ADVERTISEMENT

ಪೇಟೆಯಲ್ಲಿ ಮಾರಾಟದ ಒತ್ತಡ

ಪಿಟಿಐ
Published 18 ನವೆಂಬರ್ 2017, 19:30 IST
Last Updated 18 ನವೆಂಬರ್ 2017, 19:30 IST
ಪೇಟೆಯಲ್ಲಿ ಮಾರಾಟದ ಒತ್ತಡ
ಪೇಟೆಯಲ್ಲಿ ಮಾರಾಟದ ಒತ್ತಡ   

ಮುಂಬೈ: ಷೇರುಪೇಟೆಯಲ್ಲಿ ಮಾರಾಟದ ಒತ್ತಡ ಸೃಷ್ಟಿಯಾಗಿದ್ದರಿಂದ ವಾರದ ವಹಿವಾಟಿನಲ್ಲಿ ಸೂಚ್ಯಂಕ ಅಲ್ಪ ಏರಿಕೆಯನ್ನಷ್ಟೇ ಕಂಡುಕೊಂಡಿವೆ.

ಐದು ದಿನಗಳ ವಹಿವಾಟಿನಲ್ಲಿ ಮೂರು ದಿನ ಸೂಚ್ಯಂಕಗಳು ಇಳಿಕೆ ಕಂಡರೆ, ಎರಡು ದಿನಗಳಲ್ಲಿ ಗರಿಷ್ಠ ಏರಿಕೆ ಕಂಡುಕೊಂಡವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 33,397 ಅಂಶಗಳಲ್ಲಿ ವಹಿವಾಟ ಆರಂಭಿಸಿತು. 33,520 ಅಂಶಗಳ ಗರಿಷ್ಠ ಮತ್ತು 32,683 ಅಂಶಗಳ ಕನಿಷ್ಠ ಮಟ್ಟವನ್ನು ತಲುಪಿತ್ತು. 28 ಅಂಶಗಳ ಅಲ್ಪ ಏರಿಕೆ ಕಂಡು 33,342 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯಕಂಡಿದೆ. ಸೂಚ್ಯಂಕವು ಗುರುವಾರ 346 ಅಂಶ ಮತ್ತು ಶುಕ್ರವಾರ 216 ಅಂಶ ಏರಿಕೆಯಾಗಿದೆ.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ ವಾರದ ವಹಿವಾಟಿನಲ್ಲಿ 38 ಅಂಶ ಇಳಿಕೆ ಕಂಡು 10,283 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಮಾರಾಟದ ಒತ್ತಡ: ಚಿಲ್ಲರೆ ಮತ್ತು ಸಗಟು ಹಣದುಬ್ಬರ ಏರಿಕೆ ಕಂಡಿದೆ. ಹೀಗಾಗಿ ಡಿಸೆಂಬರ್‌ನಲ್ಲಿ ನಡೆಯಲಿರುವ ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿರಗಳು ಇಳಿಕೆ ಆಗುವ ನಿರೀಕ್ಷೆ ವ್ಯಕ್ತವಾಗಿದೆ. ಇದರ ಆಧಾರದ ಮೇಲೆ ಷೇರುಪೇಟೆಯಲ್ಲಿ ಮಾರಾಟದ ಒತ್ತಡ ಕಂಡುಬಂದಿತು.

ಕೈಗಾರಿಕಾ ಪ್ರಗತಿ ಸೂಚ್ಯಂಕ ಶೇ 5 ರಿಂದ ಶೇ 3.8ಕ್ಕೆ ಇಳಿಕೆ ಕಂಡಿದೆ. ಇದು ದೇಶಿ ಹೂಡಿಕೆದಾರರನ್ನು ಎಚ್ಚರಿಕೆಯಿಂದ ವಹಿವಾಟು ನಡೆಸುವಂತೆ ಮಾಡಿದೆ ಎಂದು ತಜ್ಞರು ಹೇಳಿದ್ದಾರೆ.

ಮಾರಾಟದ ಒತ್ತಡದಿಂದ ಬುಧವಾರ ಬಿಎಸ್‌ಇ ಮೂರು ವಾರಗಳ ಕನಿಷ್ಠ ಮತ್ತು ನಿಫ್ಟಿ ಐದು ವಾರಗಳ ಕನಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸುವಂತಾಗಿತ್ತು. ಆದರೆ ಗುರುವಾರ ಮತ್ತು ಶುಕ್ರವಾರದ ವಹಿವಾಟಿನಲ್ಲಿ ಸೂಚ್ಯಂಕ ಜಿಗಿತ ಕಂಡಿದ್ದರಿಂದ ವಹಿವಾಟು ಚೇತರಿಕೆ ಹಾದಿಗೆ ಮರಳಿತು.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಬಂಡವಾಳ ನೆರವು ನೀಡಿಕೆ ತ್ವರಿತಗೊಳಿಸುವ ಕ್ರಮವು ಬ್ಯಾಂಕಿಂಗ್ ಷೇರುಗಳ ಮೌಲ್ಯ ವೃದ್ಧಿಗೆ ನೆರವಾಯಿತು.

ಜಾಗತಿಕ ಸಾಲಮೌಲ್ಯಮಾಪನ ಸಂಸ್ಥೆ ಭಾರತದ ಸಾಲ ನೀಡಿಕೆ ಸಾಮರ್ಥ್ಯ ಮೇಲ್ದರ್ಜೆಗೇರಿಸಿದೆ.ಈ ಸುದ್ದಿಯು ಹೂಡಿಕೆದಾರರ ವಿಶ್ವಾಸವನ್ನು ಮರು ಸ್ಥಾ‍ಪಿಸಿದೆ. ಇದರಿಂದ ಶುಕ್ರವಾರ ಸಕಾರಾತ್ಮಕ ವಹಿವಾಟು ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.