ADVERTISEMENT

ಹೆಸರಿನ ಬೆಲೆ ದಾಖಲೆ ಕುಸಿತ: ರೈತ ಕಂಗಾಲು

ಮಳೆ ಕೊರತೆ, ರೋಗಬಾಧೆಯಿಂದ ತಗ್ಗಿದ ಇಳುವರಿ

ಜೋಮನ್ ವರ್ಗಿಸ್
Published 24 ಆಗಸ್ಟ್ 2016, 19:30 IST
Last Updated 24 ಆಗಸ್ಟ್ 2016, 19:30 IST
ಗದುಗಿನ ಎಪಿಎಂಸಿಯಲ್ಲಿ ರೈತರು ಮಾರಾಟಕ್ಕೆ ತಂದಿರುವ ಹೆಸರಿನ ಚೀಲಗಳನ್ನು ಜೋಡಿಸಿಟ್ಟಿರುವುದು
ಗದುಗಿನ ಎಪಿಎಂಸಿಯಲ್ಲಿ ರೈತರು ಮಾರಾಟಕ್ಕೆ ತಂದಿರುವ ಹೆಸರಿನ ಚೀಲಗಳನ್ನು ಜೋಡಿಸಿಟ್ಟಿರುವುದು   

ಗದಗ: ಹೆಸರು ಬೆಲೆಯಲ್ಲಿ ದಾಖಲೆ ಪ್ರಮಾಣದ ಕುಸಿತವಾಗಿದ್ದು ರೈತರು ಕಂಗಾಲಾಗಿದ್ದಾರೆ. ಕಳೆದ ವರ್ಷ ಕ್ವಿಂಟಲ್‌ಗೆ ಸರಾಸರಿ ₹8,000 ರಿಂದ ₹ 9,500 ತನಕ ಮಾರಾಟವಾಗಿದ್ದು, ಸದ್ಯ ₹4,500 ರಿಂದ ₹5 ಸಾವಿರಕ್ಕೆ ತಗ್ಗಿದೆ.

ರಾಜ್ಯದಲ್ಲೇ ಹೆಸರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಗದುಗಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ (ಎಪಿಎಂಸಿ) ಪಕ್ಕದ ಜಿಲ್ಲೆಗಳಿಂದ ಹೆಸರು ತರುತ್ತಿರುವ ರೈತರು, ಈ ಬಾರಿ ಖರೀದಿದಾರರಿಂದ ಸಮರ್ಪಕ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಗದಗ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಹೆಸರು ಬೆಳೆಯಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 72,987 ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ. ಆದರೆ, ಮಳೆ ಕೊರತೆ ಮತ್ತು ಹಳದಿ ರೋಗದಿಂದಾಗಿ ಇಳುವರಿ ಪ್ರಮಾಣ ಗಣನೀಯವಾಗಿ ತಗ್ಗಿದೆ. ಚೆನ್ನಾಗಿ ಮಳೆಯಾದರೆ ಎಕರೆಗೆ ಸರಾಸರಿ 6 ಚೀಲ ಹೆಸರು ಇಳುವರಿ ಬರುತ್ತದೆ.

ಈ ಬಾರಿ ಇದು 2 ಚೀಲಕ್ಕೆ ಇಳಿದಿದೆ, ಇದರ ಜತೆಗೆ ಬೆಲೆಯೂ ಪಾತಾಳಕ್ಕೆ ಇಳಿದಿರುವುದರಿಂದ ಹೆಸರು ಬೆಳೆಯನ್ನೇ ನಂಬಿದ್ದ ಜಿಲ್ಲೆಯ ರೈತರಿಗೆ ದಿಕ್ಕೇ ತೋಚದಂತಾಗಿದೆ’ ಎನ್ನುತ್ತಾರೆ ಜಿಲ್ಲೆಯ ‘ಹೆಸರಿನ ಕಣಜ’ ಎಂದೇ ಹೆಸರಾದ ರೋಣ ತಾಲ್ಲೂಕಿನ ರೈತ ಬಸಪ್ಪ ಗಂಗಪ್ಪ ಕೊರವಿನಕೊಪ್ಪ.

ಬುಧವಾರ ಗದುಗಿನ ಎಪಿಎಂಸಿಯಲ್ಲಿ ಹೆಸರು ಕ್ವಿಂಟಲ್‌ಗೆ ಕನಿಷ್ಠ ₹3,700 ರಿಂದ ಗರಿಷ್ಠ ₹5,400ರ ವರೆಗೆ ಮಾರಾಟವಾಯಿತು. ಈಗಿರುವ ಧಾರಣೆ ಕಳೆದ ಆರು ವರ್ಷಗಳಲ್ಲೇ ಕನಿಷ್ಠ ಮಟ್ಟದ್ದು ಎಂದು ಸವದತ್ತಿ ತಾಲ್ಲೂಕಿನ ಹಂಚಿನಕೊಪ್ಪದಿಂದ ಗದಗ ಎಪಿಎಂಸಿಗೆ ಹೆಸರು ಮಾರಲು ಬಂದಿದ್ದ ರೈತ ಸುರೇಶ ಕೆಂಚಪ್ಪ ಪೂಜಾರ ಹೇಳಿದರು.

‘5 ಕೆ.ಜಿ  ಬಿತ್ತನೆ ಬೀಜಕ್ಕೆ ₹450 ಬೆಲೆ ಇದೆ. ಆರು ಎಕರೆ ಹೊಲದಲ್ಲಿ ಹೆಸರು ಬೆಳೆದಿದ್ದೆ, 13 ಚೀಲ ಇಳುವರಿ ಬಂದಿದೆ. ಬೀಜ, ಗೊಬ್ಬರ, ಕೂಲಿ, ಸಾಗಣೆ ವೆಚ್ಚ ಸೇರಿ ₹50 ಸಾವಿರ ಖರ್ಚಾಗಿದೆ. ಹೆಸರು ಮಾರಾಟದಿಂದ ಬಂದ ಮೊತ್ತವು ಉತ್ಪಾದನೆ ವೆಚ್ಚಕ್ಕಿಂತಲೂ ಕಡಿಮೆ ಇದೆ, ಇದು ರೈತನ ಪರಿಸ್ಥಿತಿ’ ಎನ್ನುತ್ತಾರೆ. 

‘ಆಗಸ್ಟ್‌, ಸೆಪ್ಟೆಂಬರ್‌ ತಿಂಗಳಲ್ಲಿ ಮುಂಗಾರು ಹಂಗಾಮಿನ ಹೊಸ ಹೆಸರು ಮಾರುಕಟ್ಟೆಗೆ ಬರುತ್ತದೆ. ಈ ಬಾರಿ ಆಗಸ್ಟ್‌ ತಿಂಗಳಲ್ಲಿ ಇದುವರೆಗೆ 30,741 ಕ್ವಿಂಟಲ್‌ನಷ್ಟು ಹೆಸರು ಆವಕವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಕಡಿಮೆ. ರೋಗಬಾಧೆಯಿಂದ ಹೆಸರಿನ ಗುಣಮಟ್ಟ, ಕಾಳಿನ ಗಾತ್ರವೂ  ಕಡಿಮೆಯಾಗಿದೆ. ಇನ್ನೊಂದೆಡೆ ಬೇರೆ ರಾಜ್ಯಗಳಿಂದ ರಾಜ್ಯದ ಮಾರುಕಟ್ಟೆಗೆ ಬರುತ್ತಿರುವ ಹೆಸರಿನ ಪ್ರಮಾಣವೂ ಹೆಚ್ಚಿದೆ. ಬೆಲೆ ಕುಸಿತಕ್ಕೆ ಇದು ಪ್ರಮುಖ ಕಾರಣ’ ಎನ್ನುತ್ತಾರೆ ಗದಗ ಎಪಿಎಂಸಿಯ ಕಾರ್ಯದರ್ಶಿ ನಂಜುಂಡಸ್ವಾಮಿ.

‘ಗುಣಮಟ್ಟದ ಕಾರಣಕ್ಕೆ ಗದುಗಿನ ಹೆಸರು ಎಂಬ ಬ್ರ್ಯಾಂಡ್‌ ಸೃಷ್ಟಿಯಾಗಿತ್ತು. ಕೇರಳ ಸೇರಿದಂತೆ ಹೊರರಾಜ್ಯಗಳ ವರ್ತಕರು ಇಲ್ಲಿಂದ ಹೆಸರು ಖರೀದಿಸುತ್ತಿದ್ದರು. ಪಕ್ಕದ ಜಿಲ್ಲೆಗಳ ರೈತರು ಕೂಡ ಉತ್ತಮ ಬೆಲೆ ಸಿಗುತ್ತದೆ ಎಂಬ ಕಾರಣಕ್ಕೆ ಗದುಗಿನ ಎಪಿಎಂಸಿಗೆ ತಂದು ಹೆಸರು ಮಾರುತ್ತಿದ್ದರು. ಆದರೆ, ಮಳೆ ಕೊರತೆ, ರೋಗಬಾಧೆಯಿಂದ ಗುಣಮಟ್ಟ ತಗ್ಗಿದೆ. ಆಂಧ್ರಪ್ರದೇಶ ಮತ್ತು ರಾಜಸ್ತಾನದಿಂದ ಗುಣಮಟ್ಟದ ಹೆಸರು ಪೂರೈಕೆಯಾಗುತ್ತಿದೆ. ಅದರ ಮುಂದೆ ಇಲ್ಲಿನ ಹೆಸರು ಸ್ಪರ್ಧಿಸಲಾಗದೆ ಬೇಡಿಕೆ ಕಳೆದುಕೊಂಡಿದೆ’ ಎನ್ನುತ್ತಾರೆ ದಲ್ಲಾಳಿ ಶಿವಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.