ADVERTISEMENT

ಹುಳಗೋಳದ ಯುವಕನ ‘ಹೂಗ್ಲು’ ಕನಸು ನನಸು

ಸಂಧ್ಯಾ ಹೆಗಡೆ
Published 17 ಜನವರಿ 2017, 19:30 IST
Last Updated 17 ಜನವರಿ 2017, 19:30 IST
ಚಿಪ್ಸ್‌ ಮಿಕ್ಸಿಂಗ್ ಯಂತ್ರದೊಂದಿಗೆ ನವೀನ್ ಹೆಗಡೆ
ಚಿಪ್ಸ್‌ ಮಿಕ್ಸಿಂಗ್ ಯಂತ್ರದೊಂದಿಗೆ ನವೀನ್ ಹೆಗಡೆ   
ಹುಳಗೋಳದ ನವೀನ್ ಹೆಗಡೆ ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್ ಪದವೀಧರ. ಎಂಜಿನಿಯರಿಂಗ್ ಕೊನೆಯ ವರ್ಷದಲ್ಲಿರುವಾಗ 2013ರಲ್ಲಿ ಕಾಲೇಜ್‌ನಲ್ಲಿ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಅವರಿಗೆ ಜುವಾರಿ ಅಗ್ರೊ ಕೆಮಿಕಲ್ಸ್‌ನ ಎಡ್ವೆಂಡ್ಸ್ ಕಂಪೆನಿಯಲ್ಲಿ ಉದ್ಯೋಗ ಸಿಕ್ಕಿತು.
 
ಒಳ್ಳೆಯ ಪ್ಯಾಕೇಜ್‌ ಜೊತೆಗೆ ಉದ್ಯೋಗದ ಆಫರ್ ಲೆಟರ್ ಸಹ ಬಂತು. ಆದರೆ ಕಳ್ಳುಬಳ್ಳಿಯ ಸೆಳೆತ ನವೀನ್ ಅವರನ್ನು ಹಳ್ಳಿಯಲ್ಲಿ ಉದ್ದಿಮೆ ಸ್ಥಾಪಿಸಲು ಪ್ರೇರೇಪಿಸಿತು. ಕಂಪೆನಿಯ ಉದ್ಯೋಗ ಬೇಡವೆಂದು ನಿರ್ಧರಿಸಿದ ಅವರು ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಸೋಂದಾ ಕ್ರಾಸ್ ಸಮೀಪ ‘ಹೂಗ್ಲು’ ತಂಪು ಪಾನೀಯ ತಯಾರಿಕಾ ಘಟಕ ಪ್ರಾರಂಭಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. 
 
ತಂದೆ ಡಾ. ಜಿ.ವಿ. ಹೆಗಡೆ ಪಶುವೈದ್ಯ ವೃತ್ತಿಯಲ್ಲಿದ್ದ ಕಾರಣಕ್ಕೆ ನವೀನ್ , ಪ್ರಾಥಮಿಕ ಶಿಕ್ಷಣದಿಂದ ಎಂಜಿನಿಯರಿಂಗ್ ಪದವಿಯವರೆಗೆ ಶಿಕ್ಷಣ ಪೂರೈಸಿದ್ದು ಮೈಸೂರು, ಪುತ್ತೂರು, ತಿಪಟೂರು ಇನ್ನಿತರ ನಗರಗಳಲ್ಲಿ. ಬೇಸಿಗೆಯ ದೊಡ್ಡ ರಜೆ ಶುರುವಾದರೆ ಸಾಕು ಊರಿಗೆ ಬರಲು ಹಂಬಲಿಸುತ್ತಿದ್ದ ನವೀನ್, ಹುಳಗೋಳಕ್ಕೆ ಬಂದು ಅಜ್ಜ–ಅಜ್ಜಿ, ದೊಡ್ಡಪ್ಪ– ದೊಡ್ಡಮ್ಮರ ಜೊತೆ ಇರುತ್ತಿದ್ದ. ಊರಿಗೆ ಬಂದಾಗ ಬೆಟ್ಟ, ಗುಡ್ಡಗಳ ಸುತ್ತಾಟ, ಟ್ರೆಕ್ಕಿಂಗ್ ಹೋಗುತ್ತಿದ್ದ ಈತನಿಗೆ ಕಾಡಿನ ಮರ–ಗಿಡಗಳು ಮೂಲ ನೆಲದ ಸೆಳೆತವನ್ನು ಬೆಳೆಸಿದವು. 
 
‘ಕಾಡಿನಲ್ಲಿ ಅಲೆಯುವಾಗ ಮರುಗುಲು, ಕಿರು ಅರಣ್ಯ ಉತ್ಪನ್ನಗಳು ನನ್ನಲ್ಲಿ ವಿಶೇಷ ಕುತೂಹಲ ಮೂಡಿಸಿದ್ದವು. ಎಸ್ಸೆಸ್ಸೆಲ್ಸಿವರೆಗೆ ರಜೆಯಲ್ಲಿ ಊರಿಗೆ ಬಂದಾಗಲೆಲ್ಲ ಪ್ರಕೃತಿ ಸಂಸ್ಥೆಯ ಮಾಬ್ಲಣ್ಣ, ಪಾಂಡುರಂಗ ಹೆಗಡೆ ಅವರ ಜೊತೆ ಸೇರಿ ಕಾಡು ತಿರುಗುತ್ತಿದ್ದೆ. ನಂತರ ಎಂಜಿನಿಯರಿಂಗ್ ಓದಲು ಹೋದೆ. ಊರಿನ ಒಡನಾಟ ತುಸು ಕಮ್ಮಿಯಾಯಿತು. ಎಂಜಿನಿಯರಿಂಗ್ ಪದವಿ ಮುಗಿಯುವ ಹೊತ್ತಿಗೆ ಒಂದು ಪ್ರಾಜೆಕ್ಟ್ ಪಡೆದಿದ್ದೆ. ಅದು ಅಂತಿಮ ಹಂತದಲ್ಲಿದ್ದಾಗ ಅಕಸ್ಮಾತ್ ಒಮ್ಮೆ ಮಂಗಳೂರಿಗೆ ಹೋಗಿದ್ದೆ. ಅಲ್ಲಿರುವ ನನ್ನ ರಕ್ತ ಸಂಬಂಧಿ ಅಣ್ಣ ಶ್ರೀಧರ ಹೆಗಡೆ ಉದ್ಯಮವೊಂದನ್ನು ನಡೆಸುತ್ತಿದ್ದಾರೆ. ಅಣ್ಣನ ಮನೆಯಲ್ಲಿ ಉಭಯ ಕುಶಲೋಪರಿ ಹರಟೆ ಹೊಡೆಯುತ್ತಿರುವಾಗ ಉತ್ತರ ಕನ್ನಡದ ಕಾಡಿನ ಸಮೃದ್ಧ ಫಲ ಮುರುಗಲು (garcinia indica) ಹಣ್ಣನ್ನು ಯಾಕೆ ಸದ್ಬಳಕೆ ಮಾಡಿಕೊಳ್ಳಬಾರದೆಂಬ ಯೋಚನೆ ಬಂತು. ಅದರ ಮೂರ್ತರೂಪ ಇಂದು ‘ಹೂಗ್ಲು’ನಲ್ಲಿ ಸಾಕಾರಗೊಂಡಿದೆ’ ಎನ್ನುತ್ತಾರೆ ನವೀನ್. 
 
ನಾಲಿಗೆ ರುಚಿಗಷ್ಟೇ ಅಲ್ಲ ದೇಹಕ್ಕೆ ಹಿತ ನೀಡುವ ಮುರುಗಲು ಹಣ್ಣಿನ ಕೋಕಂ ಜ್ಯೂಸ್ ತಯಾರಿಸುವ ಘಟಕ ಸ್ಥಾಪನೆಗೆ ಸಿದ್ಧತೆ ನಡೆಯಿತು. ಕಾಡಿನಲ್ಲಿ ದೊರೆಯುವ ಹಣ್ಣನ್ನು ತಂದು ಸ್ವ್ಕ್ಯಾಷ್ ಅಥವಾ ಜ್ಯೂಸ್ ಸಿದ್ಧಪಡಿಸಬಹುದು. 
 
ಆದರೆ, ಇದು ಲಭ್ಯವಾಗುವುದು ಕೇವಲ ಎರಡು ತಿಂಗಳು ಮಾತ್ರ. ದೊಡ್ಡ ಬಂಡವಾಳ ಹೂಡಿ ಪ್ರಾರಂಭಿಸುವ ಉದ್ದಿಮೆಯನ್ನು ವರ್ಷದ ಇನ್ನುಳಿದ 10 ತಿಂಗಳು ನಡೆಸುವುದು ಹೇಗೆಂದು ಉಪಾಯ ಹುಡುಕಿದಾಗ ಹೂಗ್ಲು ‘ಕ್ರೇಜಿ ಕೋಕಂ’ ಜೊತೆಗೆ ‘ಗೂಗ್ಲಿ ಗೂಸ್ಬೆರಿ’, ‘ಚಿಲ್ಲಿ ಲೆಮನ್’, ‘ಗೋಲ್ ಗೋಲ್‌ಗಪ್ಪೆ’ ಜ್ಯೂಸ್‌ ತಯಾರಿಕೆ ಪ್ರಾರಂಭವಾಯಿತು ’ ಎಂದು ಅವರು ವಿವರಿಸುತ್ತಾರೆ.
 
ನೈಸರ್ಗಿಕ  ವಿಶೇಷತೆ
‘ನೈಸರ್ಗಿಕತೆಯೇ ನಮ್ಮ ಉತ್ಪನ್ನದ ವಿಶೇಷತೆ. ಪ್ರಕೃತಿಯಲ್ಲಿ ಸಿಗುವ ರಾಸಾಯನಿಕಮುಕ್ತ ಕಚ್ಚಾವಸ್ತುಗಳನ್ನು ಆಯ್ದುಕೊಂಡು ಉತ್ಪನ್ನಗಳನ್ನು ಸಿದ್ಧಪಡಿಸುತ್ತೇವೆ. ಹೀಗಾಗಿ ನಮ್ಮ ಇಂಡಸ್ಟ್ರಿಯಲ್ಲಿ ಪ್ರಿಸರ್ವೇಟಿವ್ (ಸಂರಕ್ಷಕ ವಸ್ತು) ನಿಷಿದ್ಧ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರ್ (ಐಐಎಚ್‌ಆರ್) ಈ ತಂತ್ರಜ್ಞಾನ ಕಲ್ಪಿಸಿದೆ’ ಎಂದು ಹೇಳುತ್ತಾರೆ.
 
ಅಂದಾಜು ₹ 45 ಲಕ್ಷ ಬಂಡವಾಳ ತೊಡಗಿಸಿರುವ ನವೀನ್ ಅವರ ‘ಐಟಿಓಆರ್ ಫುಡ್‌’ ತಯಾರಿಕಾ ಘಟಕ ಹುಳಗೋಳದಿಂದ 5 ಕಿ.ಮೀ ದೂರದ ಸೋಂದಾ ಕ್ರಾಸ್‌ನಲ್ಲಿದೆ. ಕೋಕಂ ಜ್ಯೂಸ್‌ನೊಂದಿಗೆ ಆರಂಭವಾದ ಉದ್ಯಮ ಬೆಳವಣಿಗೆ ಹೊಂದಿ ಒಂದೂವರೆ ವರ್ಷದಲ್ಲಿ ನಾಲ್ಕು ವಿಧದ ಜ್ಯೂಸ್, ಎರಡು ಬಗೆಯ ಚಿಪ್ಸ್‌ ತಯಾರಿಸುವ ಮಟ್ಟಕ್ಕೆ ತಲುಪಿದೆ. 
 
ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಮಾಡುವ ಪ್ರಯತ್ನ ನಡೆಯಿತು. ಒಗರು ರುಚಿಯ ಬೆಟ್ಟದ ನೆಲ್ಲಿಗಿಂತ ರತ್ನಾಗಿರಿಯ ದೊಡ್ಡ ನೆಲ್ಲಿ ಜ್ಯೂಸ್‌ಗೆ ಉಪಯುಕ್ತವಾಗಿದೆ. ಹೀಗಾಗಿ ಅಲ್ಲಿಂದ ಗೂಗ್ಲಿ ಗೂಸ್ಬೆರಿ ಜ್ಯೂಸ್‌ಗೆ ಕಚ್ಚಾವಸ್ತುಗಳನ್ನು ತರುತ್ತೇವೆ. ಶಿರಸಿ ತಾಲ್ಲೂಕಿನ ದೇವನಳ್ಳಿಯ ಸ್ವ ಸಹಾಯ ಗುಂಪಿನ ಮಹಿಳೆಯರು ಮುರುಗಲು ಹಣ್ಣಿನ ಹಂಗಾಮಿನಲ್ಲಿ 6–8 ಟನ್ ಕೋಕಂ ಸ್ವ್ಕ್ಯಾಷ್ ಸಿದ್ಧಪಡಿಸಿಕೊಡುತ್ತಾರೆ. ನಿಸರ್ಗದಲ್ಲಿ ಬೆಳೆದ ಕಚ್ಚಾವಸ್ತು ವರ್ಷವಿಡೀ ಸಂಗ್ರಹಿಸಿಟ್ಟು ಇಂಡಸ್ಟ್ರಿಯಲ್ಲಿ ಸಂಸ್ಕರಿಸಿ ಪ್ಯಾಕಿಂಗ್ ಮಾಡುತ್ತೇವೆ. ಬಾಳೆಹಣ್ಣಿನ ಜ್ಯೂಸ್‌ ಪ್ರಯೋಗ ಮಾಡಿದೆವು. ಗ್ರಾಹಕರು ಅಷ್ಟಾಗಿ ಇಷ್ಟಪಡಲಿಲ್ಲ. ಅದನ್ನು ಕೈಬಿಟ್ಟು ಈಗ ಕೋಕಂ, ನೆಲ್ಲಿಕಾಯಿ ಜೂಸ್‌ ಜೊತೆ ಚಿಲ್ಲಿ ಲೆಮನ್‌, ಗೋಲ್‌ಗಪ್ಪೆ ಪಾನಿ ಹೂಗ್ಲು ಉತ್ಪನ್ನವಾಗಿ ಮಾರುಕಟ್ಟೆ ಪ್ರವೇಶಿಸಿದೆ. ಶುದ್ಧ ಬೆಲ್ಲದಿಂದ ಮಾಡುವ ಗೋಲ್‌ಗಪ್ಪೆ ಕಟ್ಟಾಮೀಠಾ ರುಚಿ ಹೊಂದಿದೆ. ಇದರೊಂದಿಗೆ ಬಾಳೆಕಾಯಿ ಚಿಪ್ಸ್, ಪೊಟೆಟೊ (ಬಟಾಟೆ) ಚಿಪ್ಸ್ ತಯಾರಾಗುತ್ತವೆ ಎಂದು ಅವರು ಇಂಡಸ್ಟ್ರಿಯಲ್ಲಿ ತಯಾರಾಗುವ ಉತ್ಪನ್ನದ ಬಗ್ಗೆ ಹೇಳಿಕೊಳ್ಳುತ್ತಾರೆ. 
 
‘ಮಹಿಳೆಯರು ಮನೆಗೆಲಸ ಮುಗಿಸಿ ಬಿಡುವಿನ ವೇಳೆಯಲ್ಲಿ  ಕೋಕಂ ಜ್ಯೂಸ್ ಸಂಗ್ರಹಣೆ, ಬಾಳೆಕಾಯಿ ಸಿಪ್ಪೆ ಸುಲಿಯುವ ಕೆಲಸ ಮಾಡುತ್ತಾರೆ. 40ಕ್ಕೂ ಅಧಿಕ ಹಳ್ಳಿ ಮಹಿಳೆಯರಿಗೆ ಕಿರು ಆದಾಯ ನೀಡಿರುವ ಖುಷಿಯಿದೆ’ ಎಂದು ಹೇಳಲು ಅವರು ಮರೆಯಲಿಲ್ಲ. 
 
ಮಾರುಕಟ್ಟೆ ಸವಾಲು
‘ಉದ್ದಿಮೆಯಲ್ಲಿ ಎದುರಾಗುವ ಮುಖ್ಯ ಸವಾಲು ವಿತರಣೆ ಮತ್ತು ಮಾರುಕಟ್ಟೆ. ತಾಜಾತನ, ಶುದ್ಧತೆ ಕಾಪಾಡಿಕೊಂಡಾಗ ಸಹಜವಾಗಿಯೇ ಉತ್ಪಾದನಾ ವೆಚ್ಚ ಅಧಿಕವಾಗುತ್ತದೆ. ಆದರೆ ಮಾರುಕಟ್ಟೆಯ ಸ್ಪರ್ಧೆಯಲ್ಲಿ ಲಾಭ ಮತ್ತು ದರದಲ್ಲಿ ಆಟವಾಡಬೇಕು. ಪೂರೈಕೆ ಮತ್ತು ವಿತರಣೆ ಎರಡು ಪ್ರತ್ಯೇಕ ದಾರಿಗಳು. ಇವುಗಳ ಹೊಂದಾಣಿಕೆಯೇ ಉದ್ದಿಮೆಯ ಯಶಸ್ಸು. ಆರಂಭಿಕ ದಿನಗಳಲ್ಲಿ ಸಾಕಷ್ಟು ತೊಂದರೆಗಳು ಎದುರಾದವು. ಮಂಗಳೂರು ಮತ್ತು ಬೆಂಗಳೂರಿನಲ್ಲಿ ಅನುಭವಿಗಳಾದ ಶ್ರೀಧರ ಹೆಗಡೆ ಹಾಗೂ ಸತೀಶ ಪೂವಯ್ಯ ಮಾರುಕಟ್ಟೆಯ ಹೊಣೆಗಾರಿಕೆ ನಿರ್ವಹಿಸುವುದರಿಂದ ನನ್ನ ಮೇಲಿನ ಭಾರ ಕಡಿಮೆಯಾಗಿದೆ’ ಎನ್ನುತ್ತಾರೆ ಅವರು. 
 
‘ಸದ್ಯ ನಮ್ಮ ಇಂಡಸ್ಟ್ರಿಯಲ್ಲಿ ದಿನಕ್ಕೆ 80–100 ಕೆ.ಜಿ ಚಿಪ್ಸ್ ತಯಾರಿಸುವ, 2500–3000 ಸಾವಿರ ಪೌಚ್ ಜ್ಯೂಸ್ ತಯಾರಿಸುವ ಯಂತ್ರಗಳು ಇವೆ. ನಾನು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಓದುವಾಗ ಕಲಿತ ತಂತ್ರಜ್ಞಾನ ಇಂಡಸ್ಟ್ರಿಯಲ್ಲಿ ಯಂತ್ರಗಳನ್ನು ಅಳವಡಿಸುವಾಗ ಸಹಾಯಕ್ಕೆ ಬಂತು’ ಎಂದು ಹೇಳುತ್ತಾರೆ ಅವರು.  
ಸಂಪರ್ಕ ಸಂಖ್ಯೆ: 9481751022.
 
**
ಅಪ್ಪ–ಅಮ್ಮನ ಬೆಂಬಲ
‘ನನ್ನ ಪದವಿಗೆ ಶಿರಸಿಯಂತಹ ಸಣ್ಣ ಪಟ್ಟಣದಲ್ಲಿ ಉದ್ಯೋಗಾವಕಾಶವಿಲ್ಲ. ಊರಿನಲ್ಲಿ ಉಳಿದುಕೊಂಡೇ ಬದುಕನ್ನು ಕಟ್ಟಬೇಕೆಂಬ ಛಲಕ್ಕೆ ಪಾಲಕರು ನೀರೆರೆದರು. ನಿವೃತ್ತಿಯ ನಂತರ ಅಪ್ಪ– ಅಮ್ಮ ಹುಳಗೋಳದಲ್ಲೇ ಬಂದು ನೆಲೆಸಿದ್ದಾರೆ. ಅವರೊಂದಿಗೆ ಗ್ರಾಮೀಣ ಪರಿಸರದಲ್ಲಿ ಕಳೆಯುವ ದಿನಗಳು ಕೊಡುವ ಖುಷಿ ಪಟ್ಟಣದಲ್ಲಿ ಸಿಗಲಾರದು’. 
 
**
‘ಉದ್ಯಮಶೀಲತೆಯು ಹೆಚ್ಚು ಸವಾಲಿನದಾಗಿದ್ದರೂ, ದೀರ್ಘಾವಧಿಯಲ್ಲಿ ಜ್ಞಾನ, ಅನುಭವ ಮತ್ತು ಸಂತೋಷ ನೀಡುತ್ತದೆ. ಸರ್ಕಾರಿ ಇಲ್ಲವೇ ಖಾಸಗಿ ನೌಕರಿಯಲ್ಲಿ  ಗಂಡಾಂತರಗಳು ಕಡಿಮೆ. ಇಂತಹ ಉದ್ಯೋಗಗಳು ಅಲ್ಪಾವಧಿಯಲ್ಲಿ ಸಂತಸ ನೀಡಿದರೂ, ದೀರ್ಘಾವಧಿಯಲ್ಲಿ ಬೇಸರ ಮೂಡಿಸುತ್ತವೆ’ ಎನ್ನುವುದು ನವೀನ್‌  ಅವರ ಖಚಿತ ಅಭಿಪ್ರಾಯವಾಗಿದೆ.. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.