ADVERTISEMENT

ವಿಪ್ರೊ ಲಾಭ ರೂ.2,239 ಕೋಟಿ

4ನೇ ತ್ರೈಮಾಸಿಕ ಶೇ 29 ಪ್ರಗತಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2014, 19:30 IST
Last Updated 17 ಏಪ್ರಿಲ್ 2014, 19:30 IST

ಬೆಂಗಳೂರು (ಪಿಟಿಐ): ದೇಶದ ಸಾಫ್ಟ್‌ವೇರ್‌ ಸೇವೆಗಳ ರಫ್ತು ಕ್ಷೇತ್ರದ ಮೂರನೇ ಅತಿದೊಡ್ಡ ಕಂಪೆನಿ ‘ವಿಪ್ರೊ’ ಪ್ರಸಕ್ತ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ ರೂ.2,239 ಕೋಟಿ ನಿವ್ವಳ ಲಾಭ ಗಳಿಸುವುದರೊಂದಿಗೆ ಶೇ 28.8ರಷ್ಟು ಪ್ರಗತಿ ದಾಖಲಿಸಿದೆ.

2012; 13ನೇ ಹಣಕಾಸು ವರ್ಷದ ಜನವರಿ ಮಾರ್ಚ್‌ ತ್ರೈಮಾಸಿಕದಲ್ಲಿ ವಿಪ್ರೊ ನಿವ್ವಳ ಲಾಭ ರೂ.1,728.70 ಕೋಟಿಯಷ್ಟಿತ್ತು.
ಬೆಂಗಳೂರಿನಲ್ಲಿನ ಕಂಪೆನಿಯ ಪ್ರಧಾನ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜಿ, 2013;14ನೇ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ ವರಮಾನ ರೂ.11,653 ಕೋಟಿ ಮುಟ್ಟಿದೆ (ಶೇ 21.70 ಏರಿಕೆ). ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ರೂ.9,613.10ರಷ್ಟಿತ್ತು ಎಂದು ವಿವರಿಸಿದರು.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ದಲ್ಲಿ(ಏಪ್ರಿಲ್‌ ಜೂನ್‌ ಅವಧಿಗೆ) ಕಂಪೆನಿ 171.50 ಕೋಟಿಯಿಂದ 175.50 ಕೋಟಿ ಡಾಲರ್‌ಗಳಷ್ಟು (ಸುಮಾರು ರೂ.10,530 ಕೋಟಿ)  ವರಮಾನ ಗಳಿಸುವ ನಿರೀಕ್ಷೆ ಇದೆ ಎಂದು ಮುನ್ನೋಟ ನೀಡಿದರು.

ಒಟ್ಟು ರೂ.8 ಲಾಭಾಂಶ ಪ್ರಕಟ
ಇದೇ ವೇಳೆ, ಪ್ರತಿ ಷೇರಿಗೆ ರೂ.5ರಷ್ಟು ಲಾಭಾಂಶವನ್ನೂ ಪ್ರಕಟಿಸಲಾಯಿತು. ಇದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ವಿಪ್ರೊ ಪ್ರತಿ ಷೇರಿಗೆ ಒಟ್ಟು ರೂ.8ರಷ್ಟು ಲಾಭಾಂಶ ನೀಡಿದಂತಾಗಿದೆ.

ಮಾ. 31ರ ವೇಳೆ ವಿಪ್ರೊದ ಮಾಹಿತಿ ತಂತ್ರಜ್ಞಾನ ಸೇವೆಗಳ ವಹಿವಾಟು ವಿಭಾಗ 1,46,053 ನೌಕರರನ್ನು ಹೊಂದಿತ್ತು.
ಷೇರು ಮೌಲ್ಯ ಶೇ 2.39 ಏರಿಕೆ

ಉತ್ತಮ ಫಲಿತಾಂಶದ ಕಾರಣ ವಿಪ್ರೊ ಷೇರುಗಳು ಗುರುವಾರದ ವಹಿವಾಟಿನಲ್ಲಿ ಶೇ 2.39ರಷ್ಟು ಮೌಲ್ಯ ಹೆಚ್ಚಿಸಿಕೊಂಡು ತಲಾ ರೂ.585.55ರ ದರದಲ್ಲಿ ಮಾರಾಟವಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.