ADVERTISEMENT

ಪೆಟ್ರೋಲ್‌, ಡೀಸೆಲ್‌ ದರ ಏರಿಕೆ

₹80 ರ ಸಮೀಪಕ್ಕೆ ಪೆಟ್ರೋಲ್‌, ₹70 ರ ಸಮೀಪಕ್ಕೆ ಡೀಸಲ್‌ ದರ

ಪಿಟಿಐ
Published 5 ಜುಲೈ 2018, 12:41 IST
Last Updated 5 ಜುಲೈ 2018, 12:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಒಂದು ತಿಂಗಳ ಬಳಿಕ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ತೈಲ ದರಗಳಲ್ಲಿ ಏರಿಕೆ ಮಾಡಿವೆ. ಪೆಟ್ರೋಲ್‌ದರ 16 ಪೈಸೆ ಮತ್ತು ಡೀಸೆಲ್‌ ದರ 12 ಪೈಸೆಯಷ್ಟು ಹೆಚ್ಚಾಗಿದೆ.

ಇದರಿಂದ ಬೆಂಗಳೂರಿನಲ್ಲಿ ಗುರುವಾರ ಒಂದು ಲೀಟರ್‌ ಪೆಟ್ರೋಲ್‌ ದರ ₹77.02 ಮತ್ತು ಡೀಸೆಲ್‌ ದರ ₹68.56ಕ್ಕೆ ತಲುಪಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ ಮತ್ತು ರೂಪಾಯಿ ಮೌಲ್ಯ ಇಳಿಕೆಯ ಕಾರಣದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತೈಲ ಸಂಸ್ಥೆಗಳು ಹೇಳಿವೆ.

ADVERTISEMENT

ಭಾರತೀಯ ತೈಲ ನಿಗಮ (ಐಒಸಿ), ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಬಿಪಿಸಿಎಲ್‌) ಮತ್ತು ಹಿಂದುಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಎಚ್‌ಪಿಸಿಎಲ್‌) ಸಂಸ್ಥೆಗಳು ಜೂನ್‌ 26 ರ ಬಳಿಕ ದರ ಪರಿಷ್ಕರಣೆ ನಡೆಸಿರಲಿಲ್ಲ. ಅಂದು ಪೆಟ್ರೋಲ್‌ ದರ 14 ಪೈಸೆ ಮತ್ತು ಡೀಸೆಲ್‌ ದರ 10 ಪೈಸೆಯಷ್ಟು ಇಳಿಕೆ ಮಾಡಿದ್ದವು.

‘ಕಚ್ಚಾ ತೈಲ ದರ ತಗ್ಗಿಸುವ ಉದ್ದೇಶದಿಂದ ಪೆಟ್ರೋಲಿಯಂ ರಫ್ತು ರಾಷ್ಟ್ರಗಳು (ಒಪೆಕ್‌) ಜುಲೈನಿಂದ ಪ್ರತಿ ದಿನಕ್ಕೆ ಹೆಚ್ಚುವರಿಯಾಗಿ 10 ಲಕ್ಷ ಬ್ಯಾರೆಲ್‌ನಷ್ಟು ಉತ್ಪಾದನೆ ಮಾಡುವ ನಿರ್ಧಾರ ಪ್ರಕಟಿಸಿವೆ. ಈ ಕಾರಣಕ್ಕಾಗಿ ಕೆಲವು ದಿನಗಳವರೆಗೆ ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಆದರೆ, ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳದೇ ಇರುವಂತೆ ಭಾರತವನ್ನೂ ಒಳಗೊಂಡು ಪ್ರಮುಖ ದೇಶಗಳಿಗೆ ಸೂಚನೆ ನೀಡುವುದಾಗಿ ಅಮೆರಿಕ ಹೇಳಿದೆ. ಈ ಬೆಳವಣಿಗೆಯಿಂದ ದರ ಏರಿಕೆ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಭಾರತೀಯ ತೈಲ ನಿಗಮದ (ಐಒಸಿ) ಅಧ್ಯಕ್ಷ ಸಂಜೀವ್‌ ಸಿಂಗ್‌ ತಿಳಿಸಿದ್ದಾರೆ.

ಇರಾನ್‌ ಒಂದು ದಿನಕ್ಕೆ 23 ಲಕ್ಷದಿಂದ 25 ಲಕ್ಷ ಬ್ಯಾರೆಲ್‌ ತೈಲ ಉತ್ಪಾದನೆ ಮಾಡುತ್ತಿದೆ. ದರ ಏರಿಕೆ ನಿಯಂತ್ರಣಕ್ಕಾಗಿ ಆಮದು ರಾಷ್ಟ್ರಗಳು ಇರಾನ್‌ಗೆ ಪರ್ಯಾಯ ಮೂಲವನ್ನು ಹುಡುಕುವ ಪ್ರಯತ್ನದಲ್ಲಿವೆ ಎಂದು ಸಿಂಗ್‌ ಹೇಳಿದ್ದಾರೆ.

‘ಒಪೆಕ್‌ ರಾಷ್ಟ್ರಗಳ ಉತ್ಪಾದನೆ ಹೆಚ್ಚಳ ನಿರ್ಧಾರಕ್ಕೂ ಮುನ್ನ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿಕೆ ಆಗಿತ್ತು. ಅದಕ್ಕೆ ಸರಿಯಾಗಿ ಹೊಂದಿಸುವ ಉದ್ದೇಶದಿಂದ ಇದೀಗ ಪರಿಷ್ಕರಣೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

2014ರ ನವೆಂಬರ್‌ನಿಂದ 2016ರ ಜನವರಿವರೆಗೆ 9 ಬಾರಿ ಸುಂಕ ಏರಿಕೆ ಮಾಡಿದ್ದು, ಅಕ್ಟೋಬರ್‌ನಲ್ಲಿ ಮಾತ್ರವೇ ಪ್ರತಿ ಲೀಟರಿಗೆ ₹2 ಕಡಿತ ಮಾಡಿವೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.