ADVERTISEMENT

ಭಾರ್ತಿ ಕುಟುಂಬದ ₹ 7,000 ಕೋಟಿ ದಾನ

ಪಿಟಿಐ
Published 23 ನವೆಂಬರ್ 2017, 19:30 IST
Last Updated 23 ನವೆಂಬರ್ 2017, 19:30 IST
ಸುನಿಲ್‌ ಮಿತ್ತಲ್‌
ಸುನಿಲ್‌ ಮಿತ್ತಲ್‌   

ನವದೆಹಲಿ: ಭಾರ್ತಿ ಕುಟುಂಬವು ₹ 7,000 ಕೋಟಿಯಷ್ಟು ಸಂಪತ್ತನ್ನು, ಭಾರ್ತಿ ಫೌಂಡೆಷನ್ನಿನ ದಾನಧರ್ಮದ ಕಾರ್ಯಗಳಿಗೆ ವಿನಿಯೋಗಿಸಲು ನಿರ್ಧರಿಸಿದೆ.

‘ಈ ಘೋಷಿತ ದಾನದ ಮೊತ್ತದಲ್ಲಿ ಭಾರ್ತಿ ಏರ್‌ಟೆಲ್‌ನಲ್ಲಿನ ಕುಟುಂಬದ ಶೇ 3ರಷ್ಟು ಪಾಲು ಕೂಡ ಒಳಗೊಂಡಿರುತ್ತದೆ’ ಎಂದು ಭಾರ್ತಿ ಎಂಟರ್‌ಪ್ರೈಸಿಸ್‌ನ ಸ್ಥಾಪಕ ಮತ್ತು ಅಧ್ಯಕ್ಷ ಸುನಿಲ್ ಮಿತ್ತಲ್‌ ಹೇಳಿದ್ದಾರೆ.

‘ಆರ್ಥಿಕವಾಗಿ ದುರ್ಬಲ ಕುಟುಂಬಗಳ ಅವಕಾಶ ವಂಚಿತ ಯುವಕರಿಗೆ ಉಚಿತ ಶಿಕ್ಷಣ ನೀಡಲು ‘ಸತ್ಯ ಭಾರ್ತಿ ವಿಶ್ವವಿದ್ಯಾಲಯ’ ಸ್ಥಾಪಿಸಲೂ ಭಾರ್ತಿ ಕುಟುಂಬ ನಿರ್ಧರಿಸಿದೆ. ಈ ವಿಶ್ವವಿದ್ಯಾಲಯವು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಅದರಲ್ಲೂ ವಿಶೇಷವಾಗಿ ಕೃತಕ ಬುದ್ಧಿಮತ್ತೆ, ಇಂಟರ್‌ನೆಟ್‌ ಆಫ್‌ ಥಿಂಗ್ಸ್‌, ರೋಬೊ ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನ ಗಮನ ಕೇಂದ್ರೀಕರಿಸಲಿದೆ.

ADVERTISEMENT

‘ಉತ್ತರ ಭಾರತದಲ್ಲಿ ಅಸ್ತಿತ್ವಕ್ಕೆ ಬರಲಿರುವ ಈ ವಿಶ್ವವಿದ್ಯಾಲಯವು 2021ರಲ್ಲಿ ಕಾರ್ಯಾರಂಭ ಮಾಡಲಿದೆ. ದಾನ ನೀಡಲು ಉದ್ದೇಶಿಸಿರುವ ಸಂಪತ್ತಿನ ಬಹುಭಾಗವು ಈ ವಿಶ್ವವಿದ್ಯಾಲಯ ಸ್ಥಾಪನೆಗೆ ವೆಚ್ಚವಾಗಲಿದೆ.  ವಿಶ್ವವಿದ್ಯಾಲಯ ಸ್ಥಾಪಿಸಲು ಭೂಮಿ ಖರೀದಿ ಪ್ರಕ್ರಿಯೆ ಅಂತಿಮ ಹಂತದಲ್ಲಿ ಇದೆ. 10 ಸಾವಿರ ವಿದ್ಯಾರ್ಥಿಗಳಿಗೆ ಇಲ್ಲಿ ಕಲಿಕೆಗೆ ಅವಕಾಶ ದೊರೆಯಲಿದೆ’ ಎಂದು ಸುನಿಲ್‌ ಮಿತ್ತಲ್‌ ಅವರು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇನ್ಫೊಸಿಸ್‌ನ ಸಹ ಸ್ಥಾಪಕ ನಂದನ್ ನಿಲೇಕಣಿ ಮತ್ತು ಅವರ ಪತ್ನಿ ರೋಹಿಣಿ ಅವರು, ತಮ್ಮ ಸಂಪತ್ತಿನ ಅರ್ಧ ಭಾಗವನ್ನು ದಾನದ ಉದ್ದೇಶಕ್ಕೆ  ಮೀಸಲು ಇಡುವ ‘ದಾನ ವಾಗ್ದಾನ’ದ ಜಾಗತಿಕ ಆಂದೋಲನಕ್ಕೆ ಕೈಜೋಡಿಸಿದ   ಬೆನ್ನಲ್ಲೇ ಭಾರ್ತಿ ಕುಟುಂಬದ ದೊಡ್ಡ ಮೊತ್ತದ ಈ ದಾನ ನೀಡುವ ನಿರ್ಧಾರ ಪ್ರಕಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.