ADVERTISEMENT

ಕಾವೇರಿ ನಿಸರ್ಗಧಾಮಕ್ಕೆ ಕಾಡಾನೆಗಳ ಲಗ್ಗೆ

ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿಯಿಂದ ಹರಸಾಹಸ; ಪ್ರವಾಸಿಗರಿಗೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 12:47 IST
Last Updated 29 ಮಾರ್ಚ್ 2018, 12:47 IST

ಕುಶಾಲನಗರ: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಲ್ಲಿ ಒಂದಾದ ಕಾವೇರಿ ನಿಸರ್ಗಧಾಮಕ್ಕೆ ಬುಧವಾರ ಕಾಡಾನೆಗಳು ನುಸುಳಿದ್ದು, ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಪಿರಿಯಾಪಟ್ಟಣ ತಾಲ್ಲೂಕಿನ ದೊಡ್ಡಹರವೆ ಮೀಸಲು ಅರಣ್ಯದಿಂದ ಬೆಳಿಗ್ಗೆ ನಾಡಿಗೆ ಲಗ್ಗೆ ಇಟ್ಟ ಕಾಡಾನೆಗಳು ಮರೂರು ವ್ಯಾಪ್ತಿಯಲ್ಲಿ ರೈತರು ಬೆಳೆದ ಜೋಳ ಕೃಷಿಯನ್ನು ತಿಂದು ದಾಂದಲೆ ನಡೆಸಿವೆ. ನಂತರ ಕಾವೇರಿ ನದಿ ದಾಟಿ ನಿಸರ್ಗಧಾಮದ ಕಾಡಿಗೆ ನುಗ್ಗಿವೆ.

ಮೂರು ಗಂಡು ಕಾಡಾನೆಗಳು ನಿಸರ್ಗಧಾಮಕ್ಕೆ ನುಸುಳಿರುವ ವಿಷಯ ತಿಳಿಯುತ್ತಿದ್ದಂತೆ ನಿಸರ್ಗಧಾಮದ ಅರಣ್ಯಾಧಿಕಾರಿ ವಿಲಾಶ್ ಕೂಡಲೇ ಒಳಗಿದ್ದ ಎಲ್ಲ ಪ್ರವಾಸಿಗರನ್ನು ಹೊರ ಕಳುಹಿಸಿದರು.

ADVERTISEMENT

ಅಲ್ಲದೆ ಪ್ರವೇಶ ದ್ವಾರ ಗೇಟ್ ಬಂದ್ ಮಾಡಿ ಪ್ರವಾಸಿಗರು ಒಳಗೆ ಬರದಂತೆ ತಡೆದರು. ಸೋಮವಾರಪೇಟೆ ತಾಲ್ಲೂಕು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ, ಕುಶಾಲನಗರ ವಲಯ ಅರಣ್ಯಾಧಿಕಾರಿ ಅರುಣ್, ಹುಣಸೂರು ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಮುಜೀಬ್ ಮಾರ್ಗದರ್ಶನದಲ್ಲಿ ಅರಣ್ಯ ಸಿಬ್ಬಂದಿ ಲೋಕೇಶ್, ರಾಕೇಶ್, ರಾಜೇಶ್, ಕುಟ್ಟಪ್ಪ, ಪವನ್, ನವೀನ್, ನಾಣಯ್ಯ, ವಿನು ಅವರನ್ನು ತಂಡವಾಗಿ ರಚಿಸಿ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಪಟಾಕಿ ಸಿಡಿಸಿ, ತಮಟೆ, ಖಾಲಿ ಪ್ಲಾಸ್ಟಿಕ್ ಬಾಟಲಿಗಳಿಂದ ಜೋರು ಶಬ್ದ ಮಾಡುತ್ತಿದ್ದರೂ ಆನೆಗಳು ಕಾಡಿನೊಳಗೆಯೆ ಅಡ್ಡಾಡುತ್ತಿವೆ. ಕಾಡಿನಿಂದ ಹೊರಹಾಕಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಅಲ್ಲದೆ ಕಾಡಾನೆಗಳ ಚಲನವಲನ ವೀಕ್ಷಿಸಲು ಎತ್ತರದ ಮರದ ಮೇಲೆ ಸಿಬ್ಬಂದಿ ವೀಕ್ಷಣೆ ಮಾಡುತ್ತಿದ್ದಾರೆ. ಮತ್ತಿಕಾಡು ಸಾಕಾನೆ ಶಿಬಿರದ ಎರಡು ಆನೆಗಳನ್ನು ಕಾರ್ಯಾಚರಣೆಗೆ ಬಳಸಲಾಗುತ್ತಿದ್ದು, ಸಂಜೆಯ ನಂತರವು ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ.

ಇದೇ ಮೊದಲು

‘ಇದೇ ಮೊದಲು ಕಾಡಾನೆಗಳು ಕಾವೇರಿ ನಿಸರ್ಗಧಾಮಕ್ಕೆ ನುಗ್ಗಿವೆ. ಮೂರೂರು ಭಾಗದ ರೈತರ ಜಮೀನಿಗೆ ಲಗ್ಗೆ ಹಾಕಿದ ಆನೆಗಳು ನಿಸರ್ಗಧಾಮದ ಕಾಡು ನೋಡಿ ಕಾವೇರಿ ನದಿ ಮೂಲಕ ಪ್ರವೇಶಿಸಿವೆ. ಕಾಡಾನೆಗಳನ್ನು ಕಾಡಿಗೆ ಓಡಿಸಲು ಕಾರ್ಯಾಚರಣೆ ಆರಂಭಿಸಲಾಗಿದೆ’ ಎಂದು ಎಸಿಎಫ್ ಎಂ.ಎಸ್.ಚಿಣ್ಣಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.