ADVERTISEMENT

ಷೇರುಪೇಟೆಯಲ್ಲಿ ಮತ್ತೆ ಕುಸಿತ

ಜಿಡಿಪಿ, ತಯಾರಿಕಾ ವಲಯದ ಪ್ರಗತಿ ಇಳಿಕೆ ಪ್ರಭಾವ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2015, 19:35 IST
Last Updated 1 ಸೆಪ್ಟೆಂಬರ್ 2015, 19:35 IST

ಮುಂಬೈ (ಪಿಟಿಐ): ಮುಂಬೈ ಷೇರುಪೇಟೆಯಲ್ಲಿ ಮತ್ತೆ ಕರಡಿ ಕುಣಿತ ಆರಂಭವಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ‘ಜಿಡಿಪಿ’ ಕುಸಿತ ಕಂಡಿರುವುದು ಷೇರುಪೇಟೆಯ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ. ಮಂಗಳವಾರ ಸೂಚ್ಯಂಕ 587 ಅಂಶಗಳಷ್ಟು ಭಾರಿ ಕುಸಿತ ಕಂಡಿದ್ದು, ಇದು ಒಂದು ತಿಂಗಳ ಕನಿಷ್ಠ ಮಟ್ಟವಾದ 25,696  ಅಂಶ ಗಳಲ್ಲಿ ವಹಿವಾಟು ಅಂತ್ಯಗೊಳಿಸಿತು.

ದೇಶದ ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ) ಏಪ್ರಿಲ್‌–ಜೂನ್‌ ಅವಧಿಯಲ್ಲಿ ಶೇ 7.5ರಿಂದ ಶೇ 7ಕ್ಕೆ ಕುಸಿದಿದೆ. ಸೋಮವಾರದ ವಹಿವಾಟು ಅಂತ್ಯ ವಾದ ಬಳಿಕ ಈ ಅಂಕಿ–ಅಂಶ ಹೊರಬಿದ್ದಿದೆ. ಹೀಗಾಗಿ ಮಂಗಳವಾರ ಬಿಎಸ್‌ಇ ಸಂವೇದಿ ಸೂಚ್ಯಂಕ ಆರಂಭದಿಂದಲೂ ಸಾಕಷ್ಟು ಏರಿಳಿತಕ್ಕೆ ಒಳಗಾಯಿತು. ಮಧ್ಯಾಹ್ನದ ವಹಿವಾಟಿ ನಲ್ಲಿ 700 ಅಂಶಗಳವರೆಗೂ ಕುಸಿದಿತ್ತು.

ಇನ್ನು, ತಯಾರಿಕಾ ವಲಯದ ಜುಲೈ ತಿಂಗಳ ಪ್ರಗತಿ ಶೇ 52.7 ರಿಂದ ಶೇ 52.3ಕ್ಕೆ ಇಳಿದಿದೆ ಎಂದು ನಿಕೇಯ್‌ ಇಂಡಿಯಾ ಮ್ಯಾನ್ಯುಫ್ಯಾಕ್ಚರಿಂಗ್‌ ಪಿಎಂಐ ಸಮೀಕ್ಷಾ ವರದಿ ತಿಳಿಸಿದೆ. ಈ ಸಂಗತಿಯೂ ಸಹ ಸೂಚ್ಯಂಕದ ಕುಸಿತಕ್ಕೆ ಕಾರಣವಾಯಿತು.

ನಿಫ್ಟಿ 185 ಅಂಶ ಇಳಿಕೆ: ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ‘ನಿಫ್ಟಿ’ ಕೂಡ 185 ಅಂಶಗಳಷ್ಟು ಕುಸಿದು, 7,800 ಮಟ್ಟದಿಂದ ಕೆಳಗಿಳಿಯಿತು. ಚೀನಾದಲ್ಲಿ ತಯಾರಿಕಾ ವಲಯದ ಪ್ರಗತಿ ಮೂರು ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಇದು ಕೂಡ ಜಾಗತಿಕ ಷೇರುಪೇಟೆಯ ಮೇಲೆ ದೊಡ್ಡ ಮಟ್ಟದಲ್ಲಿ ಋಣಾತ್ಮಕ ಪ್ರಭಾವ ಬೀರಿದೆ.

ಜಾಗತಿಕ ವಿದ್ಯಮಾನಗಳ ಒತ್ತಡಕ್ಕೆ ಒಳಗಾದ ಹೂಡಿಕೆದಾರರು ಒಮ್ಮೆಲೆ ಷೇರು ಮಾರಾಟಕ್ಕೆ ಮುಗಿಬಿದ್ದ ಪರಿಣಾಮ ಬಿಎಸ್‌ಇ ಶೇ2.33ರಷ್ಟು ಇಳಿಕೆ ಕಂಡಿತು.  ಬ್ಯಾಂಕ್‌, ಲೋಹ, ರಿಯಲ್‌ ಎಸ್ಟೇಟ್‌ ವಲಯದ ಷೇರುಗಳು ಗರಿಷ್ಠ ಮಟ್ಟದಲ್ಲಿ (ಶೇ 4.15ರಷ್ಟು) ಹಾನಿ ಅನುಭವಿಸಿದವು. 

ಕೋಲ್‌ ಇಂಡಿಯಾ, ಎಕ್ಸಿಸ್‌ ಬ್ಯಾಂಕ್‌, ಹಿಂಡಾಲ್ಕೊ, ಬಿಎಚ್‌ಇಎಲ್‌, ಟಾಟಾ ಸ್ಟೀಲ್‌ ಕಂಪೆನಿಗಳ ಷೇರುಗಳು ನಷ್ಟದಲ್ಲಿ ವಹಿವಾಟು ನಡೆಸಿದವು ಜಾಗತಿಕ ಮಟ್ಟದಲ್ಲಿ, ಚೀನಾದ ಶಾಂಘೈ ಕಾಂಪೊಸಿಟ್‌ ಸೂಚ್ಯಂಕ ಶೇ 1.23 ರಷ್ಟು ಕುಸಿದರೆ, ಯೂರೋಪಿನ ಷೇರುಪೇಟೆಗಳೂ ಸಹ ಇಳಿಮುಖವಾಗಿಯೇ ವಹಿವಾಟು ಅಂತ್ಯಗೊಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.