ADVERTISEMENT

ಬಾಂಡ್‌ ಮಾರಾಟ: ₹6.3 ಲಕ್ಷ ಕೋಟಿ ಸಂಗ್ರಹ

ಕಂಪೆನಿಗಳ ಬಂಡವಾಳ ಸಂಗ್ರಹ ಪ್ರಮಾಣದಲ್ಲಿ ಹೆಚ್ಚಳ

ಪಿಟಿಐ
Published 14 ಜನವರಿ 2017, 19:30 IST
Last Updated 14 ಜನವರಿ 2017, 19:30 IST

ನವದೆಹಲಿ: ದೇಶಿ ಕಂಪೆನಿಗಳು ಬಂಡವಾಳ ಸಂಗ್ರಹಿಸಲು ಷೇರುಮಾರುಕಟ್ಟೆ ಉತ್ತಮ ಮಾರ್ಗವಾಗಿದೆ. ಹೀಗಾಗಿ 2017ರಲ್ಲಿಯೂ ಷೇರುಪೇಟೆಯ ಮೇಲೆಯೇ ಹೆಚ್ಚು ಅವಲಂಬಿತವಾಗಲಿವೆ ಎಂದು ತಜ್ಞರು ಹೇಳಿದ್ದಾರೆ.

2016ರಲ್ಲಿ  ಷೇರುಪೇಟೆ ಹೆಚ್ಚು ಚಂಚಲವಾಗಿತ್ತು. ಹೀಗಿದ್ದರೂ ಸಹ ಕಂಪೆನಿಗಳು ಬಾಂಡ್‌ ಮತ್ತು ಸಾಲ ಪತ್ರಗಳ ಮಾರಾಟದಿಂದ ₹6.3 ಲಕ್ಷ ಕೋಟಿ ಸಂಗ್ರಹಿಸಿವೆ. 2015ರಲ್ಲಿಯೂ ಇದೇ ಪ್ರಮಾಣದ  ಬಂಡವಾಳ ಸಂಗ್ರಹ ಮಾಡಿದ್ದವು.

ಒಟ್ಟು ಮೊತ್ತದಲ್ಲಿ ₹5.5 ಲಕ್ಷ ಕೋಟಿಯಷ್ಟು ಸಾಲಪತ್ರ ಮಾರುಕಟ್ಟೆಯಿಂದ ಸಂಗ್ರಹವಾಗಿದೆ. ಉಳಿದ ₹80 ಸಾವಿರ ಕೋಟಿ ಷೇರುಪೇಟೆಯಿಂದ ಬಂದಿದೆ. ಈ ಮೊತ್ತವು ಷೇರುಗಳ ವಿತರಣೆ ಮತ್ತು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಸಂಗ್ರಹವಾಗಿದೆ.

ADVERTISEMENT

ನೋಟು ರದ್ದತಿಯಿಂದ ಷೇರುಪೇಟೆ ವಹಿವಾಟು ತುಸು ತಗ್ಗಿದೆ. 2017ರ ಮೊದಲ ಆರು ತಿಂಗಳಿನಲ್ಲಿಯೂ ನೋಟು ರದ್ದತಿ ಪ್ರಭಾವ ಮುಂದುವರಿಯುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.

ವಹಿವಾಟು ವಿಸ್ತರಣೆ, ಸಾಲ ಮರುಪಾವತಿ ಮತ್ತು ಕಾರ್ಯಾಚರಣೆ ವೆಚ್ಚಕ್ಕಾಗಿ ಬಂಡವಾಳ ಸಂಗ್ರಹಿಸಿರುವುದಾಗಿ ಕಂಪೆನಿಗಳು ತಿಳಿಸಿವೆ.

ಪ್ರಮುಖ ಆಯ್ಕೆ: ಬಡ್ಡಿದರ ಇಳಿಕೆ, ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಹೆಚ್ಚಿನ ನಗದು ಮತ್ತು ಸಾಲಪತ್ರ ವಿತರಣೆಗೆ ಇರುವ ಸರಳವಾದ ನಿಯಮಗಳಿಂದ 2017ರಲ್ಲಿಯೂ ಕಂಪೆನಿಗಳು ಬಂಡವಾಳ ಸಂಗ್ರಹಕ್ಕೆ ಸಾಲಪತ್ರ ಮಾರುಕಟ್ಟೆಯನ್ನೇ ಆಯ್ಕೆ ಮಾಡಿಕೊಳ್ಳಲಿವೆ ಎಂದು ಬಜಾಜ್‌ ಕ್ಯಾಪಿಟಲ್ಸ್‌ನ ಹಿರಿಯ ಉಪಾಧ್ಯಕ್ಷ ಅಲೋಕ್‌ ಅಗರ್ವಾಲ್‌ ಹೇಳಿದ್ದಾರೆ.

ಅನಿಶ್ಚಿತತೆ ಮುಂದುವರಿಯಲಿದೆ

ನೋಟು ರದ್ದತಿ ಮತ್ತು ಅದರಿಂದ ಆರ್ಥಿಕತೆ ಮೇಲಾಗಿರುವ ಪರಿಣಾಮದಿಂದ 2017ರಲ್ಲಿ ಅನಿಶ್ಚಿತತೆ ಎದುರಾಗಿದೆ. ಜಿಡಿಪಿ ಮತ್ತು ಕಾರ್ಪೊರೇಟ್‌ ಗಳಿಕೆಯು 2017ರ ಮೊದಲ ಎರಡು ತ್ರೈಮಾಸಿಕಗಳಲ್ಲಿ ಮಂದಗತಿಯಲ್ಲಿ ಇರಲಿದೆ. ಇದು ಷೇರುಪೇಟೆ ವಹಿವಾಟಿನ ಮೇಲೆಯೂ ಪರಿಣಾಮ ಬೀರಲಿದೆ ಎಂದು ಜಿಯೋಜಿತ್‌ ಬಿಎನ್‌ಪಿ ಪರಿಬಾಸ್‌ನ  ಹೂಡಿಕೆ ವಿಭಾಗದ ಮುಖ್ಯಸ್ಥ ವಿ.ಕೆ. ವಿಜಯ್‌ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರ್ಕಾರ 2017ರಲ್ಲಿಯೂ ಕಪ್ಪುಹಣದ ವಿರುದ್ಧ ಸಮರ ಮುಂದುವರಿಸಲಿದೆ. ಬೇನಾಮಿ ಆಸ್ತಿಗಳ ವಿರುದ್ಧ ಕಠಿಣ ಕ್ರಮ ಜಾರಿಗೊಳಿಸಲಿದೆ. ಇದರಿಂದ ರಿಯಲ್‌ ಎಸ್ಟೇಟ್‌ ವಲಯ ಸಾಕಷ್ಟು ಏರಿಳಿತ ಕಾಣಲಿದ್ದು, ರಿಯಲ್‌ ಎಸ್ಟೇಟ್‌ ವಲಯದ ಷೇರುಗಳ ಇಳಿಕೆಗೆ ಕಾರಣವಾಗಲಿದೆ. ಇದರಿಂದ  ಮಾರುಕಟ್ಟೆಯಲ್ಲಿ ಸಾಕಷ್ಟು ತಲ್ಲಣ ಉಂಟಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್‌ ಟ್ರಂಪ್‌ ಅವರ ಆರ್ಥಿಕ ನೀತಿಗಳೂ ದೇಶಿ ಮಾರುಕಟ್ಟೆಯ ಮೇಲೆ ಋಣಾತ್ಮಕ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.