ADVERTISEMENT

ಪ್ರಶ್ನೋತ್ತರ

ಯು.ಪಿ.ಪುರಾಣಿಕ್
Published 24 ನವೆಂಬರ್ 2015, 19:34 IST
Last Updated 24 ನವೆಂಬರ್ 2015, 19:34 IST

ಎ. ಜಿ. ಸುಂದರ್‌ರಾಜ್‌, ದೊಡ್ಡಬಳ್ಳಾಪುರ.
* ನನ್ನ ಮಗ ಬಿ.ಇ. (ಮೆಕ್ಯಾನಿಕಲ್‌) 8ನೇ ಸೆಮಿಸ್ಟರ್‌ ಮುಗಿಸಿದ್ದಾನೆ. ಅವನಿಗೆ  Detriot Michican University ಯಲ್ಲಿ 2 ವರ್ಷಗಳ  Automative Course ಸೀಟು ಸಿಕ್ಕಿದೆ. ಈ ಕೋರ್ಸು ಮುಗಿಸಿದ ನಂತರ ಉತ್ತಮ ಭವಿಷ್ಯ ಇದೆಯಾ ಎಂಬುದನ್ನು ತಿಳಿಸಿ. ಈ ಕೋರ್ಸಿಗೆ ₹ 55 ಲಕ್ಷ ಬೇಕಾಗುತ್ತದೆ. ನಮ್ಮಲ್ಲಿ ₹ 15 ಲಕ್ಷವಿದೆ. ಉಳಿದ ಹಣ ಬ್ಯಾಂಕಿನಲ್ಲಿ ಸಾಲ ದೊರೆಯಬಹುದೇ, ಹಾಗೂ ಸರ್ಕಾರದಿಂದ ಏನು ಸಹಾಯ ಸಿಗುತ್ತದೆ. ಸಾಲ ಹಾಗೂ ಬಡ್ಡಿ ಅವನೇ ತೀರಿಸಬೇಕು?

ಉತ್ತರ: ವಿದೇಶದಲ್ಲಿ ಶಿಕ್ಷಣ ಪಡೆಯಲು ರಾಷ್ಟ್ರೀಕೃತ ಬ್ಯಾಂಕ್‌ಗಳು ವಿದ್ಯಾರ್ಥಿ ಗಳಿಗೆ ಸಾಲ ನೀಡುತ್ತವೆ. ಜೊತೆಗೆ ಇಬ್ಬರ ಜಾಮೀನು ಕೂಡಾ ಕೊಡಬೇಕಾಗುತ್ತದೆ. ಸಾಮಾನ್ಯವಾಗಿ ಇಂತಹ ಕೋರ್ಸ್‌ ಮುಗಿಸಿದವರಿಗೆ ಉತ್ತಮ ಭವಿಷ್ಯ ಇರುತ್ತದೆ. ಅಮೆರಿಕದಲ್ಲಿಯೇ ಕೆಲಸ ಸಿಗಬಹುದು. ಈ ವಿಚಾರದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಯ ಯೋಗ್ಯತೆ ಮುಖ್ಯವಾಗುತ್ತದೆ. ಸರ್ಕಾರದಿಂದ ಏನೂ ಸಹಾಯ ಧನ ಸಿಗುವುದಿಲ್ಲ. ಸಾಲ ಹಾಗೂ ಬಡ್ಡಿ ನಿಮ್ಮ ಮಗನೇ ತೀರಿಸಬೇಕು ಎನ್ನುವುದನ್ನು ಕಾಗದ ಪತ್ರಗಳಲ್ಲಿ ಬರೆದಿಡಲು ಬರುವುದಿಲ್ಲ. ಒಂದು ವೇಳೆ ನಿಮ್ಮ ಮಗ ಸಾಲ ತೀರಿಸದಿದ್ದರೆ ನೀವೇ ತೀರಿಸಬೇಕಾಗುತ್ತದೆ.

ಎಲ್‌. ಎಸ್‌. ಕಂದಗಲ್‌, ಊರು ಬೇಡ
* ನಾನು ಸರ್ಕಾರಿ ನಿವೃತ್ತ ನೌಕರ. ನನ್ನೊಡನೆ ₹4 ಲಕ್ಷ ಹಣವಿದೆ. ನಮ್ಮ ಊರಿನಲ್ಲಿ ಸ್ಟೇಟ್‌ ಬ್ಯಾಂಕ್‌ ಹಾಗೂ ಸಿಂಡಿಕೇಟ್‌ ಬ್ಯಾಂಕ್‌ ಎರಡೂ ಇವೆ. ಈ ಎರಡು ಬ್ಯಾಂಕುಗಳಲ್ಲಿ ಯಾವ ಬ್ಯಾಂಕಿನಲ್ಲಿ ಹಣ ತೊಡಗಿಸುವುದು ಸೂಕ್ತ. ಬಡ್ಡಿ ದರದಲ್ಲಿ ವ್ಯತ್ಯಾಸವಿದೆಯೇ, ತಿಳಿಸಿ?
ಉತ್ತರ:
ಸ್ಟೇಟ್‌ ಬ್ಯಾಂಕ್‌ ಹಾಗೂ ಸಿಂಡಿಕೇಟ್‌ ಬ್ಯಾಂಕ್‌ ಎರಡೂ ರಾಷ್ಟ್ರದ ಸುಭದ್ರವಾದ ಬ್ಯಾಂಕುಗಳು. ನಿಮ್ಮ ಮನೆಗೆ ಸಮೀಪದ ಬ್ಯಾಂಕ್‌ ಯಾವುದೋ ಅದನ್ನು, ಆರಿಸಿಕೊಳ್ಳಿ. ಬಡ್ಡಿ ದರದಲ್ಲಿ ಬಹಳಷ್ಟು ವ್ಯತ್ಯಾಸವಿಲ್ಲ. ಬಡ್ಡಿಯ ಅವಶ್ಯವಿಲ್ಲದಿರುವಲ್ಲಿ, ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಇರಿಸಿ. ನಿಮ್ಮ ಹಣ ಚಕ್ರಬಡ್ಡಿಯಲ್ಲಿ ಬೆಳೆಯುತ್ತದೆ. ಈ ಯೋಜನೆಯನ್ನು ಸಿಂಡಿಕೇಟ್‌ ಬ್ಯಾಂಕ್‌ ‘ವಿಕಾಸ್‌ ಸರ್ಟಿಫಿಕೇಟ್‌’ ಎಂತಲೂ, ಸ್ಟೇಟ್‌ ಬ್ಯಾಂಕ್‌ ‘ಆರ್‌.ಐ.ಡಿ.’ ಎಂತಲೂ ಕರೆಯುತ್ತವೆ.

ಅಶ್ಫಾಕ್‌ ಅಹಮ್ಮದ್‌ ಎಂ. ಎಸ್‌., ಗುಂಜಿಗಟ್ಟಿ (ಧಾರವಾಡ)
* ನಾನು ಅರಣ್ಯ ರಕ್ಷಕನಾಗಿ ಕಳೆದ 3 ವರ್ಷಗಳಿಂದ ಕೆಲಸ ಮಾಡುತ್ತೇನೆ. ನನ್ನ ಒಟ್ಟು ಸಂಬಳ ₹16,042. ಇದರಲ್ಲಿ ಕಡಿತ ಕೆ.ಜಿ.ಐ.ಡಿ. ₹ 1,000, ಎನ್‌.ಪಿ.ಎಸ್‌. ₹1,478,  ಪಿ.ಎಲ್‌.ಐ. ಗೆ ₹1,775 ಹಾಗೂ ಆರ್‌.ಡಿ.ಗೆ ₹3,000 (1 ವರ್ಷ ಅವಧಿ) ಹೀಗೆ ಕಟ್ಟುತ್ತೇನೆ. ನನ್ನ ಖರ್ಚು ₹4,000. ದೂರ ಶಿಕ್ಷಣದಲ್ಲಿ ಬಿ.ಎಸ್ಸಿ ಪ್ರಥಮ ವರ್ಷ ಓದುತ್ತಿದ್ದೇನೆ. ನನಗೆ ಹಳ್ಳಿಯಲ್ಲಿ ಚಿಕ್ಕ ಮನೆ ಇದೆ. ನಾನು ಅವಿವಾಹಿತ. ನನ್ನೊಡನೆ ನನ್ನ ತಾಯಿ ಇದ್ದಾರೆ. ಮೂರು ವರ್ಷದ ನಂತರ ಮದುವೆಯಾಗಬೇಕು. ಇನ್ನೂ ಹೆಚ್ಚಿನ ಉಳಿತಾಯ ಮಾಡಲು ಸೂಕ್ತ ಸಲಹೆ ನೀಡಿ?
ಉತ್ತರ:
ನಿಮ್ಮ ಖರ್ಚು ಹಾಗೂ ಸಂಬಳದಲ್ಲಿ ಕಡಿತ ಲೆಕ್ಕಹಾಕಿದಾಗ ನೀವು ₹4,989 ಉಳಿಸಬಹುದು. ಸದ್ಯಕ್ಕೆ ವಿಮೆ ಹೆಚ್ಚಿದೆ. ಅವಶ್ಯ ವಿಲ್ಲ ಹಾಗೂ ನೀವು ಮಾಡುತ್ತಿರುವ ಉಳಿತಾಯ ಚೆನ್ನಾಗಿದೆ. ಇನ್ನು ಮೂರು ವರ್ಷಗಳಲ್ಲಿ ನೀವು ಮದುವೆಯಾಗ ಬೇಕಾದ್ದರಿಂದ ಈಗಿನ ಉಳಿತಾಯದ ಹೊರತುಪಡಿಸಿ ಕನಿಷ್ಠ ₹3,000 ಹೊಸದಾಗಿ 3 ವರ್ಷಗಳ ಅವಧಿಗೆ ಆರ್‌.ಡಿ. ಮಾಡಿರಿ. ಸಾಧ್ಯವಾದರೆ ತುಟ್ಟಿಭತ್ಯೆ ಏರಿಕೆ ಹಾಗೂ ವಾರ್ಷಿಕ ಇನ್‌ಕ್ರಿಮೆಂಟ್‌ನ ಶೇ 50 ರಷ್ಟು ಪ್ರತೀ ಬಾರಿ ಆರ್‌.ಡಿ. ದೀರ್ಘಾವಧಿಗೆ ಮಾಡಿರಿ.

ವಸಂತ ಸಣಕಲ್‌ ಮುನವಳ್ಳಿ (ಸೌದತ್ತಿ)
* ನಾನು ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕನಾಗಿದ್ದೇನೆ. ಮ್ಯಾಕ್ಸ್ ಲೈಫ್‌ ಇನ್ಶುರೆನ್ಸ್‌ನಲ್ಲಿ Max life gain plus 20 participating plan ನಲ್ಲಿ ₹ 12,000, 2013 ರಲ್ಲಿ ಒಂದು ಕಂತು ಕಟ್ಟಿದ್ದೇನೆ. ಈ ಹಣ ವಾಪಸು ಪಡೆಯಲು ಸಲಹೆ ಬೇಕಾಗಿದೆ?
ಉತ್ತರ:
ನೀವು ಕಟ್ಟಿರುವ ₹ 12,000 ವಿಮೆ ಯೋಜನೆಯಡಿಯಲ್ಲಿ ಬರುವುದಿಲ್ಲ. ಮ್ಯಾಕ್ಸ್ ಲೈಫ್‌ ಕಂಪೆನಿಯು ಮ್ಯುಚುವಲ್‌ ಫಂಡಿನ ಯೋಜನೆಯಲ್ಲಿ ಇರುತ್ತದೆ. ಹೀಗೆ ಹಣ ಹೂಡುವ ಕೊಡುಗೆ ಪತ್ರ ದಲ್ಲಿ ಈ ಯೋಜನೆಯ ವಿವರ ಇರುತ್ತದೆ. ನೀವು ಕಟ್ಟಿದ ₹ 12000 ಈಗಿನ ನಿವ್ವಳ ಸಂಪತ್ತಿನ ಬೆಲೆಗನುಗುಣವಾಗಿ ಹಣ ವಾಪಸು ಪಡೆಯಬಹುದು. ಸಮೀಪದ ಮ್ಯಾಕ್ಸ್ ಲೈಫ್‌ ಕಂಪೆನಿ ಅಥವಾ ಏಜೆಂಟರ ಮುಖಾಂತರ ವಿವರಣೆ ಪಡೆಯಿರಿ. ಯಾವುದೇ ಹೂಡಿಕೆ ಮಾಡುವ ಮುನ್ನ ಹಣಕಾಸು ಪರಿಣತರಿಂದ ಸಲಹೆ ಪಡೆದೇ ಹಣ ಹೂಡಿರಿ.

ಮಮತ, ಮೈಸೂರು ಸಮೀಪದ ಹಳ್ಳಿ
* ನಾನು ಅನುಕಂಪದ ಮೇಲೆ ಡಿ. ಗ್ರೂಫ್‌ ನೌಕರಳಾಗಿ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತೇನೆ. ನನ್ನ ಸಂಬಳ ₹16,000 ಮತ್ತು ಪಿಂಚಣಿ ₹ 6000 ಬರುತ್ತದೆ. ಎರಡು ಹೆಣ್ಣು ಹಾಗೂ ಒಂದು ಗಂಡು ಮಗು ನನಗಿದೆ. ನನ್ನ ಮಗ ಕೆಲಸಕ್ಕೆ ಹೋಗುತ್ತಿದ್ದು ಅವನಿಗೆ ₹ 5,000 ಬರುತ್ತದೆ. ನನ್ನ ಕುಟುಂಬದ ಒಟ್ಟು ಆದಾಯ ₹ 27,000. ಎಲ್‌.ಐ.ಸಿ., ಕೆ.ಜಿ.ಐ.ಡಿ. ಸೇರಿ ₹ 5,000 ಕಟ್ಟುತ್ತೇನೆ. ಮನೆ ರಿಪೇರಿಗೆ ₹ 2 ಲಕ್ಷ ಸಾಲ ಪಡೆದಿದ್ದು ತಿಂಗಳಿಗೆ ₹4,250 ಕಂತು ಕಟ್ಟುತ್ತೇನೆ. ಮನೆ ಖರ್ಚು ₹6,750. ಮೂರು ತಿಂಗಳ ಹಿಂದೆ ಎರಡು ಹೆಣ್ಣು ಮಕ್ಕಳ ಮದುವೆಗೆ ₹5 ಲಕ್ಷ ಶೇ 2 ರಲ್ಲಿ ಸಾಲ ಪಡೆದು ತಿಂಗಳಿಗೆ ₹10,000 ಬಡ್ಡಿ ಕಟ್ಟುತ್ತಿದ್ದೇನೆ. ನನಗೆ ಇನ್ನು 21 ವರ್ಷ ಸೇವಾವಧಿ ಇದ್ದು, ಮದುವೆಗೆಂದು ಪಡೆದ ಸಾಲದ ತೀರುವಳಿಗೆ ಮಾಹಿತಿ ನೀಡಿ?
ಉತ್ತರ
: ನಿಮ್ಮ ಸಂಬಳ, ಪಿಂಚಣಿ, ಮಗನ ಸಂಬಳ ಇವುಗಳಿಂದ ಕಡಿತವಾಗುವ ಹಣ ಲೆಕ್ಕ ಹಾಕುವಾಗ ನಿಮಗೆ ಉಳಿತಾಯ ಮಾಡಲು ಅಥವಾ ಸಾಲ ತೀರಿಸಲು ಮಾರ್ಗವೇ ತೋರು ತ್ತಿಲ್ಲ. ಶೇ 2 ಬಡ್ಡಿ ಅಂದರೆ, ತಿಂಗಳಿಗೆ ಶೇ 2 ಆಗಿದ್ದು, ನೀವು ಸಾಲಕ್ಕೆ ₹10,000 ಪ್ರತೀ ತಿಂಗಳೂ ಬಡ್ಡಿ ಮಾತ್ರ ಕಟ್ಟುತ್ತಿದ್ದೀರಿ. ನಿಮಗೆ ಮೈಸೂರು ಸಮೀಪದ ಹಳ್ಳಿಯಲ್ಲಿ ಸ್ಥಿರ ಆಸ್ತಿ, ಮನೆ ನಿವೇಶನ ಅಥವಾ ಹೊಲ ಇರುವಲ್ಲಿ, ನೀವು ಉಳಿಯಲು ಬೇಕಾದಷ್ಟು ಸ್ಥಳ (ಜಾಗ) ಇರಿಸಿಕೊಂಡು ಉಳಿದ ಸ್ಥಳ ಮಾರಾಟ ಮಾಡಿ ಖಾಸಗಿ ಸಾಲ ₹5 ಲಕ್ಷ ತಕ್ಷಣ ತೀರಿಸಿರಿ ಹಾಗೂ ಸಾಧ್ಯವಾದರೆ ಮನೆ ರಿಪೇರಿ ಸಾಲ ಕೂಡ ತೀರಿಸಿ, ಸಾಲ ರಹಿತ ಜೀವನಕ್ಕೆ ಕಾಲಿಡಿ. ಹೀಗೆ ಮಾಡಿದಲ್ಲಿ ನೀವು ಕನಿಷ್ಠ ₹10,000 ತಿಂಗಳಿಗೆ ಉಳಿಸಬಹುದು ಹಾಗೂ ಮುಂದೆ ಮಗನ ಮದುವೆ ಕೂಡಾ ತೊಂದರೆ ಇಲ್ಲದೆ ಮಾಡಬಹುದು.

ಎಚ್‌. ಲಕ್ಷ್ಮೀನಾರಾಯಣ ಭಟ್‌., ಜೆ. ಪಿ. ನಗರ
* 31–3–2014ಕ್ಕೆ ಕೊನೆಗೊಂಡ  ಎ. ವೈ. 2014–15ಕ್ಕೆ ವರಮಾನ ತೆರಿಗೆಯಲ್ಲಿ ಈ ಸೂಚನೆ ಇದೆ. ₹ 2000 Tax credit in case personal taxable income doesnot exced ₹ 5 ಲಕ್ಷ. ಓರ್ವ ವ್ಯಕ್ತಿ ಪಾವತಿಸಬೇಕಾದ ಆದಾಯ ತೆರಿಗೆಯಲ್ಲಿ ₹2,000 ಕಡಿತ ಮಾಡಿ ಉಳಿದ ತೆರಿಗೆಯನ್ನು ಮಾತ್ರ ಸಲ್ಲಿಸಬಹುದೆ? ಒಂದು ವೇಳೆ ಆದಾಯ ತೆರಿಗೆ ₹ 2,000ದ ಒಳಗಿದ್ದರೆ ಅದನ್ನು ಸರ್ಕಾರಕ್ಕೆ ಪಾವತಿಸುವುದು ಬೇಡವೇ?
ಉತ್ತರ:
ಓರ್ವ ವ್ಯಕ್ತಿಯ ವಾರ್ಷಿಕ ಆದಾಯ (ಅಸೆಸ್‌ಮೆಂಟ್‌ ವರ್ಷದಲ್ಲಿ) ₹5 ಲಕ್ಷ ದೊಳಗಿದ್ದಲ್ಲಿ, ಆತ ತೆರಬೇಕಾದ ಒಟ್ಟು ತೆರಿಗೆಯಲ್ಲಿ ₹2,000 ರಿಬೇಟ್‌ ಕಳೆದು ತೆರಿಗೆ ಸಲ್ಲಿಸಬಹುದು. ಇದೇ ವೇಳೆ ಓರ್ವ ವ್ಯಕ್ತಿಯ ಆದಾಯ ₹5 ಲಕ್ಷದೊಳಗಿದ್ದು ರಿಬೇಟ್‌ ₹ 2,000 ಅಥವಾ ನಿಜವಾಗಿ ಕೊಡಬೇಕಾದ ತೆರಿಗೆ ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಸಲ್ಲಿಸಬೇಕಾಗುತ್ತದೆ. ಆದಾಯ ತೆರಿಗೆ ₹2,000 ದೊಳಗಿದ್ದಲ್ಲಿ ತೆರಿಗೆ ಎಷ್ಟೊ ಅಷ್ಟನ್ನು ಸಲ್ಲಿಸಬೇಕಾಗುತ್ತದೆ. (ಸೆಕ್ಷನ್‌ 87 – ಆದಾಯ ತೆರಿಗೆ ಇಲಾಖೆ).

ಕೇಶವಮೂರ್ತಿ, ಮೈಸೂರು.
* ನಾನು ನಿವೃತ್ತ ಬ್ಯಾಂಕ್‌ ನೌಕರ. ನನ್ನ ವಯಸ್ಸು 63. ನಾನು ಆದಾಯ ತೆರಿಗೆಗೆ ಒಳಪಡುತ್ತೇನೆ. ನಮಗೆ ₹1.50 ಲಕ್ಷ ಉಳಿತಾಯಕ್ಕೆ ತೆರಿಗೆ ಉಳಿತಾಯ ಇದೆ. ಈ ಹಣ ನ್ಯಾಷನಲ್‌ ಹೈವೇ ಅಥಾರಿಟಿ ಆಫ್‌ ಇಂಡಿಯಾದಲ್ಲಿ ತೊಡಗಿಸಬಹುದೇ, ಅದಕ್ಕಾಗಿ ಯಾರನ್ನು ಸಂಪರ್ಕಿಸಬೇಕು, ಬಡ್ಡಿ ಎಷ್ಟು?    
ಉತ್ತರ:
ಆದಾಯ ತೆರಿಗೆ ಸೆಕ್ಷನ್‌ 80 ಸಿ. ಆಧಾರದ ಮೇಲೆ ಗರಿಷ್ಠ ₹1.50 ಲಕ್ಷ ಉಳಿ ತಾಯ ಮಾಡಿ, ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ಸೆಕ್ಷನ್‌ 80 ಸಿ ಅಡಿಯಲ್ಲಿ ಎನ್.ಎಚ್‌.ಎ.ಐ. ಹೂಡಿಕೆ ಬರುವುದಿಲ್ಲ. ಈ ಹೂಡಿಕೆ ಬಂಡವಾಳ ವೃದ್ಧಿ ತೆರಿಗೆ ಉಳಿಸಲು ಸೆಕ್ಷನ್‌ 54 ಇ.ಸಿ. ಆಧಾರದ ಮೇಲೆ, ಉಪಯುಕ್ತವಾಗಿದೆ. ಬಡ್ಡಿ ದರ ಶೇ 6.5. ನೀವು ನಿವೃತ್ತ ಬ್ಯಾಂಕ್‌ ನೌಕರರಾದ್ದರಿಂದ, ನಿಮ್ಮ ಬ್ಯಾಂಕಿನಲ್ಲಿ ಇಂದಿನ ಠೇವಣಿ ಮೇಲಿನ ಬಡ್ಡಿ ದರಕ್ಕಿಂತ ಶೇ1.5 ಹೆಚ್ಚಿಗೆ ದೊರೆಯುವುದರಿಂದ ಅಲ್ಲಿಯೇ 5 ವರ್ಷಗಳ ಠೇವಣಿ ಇರಿಸಿ, ತೆರಿಗೆ ವಿನಾಯಿತಿ ಪಡೆಯಿರಿ.

ಹೆಸರು ಬೇಡ, ಹಾಸನ.
* ನಾನು ಸರ್ಕಾರಿ ಶಿಕ್ಷಕಿ. ಸಂಬಳ ₹ 21,500. ಕಡಿತ ₹ 2,500. ಗಂಡನಿಂದ ಎರಡು ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದೇನೆ. ಎಸ್‌.ಎಸ್‌.ಎಲ್‌.ಸಿ. ಓದುವ ಮಗನ ಹೊಣೆ ಇದೆ. ಇದುವರೆಗೆ ಏನೂ ಉಳಿಸಿಲ್ಲ. ಬೆನ್ನುಹುರಿ ಸಮಸ್ಯೆ ಹಾಗೂ ಕಿಡ್ನಿಸ್ಟೋನ್‌ ಚಿಕಿತ್ಸೆಗೆ ನೆರವಾಗುವ ಆರೋಗ್ಯ ವಿಮೆ ಮಾಡಿಸಲು ಮಾರ್ಗದರ್ಶನ ಮಾಡಿ. ₹ 4 ಲಕ್ಷ ವಿಮೆ ಮಾಡಲು ದಾರಿ ತೋರಿಸಿ?
ಉತ್ತರ:
ಯಾವುದೇ ಕಂಪೆನಿಯಲ್ಲಿ ಆರೋಗ್ಯ ವಿಮೆ ಮಾಡಿಸಿದರೂ, ಈಗಾಗಲೇ ವ್ಯಕ್ತಿಯಲ್ಲಿ ಅಡಕವಾಗಿರುವ ಕಾಯಿಲೆಗೆ ಬರುವ ಖರ್ಚು ವಿಮಾ ಕಂಪೆನಿಯವರು ಭರಿಸುವುದಿಲ್ಲ. ಆದರೆ ಇಂತಹ ವ್ಯಕ್ತಿಗಳು ವಿಮೆ ಇಳಿಸಿದ 3 ವರ್ಷಗಳ ನಂತರ ಈ ಸೌಲತ್ತು ಪಡೆಯಬಹುದು. ನೀವು ಸಿಂಡಿಕೇಟ್‌ ಬ್ಯಾಂಕಿನ ‘ಸಿಂಡ್‌ ಆರೋಗ್ಯ’ ಯೋಜನೆಯಲ್ಲಿ ₹4 ಲಕ್ಷ ಆರೋಗ್ಯ ವಿಮೆ ಮಾಡಿದರೆ ವಾರ್ಷಿಕವಾಗಿ ₹6,094 ಪ್ರೀಮಿಯಂ ಹಣ ತುಂಬಬೇಕಾಗುತ್ತದೆ. ಈ ಯೋಜನೆ ಚೆನ್ನಾಗಿದೆ. ಮೂರು ವರ್ಷಗಳ ನಂತರ ಚಿಕಿತ್ಸೆ ಖರ್ಚು ₹4 ಲಕ್ಷಗಳ ತನಕ ವಾರ್ಷಿಕವಾಗಿ ಪಡೆಯಬಹುದು. ನಿಮ್ಮ ಆದಾಯ ವಾರ್ಷಿಕವಾಗಿ ₹4.50 ಲಕ್ಷದೊಳ ಗಿರುವುದರಿಂದ, ನಿಮ್ಮ ಮಗ ಪಿ.ಯು.ಸಿ. ಮುಗಿಸಿ, ವೃತ್ತಿ ಶಿಕ್ಷಣ ಪಡೆಯುವಲ್ಲಿ ಗರಿಷ್ಠ ₹ 10 ಲಕ್ಷ ಬಡ್ಡಿ ಅನುದಾನಿತ ಸಾಲ ಬ್ಯಾಂಕಿನಲ್ಲಿ ಪಡೆಯಬಹುದು. ಅವನಿಗೆ ಉತ್ತಮ ಶಿಕ್ಷಣ ಕೊಡಿ.

ಮಲ್ಲಿಕಾರ್ಜುನಯ್ಯ, ತುರುವೇಕೆರೆ
* ನನ್ನ ವಯಸ್ಸು 63, ನಿವೃತ್ತ ಸರ್ಕಾರಿ ನೌಕರ. ಮಾಸಿಕ ಪಿಂಚಣಿ ₹ 11,452. ನಾನು ಎಸ್‌.ಬಿ.ಎಂ.ನಲ್ಲಿ ಠೇವಣಿ ಇರಿಸಿ 15 ಜಿ. ನಮೂನೆ ಅರ್ಜಿ ಬ್ಯಾಂಕಿಗೆ ಸಲ್ಲಿಸಿದ್ದೇನೆ. ನನ್ನ ಪಿಂಚಣಿ ಆದಾಯ ಬಡ್ಡಿ ಸೇರಿದರೂ ವಾರ್ಷಿಕವಾಗಿ ₹ 3 ಲಕ್ಷ ದಾಟುವುದಿಲ್ಲ. ಎಸ್‌.ಬಿ.ಎಂ. ಎಫ್‌.ಡಿ. ಬಡ್ಡಿಯಿಂದ ₹ 5378 ಆದಾಯ ತೆರಿಗೆಯವರು ಮುರಿದಿರುತ್ತಾರೆ. ಈ ಹಣ ವಾಪಸು ಪಡೆಯಲು ಮಾರ್ಗದರ್ಶನ ಮಾಡಿ?
ಉತ್ತರ:
ಆದಾಯ ತೆರಿಗೆ ಇಲಾಖೆಗೆ ನೀವು ಬ್ಯಾಂಕಿನಲ್ಲಿ ಇಟ್ಟಿರುವ ಠೇವಣಿ ವಿಚಾರದಲ್ಲಿ ಮಾಹಿತಿ ಇರುವುದಿಲ್ಲ. ಒಂದು ವೇಳೆ 15 ಎಚ್‌. (ನೀವು ತಿಳಿಸಿದಂತೆ 15 ಜಿ. ಬರುವುದಿಲ್ಲ) ಕೊಟ್ಟರೂ, ಆದಾಯ ತೆರಿಗೆ ಇಲಾಖೆ ನಿಮಗೇ ನೋಟೀಸ್‌ ಕಳುಹಿಸುತ್ತಿದ್ದರು. ಪ್ರಾಯಶಃ 15 ಎಚ್‌. ಗಮನಕ್ಕೆ ತೆಗೆದು ಕೊಳ್ಳದೇ, ಬ್ಯಾಂಕಿನಲ್ಲಿಯೇ ₹5378 ಮುರಿದು ತೆರಿಗೆ ಇಲಾಖೆಗೆ ಕಳಿಸಿರಬೇಕು. ಎಸ್‌.ಬಿ.ಎಂ.ಗೆ ಹೋಗಿ ₹ 5,378 ಮುರಿದಿರುವುದಕ್ಕೆ ಸರ್ಟಿಫಿಕೇಟು ಪಡೆದು, ತೆರಿಗೆ ಸಲಹೆಗಾರರ ಮುಖಾಂತರ ತುಮಕೂರಿನಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ತೆರಿಗೆ ರಿಟರ್ನ್‌ ಸಲ್ಲಿಸಿ ಈ ಹಣ ವಾಪಸು ಪಡೆಯಬಹುದು.

ಸಿ. ಎಲ್‌. ಶ್ರೀನಿವಾಸಮೂರ್ತಿ.
* ನನ್ನ ಮೊಮ್ಮಗನ ಹೆಸರಿನಲ್ಲಿ ₹ 45,000 ಠೇವಣಿಯಾಗಿ ಇರಿಸಬೇಕೆಂದಿದ್ದೇನೆ. ಅವನಿಗೆ 16ನೇ ವರ್ಷದಲ್ಲಿ ಹಣ ಸಿಗುವಂತಾಗಬೇಕು. 3–5 ವರ್ಷಗಳಿಗೆ ಅಥವಾ ದೀರ್ಘಾವಧಿಗೆ ಠೇವಣಿ ಇರಿಸಲೇ ಬ್ಯಾಂಕು ಹೊರತುಪಡಿಸಿ ಬೇರೆ ಉತ್ತಮ ಹೂಡಿಕೆ ಇದ್ದರೆ ತಿಳಿಸಿರಿ.
ಉತ್ತರ:
ನಿಮ್ಮ ಮೊಮ್ಮಗನ ವಯಸ್ಸು ತಿಳಿಸಿಲ್ಲ. ಬ್ಯಾಂಕುಗಳಲ್ಲಿ ಗರಿಷ್ಠ 10 ವರ್ಷಗಳ ಅವಧಿಗೆ ಮಾತ್ರ ಠೇವಣಿ ಸ್ವೀಕರಿಸುತ್ತಾರೆ. ಬ್ಯಾಂಕು ಹೊರತುಪಡಿಸಿ ಬೇರೆ ಎಲ್ಲೂ  ಠೇವಣಿ ಇಡಬೇಡಿ. ನಿಮ್ಮ ಆಸೆ ನೆರವೇರಲು ಬ್ಯಾಂಕಿನ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಗರಿಷ್ಠ 10 ವರ್ಷಗಳ ಠೇವಣಿ ಇರಿಸಿ, ಇದರಿಂದ ಹಣ ಚಕ್ರಬಡ್ಡಿಯಲ್ಲಿ ಬೆಳೆಯುತ್ತದೆ. ನೀವು ₹45,000, 10 ವರ್ಷಗಳ ಅವಧಿಗೆ ಇರಿಸಿದರೆ ಶೇ8 ಬಡ್ಡಿ ದರದಲ್ಲಿ ಅವಧಿ ಮುಗಿಯುತ್ತಲೇ ₹ 99,360 ಪಡೆಯುವಿರಿ. (ಸಮೀಪದಲ್ಲಿ ₹ 1 ಲಕ್ಷ ಪಡೆಯಬಹುದು) ನಿಮ್ಮ ಮೊಮ್ಮಗನಿಗೆ 10 ವರ್ಷಗಳ ನಂತರ 16 ವರ್ಷ ತುಂಬದಿರುವಲ್ಲಿ ಠೇವಣಿ ಆಟೋ ರಿನಿವಲ್‌ ಮಾಡಿಸಿ 16ನೇ ವರ್ಷಕ್ಕೆ ಹಣ ಸಿಗುವಂತೆ ಮಾಡಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.