ADVERTISEMENT

ಪ್ರಮುಖ ಕೈಗಾರಿಕೆಗಳ ಕಳಪೆ ಸಾಧನೆ

ಪ್ರಗತಿ ಸೂಚ್ಯಂಕ 13 ತಿಂಗಳಲ್ಲೇ ಕನಿಷ್ಠ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2015, 19:30 IST
Last Updated 2 ಮಾರ್ಚ್ 2015, 19:30 IST

ನವದೆಹಲಿ(ಪಿಟಿಐ): ದೇಶದ ಎಂಟು ಪ್ರಮುಖ ಕೈಗಾರಿಕೆಗಳ ವಲಯದ ಪ್ರಗತಿಯು ಜನವರಿಯಲ್ಲಿ ತೀವ್ರ ಕುಸಿತ ಕಂಡಿದ್ದು, ಶೇ 1.8ಕ್ಕೆ ಇಳಿಕೆಯಾಗಿದೆ. ಇದು ಕಳೆದ 13 ತಿಂಗಳಲ್ಲಿಯೇ ಕನಿಷ್ಠ ಮಟ್ಟದ ಕೈಗಾರಿಕಾ ಕ್ಷೇತ್ರ ಪ್ರಗತಿ­ಯಾಗಿದೆ.

ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲ ಉದ್ಯಮ ಕ್ಷೇತ್ರದ ಸಾಧನೆ ನಕಾರಾತ್ಮಕ­ವಾಗಿದ್ದರಿಂದ ಎಂಟೂ ಪ್ರಮುಖ ಕೈಗಾರಿಕೆಗಳ ವಲಯದ ಸೂಚ್ಯಂಕವು ಜನವರಿಯಲ್ಲಿ ಇಳಿಮುಖವಾಗಿದೆ. ಹಿಂದಿನ ಅವಧಿಗಿಂತ ಈ ಎರಡೂ ಕ್ಷೇತ್ರಗಳು ಕ್ರಮವಾಗಿ ಶೇ 2.3 ಮತ್ತು ಶೇ 6.6ರಷ್ಟು ಹಿನ್ನಡೆ ಕಂಡಿವೆ.

ಕಲ್ಲಿದ್ದಲು, ಕಚ್ಚಾತೈಲ, ನೈಸರ್ಗಿಕ ಅನಿಲ, ಶುದ್ಧೀಕರಿಸಿದ ಉತ್ಪನ್ನಗಳು, ರಸಗೊಬ್ಬರಗಳು, ಉಕ್ಕು, ಸಿಮೆಂಟ್‌ ಮತ್ತು ವಿದ್ಯುತ್‌ ಕ್ಷೇತ್ರವನ್ನು ಒಳಗೊಂಡು ಎಂಟು ಪ್ರಮುಖ ಕೈಗಾರಿಕೆಗಳ ವಲಯ 2014ರ ಜನವರಿಯಲ್ಲಿ ಶೇ 3.7ರಷ್ಟು ಹಾಗೂ ಡಿಸೆಂಬರ್‌ನಲ್ಲಿ ಶೇ 2.4ರಷ್ಟು ಪ್ರಗತಿ ದಾಖಲಿಸಿತ್ತು.

2014ರ ಏಪ್ರಿಲ್‌ನಿಂದ 2015ರ ಜನವರಿವರೆಗಿನ 10 ತಿಂಗಳ ಅವಧಿಯಲ್ಲಿ ಈ ಪ್ರಮುಖ ಕೈಗಾರಿಕಾ ವಲಯಗಳ ಶೇ 4.1ರಷ್ಟು ಪ್ರಗತಿ ದಾಖಲಿಸಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.