರರ ಮಧ್ಯೆ ಸ್ಪರ್ಧೆ ಏರ್ಪಡುತ್ತದೆ. ಗೆದ್ದ ನೃತ್ಯಗಾರ ಮುಂದಿನ ಹಂತಕ್ಕೆ ಹೋಗುತ್ತಾನೆ. ಮೊದಲ ಹಂತ ಮುಗಿಯುವಷ್ಟರಲ್ಲಿ ಸ್ಪರ್ಧಾಳುಗಳ ಸಂಖ್ಯೆ 16 ರಿಂದ 8ಕ್ಕೆ ಇಳಿಯುತ್ತದೆ. ನಂತರ 4 ನಂತರ 2 ಕೊನೆಯ ಹಂತದಲ್ಲಿ ವಿಜೇತನಾದ ಒಬ್ಬ ಸ್ಪರ್ಧಿ. ರಾಷ್ಟ್ರೀಯ ಚಾಂಪಿಯನ್ ಎನಿಸಿಕೊಳ್ಳುತ್ತಾನೆ.

ಈ ಸ್ಪರ್ಧೆಯಲ್ಲಿ ವಿಜೇತ ನೃತ್ಯಪಟು ನವೆಂಬರ್‌ನಲ್ಲಿ ಆ್ಯಮ್‌ಸ್ಟರ್‌ಡಾಮ್‌ನಲ್ಲಿ ನಡೆಯುವ ವಿಶ್ವ ‘ಬಿ–ಬಾಯಿಂಗ್’ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಗಿಟ್ಟಿಸಿಕೊಳ್ಳುತ್ತಾನೆ.

ಸ್ಪರ್ಧೆಯ ತೀರ್ಪುಗಾರರಾಗಿ ಅಂತರರಾಷ್ಟ್ರೀಯ ಮಟ್ಟದ ‘ಬಿ –ಬಾಯಿಂಗ್’ ನೃತ್ಯಪಟುಗಳು ಆಗಮಿಸಲಿದ್ದಾರೆ. ಕಳೆದ ಸಾಲಿನ ವಿಶ್ವ ‘ಬಿ–ಬಾಯಿಂಗ್’ ವಿಜೇತ ತಂಡದ ಆಲ್‌ ಸ್ಟಾರ್‌ನ ಸದಸ್ಯರಾದ ಕೊರಿಯಾದ ವಿಂಗ್‌, ಬ್ರೆಜಿಲ್‌ನ ಪೆಲೆಜೆನೊ, ಡಿಪೆರ್‌ ಸ್ಪರ್ಧಾಳುಗಳ ಸಾಮರ್ಥ್ಯ ಅಳೆಯಲಿದ್ದಾರೆ. ಸ್ಪರ್ಧಾ ಕಾರ್ಯಕ್ರಮಕ್ಕೆ ರಂಗು ತುಂಬಲು ಪಾಪ್ ಹಾಡುಗಾರ ಪ್ರಭಾವ್ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಹಾಗೂ ಬೀಟ್ಸ್‌ ಕ್ಲಬ್‌ ತಂಡದಿಂದ ಬೀಟ್‌ಬಾಕ್ಸಿಂಗ್ ಪ್ರದರ್ಶನ ನೀಡಲಿದ್ದಾರೆ.
*
ಭಾರತದ ನೃತ್ಯಪಟುಗಳಿಗೆ ಅಂತರರಾಷ್ಟ್ರೀಯ ವೇದಿಕೆ ಕಲ್ಪಿಸಬೇಕು ಎಂಬುದು ಈ ಸ್ಪರ್ಧೆಯ ಉದ್ದೇಶ
–ಕೃತಾಗಮ,
ಸ್ಟೂಡೆಂಟ್ ಬ್ರ್ಯಾಂಡ್ ಮ್ಯಾನೇಜರ್, ರೆಡ್‌ಬುಲ್‌
*
ಸ್ಪರ್ಧೆ ನಡೆಯುವ ಸ್ಥಳ: ಸೇಂಟ್‌ ಜೋಸೆಫ್ ಆಡಿಟೋರಿಯಂ, ಕೋರಮಂಗಲ. ಶನಿವಾರ ಸಂಜೆ 6.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.