ADVERTISEMENT

ರಾಜ್ಯದಲ್ಲಿ ಸೌರವಿದ್ಯುತ್‌ ಉತ್ಪಾದನೆಗೆ ಮಿತ್ತಲ್‌ ಸಜ್ಜು

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2017, 19:30 IST
Last Updated 26 ಫೆಬ್ರುವರಿ 2017, 19:30 IST
ನವದೆಹಲಿ (ಪಿಟಿಐ): ಕರ್ನಾಟಕದಲ್ಲಿ ಉಕ್ಕು ಸ್ಥಾವರ ಸ್ಥಾಪಿಸಲು ಮಂಜೂರಾಗಿರುವ ಭೂಮಿಯಲ್ಲಿ ಸೌರ ವಿದ್ಯುತ್‌ ಉತ್ಪಾದಿಸಲು ವಿಶ್ವದ ಅತಿದೊಡ್ಡ ಉಕ್ಕು ತಯಾರಿಕಾ ಸಂಸ್ಥೆಯಾಗಿರುವ ಅರ್ಸೆಲ್ಲರ್‌ ಮಿತ್ತಲ್‌ ಮುಂದಾಗಿದೆ.
 
ಜಾಗತಿಕ ಮಟ್ಟದಲ್ಲಿ ಗರಿಷ್ಠ ಪ್ರಮಾಣದಲ್ಲಿ ಉಕ್ಕು ತಯಾರಿಸಲಾಗುತ್ತಿದೆ. ಕರ್ನಾಟಕದಲ್ಲಿನ ಸ್ಥಾವರಕ್ಕೆ ಕಚ್ಚಾ ಸಾಮಗ್ರಿ ಪಡೆಯುವುದು ವಿಳಂಬವಾಗುತ್ತಿದೆ. ಹೀಗಾಗಿ ಮಂಜೂರಾಗಿರುವ ಭೂಮಿಯಲ್ಲಿ ಸೌರ ವಿದ್ಯುತ್‌  ಉತ್ಪಾದಿಸುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಸಂಸ್ಥೆಯ ಇತ್ತೀಚಿನ ವರದಿಯಲ್ಲಿ ತಿಳಿಸಲಾಗಿದೆ.
 
ಉಕ್ಕು ಸ್ಥಾವರ ಸ್ಥಾಪಿಸುವ ಉದ್ದೇಶಕ್ಕೆ 2,659 ಎಕರೆಗಳಷ್ಟು ಭೂಮಿಯು ಸದ್ಯಕ್ಕೆ ಸಂಸ್ಥೆಯ ಸ್ವಾಧೀನದಲ್ಲಿ ಇದೆ.  600 ಮೆಗಾವಾಟ್‌ನಷ್ಟು ಸೌರಶಕ್ತಿ ಉತ್ಪಾದನೆಗೆ  ಅನುಮತಿ ನೀಡಬೇಕೆಂದು ಸಂಸ್ಥೆಯು ಈಗಾಗಲೇ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. ಈ ಮನವಿಗೆ ಸರ್ಕಾರವು ಸೂಕ್ತ ರೀತಿಯಲ್ಲಿ ಸ್ಪಂದಿಸುವ ನಿರೀಕ್ಷೆ ಇದೆ ಎಂದೂ ಸಂಸ್ಥೆ ತಿಳಿಸಿದೆ.
 
ಕೋಟ್ಯಧಿಪತಿ ಲಕ್ಷ್ಮೀ ಮಿತ್ತಲ್‌ ಒಡೆತನದ ಸಂಸ್ಥೆಯು ವಾರ್ಷಿಕ 60 ಲಕ್ಷ  ಟನ್‌ಗಳಷ್ಟು ಉಕ್ಕು ತಯಾರಿಸುವ ಸ್ಥಾವರ ಸ್ಥಾಪಿಸಲು 2010ರಲ್ಲಿ ರಾಜ್ಯ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿತ್ತು.  
 
ಬಳ್ಳಾರಿ ಜಿಲ್ಲೆಯ ಕುಡಿತಿನಿ ಬಳಿ ಈ  ಸ್ಥಾವರ ಅಸ್ತಿತ್ವಕ್ಕೆ ಬರಬೇಕಾಗಿತ್ತು. ದಶಕ ಕಳೆದರೂ ಒಡಿಶಾ ಮತ್ತು ಜಾರ್ಖಂಡ್‌ ರಾಜ್ಯಗಳಲ್ಲಿ  ಉಕ್ಕು 
ಸ್ಥಾವರ ಸ್ಥಾಪಿಸಲು ಅರ್ಸೆಲ್ಲರ್‌ ಮಿತ್ತಲ್‌ ಸಂಸ್ಥೆಯು ವಿಫಲವಾಗಿತ್ತು.  ನಂತರ ಕರ್ನಾಟಕ ರಾಜ್ಯ ಸರ್ಕಾರದ ಜತೆ ಉಕ್ಕು ಸ್ಥಾವರ ಸ್ಥಾಪಿಸಲು ಒಪ್ಪಂದ ಮಾಡಿಕೊಂಡಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.