ADVERTISEMENT

ಪ್ರಶ್ನೋತ್ತರ

ಯು.ಪಿ.ಪುರಾಣಿಕ್
Published 24 ಜನವರಿ 2017, 19:30 IST
Last Updated 24 ಜನವರಿ 2017, 19:30 IST
ಯು.ಪಿ.ಪುರಾಣಿಕ್‌
ಯು.ಪಿ.ಪುರಾಣಿಕ್‌   

ರತ್ನಮ್ಮ ಪ್ರಕಾಶ್‌, ಗಂಗಾವತಿ
*ನನ್ನದು ಕೊಪ್ಪಳ ಜಿಲ್ಲೆಯ ಗಂಗಾವತಿ ನಗರ ಹೊರವಲಯದಲ್ಲಿ ನಿವೇಶನವಾಗುವ 15 ಎಕರೆ ಜಮೀನು ಇದ್ದು, ಇಲ್ಲಿ ಎಕರೆಗೆ ಸುಮಾರು ₹ 1.5 ಕೋಟಿ ಬೆಲೆ ಇದೆ. ಹೀಗೆ ಮಾರಾಟ ಮಾಡಿದಾಗ ಬರುವ ಹಣ ₹ 22 ಕೋಟಿ ಬ್ಯಾಂಕಿನಲ್ಲಿ ಇಡಬಹುದೇ? ದಯವಿಟ್ಟು ತಿಳಿಸಿ.

ಉತ್ತರ: ಜಮೀನು ಮಾರಾಟ ಮಾಡಿ ಬರುವ ಹಣ ನಿಮ್ಮ ಕುಟುಂಬದವರ ಹೆಸರಿನಲ್ಲಿ ವಿಂಗಡಿಸಿ ಬ್ಯಾಂಕಿನಲ್ಲಿ ಠೇವಣಿಯಾಗಿ ಇಡಿರಿ. ಈ ದೊಡ್ಡ ಮೊತ್ತ ಬ್ಯಾಂಕಿನವರು ಹೇಗೆ ಬಂದಿದೆ ಎಂಬುದಾಗಿ ಕೇಳುವುದಿಲ್ಲವಾದರೂ ಮುಂದೆ ಆದಾಯ ತೆರಿಗೆ ಇಲಾಖೆಯವರು ಕೇಳಿಯೇ ಕೇಳುತ್ತಾರೆ. ಈ ಕಾರಣದಿಂದ ಮಾರಾಟದಿಂದ ಬರುವ ಹಣ ಕಪ್ಪುಹಣ ವಾಗದಂತೆ ನೋಡಿಕೊಳ್ಳಿ. ಎಲ್ಲವನ್ನೂ ಡಿ.ಡಿ. ಮುಖಾಂತರವೇ ಸ್ವೀಕರಿಸಿರಿ. ದೊಡ್ಡ ಆಸ್ತಿ ಮಾರಾಟ ಮಾಡುತ್ತಿರುವ ನೀವು ಕನಿಷ್ಠ ಶೇ  50 ರಷ್ಟು ಹಣ, ಉತ್ತಮ ನಿವೇಶನ ಅಥವಾ ಮನೆ ಕೊಳ್ಳಲು ಉಪಯೋಗಿಸಿರಿ. ಹಣ ಖರ್ಚಾಗಬಹುದು ಆದರೆ, ಸ್ಥಿರ ಆಸ್ತಿ ಯಾವಾಗಲೂ ನಿಮ್ಮನ್ನು ಕಾಪಾಡುತ್ತದೆ.

ವಸೀಮ್‌ ಅಕ್ರಮ್‌, ಕೋಲಾರ
*ನನ್ನ ವಯಸ್ಸು 24. ನಾನು ಸಣ್ಣ ವ್ಯಾಪಾರಿ. ನಿಮ್ಮ ಅಂಕಣದಿಂದ ಪ್ರಭಾವಿತನಾಗಿ ತಿಂಗಳಿಗೆ ₹ 15,000 ಉಳಿತಾಯ ಮಾಡುತ್ತಿದ್ದೇನೆ. ಕರ್ಣಾಟಕ ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆದಿದ್ದೇನೆ. ಈ ಬ್ಯಾಂಕಿನಲ್ಲಿ ನಮ್ಮ ಹಣಕ್ಕೆ ಭದ್ರತೆ ಇದೆಯಾ? ಸರ್ಕಾರಿ ಸ್ವೌಮ್ಯದ ಹಾಗೂ ಖಾಸಗಿ ವಲಯದ ಬ್ಯಾಂಕುಗಳಲ್ಲಿ ಏನು ವ್ಯತ್ಯಾಸ. ಉಳಿತಾಯ ಖಾತೆಯಲ್ಲಿ ಎಷ್ಟು ಲಕ್ಷಗಳ ತನಕ ತೆರಿಗೆ ವಿನಾಯತಿ ಇದೆ. ಮುಂದಿನ ಭವಿಷ್ಯಕ್ಕಾಗಿ ಯಾವ ರೀತಿಯಲ್ಲಿ ಹಣ ಉಳಿಸಬಹುದು. ನನಗೆ ವಿವರವಾಗಿ ಮಾಹಿತಿ ನಿಡಿ.
ಉತ್ತರ:
ನೀವು ಸದ್ಯದ ಪರಿಸ್ಥಿತಿಯಲ್ಲಿ ಉಳಿಸಬಹುದಾದ ₹ 15,000 ಕರ್ಣಾಟಕ ಬ್ಯಾಂಕಿನಲ್ಲಿ 5 ವರ್ಷಗಳ ಅವಧಿಗೆ, ₹ 10,000 ಹಾಗೂ ₹ 5,000 ದಂತೆ ಎರಡು ಆರ್‌.ಡಿ. ಮಾಡಿ.

ಮುಂದೆ ಏನಾದರೂ ತೊಂದರೆ ಆದಲ್ಲಿ ಒಂದನ್ನು ನಿಲ್ಲಿಸಬಹುದು. ಉಳಿತಾಯ ಖಾತೆಯಲ್ಲಿ ವಾರ್ಷಿಕ ₹ 1,000 ಬಡ್ಡಿ ಬಂದರೂ ನಿಮಗೆ ತೆರಿಗೆ ಬರುವುದಿಲ್ಲ.

ಕರ್ಣಾಟಕ ಬ್ಯಾಂಕ್‌ ನಿಜವಾಗಿ ಭದ್ರವಾದ ಉತ್ತಮ ಬ್ಯಾಂಕ್‌, ಖಾಸಗಿ ಕ್ಷೇತ್ರದ ಬ್ಯಾಂಕುಗಳಲ್ಲಿ ಹಾಗೂ ಕರ್ನಾಟಕದಲ್ಲಿ ಇದೊಂದು ಪ್ರಗತಿಶೀಲ ಸುಭದ್ರವಾದ ಬ್ಯಾಂಕ್‌ ಎನ್ನುವುದಕ್ಕೆ ಅನುಮಾನವಿಲ್ಲ. ಧೈರ್ಯವಾಗಿ ಇಲ್ಲಿ ಹಣ ಹೂಡಿ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಹಾಗೂ ಖಾಸಗಿ ಬ್ಯಾಂಕುಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ನಿಯಂತ್ರಿಸುತ್ತದೆ. ಒಟ್ಟಿನಲ್ಲಿ ಕರ್ಣಾಟಕ ಬ್ಯಾಂಕಿನಲ್ಲಿ ಠೇವಣಿ ಇರಿಸಲು ಎಂದಿಗೂ ಭಯಪಡುವ ಅವಶ್ಯವೇ ಇಲ್ಲ.

ಚಂದ್ರಿಕಾ. ಎಂ.ಜೆ., ತುಮಕೂರು
*ನಾನು ಸರ್ಕಾರಿ ನೌಕರಳು. ನನ್ನ ಒಟ್ಟು ಸಂಬಳ ₹ 23,000 ಕಡಿತದ ನಂತರ ₹ 14,000 ಕೈಗೆ ಸಿಗುತ್ತದೆ. ನನಗೆ ಇನ್ನೂ 23 ವರ್ಷ ಸೇವಾವಧಿ ಇದೆ. ನಾನು ಮೂರು ಬೆಡ್‌ ರೂಂ ಮನೆ ತುಮಕೂರಿನಲ್ಲಿ ಕೊಳ್ಳಬೇಕೆಂದಿರುವೆ. ನನಗೆ
₹ 35 ಲಕ್ಷ ಗೃಹಸಾಲ ಬೇಕಾಗಿದೆ. ಕಡಿಮೆ ಬಡ್ಡಿ ದರದಲ್ಲಿ ಯಾವ ಬ್ಯಾಂಕ್‌ನಲ್ಲಿ ಸಾಲ ದೊರೆಯಬಹುದು. ತಿಂಗಳ ಕಂತು ಎಷ್ಟು ಬರಬಹುದು ಹಾಗೂ 20 ವರ್ಷಗಳ ಅವಧಿ ಸಾಲ ತೀರಿಸಲು ಸಿಗಬಹುದೇ, ದಯಮಾಡಿ ತಿಳಿಸಿ.
ಉತ್ತರ:
ಎಲ್ಲಾ ಕಡಿತದ ನಂತರ ನಿಮ್ಮ ಕೈ ಸೇರುವ ಹಣ ₹ 14,000. ಒಟ್ಟು ಮೊತ್ತದಲ್ಲಿ ಮನೆ ಬಾಡಿಗೆ ಹಾಗೂ ನಿಮ್ಮ ಮನೆ ಖರ್ಚು ಕಳೆದಾಗ, ನಿಮಗೆ ಬ್ಯಾಂಕ್‌ ಸಾಲ ಪಡೆಯುವ ಸಾಮರ್ಥ್ಯ ವಿರುವುದಿಲ್ಲ. ₹ 1 ಲಕ್ಷ ಗೃಹಸಾಲ 20 ವರ್ಷಗಳ ಅವಧಿಗೆ ಪಡೆದರೆ ಇ.ಎಂ.ಐ. ₹ 1000 ಬರುತ್ತದೆ. ₹ 35 ಲಕ್ಷಕ್ಕೆ ತಿಂಗಳಿಗೆ ₹ 35,000 ಕಟ್ಟ ಬೇಕಾಗುತ್ತದೆ, ನಿಮಗೆ ಅಥವಾ ನಿಮ್ಮ ಕುಟುಂಬದಿಂದ ಬೇರೆ ಹೆಚ್ಚಿನ ಆದಾಯ, ಸಂಬಳ ಹೊರತುಪಡಿಸಿ ಇರುವಲ್ಲಿ ಮಾತ್ರ, ಮನೆಕೊಳ್ಳುವ ಆಲೋಚನೆ ಮಾಡಿ.

ADVERTISEMENT

ಎಸ್‌.ಬಿ. ಪಾಟೀಲ್‌, ಗದಗ
*ನನ್ನ ವಯಸ್ಸು 75. ನನ್ನ ಪಿಂಚಣಿ ಮೊತ್ತ ವಾರ್ಷಿಕ ₹ 3 ಲಕ್ಷ ಮಿಕ್ಕಿದೆ. ತೆರಿಗೆ ಉಳಿಸಲು, ಸಿಂಡಿಕೇಟ್‌ ಬ್ಯಾಂಕಿನಲ್ಲಿ ಆರ್‌.ಡಿ. ₹ 5000 ಪ್ರಾರಂಭಿಸಿದ್ದೆ. ಆದರೆ ಆರ್‌.ಡಿ. ಉಳಿತಾಯ, ತೆರಿಗೆ ವಿನಾಯತಿಗೆ ಬರುವುದಿಲ್ಲವಂತೆ. ಸಿಂಡಿಕೇಟ್‌ ಬ್ಯಾಂಕಿನಲ್ಲಿ 5 ವರ್ಷಗಳ ತೆರಿಗೆ ಉಳಿಸುವ ಠೇವಣಿ ಮಾಡುವಂತೆ ತಿಳಿಸಿದರು. ನಾನು ಶಾಶ್ವತವಾಗಿ ತೆರಿಗೆ ವಿನಾಯತಿ ಪಡೆಯಲು ಉತ್ತಮ ಉಳಿತಾಯ ಮಾರ್ಗ ವಿರುವಲ್ಲಿ ತಿಳಿಸಿ.
ಉತ್ತರ:
ಸೆಕ್ಷನ್‌ 80ಸಿ. ಆಧಾರದ ಮೇಲೆ ದೊರೆಯುವ ಎಲ್ಲಾ ಉಳಿತಾಯ ಯೋಜನೆಗಳಲ್ಲಿ, 5 ವರ್ಷಗಳ ಅವಧಿ ಠೇವಣಿ ಹಾಗೂ ನೀವು ಹಿರಿಯ ನಾಗರಿಕರಾದ್ದರಿಂದ, 5 ವರ್ಷಗಳ ಹಿರಿಯ ನಾಗರಿಕರ ಠೇವಣಿ, ಇವೆರಡರ ಹೊರತು ಬೇರಾವ ಉಳಿತಾಯ ನಿಮಗೆ ಉಪಯೋಗ ಬೀಳುವುದಿಲ್ಲ.
ಈಕ್ಷಿಟಿ ಲಿಂಕ್ಡ್‌ ಸೇವಿಂಗ್ಸ್‌ ಸ್ಕೀಮ್‌ (ಇಎಲ್‌ಎಸ್ಎಸ್‌) ಮೂರು ವರ್ಷದ ಅವಧಿಗೆ ಮಾಡಬಹುದಾದರೂ ನೀವು ಹೂಡುವ ಹಣ ಹಾಗೂ ಷೇರು ಮಾರುಕಟ್ಟೆಯಲ್ಲಿ ತೊಡಗಿಸುವುದರಿಂದ, ಹೆಚ್ಚಿನ ಲಾಭ ಬಾರದಿರುವ ಸಂದರ್ಭ ಕೂಡಾ ಇದೆ. ಬ್ಯಾಂಕ್‌–ಅಂಚೆ ಕಚೇರಿ ಬಿಟ್ಟು, ಈ ಇಳಿವಯಸ್ಸಿನಲ್ಲಿ ಬೇರಾವ ಹೂಡಿಕೆಗೆ ಮನಸ್ಸು ಮಾಡದಿರಿ.

ಎಸ್‌.ಸಿ. ಮಲ್ಲೇಶಪ್ಪ, ಮೈಸೂರು
*ನಾನು ಸಹಕಾರಿ ಸಂಸ್ಥೆಯಲ್ಲಿ ಕೆಲಸ ಮಾಡಿ 2008 ರಲ್ಲಿ ನಿವೃತ್ತನಾದೆ. ಅದೇ ವರ್ಷ ರಿಲಯನ್‌್ಸ ಪವರ್‌ ಷೇರು, ಪ್ರತಿ ಷೇರಿಗೆ
₹ 480 ರಂತೆ, 15 ಷೇರು ಖರೀದಿಸಿದೆ. ಈಗ ಅದರ ಬೆಲೆ ಅತೀ ಕಡಿಮೆ ಆಗಿದೆ. ಮುಂದೆ ಏನಾದರೂ ಹೆಚ್ಚಿನ ಬೆಲೆ ಬರಬಹುದೇ ದಯಮಾಡಿ ತಿಳಿಸಿ.
ಉತ್ತರ:
ಯಾವುದೇ ಷೇರಿನ ಬೆಲೆ ಯಾವಾಗ ಏರುತ್ತದೆ ಹಾಗೂ ಯಾವಾಗ ಕಡಿಮೆ ಆಗುತ್ತದೆ ಎನ್ನುವುದನ್ನು ಊಹಿಸಬಹುದಾದರೂ ಸರಿಯಾಗಿ ತಿಳಿದುಕೊಳ್ಳಲು ಪರಿಣತರಿಂದಲೂ ಸಾಧ್ಯವಿಲ್ಲ. ಇದೇ ಕಾರಣದಿಂದ, ಷೇರು ಹಾಗೂ ಮ್ಯೂಚು ವಲ್‌ ಫಂಡ್‌ ಹೂಡಿಕೆ, ಊಹಾಪೋಹಗಳ ಆಧಾರದ ಮೇಲೆ ಅವಲಂಬಿಸಿರುತ್ತದೆ. ಅದೇ ರೀತಿ ರಿಲಯನ್ಸ್‌ ಪವರ್‌ ಷೇರು ಕೂಡಾ ಮುಂದೇನಾಗ ಬಹುದು ಎನ್ನುವುದು ಬಹಳ ಕಷ್ಟ. ರಿಲಯನ್‌್ಸ ಒಂದು ಉತ್ತಮ ಕಂಪೆನಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಸ್ವಲ್ಪ ಸಮಯ ಕಾಯಿರಿ.

ಗಿರೀಶ್‌ ಎಚ್‌.ಡಿ., ಕೋಟೆ
*ನಾನು ಮೈಸೂರಿನಲ್ಲಿ ಕೆಎಸ್‌ಆರ್‌ಟಿಸಿ ಡ್ರೈವರ್‌ ಆಗಿದ್ದೇನೆ. ತಿಂಗಳಿಗೆ ₹ 20,000 ಸಂಬಳ. ಇದುವರೆಗೆ ಎಲ್‌ಐಸಿ–ಪಿಎಲ್‌ಐ ಏನೂ ಮಾಡಿಲ್ಲ. ಇನ್ನು 30 ವರ್ಷ ಸೇವಾವಧಿ ಇದೆ. ಮದುವೆಯಾಗಿದೆ, ಹೆಂಡತಿ ನರ್ಸಿಂಗ್‌ ಮಾಡಿದ್ದಾಳೆ. ಆದರೆ ಕೆಲಸಕ್ಕೆ ಹೋಗುತ್ತಿಲ್ಲ.  ಮಕ್ಕಳಿಲ್ಲ, ಮನೆ ಭೋಗ್ಯಕ್ಕೆ ಪಡೆಯಲು ಸಿಂಡಿಕೇಟ್‌ ಬ್ಯಾಂಕಿನಲ್ಲಿ ₹ 2 ಲಕ್ಷ ಸಾಲ ಮಾಡಿದ್ದೆ. ತಿಂಗಳಿಗೆ ₹ 5500 ಇ.ಎಂ.ಐ. ಕಟ್ಟುತ್ತಿದ್ದೇನೆ. ಭೋಗ್ಯಕ್ಕೆ ಮನೆ ಸಿಗಲಿಲ್ಲ. ಈ
₹ 2 ಲಕ್ಷ ಎಲ್ಲಿ ಡೆಪಾಸಿಟ್‌ ಮಾಡಲಿ. ಇತರೆ ಸಾಲ ತಿಂಗಳಿಗೆ ₹ 4,000 ಕಟ್ಟುತ್ತಿದ್ದೇನೆ. ಊರಿನಲ್ಲಿ 2 1/2 ಎಕರೆ ಜಮೀನು ಖಾಲಿ ಬಿದ್ದಿದೆ. ಮೈಸೂರಿನಲ್ಲಿ ನಿವೇಶನ ಕೊಳ್ಳಬೇಕೆಂದಿರುವೆ. ನನಗೆ ನಿಮ್ಮ ಮಾರ್ಗದರ್ಶನ ಬೇಕಾಗಿದೆ.
ಉತ್ತರ:
ಭೋಗ್ಯಕ್ಕೆಂದು ಸಿಂಡಿಕೇಟ್‌ ಬ್ಯಾಂಕಿನಿಂದ ಪಡೆದ ಸಾಲ ₹ 2 ಲಕ್ಷದಲ್ಲಿ ಕೆಲವು ಕಂತು ಈಗಾಗಾಲೇ ನೀವು ತುಂಬಿರಬೇಕು. ಉಳಿದ ಸಾಲ ನಿಮ್ಮೊಡನಿರುವ ಹಣದಿಂದ ತಕ್ಷಣ ಮರುಪಾವತಿ ಮಾಡಿ. ಸಾಲದ ಬಡ್ಡಿ ಹೆಚ್ಚಿಗೆ ಇರುತ್ತದೆ. ಹೆಚ್ಚಿನ ಬಡ್ಡಿಯಲ್ಲಿ ಸಾಲ ಪಡೆದು, ಕಡಿಮೆ ಬಡ್ಡಿಯಲ್ಲಿ ಠೇವಣಿ ಮಾಡುವುದು ಜಾಣತನವಲ್ಲ. ಖಾಸಗಿ ಸಾಲ ಕೂಡಾ ಆದಷ್ಟು ಬೇಗ ತೀರಿಸಿ, ಸಾಲ ರಹಿತ ಜೀವನಕ್ಕೆ ಕಾಲಿಡಿರಿ.

ಊರಲ್ಲಿರುವ ಜಮೀನು ಮಾರಾಟ ಮಾಡಿ ಮೈಸೂರಿನಲ್ಲಿ ನಿವೇಶನ ಕೊಳ್ಳಿರಿ. ಸಂಬಳ ಹೆಚ್ಚಿದಂತೆ, ಮುಂದೆ ಗೃಹಸಾಲ ಪಡೆದು ಮನೆ ಕಟ್ಟಿಸಿ. ನಿಮ್ಮ ಹೆಂಡತಿ ನರ್ಸಿಂಗ್‌ ಮಾಡಿ ಮನೆಯಲ್ಲಿ ಇರುವುದರ ಬದಲಾಗಿ ಯಾವುದಾದರೂ ಖಾಸಗಿ ಆಸ್ಪತ್ರೆಗೆ ಸೇರಿಕೊಳ್ಳಲಿ.  ನೀವಿಬ್ಬರೂ ದುಡಿಯುವಂತಾದಲ್ಲಿ, ನಿಮಗೆ ಆರ್ಥಿಕ ಸುಭದ್ರತೆ ಬರುತ್ತದೆ, ಜೊತೆಗೆ ನಿಮ್ಮ ಹೆಂಡತಿಗೆ, ಜನಸಾಮಾನ್ಯರ ಸೇವೆ ಮಾಡುವ ಅವಕಾಶ ದೊರೆತಂತಾಗುತ್ತದೆ.

ಕವಿತಾ ಕಿರಣ್‌, ತುಮಕೂರು
*ನನ್ನದು ಸರ್ಕಾರಿ ನೌಕರಿ. ವಯಸ್ಸು 34. ನನ್ನ ಸಂಬಳದಲ್ಲಿ ಎಲ್‌ಐಸಿ, ಕೆಜಿಐಡಿ, ಎನ್‌ಪಿಎಸ್‌ ಕಡಿತವಾಗಿ ₹ 30,000 ಕೈಗೆ ಬರುತ್ತದೆ. ನನ್ನ ಪತಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಾರೆ. ಮನೆ ಖರ್ಚು ನಿರ್ವಹಣೆ ಅವರೇ ಮಾಡುತ್ತಾರೆ. ನಾನು ತಿಂಗಳಿಗೆ ₹ 24,000 ಉಳಿಸುತ್ತೇನೆ. ನನಗೆ 2 ವರ್ಷದ ಮಗನಿದ್ದು ಇವನ ಭವಿಷ್ಯ, ವಿದ್ಯಾಭ್ಯಾಸದ ಸಲುವಾಗಿ ನಿಮ್ಮಿಂದ ಆರ್ಥಿಕ ಸಲಹೆ ಕೇಳುತ್ತಿದ್ದೇನೆ. ಭದ್ರತೆ ಹಾಗೂ ಉತ್ತಮ ವರಮಾನ ಬಯಸುತ್ತೇನೆ.

ನಮಗೆ ಗೊತ್ತಿರುವ ಎಸ್‌ಬಿಐ ಇನ್ಯೂರೆನ್ಸ್‌ಏಜಂಟರು ₹ 3185 ರಂತೆ 16 ವರ್ಷ ಕಟ್ಟಿದರೆ, ಮಗನ 18ನೇ ವರ್ಷದಲ್ಲಿ ₹ 2.22 ಲಕ್ಷ, 19ನೇ ವರ್ಷದಲ್ಲಿ ₹ 2.22 ಲಕ್ಷ್ಯ, 20ನೇ  ವರ್ಷದಲ್ಲಿ ₹ 2.22 ಲಕ್ಷ, 21ನೇ ವರ್ಷದಲ್ಲಿ ₹ 2.65 ಲಕ್ಷ + ₹ 4 ಲಕ್ಷ ಮತ್ತು ₹ 6 ಲಕ್ಷ ಹೀಗೆ ಒಟ್ಟು ₹ 19.31 ಲಕ್ಷ ಹಣ ಬರುತ್ತದೆ ಎನ್ನುತ್ತಿದ್ದಾರೆ. ಈ ವಿಚಾರ ವಾಸ್ತವತೆಗೆ ದೂರ ಎಂದು ಎನಿಸುತ್ತದೆ. ದಯಮಾಡಿ ನಮಗೆ ಸರಿಯಾದ ಮಾರ್ಗದರ್ಶನ ಮಾಡಿರಿ.
ಉತ್ತರ:
ಎಸ್‌ಬಿಐ ಏಜೆಂಟರು ತಿಳಿಸಿರುವುದು ಜೀವವಿಮೆಯೇ ಅಥವಾ ಮ್ಯೂಚುವಲ್‌ ಫಂಡ್‌ ಎನ್ನುವುದು ತಿಳಿಯಲಿಲ್ಲ. ಪ್ರತಿಯೊಂದೂ ಯೋಜನೆಗೆ ಕೊಡುಗೆ ಪತ್ರ ಇರುತ್ತದೆ. ನಿಮ್ಮ ಪ್ರಶ್ನೆಯಲ್ಲಿ ನಮೂದಿಸಿದ ಹಣ ಕೊಡುಗೆ ಪತ್ರದಲ್ಲಿ ಇದೆಯೇ ಎನ್ನುವುದು ಮುಖ್ಯವಾಗುತ್ತದೆ. ₹ 3185 ಪ್ರತೀ ತಿಂಗಳೂ 16 ವರ್ಷ ಕಟ್ಟಿದಾಗ, ನೀವು ಕಟ್ಟುವ ಮೊತ್ತ ₹ 6,11,520. ₹ 3,185 ಪ್ರತೀ ತಿಂಗಳೂ ಬ್ಯಾಂಕಿನಲ್ಲಿ ಇರಿಸಿದರೆ 16 ವರ್ಷಗಳಲ್ಲಿ ಆಗುವ ಮೊತ್ತ ₹ 13 ಲಕ್ಷ. ಈ ಲೆಕ್ಕಾಚಾರ ನೋಡಿದರೆ ನಿಮ್ಮ ಏಜಂಟರ ಸಲಹೆ ತುಂಬಾ ಲಾಭದಾಯಕ. ಸರಿಯಾದ ಕಾಗದದ ಪತ್ರ ನೋಡದೆ ಏನೂ ಹೇಳುವಂತಿಲ್ಲ.

ಮನಿ ಬ್ಯಾಕ್‌ ಪಾಲಿಸಿ, ನಿಮ್ಮ ಮಗುವಿನ ವಿದ್ಯಾಭ್ಯಾಸಕ್ಕೆ ಹೇಳಿ ಮಾಡಿಸಿದಂತಿದೆ. ಪಿ.ಪಿ.ಎಫ್‌. ಆದಾಯ ತೆರಿಗೆ ವಿನಾಯತಿಗೆ ಉತ್ತಮ ಹೂಡಿಕೆ. ಆರ್‌.ಡಿ. ಮುಗಿಯುತ್ತಲೇ ಬರುವ ಮೊತ್ತದಿಂದ ನಿವೇಶನ ಕೊಳ್ಳಿರಿ. ಬಂಗಾರದ ಹೂಡಿಕೆ, ಮಗುವಿನ ಮದುವೆ ತನಕ ನಿಲ್ಲಿಸಬೇಡಿ. ಮೇಲಿನಂತೆ ಈಗಲೇ ಪ್ಲ್ಯಾನ್‌ ಮಾಡಿ. ಪ್ಲಾನ್‌ನಂತೆ ನಡೆದುಕೊಂಡರೆ, ನಿಮ್ಮ ಬಾಳು ಬಂಗಾರ ಆಗುವುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.