ADVERTISEMENT

ಬಡ್ಡಿದರ ಯಥಾಸ್ಥಿತಿ ಮುಂದುವರಿಕೆ

ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2014, 19:30 IST
Last Updated 30 ಸೆಪ್ಟೆಂಬರ್ 2014, 19:30 IST

ಮುಂಬೈ (ಪಿಟಿಐ):  ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮಂಗಳವಾರ ಪ್ರಕಟಿಸಿದ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿದರಗಳನ್ನು  ಯಥಾಸ್ಥಿತಿ­ಯಲ್ಲಿಯೇ  ಮುಂದುವರಿ­ಸಿದೆ.ಇದರಿಂದ ಆರ್‌ಬಿಐ ಸತತವಾಗಿ ನಾಲ್ಕನೇ ಬಾರಿಯೂ ಬಡ್ಡಿದರ­ಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಂತಾಗಿದೆ.

ಜಾಗತಿಕ ರಾಜಕೀಯ ವಿದ್ಯ­ಮಾನಗಳು, ಹಣ­ದುಬ್ಬರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಅಂಶಗ­ಳನ್ನು ಗಮನ­ದಲ್ಲಿಟ್ಟು­ಕೊಂಡು ಬಡ್ಡಿ ದರ­ಗಳಲ್ಲಿ ಯಥಾಸ್ಥಿತಿಯಲ್ಲಿಯೇ ಮುಂದು­ವ­ರಿ­­ಸಲು ನಿರ್ಧರಿಸ­ಲಾಯಿತು ಎಂದು ಆರ್‌ಬಿಐ ಗವರ್ನರ್‌ ರಘುರಾಂ ರಾಜನ್‌ ಸುದ್ದಿಗಾರರಿಗೆ ತಿಳಿಸಿದರು.

ಅಲ್ಪಾವಧಿ ಸಾಲದ ಮೇಲಿನ ಬಡ್ಡಿದರ  (ರೆಪೊ) ಶೇ 8 ಮತ್ತು ನಗದು ಮೀಸಲು ಅನುಪಾತ (ಸಿಆರ್‌ಆರ್‌) ಶೇ 4ರಲ್ಲಿಯೇ ಮುಂದುವರಿಸ­ಲಾಗಿದೆ. ಶಾಸನಾತ್ಮಕ ನಗದು ಹರಿವು ಅನುಪಾತ­ವನ್ನು (ಎಸ್‌ಎಲ್‌ಆರ್‌) ಮರಳಿ ಶೇ 22ರಲ್ಲೇ ನಿಗದಿಪಡಿಸಲಾಗಿದೆ.

ಜಿಡಿಪಿ ಶೇ 6.3 ನಿರೀಕ್ಷೆ
ಮುಂದಿನ ಹಣಕಾಸು ವರ್ಷದಲ್ಲಿ ದೇಶದ ಒಟ್ಟಾರೆ ಆಂತರಿಕ ಉತ್ಪನ್ನ (ಜಿಡಿಪಿ) ಶೇ 5.5ರಿಂದ ಶೇ 6.3ಕ್ಕೆ ಏರಿಕೆ ಆಗಲಿದೆ ಎಂದು ರಾಜನ್‌ ಹಣಕಾಸು ನೀತಿ ಪರಾಮರ್ಶೆ ವೇಳೆ ಹೇಳಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ದರ ಶೇ 5ರಿಂದ ಶೇ 6ರಷ್ಟು ಮಟ್ಟದಲ್ಲಿ ಇರಲಿದೆ ಎಂದು ಅಂದಾಜು ಮಾಡಲಾಗಿತ್ತು. ಕೇಂದ್ರ ಸರ್ಕಾರವೂ ಶೇ 5.5ರಷ್ಟು ಜಿಡಿಪಿ ಅಂದಾಜು ಮಾಡಿತ್ತು. ಮೊದಲ ತ್ರೈಮಾಸಿಕದಲ್ಲಿ ಶೇ 5.7ರ ಮಟ್ಟಕ್ಕೇರಿ ಅಚ್ಚರಿಯ ಪ್ರಗತಿ ಸಾಧಿಸಿದ್ದೆವು. ಎರಡನೇ ತ್ರೈಮಾಸಿಕ­-ದಲ್ಲೂ ಪ್ರಗತಿ ದರ ಯಥಾ­ಸ್ಥಿತಿ ಕಾಯ್ದು­ಕೊಳ್ಳಲಾಗಿತ್ತು. ನಂತರ ಮುಂಗಾರು ಮಳೆ ಕೊರತೆಯಿಂದ ಜಿಡಿಪಿ ದರ ಕುಸಿದಿದೆ ಎಂದು ರಾಜನ್‌ ವಿಶ್ಲೇಷಿಸಿದರು.

ಬಡ್ಡಿದರ ಯಥಾಸ್ಥಿತಿ ಕಾಯ್ದು­ಕೊಂಡಿರುವ ಆರ್‌ಬಿಐ ನಿರ್ಧಾರವನ್ನು ಕೇಂದ್ರ ಹಣಕಾಸು ಸೇವೆಗಳ ಕಾರ್ಯ­ದರ್ಶಿ ಜಿ.ಎಸ್‌.ಸಂಧು  ಸಮ­ರ್ಥಿಸಿ­­ಕೊಂಡಿ­ದ್ದಾರೆ. ಆರ್‌ಬಿಐಗೆ ದೇಶದ ಆರ್ಥಿಕ ಪರಿಸ್ಥಿತಿ­ಯ ಅರಿವಿದೆ.   ಸೂಕ್ತ ಸಂದರ್ಭ­ದಲ್ಲಿ ಬಡ್ಡಿ­ದ­ರ­ವನ್ನು ಕಡಿತ ಮಾಡಲಿದೆ ಎಂದು ಹೇಳಿದ್ದಾರೆ.

ಉದ್ಯಮಿಗಳ ಅಸಮಾಧಾನ
ಬಡ್ಡಿದರ ಕಡಿತ ಮಾಡುವ ಉತ್ತಮ ಅವಕಾಶ­ವನ್ನು ಆರ್‌ಬಿಐ ಕಳೆದು­ಕೊಂಡಿದೆ. ಬಡ್ಡಿದರ ಕಡಿತ­ಗೊಳಿಸಿದ್ದರೆ ಹೂಡಿಕೆಗೆ ಹೆಚ್ಚಿ ಆರ್ಥಿಕ ಅಭಿವೃದ್ಧಿಗೆ ನೆರವಾಗುತ್ತಿತ್ತು ಎಂದು ಉದ್ಯಮಿಗಳು  ಅಭಿಪ್ರಾಯ­ಪಟ್ಟರು.

ವಿತ್ತೀಯ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆ ನಿಯಂತ್ರಣದಲ್ಲಿದೆ. ಹಣದುಬ್ಬರ ಇಳಿಕೆ ಪಥದಲ್ಲಿದೆ. ಇನ್ನೊಂದೆಡೆ ಕೈಗಾರಿಕೆಗಳಲ್ಲಿ ತಯಾ­ರಿಕೆ ತಗ್ಗಿದೆ. ಬಡ್ಡಿದರ ಕಡಿತ ಮಾಡಲು ಇದೊಂದು ಉತ್ತಮ ಅವಕಾಶವಾಗಿತ್ತು ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಪ್ರಧಾನ ನಿರ್ದೇಶಕ ಚಂದ್ರಜಿತ್‌ ಬ್ಯಾನರ್ಜಿ ಹೇಳಿದರು.

ಕಚ್ಚಾತೈಲ ಬೆಲೆ ಇಳಿಕೆ ಆಗುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸರಕುಗಳ ಬೆಲೆಯೂ ಇಳಿಮುಖ­ವಾಗುತ್ತಿದೆ. ಈ ಸಂದರ್ಭದಲ್ಲಿ ಬಡ್ಡಿದರವನ್ನು ಅಲ್ಪ ಪ್ರಮಾಣದಲ್ಲಿ ಇಳಿಕೆ ಮಾಡಬಹುದಿತ್ತು  ಎಂದು ಭಾರತೀಯ ವಾಣಿ­ಜ್ಯೋದ್ಯಮ ಮಹಾ ಸಂಘದ (ಅಸೋಚಾಂ) ಅಧ್ಯಕ್ಷ ರಾಣಾ ಕಪೂರ್‌ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.