ADVERTISEMENT

ವಾರಸುದಾರರೇ ಇಲ್ಲ ಕೋಟ್ಯಂತರ ತೆರಿಗೆ ಹಣಕ್ಕೆ!

ಅರುಣಾ ಎಂ.ಪಿ.
Published 31 ಮಾರ್ಚ್ 2015, 19:30 IST
Last Updated 31 ಮಾರ್ಚ್ 2015, 19:30 IST

‘ಮಸಣಕ್ಕೆ ಹೋದ ಹೆಣ, ಸುಂಕದವರಿಗೆ ಜಮಾ ಆದ ಹಣ... ಈ ಎರಡೂ ಒಂದೇ..., ಎಂದಿಗೂ ಮರಳಿ ಬಾರವು’...

ಇದು ಜನರ ನಡುವೆ ಆಗೀಗ ವಿನಿಮಯವಾಗುವ ಅನುಭವದ ನುಡಿ. ಆದರೆ, ದೇಶದ ಆದಾಯ ತೆರಿಗೆ ಇಲಾಖೆಗೆ ಜಮಾ ಆದ ಮೊತ್ತ ಹೆಚ್ಚುವರಿಯದಾಗಿದ್ದರೆ ಖಂಡಿತವಾಗಿಯೂ ತೆರಿಗೆದಾರರಿಗೆ ಮರಳಿ ಬರುತ್ತಿದೆ. ಆದರೆ, ಅದಕ್ಕಾಗಿ ಸಮರ್ಪಕವಾದ ಲೆಕ್ಕವನ್ನು  ತೆರಿಗೆ ಇಲಾಖೆಗೆ ನೀಡಬೇಕಾದ ಜವಾಬ್ದಾರಿ ತೆರಿಗೆದಾರರದೇ ಆಗಿದೆ. ತೆರಿಗೆದಾರರ ವಾರ್ಷಿಕ ಆದಾಯದಲ್ಲಿ ಮೂಲದಲ್ಲಿಯೇ ಕಡಿತ ವಾಗಿರುವ ತೆರಿಗೆ (ಟಿಡಿಎಸ್) ಮೊತ್ತದಲ್ಲಿನ ಹೆಚ್ಚುವರಿ ಹಣ ಭಾರಿ ಪ್ರಮಾಣದಲ್ಲಿ ತೆರಿಗೆ ಇಲಾಖೆಯಲ್ಲಿಯೇ ಕೊಳೆಯುತ್ತ ಬಿದ್ದಿದೆ. ಈ ಅಂಶವನ್ನು ಬೆಂಗಳೂರಿನಲ್ಲಿರುವ ಆದಾಯ ತೆರಿಗೆ ಇಲಾಖೆಯ ‘ಕೇಂದ್ರೀಕೃತ ಸಂಸ್ಕರಣಾ ಕೇಂದ್ರ’ದ (ಸಿಪಿಸಿ) ಅಂಕಿ ಅಂಶಗಳೇ ದೃಢಪಡಿಸುತ್ತವೆ.

ತೆರಿಗೆ ಇಲಾಖೆ ಅಧಿ­ಕಾರಿಗಳು ನೀಡಿರುವ ಹೇಳಿಕೆಯೂ ಜನರ ಆಡುನುಡಿಯನ್ನು ಸಾಬೀತುಪಡಿಸು­ವಂತಿಯೇ ಇದೆ. ಹಾಗಾದರೆ ತೆರಿಗೆ ಇಲಾಖೆಯಲ್ಲಿ ವಾರಸುದಾರರಿಲ್ಲದೇ ಉಳಿದಿ ರುವ ಕೋಟ್ಯಂತರ ರೂಪಾಯಿ ಹಣದ ಒಡೆಯರು ಯಾರು? ಹಣಕಾಸು ವರ್ಷದ ಅಂತ್ಯದೊಳಗೆ ಅಥವಾ ಆದಾಯ ಮತ್ತು ವಿನಿಯೋಜನೆಯ ಸರಿಯಾದ ಲೆಕ್ಕಪತ್ರ ವಿವರಗಳನ್ನು (ಉದಾ: ವೇತನದಾರರು ಫಾರ್ಮ್‌ 16 ಆಧರಿಸಿದ ರಿಟರ್ನ್‌) ಜುಲೈ 31 ರೊಳಗೆ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಬೇಕು.

ಆಗ, ಅವರ ವಾರ್ಷಿಕ ಆದಾಯದ ಮೂಲದಿಂದಲೇ ಕಡಿತವಾಗಿರುವ ತೆರಿಗೆಯು ಹೆಚ್ಚಿನ ಪ್ರಮಾಣದ್ದಾಗಿದ್ದರೆ ಅಷ್ಟು ಮೊತ್ತ ತೆರಿಗೆದಾರರ ಬ್ಯಾಂಕ್‌ ಖಾತೆಗೆ ಅಥವಾ ಚೆಕ್‌ ಮೂಲಕ ಮರು ಪಾವತಿಯಾಗುತ್ತದೆ. ಆದರೆ, ರಿಟರ್ನ್‌ ಸಲ್ಲಿಸುವಾಗ ಆದಾಯ ಮತ್ತು ಹೂಡಿಕೆ ಕುರಿತ ಸಮರ್ಪಕ ಮಾಹಿತಿಯನ್ನು ಬಹಳಷ್ಟು ಮಂದಿ ನೀಡದಿರುವುದ ರಿಂದಲೇ ತೆರಿಗೆದಾರರಿಗೆ ಮರು ಪಾವತಿಯಾಗ­ಬೇಕಿದ್ದ ಕೋಟ್ಯಂ­ತರ ರೂಪಾಯಿ ಹಣ ತೆರಿಗೆ ಇಲಾಖೆಯಲ್ಲಿಯೇ ಉಳಿದುಬಿಟ್ಟಿದೆ.

ಇದು 16 ಲಕ್ಷ ತೆರಿಗೆದಾರರ ಹಣ
ಬೆಂಗಳೂರಿನ ಸಿಪಿಸಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ  16 ಲಕ್ಷ ತೆರಿಗೆದಾರರಿಗೆ ಮರುಪಾವತಿ ಆಗಬೇಕಾದ ಅಂದಾಜು ₹2 ಸಾವಿರ ಕೋಟಿ ಹಣ ಹೀಗೆ ಉಳಿದುಕೊಂಡಿದೆ. ಇದು ಸಕಾಲಕ್ಕೆ ವಿಲೇವಾರಿ ಯಾಗ­ದಿದ್ದರೆ ಮುಂಬರುವ ದಿನಗಳಲ್ಲಿ ಇದರ ಪ್ರಮಾಣ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆಯೂ ಇದೆ. ತೆರಿಗೆದಾರರು ಕಾಗದ ರೂಪದಲ್ಲಿ ಅಥವಾ ಆನ್‌ಲೈನ್ ಮೂಲಕ ಸಲ್ಲಿಸುವ ವಾರ್ಷಿಕ ಆದಾಯ ಮತ್ತು ಹೂಡಿಕೆಯ ವಿವರಗಳನ್ನು ವಿದ್ಯುನ್ಮಾನ ವ್ಯವಸ್ಥೆಯಲ್ಲಿ ದಾಖಲಿಸಿ (ಇ–ಫೈಲಿಂಗ್‌) ಸಂಸ್ಕರಿಸುವ ಕೆಲಸವನ್ನು ಈ ‘ಸಿಪಿಸಿ’ ಮಾಡುತ್ತಿದೆ. 

ಕೆಲವು ಪ್ರಕರಣಗಳಲ್ಲಿ ತೆರಿಗೆ ಇಲಾಖೆಯು ಕೇಳುವ ಪೂರಕ ಮಾಹಿತಿಗಳನ್ನು ಒದಗಿಸದೇ ಇರುವ ಕಾರಣಕ್ಕಾಗಿ, ಇಲ್ಲವೇ ದೋಷ­ಪೂರ್ಣ ಮಾಹಿತಿ ನೀಡಿದ್ದಕ್ಕಾಗಿ ಈ ಹೆಚ್ಚುವರಿ ತೆರಿಗೆ ಹಣ ಸೇರಬೇಕಾದ­ವರ ಕೈ ಸೇರದೇ  ಇಲಾಖೆಯ ಲ್ಲಿಯೇ ಉಳಿಯುತ್ತದೆ. ಅಚ್ಚರಿ ಎಂದರೆ, ಇಷ್ಟೊಂದು ದೊಡ್ಡ ಮೊತ್ತ ಇಲಾಖೆ ಖಜಾನೆಯಲ್ಲಿ ಬಾಕಿಯಾಗಿದ್ದರೂ ಮರುಪಾವತಿ ಕೋರಿ ಈವರೆಗೂ ಯಾವ ತೆರಿಗೆದಾರರೂ ಮುಂದೆ ಬಂದಿಲ್ಲ! ಹಾಗಾಗಿ ಇತ್ಯರ್ಥವಾಗದೇ ಇರುವ ತೆರಿಗೆ ಪ್ರಕರಣಗಳ ಲೆಕ್ಕಕ್ಕೆ ಸೇರುವ ಈ ಹಣ ವನ್ನು ಕಾಯುತ್ತಾ ಕೂರುವ ಹೊಣೆಯೂ ತೆರಿಗೆ ಇಲಾಖೆ ಹೆಗಲೇರಿದೆ.

‘ನಾವು ಕೇಳುವ ಸೂಕ್ತ ಮಾಹಿತಿ ಸಲ್ಲಿಸಿ ಈ  ಹಣವನ್ನು ಮರಳಿ ಪಡೆಯು­ವಂತೆ ಸೂಚಿಸಿದರೂ ಯಾವುದೇ ಪ್ರಯೋಜ­ನವಾಗಿಲ್ಲ’ ಎನ್ನುತ್ತಾರೆ    ಇಲಾಖೆಯ ಹಿರಿಯ ಅಧಿಕಾರಿ. ಲೋಪದೋಷ ಸರಿಪಡಿಸಿ ಮತ್ತೊಮ್ಮೆ ಹೊಸದಾಗಿ ಮಾಹಿ­­ತಿ ನೀಡಿದ ತೆರಿಗೆದಾರರಿಗೆ ಇಲಾ­ಖೆ ಈಗಾಗಲೇ ಲಕ್ಷಾಂತರ ರೂಪಾಯಿ ಹಿಂದಿರುಗಿಸಿದೆ. ಇದರ ಹೊರತಾಗಿ­ಯೂ ಮಿಕ್ಕಿರುವ ಹಣವನ್ನು ಮರುಪಾವತಿ ಮಾಡಲು ಇಲಾಖೆ  ಪ್ರಯತ್ನ ಮುಂದುವರಿಸಿದೆ ಎನ್ನುತ್ತಾರೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು.

ಆದಾಯ ತೆರಿಗೆದಾರರಿಗೆ ತಮ್ಮ ಹಣ ಮರಳಿ ಪಡೆಯಲು ಅನು ಕೂಲವಾಗುವ ನಿಟ್ಟಿನಲ್ಲಿ ಇಲಾಖೆ ತನ್ನ ಪೋರ್ಟಲ್‌ನಲ್ಲಿ  ಪಟ್ಟಿ­ಯನ್ನು ಪ್ರಕಟಿಸಿದೆ. ಪಟ್ಟಿಯಲ್ಲಿ ಹೆಸರಿ­ರುವ ತೆರಿಗೆದಾ­ರರು ಸಮರ್ಪಕ ಮಾಹಿತಿ ನೀಡಿದರೆ ಅವರ ಆದಾಯದ ಲೆಕ್ಕದಿಂದ ಹೆಚ್ಚುವರಿಯಾಗಿ ಕಡಿತವಾಗಿರುವ ಹಣ ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ­ಯಾಗುತ್ತದೆ ಎನ್ನುತ್ತಾರೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು.

ರಿಟರ್ನ್ಸ್‌ ಮತ್ತಷ್ಟು ಸುಲಭ
ತೆರಿಗೆ ಪಾವತಿ ವಿವರ ಸಲ್ಲಿಕೆ     ಸಂಕೀರ್ಣ ಪ್ರಕ್ರಿಯೆ ಎಂಬುವುದು ಜನಸಾಮಾನ್ಯರಲ್ಲಿ ಮೊದಲಿನಿಂದಲೂ ಬೇರೂರಿರುವ ಬಲವಾದ ನಂಬಿಕೆ. ಗಣಿತಕ್ಕಿಂತ ಕಠಿಣ ಮತ್ತು ಸುಲಭವಾಗಿ ತಲೆಗೆ ಹೋಗದ ಜಂಜ­ಡಗಳ ವ್ಯವಹಾರವನ್ನು  ಸುಲಭಗೊಳಿಸಲು  ತೆರಿಗೆ ಇಲಾಖೆ ‘ಇ-ಪಾವತಿ’ ಸೇರಿದಂತೆ ಅನೇಕ ಸುಧಾರಣಾ ಕ್ರಮಗಳನ್ನು ಇತ್ತೀಚಿನ ವರ್ಷಗಳಲ್ಲಿ ಜಾರಿಗೆ ತಂದಿದೆ.

ಒಟಿಪಿ ಜಾರಿ ಚಿಂತನೆ
ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಹೊಸದಾದ, ಬಹಳ ಸುಲಭದ ಮಾರ್ಗಗಳನ್ನು ಜಾರಿಗೊಳಿಸಿದ ನಂತರವೂ ನಿಗದಿತ ಅರ್ಜಿ ನಮೂನೆಯಲ್ಲಿಯೇ ತೆರಿಗೆ ಪಾವತಿ ವಿವರ ಸಲ್ಲಿಸುವ ಹಳೆಯ ಪದ್ಧತಿ ಇನ್ನೂ ಸಂಪೂರ್ಣವಾಗಿ ನಿಂತಿಲ್ಲ. ಬಹಳಷ್ಟು ಮಂದಿ ತೆರಿಗೆ ಪಾವತಿದಾರರು ತಮ್ಮ ವಾರ್ಷಿಕ ಆದಾಯ ವಿವರಗಳ ಲೆಕ್ಕಪತ್ರ ವನ್ನು ಇಲಾಖೆ ಸಲ್ಲಿಸುವ ಸಲುವಾಗಿ ಲೆಕ್ಕಪರಿಶೋಧಕರು ಮತ್ತು ತೆರಿಗೆ ಸಲಹೆಗಾರರನ್ನು ಹುಡುಕಿಕೊಂಡು ಹೋಗುವ ಪರಿಪಾಠ ತಪ್ಪಿಲ್ಲ.

ಹಣಕಾಸು ವರ್ಷ ಪೂರ್ಣಗೊಂಡ ನಂತರ, ಅಂದರೆ ಮುಂದಿನ ಜುಲೈ 31ಕ್ಕೂ ಮುನ್ನ ವಾರ್ಷಿಕ ಆದಾಯದ ವಿವರಗಳನ್ನು ಆನ್‌ಲೈನ್‌ ಮೂಲಕ ತೆರಿಗೆ ಇಲಾಖೆಗೆ ಸಲ್ಲಿಸಿದ ನಂತರ ತೆರಿಗೆದಾರರ ಇ-ಮೇಲ್ ವಿಳಾಸಕ್ಕೆ ಬರುವ ಸ್ವೀಕೃತಿ ಪತ್ರವನ್ನು ಎ-4 ಹಾಳೆ­ಯಲ್ಲಿ ಮುದ್ರಿಸಿ ಕೊಳ್ಳಬೇಕು. ನಂತರ ಸಹಿ ಹಾಕಿ ಬೆಂಗಳೂರಿ­ನಲ್ಲಿರುವ ಆದಾಯ ತೆರಿಗೆ ಇಲಾಖೆಯ ಕೇಂದ್ರೀಕೃತ ಸಂಸ್ಕರಣಾ  ಕೇಂದ್ರಕ್ಕೆ (ಸಿಪಿಸಿ) ಅಂಚೆಯಲ್ಲಿ ಕಳುಹಿಸಬೇಕು. ಇದು ಸದ್ಯದ ಕ್ರಮ.

ಆದರೆ, ಈ ಸ್ವೀಕೃತಿ ಪತ್ರಗಳು ಬಹಳಷ್ಟು ಬಾರಿ ಕೇಂದ್ರೀಕೃತ  ಸಂಸ್ಕರಣಾ  ಕೇಂದ್ರವನ್ನು ತಲುಪದೇ ಇರುವ ಸಂಭವವಿರುತ್ತದೆ. ಹಾಗಾಗಿ, ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಸಿದ್ದಕ್ಕೆ ಪ್ರತಿಯಾಗಿ ತೆರಿಗೆದಾರ ರಿಂದ ಸ್ವೀಕೃತಿ ಪತ್ರವೇ ಬಂದಿಲ್ಲ ಎಂದು ತೆರಿಗೆ ಇಲಾಖೆ ಅಧಿಕಾರಿಗಳು ಹೇಳುವುದು ಸಾಮಾನ್ಯವಾಗಿತ್ತು. ಈ ಬಗ್ಗೆ ತೆರಿಗೆದಾರರ ದೂರು ಹೆಚ್ಚಿದ್ದರಿಂದ ಎಚ್ಚೆತ್ತ  ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿ ಡಿಟಿ), ಈ ಜಂಜಡಗಳಿಂದ ತೆರಿಗೆ ಪಾವತಿದಾರರಿಗೆ ಮುಕ್ತಿ ನೀಡಲು ಒಂದು ಬಾರಿ ಮಾತ್ರ ಉಪಯೋಗಿಸುವ ಪ್ರತ್ಯೇಕ ಪಾಸ್‌ವರ್ಡ್ ಬಳಕೆ (ಒಟಿಪಿ–ಒನ್‌ ಟೈಮ್‌ ಪಾಸ್‌ವರ್ಡ್‌) ಜಾರಿಗೊಳಿಸಲು ಮುಂದಾಗಿದೆ.

ಆನ್‌ಲೈನ್‌ ಹಣಕಾಸು ವಹಿವಾಟು ಭದ್ರತೆ ಬಗ್ಗೆ ಶಂಕೆಗಳು ಹೆಚ್ಚಾದಾಗ  ಎಚ್ಚೆತ್ತುಕೊಂಡ ಬ್ಯಾಂಕಿಂಗ್‌ ಕ್ಷೇತ್ರವು ಗ್ರಾಹಕರ ಸುರಕ್ಷತೆ ದೃಷ್ಟಿ­ಯಿಂದ ‘ಒಟಿಪಿ’ ಕಡ್ಡಾಯಗೊಳಿಸಿದ ರೀತಿಯಲ್ಲಿಯೇ ತೆರಿಗೆ ಇಲಾಖೆ ಕೂಡ ಈ ವ್ಯವಸ್ಥೆ ಜಾರಿಗೆ ಕೈ ಹಾಕಿದೆ. ಸ್ವೀಕೃತಿ ಪತ್ರ ರವಾನಿಸುವ ಜಂಜಾಟ ತಪ್ಪಿಸಲು  ತೆರಿಗೆದಾರರಿಗೆ ಒಟಿಪಿ ನೀಡುವ ಬಗ್ಗೆ ಈಗಾಗಲೇ ಕೇಂದ್ರೀಯ ನೇರ ತೆರಿಗೆಗಳ ಮಂಡಳಿಗೆ ನೀಲನಕ್ಷೆ ಕಳುಹಿಸಿಕೊಡಲಾಗಿದೆ ಎನ್ನುತ್ತಾರೆ ಸಿಪಿಸಿಯ ನಿರ್ದೇಶಕ ಮತ್ತು ತೆರಿಗೆ ಇಲಾಖೆ ಆಯುಕ್ತ ಆರ್‌.ಕೆ.ಮಿಶ್ರಾ. ತೆರಿಗೆ ಪಾವತಿ ವಿವರ ಸಲ್ಲಿಕೆ ಅರ್ಜಿಯಲ್ಲಿ ಈ ಮೊದಲು ದೂರ ವಾಣಿ ಸಂಖ್ಯೆ ಮತ್ತು ಇ–ಮೇಲ್ ವಿಳಾಸ ನಮೂದಿಸಲು ಜಾಗ ಬಿಡ ಲಾಗಿತ್ತು. ಹೊಸ ಅರ್ಜಿಯಲ್ಲಿ  ಆಧಾರ್‌ ಸಂಖ್ಯೆ ನಮೂದಿಸಲು ಪ್ರತ್ಯೇಕ ಕಾಲಂ  ನೀಡಲಾಗಿದೆ. ಇದು ಒಟ್ಟಾರೆ ಪ್ರಕ್ರಿಯೆ ಸರಳಗೊಳಿಸುತ್ತದೆ.

ಇ-ಪಾವತಿ ವಿಧಾನ ತ್ವರಿತವಾಗಿ ನಡೆಯುವುದರಿಂದ ತೆರಿಗೆ ಪಾವತಿ ಹಾಗೂ ಹಣ ಮರು ಪಾವತಿ ಸಹ ಕೇವಲ 89 ದಿನಗಳ ಲ್ಲಿಯೇ ನಡೆಯುತ್ತದೆ. ಈ ಮೊದಲು ಇದಕ್ಕಾಗಿ 15ರಿಂದ 18 ತಿಂಗಳು ಗಳೇ ಬೇಕಾಗುತ್ತಿತ್ತು. ಹೆಚ್ಚುವರಿಯಾಗಿ ಕಡಿತವಾದ ತೆರಿಗೆಯ ಮರುಪಾವತಿ ಶೀಘ್ರ ವಾಗಿ ನಡೆಯುವುದರಿಂದ ಜನರು, ಈಗ ಸರಳವಾದ ಇ-ಪಾವತಿ ವಿಧಾನದತ್ತ ಆಕರ್ಷಿತರಾಗುತ್ತಿದ್ದಾರೆ. ಹಾಗಾಗಿ, ಮರು ಪಾವತಿ ಅವಧಿಯನ್ನು ಒಂದು ತಿಂಗಳಿಗೆ ತಗ್ಗಿಸುವ ಆಲೋಚನೆ ತೆರಿಗೆ ಇಲಾಖೆಯದಾಗಿದೆ. ಇ–ಪಾವತಿ ವಿಧಾನ ಸುಲಭವಾಗಿದ್ದು ಪೂರ್ಣ ಬೆಂಗಳೂರಿ­ನಲ್ಲಿ ಕೇಂದ್ರೀಕೃತ­ವಾಗಿರು­ವುದರಿಂದ ಆದಾಯ ತೆರಿಗೆ ಇಲಾಖೆ ಸಿಬ್ಬಂದಿಯ ಕೆಲಸದ ಹೊರೆಯನ್ನೂ ಕಡಿಮೆ ಮಾಡುತ್ತದೆ. 

ವಂಚಕರಿಂದ ₹3,569 ಕೋಟಿ ಸಂಗ್ರಹ
ಎರಡು ವರ್ಷಗಳ ಹಿಂದೆ ಜಾರಿಗೆ ತಂದ ‘ತೆರಿಗೆಗಳ್ಳರ ಪತ್ತೆ ಮತ್ತು ನಿರ್ವಹಣೆ ವ್ಯವಸ್ಥೆ’ ಮೂಲಕ 20 ಲಕ್ಷ ತೆರಿಗೆ ವಂಚಕರನ್ನು ಪತ್ತೆ ಹಚ್ಚಿರುವ ಇಲಾಖೆ ಪ್ರಸಕ್ತ ಹಣಕಾಸು ವರ್ಷದಲ್ಲಿ ₹3,569 ಕೋಟಿಗ ಳಷ್ಟು ತೆರಿಗೆ ಸಂಗ್ರಹಿಸಿದೆ. ಸರ್ಕಾರಕ್ಕೆ ತೆರಿಗೆ ವಂಚಿಸಿದ  ಅನೇಕ ಸೂಕ್ಷ್ಮ ಪ್ರಕರಣಗಳನ್ನು ಹೊಸ ವಿಧಾನದ ಮೂಲಕ ಪತ್ತೆ ಹಚ್ಚಿದ ತೆರಿಗೆ ಇಲಾಖೆ 20 ಲಕ್ಷ ತೆರಿಗೆ ವಂಚಕರಿಗೆ ನೋಟಿಸ್‌ ನೀಡಿದೆ.  ಅದರ ಬೆನ್ನಲ್ಲೇ ಎಚ್ಚೆತ್ತ 8,57,218 ಜನರು ತೆರಿಗೆ ಪಾವತಿ ಮಾಹಿತಿಯನ್ನು ಸಲ್ಲಿಸಿದ್ದಾರೆ. ತೆರಿಗೆ ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚುವುದಕ್ಕಾಗಿಯೇ ತೆರಿಗೆ ಇಲಾಖೆ   ಪ್ರತ್ಯೇಕ ತಂಡಗಳನ್ನು ರಚಿಸಿದೆ. ತೆರಿಗೆ ವಂಚನೆ, ಕಪ್ಪುಹಣ, ಸಾಗರೋತ್ತರ ವಾಣಿಜ್ಯ ವ್ಯವಹಾರಗಳತ್ತ ಈ ತಂಡಗಳು ಕಣ್ಣಿಡಲಿವೆ.

ಪ್ರತಿ ಹಣಕಾಸಿನ ವಹಿವಾಟಿನ ಮೇಲೆ ನಿಗಾ ಇಡಲು ಮತ್ತು ತೆರಿಗೆ ವಂಚನೆ ತಪ್ಪಿಸಲು ಇಲಾಖೆ ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ಪಾನ್‌ಕಾರ್ಡ್‌ ವಿತರಿಸುತ್ತಿದೆ. ಇಲ್ಲಿವರೆಗೆ 21.81 ಕೋಟಿ ಪಾನ್‌ ಕಾರ್ಡ್‌ ವಿತರಿಸಲಾಗಿದ್ದು,  ಹಣಕಾಸು ವಹಿವಾಟಿಗೆ ಈ ವೈಯಕ್ತಿಕ ಖಾತೆ ಸಂಖ್ಯೆಯನ್ನು ನಮೂದಿಸುವುದನ್ನು ಕಡ್ಡಾಯಗೊಳಿಸಿದೆ.
***
ಇ–ಬಿಜಿನೆಸ್‌ ಪೋರ್ಟಲ್
ವಾಣಿಜ್ಯ ಮತ್ತು ವಹಿವಾಟಿಗೆ ಸಂಬಂಧಿಸಿದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಒಟ್ಟು 11 ಸೇವೆಗಳನ್ನು ಇ–ಬಿಜ್‌ (ಇ–ಬಿಜಿನೆಸ್‌) ಎಂಬ ಒಂದೇ ಪೋರ್ಟಲ್‌ ಅಡಿ ತರುವ ಯತ್ನಗಳೂ ನಡೆದಿವೆ. ಉದ್ಯಮಿಗಳು  ಇ–ಬಿಜ್ ಪೊರ್ಟಲ್‌ ಮೂಲಕವೇ ಪಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹೊಸ ಸೌಲಭ್ಯ ಉದ್ಯಮಿಗಳು ಯಾವುದೇ ಅಡೆತಡೆಗ­ಳಿಲ್ಲದೆ ಸುಲಭವಾಗಿ ವಹಿವಾಟು ನಡೆಸಲು ವೇದಿಕೆ ಒದಗಿಸಲಿದೆ. ದಿನದ 24 ತಾಸು ಪಾನ್‌ಕಾರ್ಡ್‌ ಅರ್ಜಿ, ಪರವಾನಗಿ, ಹಣ ಪಾವತಿ ಸೇರಿದಂತೆ ಒಟ್ಟು 11 ಸೇವೆಗಳನ್ನು ಈ ಪೊರ್ಟಲ್ ಒದಗಿಸುತ್ತದೆ.
***
ಆದಾಯ ತೆರಿಗೆ ಇಲಾಖೆ ಸೌಲಭ್ಯ
*ಆದಾಯ ತೆರಿಗೆ ಇಲಾಖೆಯ ವೆಬ್‌ಪೋರ್ಟಲ್‌ www.incometaxindiaefiling.gov.in ಲಾಗ್‌ ಆನ್‌ ಆಗಿ  my account ಲಿಂಕ್ ಕ್ಲಿಕ್‌ ಮಾಡಿದರೆ  ವಿವರ ಲಭ್ಯ
*ತೆರಿಗೆದಾರರು ಹಳೆಯ ಪದ್ಧತಿಯಲ್ಲಿ ಸಲ್ಲಿಸುವ ವಿವರಗಳ ಡಿಜಟಲೀಕರಣಕ್ಕೆ ಸಿಪಿಸಿ ಕ್ರಮ
*ದಿನವಿಡೀ ಸೇವೆ ಒದಗಿಸಲು ಕಾಲ್‌ಸೆಂಟರ್‌ ಮೇಲ್ದರ್ಜೆಗೆ
*ಆನ್‌ಲೈನ್ ಮಾಹಿತಿ ಸಂಸ್ಕರಣೆ ಅವಧಿ 60 ದಿನದಿಂದ 15 ದಿನಕ್ಕೆ ಇಳಿಕೆ
*ಪ್ರಸಕ್ತ ಹಣಕಾಸು ವರ್ಷದಲ್ಲಿ ಮೂರು ಕೋಟಿ ತೆರಿಗೆ ಲೆಕ್ಕಪತ್ರ ಸಂಸ್ಕರಣೆ
*ಮೂರ್ನಾಲ್ಕು ವರ್ಷ ಹಿಂದೆ   ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಿದ ಮೂರು ಕೋಟಿ ತೆರಿಗೆ ಪಾವತಿದಾರರ ಪೈಕಿ 91 ಲಕ್ಷ ಮಂದಿ ಇ ಪಾವತಿ ಮಾಡಿದ್ದರು.
*ಈ ವರ್ಷ ತೆರಿಗೆ ಪಾವತಿಸುವವರ ಪೈಕಿ ಶೇ 50ರಷ್ಟು ಮಂದಿ ಇ-ಪಾವತಿ ಸೌಲಭ್ಯ ಬಳಸುವ ನಿರೀಕ್ಷೆ
***
ಇ–ಫೈಲಿಂಗ್ ಹೇಗೆ?
ವಾರ್ಷಿಕ ₹5 ಲಕ್ಷ ಅಥವಾ  ಅದಕ್ಕಿಂತ ಹೆಚ್ಚಿನ ವರಮಾನವಿ­ರುವವರು ಆನ್‌ಲೈನ್‌ ಮೂಲಕ ಆದಾಯ ತೆರಿಗೆ ವಿವರ ಸಲ್ಲಿಸಬೇಕಾದ್ದು ಕಡ್ಡಾಯ. ₹5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿ­ರುವವರಿಗೂ ಆನ್‌ಲೈನ್ ಮೂಲಕ ಮಾಹಿತಿ ಸಲ್ಲಿಕೆಗೆ (ಇ-ಫೈಲಿಂಗ್‌) ಅವಕಾಶವಿದೆ.

ನೌಕರರು ತಾವು ಕೆಲಸ ಮಾಡುವ ಸಂಸ್ಥೆಯಿಂದ ಆದಾಯ ತೆರಿಗೆ ಲೆಕ್ಕಪತ್ರ ವಿವರದ ಅರ್ಜಿ ಸಂಖ್ಯೆ 16 (ಫಾರ್ಮ್‌ ನಂ. 16) ಮಾದರಿಯನ್ನು ‘ಪಿ.ಡಿ.ಎಫ್’ ರೂಪದಲ್ಲಿ ಪಡೆದು ಇಂಟರ್‌ನೆಟ್ ಮೂಲಕ easyitfiling.com ವೆಬ್‌ಸೈಟ್‌ಗೆ  ಅಪ್‌ಲೋಡ್ ಮಾಡಿದರೆ ಆ ಅಂತರ್ಜಾಲ ತಾಣವೇ ಸ್ವಯಂಚಾಲಿತವಾಗಿ ತೆರಿಗೆ ಲೆಕ್ಕಹಾಕಿ ಅರ್ಜಿದಾರರ ಲೆಕ್ಕಪತ್ರವನ್ನು ಆದಾಯ ತೆರಿಗೆ ಕಚೇರಿಯ ಸಂಬಂಧಿಸಿದ ವಿಭಾಗಕ್ಕೆ ರವಾನಿಸುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT